*ರೂಪಶ್ರೀ ಶಶಿಕಾಂತ್
ವೇದವ್ಯಾಸರು ಆವಿರ್ಭವಿಸಿದ ದಿನವನ್ನು ಗುರುಪೂರ್ಣಿಮೆ ಎಂದು ಆಚರಿಸಲಾಗುತ್ತದೆ.
ನಮ್ಮ ಹಿಂದೂ ಧರ್ಮದಲ್ಲಿ ಗುರುವಿಗೆ ವಿಶೇಷ ಸ್ಥಾನಮಾನಗಳಿವೆ. ಗುರು ಎಂದರೆ ನಮ್ಮನ್ನು ಸನ್ಮಾರ್ಗದಲ್ಲಿ ನಡೆಸುವವನು ನಮ್ಮ ಆತ್ಮೋದ್ಧಾರದ ಮಾರ್ಗವನ್ನು ತೋರಿಸುವವನು ತಾನು ಸಿದ್ಧಿಸಿಕೊಂಡ ವಿದ್ಯೆಯನ್ನು ಅರ್ಹರಿಗೆ ಫಲಾಪೇಕ್ಷೆ ಇಲ್ಲದೆ ಧಾರೆ ಎರೆಯುವವನು. ಲೋಕಕಲ್ಯಾಣಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧನಾಗಿರುವವನು. " ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಃ ಗುರು ಸಾಕ್ಷಾತ್ ಪರಬ್ರಹ್ಮ ತಸ್ಯೈ ಶ್ರೀ ಗುರುವೇ ನಮಃ" ಎಂದು ಒಂದು ಶ್ಲೋಕ ಗುರುಗಳನ್ನು ಸಾಕ್ಷಾತ್ ಪರಬ್ರಹ್ಮ ಎಂದು ಕರೆಯುತ್ತದೆ. "ಆಪಾದಮೌಳಿ ಪರ್ಯಂತಂ ಗುರೂ ಣಾಮ್ ಆಕೃತಿಮ್ ಸ್ಮರೇತ್.ತೇನ ವಿಘ್ನಾ: ಪ್ರಣಶ್ಯಂತಿ ಸಿದ್ಧ್ಯಂತಿಚ ಮನೋರಥ:" ಎಂದು ಇನ್ನೊಂದು ಶ್ಲೋಕ ಭಕ್ತಿಯಿಂದ ಗುರುವನ್ನು ಪಾದದಿಂದ ಶಿರಸ್ಸಿನವರೆಗೂ ಚಿಂತಿಸಿದವರಿಗೆ ಎಲ್ಲ ವಿಘ್ನಗಳೂ ನಾಶವಾಗಿ ಮನಸ್ಸಿನ ಆಸೆ ಸಿದ್ದಿಸುತ್ತದೆ ಎಂದು ಹೇಳುತ್ತದೆ. ತಾಯಿ ತಂದೆಯ ನಂತರದ ಸ್ಥಾನವನ್ನು ಗುರುವಿಗೆ ನೀಡಲಾಗಿದೆ. ಪರಮಾತ್ಮನು ಗುರುವಿನ ರೂಪದಿಂದ ಬಂದು ನಮ್ಮನ್ನು ಸನ್ಮಾರ್ಗದಲ್ಲಿ ನಡೆಸುತ್ತಾನೆ ಎಂಬ ನಂಬಿಕೆ ವಿಶ್ವಾಸ ನಮ್ಮಲ್ಲಿದೆ. ವೇದವ್ಯಾಸ ದೇವರು ಸಾಕ್ಷಾತ್ ಶ್ರೀ ವಿಷ್ಣುವಿನ ಅವತಾರ. ಅವರು ಆಗ ಇದ್ದ ಎಲ್ಲ ಋಕ್ ಗಳನ್ನು, ನಾಲ್ಕು ವೇದಗಳಾಗಿ ವಿಂಗಡಿಸಿ ತಮ್ಮ ನಾಲ್ಕು ಜನ ಶಿಷ್ಯರಿಗೆ ಉಪದೇಶಿಸಿದರು. ಆದ್ದರಿಂದಲೇ ಅವರು ವೇದವ್ಯಾಸರು ಎಂದು ಕರೆಸಿಕೊಳ್ಳುತ್ತಾರೆ. ಇದೇ ಈಗ ಋಗ್ವೇದ, ಎಜುರ್ವೇದ ಸಾಮವೇದ ಅಥರ್ವಣವೇದವಾಗಿದೆ. ಅಷ್ಟೇ ಅಲ್ಲದೆ 18 ಪುರಾಣಗಳನ್ನು ರಚಿಸಿ ಕೊಟ್ಟಿದ್ದಾರೆ. ಪರಮಾತ್ಮನ ಗುಣ ಮಹಿಮೆಗಳನ್ನು ವರ್ಣಿಸುವುದರ ಜೊತೆಗೆ ಮಾನವರು ನಡೆದುಕೊಳ್ಳಬೇಕಾದ ರೀತಿ ನೀತಿಗಳನ್ನು ತಿಳಿಸಿಕೊಟ್ಟಿದ್ದಾರೆ. ವಿಶೇಷವಾದ ತತ್ವಗಳನ್ನು ಕಥೆಗಳಲ್ಲಿ ಅಡಗಿಸಿಟ್ಟಿದ್ದಾರೆ. ನಮ್ಮ ವೇದಶಾಸ್ತ್ರ ಪುರಾಣಗಳೆಲ್ಲ ಬಾಯಿಂದ ಬಾಯಿಗೆ ಕಲಿಸಿಕೊಟ್ಟು ಉಳಿಸಿಕೊಂಡು ಬಂದಿರುವ ವಿದ್ಯೆ. ಗುರು ಪರಂಪರೆಗೆ ನಮ್ಮ ಸನಾತನ ಧರ್ಮದಲ್ಲಿ ಉನ್ನತ ಸ್ಥಾನವನ್ನು ಕೊಟ್ಟಿದಾರೆ. ಗುರುವು ತನ್ನ ಜೀವಮಾನವಿಡಿ ಮಾಡಿದ ತಪಸ್ಸಿನಿಂದ, ಪಡೆದುಕೊಂಡಿರುವ ಸಿದ್ದಿಗಳನ್ನು ಜ್ಞಾನವನ್ನು ತತ್ವ ವಿಚಾರವನ್ನು ತಾನು ಅದಕ್ಕಾಗಿ ಬಳಸಿದ ಮಾರ್ಗವನ್ನು ತನ್ನ ಶಿಷ್ಯರಿಗೆ ಉಪದೇಶ ಮಾಡುತ್ತಾನೆ. ಅವರು ಅದೇ ರೀತಿ ನಡೆದುಕೊಳ್ಳುತ್ತಾ ಸಿದ್ಧಿಯನ್ನು ಪಡೆಯುತ್ತಾ ಮುಂದಿನ ತಮ್ಮ ಶಿಷ್ಯರಿಗೆ ಉಪದೇಶ ಮಾಡುತ್ತಾ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಾರೆ. ಗುರುಕುಲಕ್ಕೆ ಬಂದ ಮಕ್ಕಳು ಯಾರೇ ಆಗಿರಲಿ, ರಾಜನೇ ಆಗಿರಲಿ ಸೇವಕನೇ ಆಗಿರಲಿ, ಗುರುವಿನ ಸೇವೆಯನ್ನು ಮಾಡಬೇಕು, ಮನೆ ಕೆಲಸ ಆಶ್ರಮದ ಕೆಲಸ ಶ್ರದ್ಧೆಯಿಂದ ಮಾಡಬೇಕಾಗಿತ್ತು. ಗುರುವಿನ ಮನಸ್ಸನ್ನು ಅವನು ಗೆದ್ದಾಗ ಮಾತ್ರ ಗುರು ದಯೆ ತೋರಿ ವಿದ್ಯೆಯನ್ನು ಅನುಗ್ರಹಿಸುತ್ತಿದ್ದ. ಶಂಕರಾಚಾರ್ಯರ ಕಥೆಯಲ್ಲಿ, ತೋಟಕಾಚಾರ್ಯರು ನದಿ ದಂಡೆಯಲ್ಲಿ ಬಟ್ಟೆ ಒಗೆಯುತ್ತಿದ್ದಾಗ, ಶ್ರೀ ಶಂಕರಾಚಾರ್ಯರು ಅವರಿಗೆ ಅನುಗ್ರಹಿಸುತ್ತಾರೆ. ಆಗ ಏನೂ ಅರಿಯದ ಬಾಲಕ ತತ್ವಜ್ಞಾನಿಯಾಗಿ ತೋಟಕಾಷ್ಟಕವನ್ನು ಹೇಳುತ್ತಾ ಗುರುಗಳ ಬಳಿಗೆ ಬರುತ್ತಾರೆ. ಹೀಗೆ ಕೇವಲ ಗುರುವಿನ ಅನುಗ್ರಹದಿಂದ ಮಾತ್ರ ವಿದ್ಯೆ ಸಿದ್ಧಿಸುತ್ತದೆ, ಅನೇಕ ಪುರಾಣ ಕಥೆಗಳಲ್ಲಿ, ಗುರುಗಳ ಅನುಗ್ರಹದಿಂದ ಸಿದ್ಧಿ ಪಡೆದ ಪುರುಷರನ್ನು ನಾವು ಕಾಣಬಹುದು. ಶ್ರೀ ಕೃಷ್ಣ ಅವತಾರದಲ್ಲಿ ಭಗವಂತನೇ ಗುರು ಸ್ಥಾನದಲ್ಲಿ ನಿಂತು ಭಗವದ್ಗೀತೆಯನ್ನು ಈ ಸಂಸಾರದಿಂದ ಬಿಡುಗಡೆ ಹೊಂದಲು ಮಾಡಬೇಕಾದ ಎಲ್ಲಾ ವಿಷಯಗಳನ್ನು ವಿಸ್ತಾರವಾಗಿ ವಿವರಿಸಿದ್ದಾನೆ. ಅವನೇ ಸಕಲ ಜೀವರಾಶಿಗೂ ಗುರು ಸ್ಥಾನದಲ್ಲಿರುವವನು. ಸಂಗೀತ ಕ್ಷೇತ್ರದಲ್ಲೂ ಗುರುವಿಗೆ ಅತ್ಯಂತ ಮಹತ್ವದ ಸ್ಥಾನವನ್ನು ನೀಡಲಾಗಿದೆ. ಪ್ರತಿಯೊಬ್ಬ ಗುರುವಿನ ಶಿಷ್ಯರು ಆ ಗುರುವಿನ ಶೈಲಿಯಲ್ಲಿ ಹಾಡುತ್ತಾ, ಅವನು ಸಿದ್ಧಿಸಿಕೊಂಡಿದ್ದ ಮತ್ತು ರಚಿಸಿದ ರಚನೆಗಳನ್ನು ಜೀವಂತವಾಗಿ ಇರಿಸುತ್ತಾರೆ ಮುಂದಿನ ಪೀಳಿಗೆಗೆ ಉಳಿಸುತ್ತಾರೆ. ಗುರುವಿನ ಶಕ್ತಿ ಅಪಾರ. ಗುರುವೇ ಪರಮಾತ್ಮನ ಬಳಿ ನಮಗಾಗಿಯೇ ಪ್ರಾರ್ಥಿಸಿಕೊಂಡು ನಮಗೆ ಸಗ್ಗತ್ತಿ ಕೊಡಿಸುತ್ತಾನೆ ಎಂಬ ನಂಬಿಕೆ ಹಿಂದೂ ಧರ್ಮದಲ್ಲಿದೆ. " ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ" ಎಂದು ಪುರಂದರದಾಸರು ಗುರುವಿನ ಮಹಿಮೆಯನ್ನು ವರ್ಣಿಸುತ್ತಾರೆ. ಭಾಗವತದಲ್ಲಿ ನಾರದರು ಗುರುವಾಗಿ ಬಂದು, ಬಾಲಕ ದ್ರುವನಿಗೆ "ವಾಸುದೇವ ಮಂತ್ರ" ಉಪದೇಶಿ ಅವನನ್ನು ಉದ್ಧರಿಸಿದ ಕಥೆ ಬಂದಿದೆ. ಇನ್ನು ಲೌಕಿಕವಾಗಿ ಯೋಚಿಸಿದರೂ ಹುಟ್ಟಿದ ಮಗುವಿಗೆ ಏನೂ ತಿಳಿಯದು.ತಾಯಿಯೆ ಮೊದಲ ಗುರುವಾಗಿ ಎಲ್ಲವನ್ನೂ ಹೇಳಿಕೊಡುತ್ತಾಳೆ.ಶಾಲೆಗೆ ಹೋಗುವ ಹೊತ್ತಿಗೆ, ಮಗು ಹೇಗೆ ನಡೆದುಕೊಳ್ಳಬೇಕು ಎಂಬ ವಿಚಾರ ತನ್ನ ಸುತ್ತ ಮುತ್ತ ಇರುವ ತಂದೆ ತಾಯಿ ಅಜ್ಜ ಅಜ್ಜಿ ಅಕ್ಕ ತಮ್ಮ ಅತ್ತೆ ಮಾವ ಎಲ್ಲರನ್ನು ನೋಡಿ ಕಲಿತುಕೊಳ್ಳುತ್ತದೆ. ಒಂದು ಅಕ್ಷರ ಕಲಿಸಿದವನು ಕೂಡ ಗುರುವಾಗುತ್ತಾನೆ. ಹೀಗೆ ಕಲಿತ ಮಗುವಿಗೆ ಶಾಲೆಯಲ್ಲಿ ಸರಿಯಾದ ಮಾರ್ಗದರ್ಶನ ಸಿಕ್ಕರೆ ಅತ್ಯುನ್ನತ ಜ್ಞಾನವನ್ನು ಪಡೆದುಕೊಂಡು ಶ್ರೇಯೋವಂತನಾಗುತ್ತಾನೆ. ಕೆಟ್ಟ ಸ್ನೇಹಿತರು ಕೆಟ್ಟ ಚಾಳಿಗಳು ಬರದ ಹಾಗೆ ಪೋಷಕರು ಮತ್ತು ಗುರುಗಳು ಮಗುವನ್ನು ಕಾಪಾಡುತ್ತಾರೆ. ದಿನದ ಮುಕ್ಕಾಲು ಭಾಗವನ್ನು ಶಾಲೆಯಲ್ಲಿ ಕಳೆಯುವ ಮಕ್ಕಳ ಜವಾಬ್ದಾರಿ ಗುರುಗಳ ಮೇಲೆ ಇರುತ್ತದೆ. ಉತ್ತಮ ಗುರುಗಳು ತಮ್ಮ ಶಿಷ್ಯರಿಗೆ ಉತ್ತಮ ಕನಸುಗಳನ್ನು ಕಟ್ಟಿಕೊಡುತ್ತಾರೆ. ಅವರಲ್ಲಿ ಸಾಧಿಸಬೇಕೆಂಬ ಛಲವನ್ನು ಬಿತ್ತುತ್ತಾರೆ. ಅದಕ್ಕೆ ಅವರು ಮಾಡಬೇಕಾದ ಪ್ರಯತ್ನಗಳನ್ನು ತಿಳಿಸುತ್ತಾರೆ ಹಂತ ಹಂತದಲ್ಲೂ ಮಾರ್ಗದರ್ಶನವನ್ನು ನೀಡುತ್ತಾರೆ. ಇಂತಹ ಗುರು ಸಿಕ್ಕ ಮಕ್ಕಳೆ ಧನ್ಯರು. ತಮ್ಮಿಂದ ಸಾಧಿಸಲಾಗದನ್ನು ತಮ್ಮ ಶಿಷ್ಯರು ಸಾಧಿಸಲಿ ಎಂದು ಎಲ್ಲ ಗುರುಗಳು ಆಸೆ ಪಡುತ್ತಾರೆ. ನಿಸ್ವಾರ್ಥವಾಗಿ ತಮಗೆ ತಿಳಿದಿದ್ದನ್ನು ಬೋಧಿಸುತ್ತಾರೆ. ಲೌಕಿಕ ಮತ್ತು ಆಧ್ಯಾತ್ಮಿಕ ಸ್ಥರಗಳಲ್ಲಿ ಗುರುವಿಗೆ ಬಹಳ ಮುಖ್ಯವಾದ ಪಾತ್ರವಿದೆ. ಕೇವಲ ಸನಾತನ ಧರ್ಮ ಮಾತ್ರವಲ್ಲದೆ ಎಲ್ಲ ಧರ್ಮಗಳಲ್ಲೂ ಗುರುವಿಗೆ ಅತ್ಯಂತ ಪ್ರಮುಖವಾದ ಸ್ಥಾನವಿದೆ. ಆಯಾ ಧರ್ಮದ ಪ್ರವರ್ತಕರನ್ನು, ಆಯಾ ಧರ್ಮದವರು ಕೊಂಡಾಡಿ ಸ್ತುತಿಸುತ್ತಾರೆ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುಂದುವರೆಯುತ್ತಾರೆ. ಹೀಗೆ ಗುರು ಮಹಿಮೆ ಅಪಾರ, ಅವರ ಅನನ್ಯ ಕೃಪೆ ಪಡೆಯಲು ಅವರ ಪಾದ ಹಿಡಿದು, ಭಕ್ತಿಯಿಂದ ಆರಾಧಿಸೋಣ.