*ಮೋಹನ್ ಬೆಂಗಳೂರು
ಚಾತುರ್ಮಾಸದ ಆದಿಯಲ್ಲಿ ದೀಕ್ಷೆಯನ್ನು ತೆಗೆದುಕೊಂಡು ಆಶ್ವಯುಜ ಮಾಸದ ದಶಮಿಯಲ್ಲಿ ಕುಂಡಲಿನೀ ಮಾತೆಯನ್ನು ಜಾಗೃತ ಮಾಡುವುದೇ ಚಾತುರ್ಮಾಸದ ಉದ್ಧೇಶವಾಗಿದೆ.ಈ ನಾಲ್ಕು ತಿಂಗಳು ಏಕಾಂತವಾಗಿದ್ದು ಸಾಧನೆಯನ್ನು ಮಾಡಿ ಮಾತೆಯನ್ನು ಜಾಗೃತ ಮಾಡುವುದೇ ಕುಂಡಲಿನೀ ಯೋಗವಾಗಿದೆ.
ಋಗ್ವೇದದಲ್ಲಿ ಮೂವರು ಕುಂಡಲಿನೀ ಮಾತೆಯರು ಕುರಿತು ಯಾವುದಾದರೂ ಮಂತ್ರಗಳಿವೆಯೇ? ಹೌದು ಮೂವರು ಕುಂಡಲಿನೀ ಮಾತೆಯರ ಕುರಿತು ಋಗ್ವೇದದಲ್ಲಿ ಮಂತ್ರಗಳಿವೆ. ಋಗ್ವೇದದಲ್ಲಿ ಅವರನ್ನು ಮೂವರು ಸಹೋದರಿಯರು ಎಂದು ಕರೆಯಲಾಗಿದೆ. ಋಗ್ವೇದ 10-129 ಸೂಕ್ತದ ಅರ್ಥ ಈ ಕೆಳಕಂಡಂತಿದೆ.
1. ಋಗ್ವೇದ 10-129-1ರಲ್ಲಿ ಸರ್ವತ್ರ ಗಾಢಾಂಧಕಾರವು ವ್ಯಾಪಿಸಿಕೊಂಡಿತ್ತು ಮತ್ತು ಅದರ ಮಧ್ಯದಲ್ಲಿ ಆದಿಅಂತ್ಯವಿಲ್ಲದ ಉದಕಗಳ ಮಹಾಸಮುದ್ರ ಇತ್ತೆಂದು ತಿಳಿಸುತ್ತದೆ.
2. ಋಗ್ವೇದ 10-129-2 ರಲ್ಲಿ ಉಸಿರು (ವಾಯು) ತನ್ನ ಮಹಿಮೆಯಿಂದ ಉದಕದ ಮೇಲೆ ಇದ್ದಿತು ಎಂದು ತಿಳಿಸುತ್ತದೆ.
3. ಋಗ್ವೇದ 10-229-3 ರಲ್ಲಿ ಅಂಧಕಾರದಲ್ಲಿ ಲಯವಾಗಿದ್ದ , ಶಾಖದಿಂದ ಕೂಡಿದ ಅವ್ಯಕ್ತ ಸ್ವರೂಪವು ಜಾಗೃತವಾಯಿತು ಎಂದು ತಿಳಿಸುತ್ತದೆ.
4. ಋಗ್ವೇದ 10-129-4 ರಲ್ಲಿ ಜಾಗೃತವಾದ ಅವ್ಯಕ್ತ ಸ್ವರೂಪದಲ್ಲಿ ಸೃಷ್ಟಿ ಕಾಮವು ಬೀಜಭೂತವಾಗಿತ್ತೆಂದು ತಿಳಿಸುತ್ತದೆ. ಸೃಷ್ಟಿ ಕಾಮವು ಅವ್ಯಕ್ತ ಸ್ವರೂಪದಲ್ಲಿ ಇದ್ದಿತೆಂದರೆ ಅದು ವಿಶ್ವಮನಸ್ಸೆಂದು ಅರ್ಥಮಾಡಿಕೊಳ್ಳಬಹುದು.
