ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ 2022-23ನೇ ವರ್ಷದ ವಾರ್ಷಿಕ ಚಂಪಾಷಷ್ಠಿ ಮಹೋತ್ಸವವು ನ.21ರಂದು ಕಾರ್ತಿಕ ದ್ವಾದಶಿಯಂದು ಬೆಳಗ್ಗೆ ಕೊಪ್ಪರಿಗೆ ಏರುವ ಮೂಲಕ ಆರಂಭವಾಗಲಿದೆ. ನ.5 ಮಾರ್ಗಶಿರ ಶುದ್ಧ ದ್ವಾದಶಿಯಂದು ಬೆಳಗ್ಗೆ ಕೊಪ್ಪರಿಗೆ ಇಳಿದು ಆ ದಿನ ರಾತ್ರಿ ನೀರು ಬಂಡಿ ಉತ್ಸವ, ದೈವಗಳ ನಡಾವಳಿ ನಡೆಯುವುದರೊಂದಿಗೆ ಸಂಪನ್ನಗೊಳ್ಳಲಿದೆ’ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಹೇಳಿದರು.
ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಚಂಪಾಷಷ್ಠಿ ಮಹೋತ್ಸವದ ಪ್ರಯುಕ್ತ ನ.23ರಂದು ಲಕ್ಷ ದೀಪೋತ್ಸವವು ನೆರವೇರಲಿದೆ. ಸಾಯಂಕಾಲ ಸಂಜೆ 7ರಿಂದ ಶ್ರೀ ದೇವಳದ ರಾಜಗೋಪುರದ ಬಳಿಯಿಂದ ರಥಬೀದಿ, ಅಡ್ಡಬೀದಿ ಕಾಶಿಕಟ್ಟೆಯಾಗಿ ಕುಮಾರಧಾರದವರೆಗೆ ಕುಣಿತ ಭಜನಾ ಸಂಭ್ರಮವನ್ನು ದೇವಳದ ಆಡಳಿತವು ವಿಶೇಷವಾಗಿ ಹಮ್ಮಿಕೊಂಡಿದೆ. ಈ ಭಜನಾ ಸಂಭ್ರಮದಲ್ಲಿ ಸುಮಾರು 1,000 ಭಜನಾ ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. ಭಜನಾ ಸಂಭ್ರಮದಲ್ಲಿ ಗಾಯಕ ಜಗದೀಶ ಆಚಾರ್ಯ ಪುತ್ತೂರು ಭಾಗವಹಿಸಲಿದ್ದು, ಭಜನಾ ತಂಡಗಳ ಪ್ರಧಾನ ವೇದಿಕೆಯನ್ನು ಅಲಂಕರಿಸಲಿದ್ದಾರೆ ಎಂದರು.
ಈ ಭಜನಾ ಸಂಭ್ರಮದಲ್ಲಿ ಸಾರ್ವಜನಿಕರು ಭಾಗವಹಿಸಲು ಅವಕಾಶವಿದ್ದು, ಭಾಗವಹಿಸುವ ತಂಡಗಳು ನ. 20 ಒಳಗಾಗಿ ದೇವಳದಲ್ಲಿ ಹೆಸರು ನೋಂದಾಯಿಸುವಂತೆ ಕೋರಲಾಗಿದೆ. ಪ್ರತೀ ತಂಡದಲ್ಲಿ ಕನಿಷ್ಠ 10 ಮಂದಿಗೆ ಮಾತ್ರ ಅವಕಾಶವಿದೆ.