ಲೇಖನ : ಡಾ. ವಿದ್ಯಾಶ್ರೀ ಕುಲಕರ್ಣಿ ಮಾನವಿ
ಕನ್ನಡ ಅಧ್ಯಾಪಕಿ ಪೂರ್ಣಪ್ರಮತಿ ಬೆಂಗಳೂರು
ಶ್ರೀಮಧ್ವಸಂಸೇವನ ಲಬ್ಧಶುದ್ಧವಿದ್ಯಾ ಸುಧಾಂಭೋ ನಿಧಯೋ ಅಮಲಾ ಯೇ | ಕೃಪಾಲವಃ ಪಂಕಜನಾಭತೀರ್ಥಾಃ ಕೃಪಾಲವಃ ಸ್ಯಾನ್ಮಯಿ ನಿತ್ಯಮೇಷಾಮ್ || ಮಾತೃ ಸ್ಥಾನದ ಹಿರಿಮೆ, ಗರಿಮೆ, ಇರುವುದು. ವಿದ್ಯೆ ನೀಡಿ ತಿದ್ದಿ ಬುದ್ಧಿ ಹೇಳಿ ಸನ್ಮಾರ್ಗದಲ್ಲಿ ಮುನ್ನಡೆಸುವ ಗುರುಗಳದ್ದೇ. ಗುರಿ ತೋರಿಸುವ, ಗುರಿ ಸಾಧಿಸುವ ನಿಟ್ಟಿನಲ್ಲಿ ಶಿಸ್ತುಬದ್ಧವಾದ ಶಿಕ್ಷಣ ಕೊಟ್ಟು ಮುಂದಿನ ತಲೆತಲೆಮಾರುಗಳಿಗೆ ವಿದ್ಯೆ, ಸಂಸ್ಕಾರ, ಸಂಸ್ಕೃತಿ ಉಳಿದು ಬೆಳೆದು ಬರಲಿ ಎಂಬ ಸದುದ್ದೇಶದಿಂದಲೇ ಅತ್ಯಂತ ಕಾಳಜಿ ತೋರಿ ತಮ್ಮ ವಿದ್ಯೆಯನ್ನೆಲ್ಲ ಶಿಷ್ಯಂದಿರಿಗೆ ಧಾರೆಯೆರೆದು ತಮ್ಮ ಜೀವನವನ್ನು ಮುಡಿಪಾಗಿಡುವವರು ಗುರುಗಳು. ಅಜ್ಞಾನದ ಅಂಧಕಾರದಲ್ಲಿ ಇದ್ದ ನಮಗೆ ದ್ವೈತಸಿದ್ಧಾಂತವನ್ನು ಸಾರಿ, ಜ್ಞಾನದ ಸ್ವಚ್ಛ ಬೆಳಕನ್ನು ಅಚ್ಚಳಿಯ ದಂತೆ ನೀಡಿದವರು ಜಗದ್ಗುರುಳಾದ ಶ್ರೀಮದಾಚಾರ್ಯರು. ವೇದಾಂತ ಸಾಮ್ರಾಜ್ಯವನ್ನು ಬೆಳಗಿದ ವಾಯುವಿನ ಅವತಾರವಾದ ಶ್ರೀಮದಾಚಾರ್ಯರ ಆಚಾರ್ಯರ ಹತ್ತಿರ ಇದ್ದ ನೇರ ಶಿಷ್ಯೋತ್ತಮರಲ್ಲಿ ಶ್ರೀಪದ್ಮನಾಭತೀರ್ಥರೂ ಒಬ್ಬರು. ಪದ್ಮನಾಭ ತೀರ್ಥರು ಆಚಾರ್ಯ ಮಧ್ವರ ಮೊದಲ ಶಿಷ್ಯರಷ್ಟೇ ಅಲ್ಲ, ಆಚಾರ್ಯರ ಅತ್ಯಂತ ಮೆಚ್ಚಿನ ಶಿಷ್ಯರೂ ಹೌದು. ಮಧ್ವಮತದ ಮೊದಲ ಪ್ರಚಾರಕರೂ ಹೌದು. ಆಚಾರ್ಯರಿಗೆ ಉಡುಪಿಯ ಅಷ್ಟಮಠಾಧೀಶರಲ್ಲದೇ, ಮೂಲಪುರುಷರೆನಿಸಿಕೊಂಡ ಪದ್ಮನಾಭತೀರ್ಥರ ಜೊತೆಗೆ ನರಹರಿತೀರ್ಥರು, ಮಾಧವತೀರ್ಥರು ಹಾಗೂ ಅಕ್ಷೋಭ್ಯತೀರ್ಥರು, ವೃಷಭರೂಪದ ಶ್ರೀಜಯತೀರ್ಥರೂ ಇದ್ದರು. ಶ್ರೀಪದ್ಮನಾಭತೀರ್ಥರು ಸಾಕ್ಷಾತ್ ಶ್ರೀಮದಾಚಾರ್ಯರಿಂದಲೇ ದತ್ತವಾಗಿದ್ದ ಶ್ರೀಮೂಲ ಗೋಪೀನಾಥನನ್ನು ಪೂಜಿಸುತ್ತಾ ಆನಂದ ತೀರ್ಥ ರಿಂದ ನೂತನವಾಗಿ ಸಮರ್ಥಿಸಲ್ಪಟ್ಟಿದ್ದ ದ್ವೈತದರ್ಶನದ ಅದ್ಭುತ ಪ್ರಚಾರಕಾರ್ಯದಲ್ಲಿ ನಿರತರಾಗಿದ್ದರು. ಶ್ರೀಮದಾಚಾರ್ಯರ ನಂತರ ಮೂಲಸಂಸ್ಥಾನದ ಮೂಲ ಸೀತಾರಾಮರನ್ನು ಅರ್ಚಿಸುವ ಮಹಾಭಾಗ್ಯ ಪ್ರಪ್ರಥಮ ಬಾರಿಗೆ ಅವರಿಗೇ ಲಭ್ಯವಾಯಿತು. ಹೀಗೆ ಶ್ರೀ ಪದ್ಮನಾಭತೀರ್ಥರ ಸಂಸ್ಥಾನಾಧಿಪತ್ಯವು ಮುಂದುವರೆದು ಪ್ರತ್ಯೇಕ ಶಾಖೆಯಾಗಿ ಬೆಳೆಯಿತು. ಶ್ರೀ ಪದ್ಮನಾಭತೀರ್ಥರ ಪರಮತಖಂಡನದ ಪರಮದೀಕ್ಷಾದಕ್ಷತೆಯನ್ನು, ಸಿದ್ಧಾಂತ ವಿಜೃಂಭಣೆಯ ವೈಭವ ವೈಶಿಷ್ಟ್ಯಗಳನ್ನು ನಾರಾಯಣಪಂಡಿತಾಚಾರ್ಯರು ವರ್ಣಿಸುತ್ತಾ, `ವಾಖ್ಯಾಪ್ರಣಾದಮಾತ್ರೇಣ ವೀರಂ ಮನ್ಯಾನ್ ಸ್ವಮಂಡಲೇ ಮಾಯಾವಿ ಗ್ರಾಮಸಿಂಹಾನ್ಯೋ ವಾದಿಸಿಂಹೋ ನಿರಾಕರೋತ್’ ಸಕಲ ವೇದದ ಸಾರ ಸರ್ವಸ್ವಗಳ ಶಾಖೋಪಶಾಖೆಗಳಲ್ಲಿಯೂ, ಸರ್ವದರ್ಶನ ಧರ್ಮಶಾಸ್ತ್ರಗಳಲ್ಲಿಯೂ, ಸರ್ವಜ್ಞ ಸಿದ್ಧಾಂತ ಪ್ರಸಾರ ದೀಕ್ಷೆಗಳಲ್ಲಿಯೂ ಪದ್ಮನಾಭತೀರ್ಥರಿಗಿದ್ದ ಪ್ರಚಂಡ ಪ್ರಭುತ್ವ, ಪಟುತ್ವ, ಪಾಂಡಿತ್ಯ, ವ್ಯುತ್ಪತ್ತಿ, ಹಾಗೂ ಅನನ್ಯ ಅಭಿವ್ಯಕ್ತಿಗಳು ಅಸದೃಶವಾದುವು. ಶ್ರೀಪದ್ಮನಾಭತೀರ್ಥರು ತಮ್ಮ ಪರಂಪರೆಯು ಎಂದೆಂದಿಗೂ ನಿರಂತರವಾಗಿ ಧರ್ಮಪ್ರಸಾರಕಾರ್ಯದಲ್ಲಿ ಕ್ರಿಯಾತ್ಮಕವಾಗಿ ತೊಡಗಿರುವಂತೆ ಮುಂದುವರಿಸಿದ ಮಠವೇ ಮುಂದೆ ಶ್ರೀಪಾದರಾಜರಂತಹ ದಿವ್ಯವ್ಯಕ್ತಿತ್ವದ ಅದ್ಭುತಪ್ರಭಾವದಿಂದ ಶ್ರೀಪಾದರಾಜರ ಮಠವೆಂದೇ ಖ್ಯಾತವಾಯಿತು. ತಮ್ಮ ಗುರುಗಳಾದ ಶ್ರೀಮದಾಚಾರ್ಯರ ಆಜ್ಞೆಯಂತೆ ಶ್ರೀ ಪದ್ಮನಾಭತೀರ್ಥರು ಎಲ್ಲ ಪೀಠಾಧಿಪತಿಗಳನ್ನೂ ಸಾಕಿ ಸಲಹಿ ಪೋಷಣೆ ಮಾಡುತ್ತಾರೆ. ಪೂರ್ವಾಶ್ರಮದಲ್ಲಿ ಪ್ರಕಾಂಡ ಪಂಡಿತರಾಗಿದ್ದ ಶೋಭನಭಟ್ಟರು ಒಮ್ಮೆ ಗೋದಾವರಿ ತೀರದಲ್ಲಿ ಸಂಚಾರಕ್ಕೆ ಹೋದಾಗ, ಅವರೊಂದಿಗೆ ವಾಗ್ವಾದ ಮಾಡಿ ಸೋತು ಆಚಾರ್ಯರ ಶಿಷ್ಯತ್ವವಹಿಸಿ ಸನ್ಯಾಸ ಸ್ವೀಕರಿಸಿ ಶ್ರೀಪದ್ಮನಾಭತೀರ್ಥರಾದರೆಂದು ತಿಳಿದು ಬರುತ್ತದೆ. ಮಧ್ವಾಚಾರ್ಯರ ಅನೇಕ ಗ್ರಂಥಗಳಿಗೆ ಟೀಕೆಯನ್ನು ಬರೆದ ಶ್ರೀಪದ್ಮನಾಭತೀರ್ಥರು ಭಾಷ್ಯವ್ಯಾಖ್ಯಾನ ರೂಪವಾದ, ಸನ್ಯಾಯ ರತ್ನಾವಲಿ ಎಂಬ ಸದ್ಗ್ರಂಥ ಉದ್ಗ್ರಂಥವನ್ನು ರಚಿಸಿ ಕೊಟ್ಟು ಮೊಟ್ಟಮೊದಲ ಪ್ರಾಚೀನ ಟೀಕಾಕಾರರು ಎಂದೆನಿಸಿಕೊಳ್ಳುತ್ತಾರೆ. ಸರ್ಪರೂಪದಿ ಕಂಡಿದ್ದು ಒಮ್ಮೆ ವ್ಯಾಸರಾಯರು ಧ್ಯಾನಮಗ್ನರಾಗಿದ್ದಾಗ ಅವರ ಸುತ್ತ ಒಂದು ಸರ್ಪ ಕುಳಿತಿದೆ ಎಂಬ ವಿಷಯ ತಿಳಿದು ಧಾವಿಸಿ ಬಂದ ಶ್ರೀಪಾದರಾಜರು, ಗುಹೆಯ ಒಳಗೆ ಇರುವ ದೀಪದ ಮಬ್ಬು ಮಬ್ಬು ಬೆಳಕಿನಲ್ಲೇ ವ್ಯಾಸರಾಯರನ್ನು ಸುತ್ತುವರಿದಿದ್ದ ಘಟಸರ್ಪವು ಕಾಣುತ್ತಿತ್ತು. ತಮಗೆ ಪ್ರಾಣ ಪ್ರಿಯರಾದ ಶ್ರೀವ್ಯಾಸರಾಜರನ್ನು ಭದ್ರವಾಗಿ ಬಿಗಿಸು ನಿಂತಿರುವ ಅದ್ಭುತವಾದ ಈ ಸರ್ಪವು ಯಾರೆಂದು, ತಿಳಿಯಲು ಅಪರೋಕ್ಷ ಜ್ಞಾನಿಗಳಾಗಿದ್ದ ಶ್ರೀಪಾದರಾಜರಿಗೆ ಕಷ್ಟವಾಗಲಿಲ್ಲ. ಅವರು ಶ್ರೀಮಧ್ವಾಚರ್ಯರ ಸಾಕ್ಷಾತ್ ಶಿಷ್ಯರೂ, ತಮ್ಮ ಮಠದ ಮೂಲ ಪುರುಷರೂ ಆದ ಶ್ರೀ ಪದ್ಮನಾಭತೀರ್ಥರೇ ಎನ್ನುವಂತೆ ಭಾಸವಾಯಿತು. ಶ್ರೀಪದ್ಮನಾಭತೀರ್ಥರು ಶೇಷಾಂಶರೆಂದು ತಿಳಿದಿದ್ದ ಶ್ರೀಪಾದರಾಜರು ತಮ್ಮ ದಿವ್ಯ ಯೋಗಶಕ್ತಿಯಿಂದ ಸರ್ಪಭಾಷೆಯಲ್ಲೇ ಆ ಸರ್ಪವನ್ನು ಮಾತನಾಡಿಸಿದರು. ವ್ಯಾಸರಾಯರು ಮುಂದೆ ಮಹತ್ಕಾರ್ಯಗಳನ್ನು ಸಾಧಿಸಬೇಕಾಗಿರುವುದರಿಮದ ಅವರನ್ನು ಆಶೀರ್ವದಿಸಿ ಅನುಗ್ರಹಿಸಲು ಬಂದಿರುವುದಾಗಿ ತಿಳಿಸಿ ತಮ್ಮ ಆಗಮನ ಹಾಗೂ ಸ್ಪರ್ಶದ ಸಾನ್ನಿಧ್ಯದಿಂದಾಗಿ ಮುಂದೆಂದಿಗೂ ಶ್ರೀ ವ್ಯಾಸರಾಯರಿಗೆ ಶತ್ರುಗಳ ವಿಷಬಾಧೆ ತಟ್ಟುವುದಿಲ್ಲ. ಎಂತಹ ಪ್ರಚಂಡವಾದಿಯನ್ನಾದರೂ ನಿಗ್ರಹಿಸಿ ವಿಶ್ವವಿಜಯ ಪಡೆಯುವ ತ್ರಿವಿಕ್ರಮ ಸಾಮರ್ಥ್ಯ ಇದರಿಂದ ಉಂಟಾಗುತ್ತದೆ. ಎಂದು ಹೇಳಿ ಶ್ರೀಪಾದರಾಜರ ಪ್ರಾರ್ಥನೆ, ನಮಸ್ಕಾರಗಳನ್ನು ಸ್ವೀಕರಿಸಿ, ತನ್ನ ಬಂಧವನ್ನು ಸಡಿಲಿಸಿ ನಿಧಾನವಾಗಿ ಕೆಳಗಿಳಿದು ಹೋಗಿ ಕಣ್ಮರೆಯಾಯಿತು. ಎಚ್ಚೆತ್ತ ಶ್ರೀ ವ್ಯಾಸರಾಯರಿಗೆ ತಾವು