ಅಂಧಕಾರದಲ್ಲಿ ಲಯವಾಗಿದ್ದ ವಿಶ್ವಮನಸ್ಸು ಮೊದಲು ಜಾಗೃತವಾಗಿ ಅ-ಕ-ಥ ಎಂದು ಕರೆಯಲ್ಪಡುವ ಅಧೋಮುಖ ತ್ರಿಕೋನವನ್ನು ಸೃಷ್ಟಿಸುತ್ತದೆ. ಈ ತ್ರಿಕೋನದೊಳಗೆ ಪರಬ್ರಹ್ಮನ ಅಂಧಕಾರ ಬಂದಿತವಾಗುತ್ತದೆ. ತ್ರಿಕೋನದ ಮೂರು ಬಿಂದುವಿನಲ್ಲಿ ವಾಮ, ಜ್ಯೇಷ್ಟ ಮತ್ತು ರೌದ್ರಿ ಎಂಬ ಮೂರು ಮಾತೆಯರು ಇರುವರು ಎಂದು ತಂತ್ರಶಾಸ್ತ್ರವು ಹೇಳುತ್ತದೆ. ಈ ಮೂರು ಮಾತೆಯರು ಕುಂಡಲಿನೀ ಸ್ವರೂಪದಿಂದ ಚಕ್ರಗಳನ್ನು ಸೃಷ್ಟಿ ಮಾಡುತ್ತಾರೆ. ಕುಂಡಲಿನೀ ಮಾತೆಯರು ಸೃಷ್ಟಿಸಿದ ಏಳು ಚಕ್ರಗಳಿಂದ (ಒಟ್ಟು 22 ಚಕ್ರಗಳು, 3×7+1=22 ಚಕ್ರಗಳು) ತೀವ್ರವಾಗಿ ಉತ್ತೇಜನಗೊಂಡ ವಾಯುವು ( ಸ್ಟೆಪ್ ಅಪ್ ಟ್ರಾನ್ಸಫಾರ್ಮರ್ ನಂತೆ), ಸಲಿಲ ಎಂದು ಕರೆಯಲ್ಪಡುವ ಅನಾದಿಯಾದ ಮಹಾಸಮುದ್ರವನ್ನು ಪ್ರವೇಶಿಸಿ, ಮಹಾಸಮುದ್ರವನ್ನು ಏಳು ನದಿಗಳಂತೆ (ಒಟ್ಟು 22 ನದಿಗಳು) ಊರ್ಧ್ವಮುಖವಾಗಿ ಹರಿಯುವಂತೆ ಮಾಡುತ್ತದೆ. ಈ ನದಿಗಳ ಹೆಸರನ್ನು ಋಗ್ವೇದದಲ್ಲಿ ಕೊಡಲಾಗಿದೆ.
ಆನಂತರ ತಮ್ಮ ತಮ್ಮ ಸ್ಥಾನದಲ್ಲಿ ಮೂರು ನಾಡಿಕಾಂಡಗಳನ್ನು ರಚಿಸಿಕೊಂಡು ಅಲ್ಲಿಂದ 3×72,000 ನಾಡಿಗಳು ಕ್ಷೀರ ಸಾಗರವೆಂದು ಕರೆಯಲ್ಪಡುವ ಸಿಹಿ ಸಮುದ್ರಲ್ಲೆಲ್ಲಾ ಅಂದರೆ ಅಧಃಕುಂಡಲಿನಿಯಿಂದ ಮೇಲುಭಾಗಕ್ಕೂ, ನಾಭಿಕುಂಡಲಿನಿಯಿಂದ ಅಡ್ಡಲಾಗಿಯೂ ಮತ್ತು ಊರ್ಧ್ವಕುಂಡಲಿನಿಯಿಂದ ಕೆಳಭಾಗಕ್ಕೂ 72,000 ನಾಡಿಗಳು ಹರಡುತ್ತದೆ. ಅದನ್ನು ಋಗ್ವೇದವು ಈ ರೀತಿಯಾಗಿ ವಿವರಿಸುತ್ತದೆ.
5. ಋಗ್ವೇದ 10-129-5: “ಈ ಸೃಷ್ಟಿಕಾರ್ಯಗಳ ನಿರ್ವಣಕ್ಕಾಗಿ ಕಾರ್ಯೋನ್ಮುಖವಾದ ರಶ್ಮಿಯು ಅಥವಾ ಶೀಘ್ರವಾಗಿ ವ್ಯಾಪಿಸುವ ಕಾರ್ಯಾರಂಭವು ಅಡ್ಡಲಾಗಿಯೂ, ಕೆಳಭಾಗದಲ್ಲಿಯೂ, ಮೇಲುಭಾಗದಲ್ಲಿಯೂ ವಿಸ್ತಾರವಾಗಿ ಹರಡಿತ್ತು…..”
