ಬೆಂಗಳೂರು: ಡಾ|| ದಿಶಾ ಮಂಜುನಾಥ್ ಅವರು ನವೆಂಬರ್ 25, ಶುಕ್ರವಾರ ಸಂಜೆ 5-30ಕ್ಕೆ ಬೆಂಗಳೂರಿನ ಜೆ.ಸಿ. ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ ವಿದ್ಯುಕ್ತವಾಗಿ ರಂಗ ಪ್ರವೇಶ ಮಾಡಲಿದ್ದಾರೆ.
ಡಾ|| ದಿಶಾ ಮಂಜುನಾಥ್ ಅವರು ಎಂ.ಬಿ.ಬಿ.ಎಸ್. ಪದವೀಧರೆ. ಇವರು ‘ನೃತ್ಯ ದಿಶಾ ಟ್ರಸ್ಟ್’ ನ ಸಂಸ್ಥಾಪಕಿ ಹಾಗೂ ನಿರ್ದೇಶಕಿಯಾದ ಗುರು ಕಲಾಭೂಷಿಣಿ ಶ್ರೀಮತಿ ದರ್ಶಿನಿ ಮಂಜುನಾಥ್ ಅವರ ಸುಪುತ್ರಿ ಹಾಗೂ ಶಿಷ್ಯೆ.
ನೃತ್ಯದ ಪರಿಸರದಲ್ಲೇ ಜನಿಸಿದ ಇವರು ತನ್ನ ಆರನೇ ವಯಸ್ಸಿನಿಂದಲೇ ಗುರು ಕರ್ನಾಟಕ ಕಲಾತಿಲಕ ದಿವಂಗತ ಶ್ರೀಮತಿ ಪದ್ಮಿನಿ ರಾವ್ ಅವರ ಗರಡಿಯಲ್ಲಿ ಪಳಗಿದವರು. ಅವರು ದಿವಂಗತರಾದ ನಂತರ ತನ್ನ ತಾಯಿಯನ್ನೇ ನೃತ್ಯಗುರುವಾಗಿ ಸ್ವೀಕರಿಸಿ ಅಭ್ಯಾಸವನ್ನು ಮುಂದುವರಿಸಿ ‘ನೂಲಿನಂತೆ ಸೀರೆ, ತಾಯಿಯಂತೆ ಮಗಳು’ ಎಂಬುದನ್ನು ತೋರಿಸಿಕೊಟ್ಟವರು.
ಭರತನಾಟ್ಯಂನಲ್ಲಿ ಕರ್ನಾಟಕ ಸೆಕೆಂಡರಿ ಬೋರ್ಡ್ ನ ಜೂನಿಯರ್ ಹಾಗೂ ಸೀನಿಯರ್ ಪರೀಕ್ಷೆಗಳನ್ನು ಪಾಸ್ ಮಾಡಿರುವ ದಿಶಾ, ಮೀರಜ್ ನ ಅಖಿಲ ಭಾರತೀಯ ಗಂಧರ್ವ ವಿಶ್ವವಿದ್ಯಾನಿಲಯದ ಮಧ್ಯಮ ಪೂರ್ಣ ಪರೀಕ್ಷೆಯಲ್ಲೂ ಅತ್ಯುನ್ನತ ಅಂಕಗಳೊಂದಿಗೆ ಉತ್ತೀರ್ಣಳಾಗಿದ್ದಾರೆ. ನೃತ್ಯ ದಿಶಾ ಟ್ರಸ್ಟ್ ನ ಹಲವು ಕಾರ್ಯಕ್ರಮಗಳಲ್ಲಿ ಏಕವ್ಯಕ್ತಿ ಪ್ರದರ್ಶನ ನೀಡಿರುವ ಇವರು ಹಲವು ನೃತ್ಯ ನಾಟಕಗಳಲ್ಲಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಉದಯ, ಕಸ್ತೂರಿ, ಚಂದನ, ಕಲರ್ಸ್ ಹಿಂದಿ, ಝೀ, ನಾದ ನಿರಂಜನ ಮೊದಲಾದ ಟಿವಿ ಚಾನೆಲ್ ಗಳಲ್ಲಿ ನೇರ ಪ್ರಸಾರ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಲಂಡನ್ನಿನಲ್ಲಿ ಜರುಗಿದ 1ನೇ ಯುರೋಪ್ ವಿಶ್ವಕನ್ನಡ ಸಮ್ಮೇಳನ ಹಾಗೂ ದುಬೈನಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ನೃತ್ಯ ಪ್ರದರ್ಶನ ನೀಡಿ ವಿದೇಶಗಳಲ್ಲೂ ತನ್ನ ಛಾಪನ್ನು ಮೂಡಿಸಿದ್ದಾಳೆ. ಮೈಸೂರು ದಸರಾ, ಉಡುಪಿ ಕೃಷ್ಣ ಮಠದ ಕೃಷ್ಣ ಜನ್ಮಾಷ್ಟಮಿ ಅಲ್ಲದೆ, ವಿಧಾನಸೌಧ ಸೇರಿದಂತೆ ಹಲವು ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ, ಕನ್ನಡ ಹಬ್ಬ, ಸಾಹಿತ್ಯ ಸಮ್ಮೇಳನ, ಉತ್ಸವಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಹಲವು ನೃತ್ಯ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾಳೆ. ವೈದ್ಯಕೀಯ ಪದವೀಧರೆಯಾದ ದಿಶಾ ಎರಡು ವಿಭಿನ್ನ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಬಹುಮುಖ ಪ್ರತಿಭೆ. ಇವರ ಕಾರ್ಯಕ್ರಮಗಳಲ್ಲಿ ವಿಶೇಷತೆಯನ್ನು ಗುರುತಿಸುವ ಜನರು ಇವರ ಪ್ರತಿಭೆಯನ್ನು ಕೊಂಡಾಡುತ್ತಾರೆ. ಈ ಮೂಲಕ ತಂದೆ ಆರ್. ಮಂಜುನಾಥ್ ಹಾಗೂ ಅಜ್ಜಿ ಶ್ರೀಮತಿ ಲೀಲಾವತಿ ಅವರ ಪ್ರೋತ್ಸಾಹದೊಂದಿಗೆ ತನ್ನ ಮತ್ತೊಬ್ಬ ಅಜ್ಜಿ ದಿವಂಗತ ಶ್ರೀಮತಿ ನಾಗರತ್ನರವರ ಕನಸನ್ನು ನನಸಾಗಿಸಿದ್ದಾರೆ.