ಶ್ರೀ ಪದ್ಮನಾಭಯತಿವರೇಣ್ಯರೊಡನೆ ಸಂಭಾಷಿಸಿ ಅವರ ಅಕ್ಷಯರಕ್ಷೆಯು ವ್ಯಾಸತೀರ್ಥರಿಗೆ ದೊರೆತ ಸುದ್ದಿಯ ಘಟನೆಯನ್ನು ಹೇಳುತ್ತಾ ನಿನ್ನಂತಹ ಶಿಷ್ಯನನ್ನು ಪಡೆದ ನಾವೇ ಪರಮ ಧನ್ಯರು ಎಂದು ಹರ್ಷಪುಳಕಿತರಾದರು. ಕಾಗಿಣಿ ತಟವಾಸ, ಮಳಖೇಡ ನಿವಾಸಿಗಳಾದ, ಶ್ರೀಮಟ್ಟೀಕಾಕೃತ್ಪಾದರು ಶ್ರೀಮನ್ಯಾಸುಧಾ ಆರಂಭದಲ್ಲಿ ನನ್ನ ಪಾಲಿನ ವೈರಾಗ್ಯಭಾಗ್ಯ ಎಂದರೆ ಅತ್ಯಂತ ವಿರಕ್ತರಾದ, ವೈರಾಗ್ಯ ಶಿಖಾಮಣಿಳಾದ ಶ್ರೀಪದ್ಮನಾಭತೀರ್ಥರು ತಮಗೆ ಮಾರ್ಗದರ್ಶಿಗಳಾಗಿರುವರು ಎಂದು ನಮಸ್ಕರಿಸಿರುವುದನ್ನು, `ಶ್ರೀ ಮಧ್ವಸಂಸೇವನ ಲಬ್ಧ ಶುದ್ಧ ವಿದ್ಯಾಸುಧಾಂಭೋನಿಧಯೋ ಮಲಾಯೇ’ ಕೃಪಾಲವಃ ಪಂಕಜನಾಭ ತೀರ್ಥಾಃ ಕೃಪಾಲವಃ ಸ್ಯಾನ್ಮಯಿ ನಿತ್ಯಮೇಷಾಂ ಎಂದು ಈ ಶ್ಲೋಕದಲ್ಲಿ ಕಾಣಬಹುದು. ಶ್ರೀಪದ್ಮನಾಭತೀರ್ಥರ ವೃಂದಾವನ ನವವೃಂದಾವನದಲ್ಲಿ ಹಾಗೂ ಮೃತ್ತಿಕಾವೃಂದಾವನ ಮುಳಬಾಗಿನಲ್ಲಿ ಇರುವುದನ್ನು ನಾವು ಕಾಣುತ್ತೇವೆ. ವೃಂದಾವನ ಸನ್ನಿಧಾನದಲ್ಲಿ ಆರಾಧನೆ ಅತ್ಯಂತ ವಿಜೃಂಭಣೆಯಿಂದ ನೆರವೇರುತ್ತದೆ. ಹೃದಯಪದ್ಮದಲ್ಲಿರುವ ಶ್ರೀಹರಿಯ ಸರ್ವೋತ್ತಮತ್ವವನ್ನು ಜಗತ್ತಿಗೆ ಸಾರಿದ, ಶ್ರೀಮದಾಚಾರ್ಯರ ಸಿದ್ಧಾಂತವನ್ನು ಅಖಂಡವಾಗಿ ಬೆಳಗಿದ ಯತಿಶ್ರೇ಼ಷ್ಠರಾದ ಶ್ರೀಪದ್ಮನಾಭತೀರ್ಥರನ್ನು ಸ್ಮರಿಸುತ್ತಾ ಅವರ ಆರಾಧನಾ ಪ್ರಯುಕ್ತ ಈ ಅಲ್ಪಮತಿಗೆ ತಿಳಿದಷ್ಟು ಬರೆದ ಎರಡಕ್ಷರದ ಈ ಲೇಖನ ಕುಸುಮ.