ಋಗ್ವೇದ 2-35-5: “ಮೂರು ಜನ ಸ್ತ್ರೀಯರು ಅಹಿಂಸಾತ್ಮನಾದ ಅಪಾಂನಪಾತ್ ಸಂಜ್ಞಕನಾದ ಈ ಅಗ್ನಿಗೆ ಸೋಮರೂಪವಾದ ಅನ್ನವನ್ನು ವಹಿಸಿಕೊಂಡು ಹೋಗಿ ಅರ್ಪಿಸುತ್ತಾರೆ. ಉದಕಗಳಲ್ಲಿಯೇ ನಿರ್ಮಿತರಾದಂತೆ ಅವರು ಪ್ರಸರಿಸಿ ಹರಡುತ್ತಾರೆ…. ಉದಕಗಳ ಸಾರಭೂತವೂ ಆದ ಅಮೃತವನ್ನು ಈ ಅಗ್ನಿಯು ಪಾನಮಾಡುತ್ತಾನೆ.”
ಅನಾದಿಯಾದ ಮಹಾಸಮುದ್ರವು ಕ್ಷೀರ ಸಮುದ್ರವಾಗಲು ಮೂರು ಕುಂಡಲಿನೀ ಮಾತೆಯರು ಕಾರಣ. ಅವರು ಸಮುದ್ರಕ್ಕೆ ಹಾಲು ಮಿಶ್ರಿತ ಮೊಸರು, ಜೇನು ತುಪ್ಪ, ಮತ್ತು ಸೋಮರಸವನ್ನು ಸಮುದ್ರದಲ್ಲಿ ಮಿಶ್ರ ಮಾಡುತ್ತಾರೆ. ಸಪ್ತ ನದಿಗಳಲ್ಲಿರುವ (ಸಪ್ತ ಚಕ್ರಗಳಿಂದ ಹರಿಯುವ ನದಿಗಳು) ಶಾಖವನ್ನು ಗರ್ಭರೂಪದಲ್ಲಿ ಧರಿಸಿರುವ ಏಳು ಚಕ್ರದೇವತೆಗಳು ಅದಕ್ಕೆ ಅಮೃತವನ್ನು ಕುಡಿಸಿ, ಶಾಖವು ವೃದ್ಧಿಯಾಗಿ, ಅಗ್ನಿಯಾಗಿ ಪ್ರಜ್ವಲಿಸುವಂತೆ ಮಾಡುತ್ತಾರೆ. ದೇವತೆಗಳು ಈ ಅಗ್ನಿಯನ್ನು ನೋಡಿ ಯಜ್ಞ ಕಾರ್ಯಕ್ಕಾಗಿ ಆರಿಸಿಕೊಂಡರು. ಈ ಏಳು ಚಕ್ರ ದೇವತೆಗಳ ಕುರಿತು ಋಗ್ವೇದವು ಈ ರೀತಿಯಾಗಿ ವಿವರಿಸುತ್ತದೆ.
ಋಗ್ವೇದ 3-1-6: “…. ಅಂತರಿಕ್ಷರೂಪದ ಒಂದೇ ಮೂಲಸ್ಥಾನವನ್ನು ಹೊಂದಿರುವವೋ, ಸಪ್ತಸಂಖ್ಯಾತವೂ ಆದ ನದಿಗಳು ಒಬ್ಬನೇ ಆದ ಅಗ್ನಿಯನ್ನು ತಮ್ಮ ಗರ್ಭವಾಗಿ ಧರಿಸಿದರು.” (ಶಾಖವು ಏಳೂ ಚಕ್ರಗಳಲ್ಲಿ ಗರ್ಭರೂಪವಾಗಿದ್ದು, ಅದರ ಪೋಷಣೆಯಿಂದ ಅಗ್ನಿಯಾಗಿ ವೃದ್ಧಿಯನ್ನು ಹೊಂದುತ್ತದೆ.)
