ಬೆಂಗಳೂರಿನ ಪ್ರಕಾಶನಗರದಲ್ಲಿದ್ದ ಸುಮಾರು 60 ವರ್ಷಗಳ ಹಳೆಯದಾಗಿದ್ದ ರಾಯರ ಮಠವನ್ನು ಪೂರ್ಣ ನೆಲಸಮಗೊಳಿಸಿ, ಹೊಸದಾಗಿ ನಿರ್ಮಾಣವಾದ ಭವ್ಯ ಕಟ್ಟಡದಲ್ಲಿ ಜೂನ್ 22 ರಂದು ಶ್ರೀ ಗುರುರಾಯರ ಮೃತ್ತಿಕಾ ಬೃಂದಾವನದ ಪುನರ್ ಪ್ರತಿಷ್ಠಾಪನೆಯು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಅಮೃತ ಹಸ್ತದಿಂದ ನೆರವೇರಿತು.
ನಂತರ ಶ್ರೀಪಾದಂಗಳವರಿಂದ ಶ್ರೀ ರಾಯರ ಬೃಂದಾವನಕ್ಕೆ ವಿಶೇಷ ಫಲ- ಪಂಚಾಮೃತ ಅಭಿಷೇಕ, ಕನಕಾಭಿಷೇಕ, ಹೂವಿನ ಅಲಂಕಾರ, ಪಂಡಿತರುಗಳಿಂದ ಪ್ರವಚನ ಸಂಸ್ಥಾನ ಪೂಜೆ, ಮಹಾಮಂಗಳಾರತಿ ಕಾರ್ಯಕ್ರಮಗಳು ಜರುಗಿದವು.
ಸಂಜೆ ನಡೆದ ಸಭಾ ಕಾರ್ಯಕ್ರಮವು ಗಾಯಕಿ ಚಾಂದಿನಿ ಗರ್ತಿಕೆರೆ ಇವರು ಹಾಡಿದ ಶ್ರೀ ಜಗನ್ನಾಥದಾಸರ ರಚನೆಯಾದ “ಬಾರೋ ರಾಘವೇಂದ್ರ ಬಾರೋ” ಎಂಬ ದಾಸರಪದದೊಂದಿಗೆ ಪ್ರಾರಂಭವಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಾದ ಶ್ರೀಶಾನಂದ ಅವರು ತಮಗೂ ಹಾಗೂ ಪ್ರಕಾಶನಗರ ರಾಯರ ಮಠಕ್ಕೂ ಇರುವ ಅವಿನಾಭಾವ ಸಂಬಂಧವನ್ನು ವಿವರಿಸಿದರು.
ಮತ್ತೊಬ್ಬ ಮುಖ್ಯ ಅತಿಥಿಗಳಾಗಿದ್ದ ಉನ್ನತ ಶಿಕ್ಷಣ ಸಚಿವರಾದ ಡಾ||ಸಿ ಎನ್ ಅಶ್ವಥ್ ನಾರಾಯಣ ಅವರು ಮಠ ಬೆಳೆದುಬಂದ ಬಗೆಯನ್ನು ಶ್ಲಾಘಿಸಿದರು.
ನಂತರ ನಾಡಿನ ಹೆಸರಾಂತ ಪಂಡಿತರುಗಳಾದ ಡಾ|| ವಿನಾಯಕ ನಾಮಣ್ಣನವರ್ ಮತ್ತು ಶ್ರೀ ಬ್ರಹ್ಮಣ್ಯಾಚಾರ್ ಅವರು ರಾಯರ ಮಹಿಮೆಗಳ ಬಗ್ಗೆ ಉಪನ್ಯಾಸ ನೀಡಿದರು.
ಶ್ರೀಪಾದಂಗಳವರಿಂದ ಅನುಗ್ರಹ ಸಂದೇಶ, ದಾನಿಗಳಿಗೆ ಮತ್ತು ನೆರೆದಿದ್ದ ಭಕ್ತಾದಿಗಳಿಗೆ ಶ್ರೀಗಳವರು ಫಲಮಂತ್ರಾರಕ್ಷತೆ ನೀಡಿದರು.