ನಾನು ದರ್ಶನ ಪಡೆದ ಮೂರು ಕುಂಡಲಿನೀ ಮಾತೆಯರು
ಒಂದು ದಿನ 2011 ರಲ್ಲಿ ಇಂದ್ರನ ಪೂಜೆಯಲ್ಲಿ ತಲ್ಲೀನನಾಗಿದ್ದಾಗ ಇಂದ್ರ ದೇವರು ನನಗೆ ಸರಸ್ವತಿ ಆರಾಧನೆ ಮಾಡಲು ಹೇಳಿದರು. ಆಗ ನಾನು ಸರಸ್ವತಿಯನ್ನು ದರ್ಶನ ಮಾಡಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೆಲವು ದಿನಗಳ ನಂತರ ಅಧಃಕುಂಡಲಿನಿ ಸಹ ಸರಸ್ವತಿಯ ಸ್ವರೂಪವೆಂದು ತಿಳಿದು ಮೂಲಾಧಾರದ ಮೇಲಿರುವ ತ್ರಿಕೋನ ಮಧ್ಯದಲ್ಲಿರುವ ಕುಂಡಲಿನೀ ಮಾತೆಯನ್ನು ಧ್ಯಾನಿಸತೂಡಗಿದೆನು.
ಸುಮಾರು ಒಂದು ವಾರದ ನಂತರ ನಾಭಿ ಮಧ್ಯದಿಂದ ಮಿಂಚಿನ ಬಣ್ಣದ ಒಂದು ಸಣ್ಣ ನಾಡಿಯು ಕುತ್ತಿಗೆ ಮತ್ತು ಮೂಲಾಧಾರದವರೆಗೂ ಚಾಚಿಕೊಂಡು ಪ್ರಕಟವಾಯಿತು. ಅದರ ಜೊತೆಯಲ್ಲಿ ನಾಡಿಯ ಮಧ್ಯದಲ್ಲಿ ಒಳಗೆ ನಿದ್ರಿಸುತ್ತಿಸುತ್ತಿರುವ, ಟೈಲರ್ ದಾರದಷ್ಷು ಸಣ್ಣಗಿರುವ, ಸರ್ಪವೂ ಸಹ ಕೆಳಗೆ ಬಂದಿತು. ಅದನ್ನು ಗಮನಿಸಿದ ಕೂಡಲೆ ನಾನು ಅದನ್ನು ಸ್ವಸ್ಥಾನಕ್ಕೆ ತೆರಳುವಂತೆ ವಿನಂತಿಸಿದೆನು. ಆಗ ನಾಡಿ ಮತ್ತು ಸರ್ಪವು ನಾಭಿಯಲ್ಲಿ ಹೋಗಿ ನೆಲೆಸಿತು.
ನಾನು ಮಾರನೆಯ ದಿನದಿಂದ ನಾಭಿಕುಂಡಲಿನಿಯ ಮೇಲೆ ಧ್ಯಾನಮಾಡಿ ಸರ್ಪವನ್ನು ಜಾಗೃತ ಮಾಡಿ, ಚಕ್ರಗಳ ಮುಖಾಂತರ ಸಹಸ್ರಾರಕ್ಕೆ ಕೊಂಡೊಯ್ಯಲು ಸಫಲನಾದೆನು. ಆಗ ಸಹಸ್ರಾರ ಚಕ್ರವು ಊರ್ಧ್ವಮುಖವಾಗಿ ವಿಕಸಿತವಾಯಿತು. ನನ್ನ ಹಿಂದಿನ ಅಧಃಕುಂಡಲಿನಿ ಚಕ್ರಗಳ ಜಾಗೃತಿಯ ಪ್ರಕಾರ ಸಹಸ್ರಾರ ಚಕ್ರವು ಬೋಗುಣಿಯಂತೆ ಕೆಳಮುಖವಾಗಿ ಅರಳಬೇಕಿತ್ತು. ಆದ್ದರಿಂದ ನನ್ನ ಇಚ್ಛಾಶಕ್ತಿಯಿಂದ ಸಹಸ್ರಾರ ಚಕ್ರವು ಕೆಳಮುವಾಗುವಂತೆ ಮಾಡಿದೆನು.
ಆದರೆ ಇದರ ಫಲಿತಾಂಶವು ಬೇರೆಯೇ ಆಗಿತ್ತು. ಮಾರನೆಯ ದಿನ ನಾಭಿಕುಂಡಲಿನಿಯನ್ನು ಸಹಸ್ರಾರದಲ್ಲಿ ಆರಾಧಿಸುತ್ತಿದ್ದಾಗ ಮೂಲಾಧಾರದಲ್ಲಿರುವ ಅಧಃಕುಂಡಲಿನಿ ಮಾತೆಯು ಮೇಲಕ್ಕೆ ಬರಲು ಪ್ರಯತ್ನಿಸುತ್ತಿರುವುದು ಗಮನಕ್ಕೆ ಬಂದಿತು. ಆಗ ನಾನು ಮೇಲಕ್ಕೆ ಬರಲು ಮನಸ್ಸಿನಲ್ಲಿ ವಿನಂತಿಸಿದೆನು. ಕೂಡಲೆ ಅಧಃಕುಂಡಲಿನಿ ಯಾವುದೇ ಚಕ್ರಗಳನ್ನು ಜಾಗೃತ ಮಾಡದೇ ನೇರವಾಗಿ ಸಹಸ್ರಾರಕ್ಕೆ ಬಂದಳು.
ಈ ರೀತಿಯಾಗಿ ಎರಡು ಕುಂಡಲಿನಿ ಸರ್ಪದ ದರ್ಶನವಾಯಿತು. ಮಾರನೆಯ ದಿನ ಊರ್ಧ್ವಕುಂಡಲಿನಿಯು ಮೇಲಕ್ಕೆ ಬರಬಹುದೆ ಎಂದು ಊರ್ಧ್ವನಾಡಿಕಾಂಡವನ್ನು ಜಾಗೃತ ಮಾಡಿ, ಕುಂಡಲಿನೀ ಮಾತೆಯನ್ನು ಜಾಗೃತ ಮಾಡಿದೆನು. ಕೂಡಲೆ ಮಾತೆಯು ಪ್ರಕಟವಾಗಿ ಸಹಸ್ರಾರಕ್ಕೆ ಬಂದು ಸೇರಿದಳು. ಹೀಗೆ ಮೂರು ಕುಂಡಲಿನೀ ಮಾತೆಯರು ದರ್ಶನ ಮಾಡಿರುವೆನು.
ನನಗೆ ತಿಳಿದುಬಂದದ್ದು ಏನೆಂದರೆ ಅಧಃಕುಂಡಲಿನಿ ಸಹಸ್ರಾರ ಚಕ್ರವು ಬೋಗುಣಿಯಂತೆ ಕೆಳಮುಖವಾಗಿ ಇರುತ್ತದೆ ಮತ್ತು ಚಂದ್ರಮಂಡಲ ಮಧ್ಯದಲ್ಲಿರುವ ತ್ರಿಕೋನದಲ್ಲಿ ನಿರಾಕಾರ ಶಿವನನ್ನು ಪ್ರತಿನಿಧಿಸುವ ಅಂಧಕಾರ ಇರುತ್ತದೆ. ಮಾನವ ರೂಪದ ಶಿವನನ್ನು ನೋಡಬಯಸುವವರಿಗೆ ಸರ್ವಾಭರಣ ಭೂಷಿತನಾದ ಶಿವನು ಸಿಂಹಾಸನದ ಮೇಲೆ ಕುಳಿತಿರುವನು. ಸೃಷ್ಟಿಗೆ ಕಾರಣಳಾದ ನಾಭಿಕುಂಡಲಿನಿಯ ಸಹಸ್ರಾರ ಚಕ್ರವು ಊರ್ಧ್ವಮುಖವಾಗಿರುತ್ತದೆ ಮತ್ತು ಮಾತೆಯ ಸೃಷ್ಟಿಯಿಂದ ವಿಮುಖನಾಗಿ ವೈರಾಗ್ಯವನ್ನು ಹೊಂದಿರುವ ಆದಿಗುರು ಶಿವನು ಸಹಸ್ರಾರದ ಮೇಲೆ ಪದ್ಮಾಸನದಲ್ಲಿ ಕುಳಿತಿರುವನು. ಊರ್ಧ್ವಕುಂಡಲಿನಿಯ ಸಹಸ್ರಾರ ಚಕ್ರವು ಚಿನ್ನದ ತಟ್ಟೆ ಅಥವಾ ಚಕ್ರದಂತೆ ಇರುತ್ತದೆ ಮತ್ತು ಅದರ ಮಧ್ಯದಲ್ಲಿರುವ ತ್ರಿಕೋನ ಮಧ್ಯದಲ್ಲಿ ಸರ್ವಾಭರಣ ಭೂಷಿತನಾದ ಶಿವನು ಕುಳಿತಿರುವನು.
(ಹೆಚ್ಚಿನ ವಿವರಗಳಿಗೆ www.thesecretofrigveda.in ವೆಬ್ಸೈಟ್ ನೋಡಿ)
ನಿವೃತ್ತ ನೌಕಾದಳ ನಾವಿಕ
Ph: 9945366147