ಬೆಂಗಳೂರು: ಕೆ.ಎಸ್.ರಾಮಮೂರ್ತಿ ರವರ ‘ತಿರುಪತಿಯ ಹಿನ್ನೆಲೆಯಲ್ಲಿ ಶ್ರೀ ವೆಂಕಟೇಶ್ವರ ಸುಪ್ರಭಾತ’ ಕೃತಿ ಲೋಕಾರ್ಪಣೆ ಜಯನಗರ ೮ನೇ ಬ್ಲಾಕ್‌ನ ಜಯರಾಮ ಸೇವಾಮಂಡಳಿಯ ಸಭಾಂಗಣದಲ್ಲಿ ನಡೆಯಿತು.
ಮೇಲುಕೋಟೆ ಯದುಗಿರಿ ಯತಿರಾಜ ಮಠದ ಶ್ರೀ ನಾರಾಯಣ ರಾಮಾನುಜ ಜೀಯರ್ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಕೋಲಾರದ ಗೊಲ್ಲಪಿನ್ನಿ ಮನೆತನ ಪ್ರಕಟಿಸಿರುವ ನಿವೃತ್ತ ಕನ್ನಡ ಉಪನ್ಯಾಸಕ – ಆಕಾಶವಾಣಿ ಕಲಾವಿದ ಕೆ.ಎಸ್.ರಾಮಮೂರ್ತಿ ಅನುವಾದಿಸಿರುವ ‘ತಿರುಪತಿಯ ಹಿನ್ನೆಲೆಯಲ್ಲಿ ಶ್ರೀ ವೆಂಕಟೇಶ್ವರ ಸುಪ್ರಭಾತ’ ಕೃತಿ ಲೋಕಾರ್ಪಣೆಗೊಳಿಸಿದರು.
ಚಿಕ್ಕಪೇಟೆ ಶಾಸಕ ಉದಯ ಬಿ. ಗರುಡಾಚಾರ್ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀ ಪ್ರತಿವಾದಿ ಭಯಂಕರ ಅಣ್ಣನ್ ಟ್ರಸ್ಟ್ ಅಧ್ಯಕ್ಷ ಪ್ರತಿವಾದಿ ಭಯಂಕರ ಗೋವಿಂದರಾಜ್ ಅನಂತ ಅಧ್ಯಕ್ಷತೆ ವಹಿಸಿದ್ದರು. ಗರುಡ ಫೌಂಡೇಷನ್ ಮುಖ್ಯಸ್ಥೆ ಮೇದಿನಿ ಗರುಡಾಚಾರ್ , ಬಿಳಿಗಿರಿ ರಂಗನಾಥ ವೇದಪಾಠಶಾಲೆಯ ವೇ|| ನಾಗರಾಜ ಶ್ರೌತಿ , ಹಿರಿಯ ವಿದ್ವಾಂಸ ಡಾ.ಕೆ.ವಿ ಶ್ರೀನಿವಾಸಮೂರ್ತಿ ಮುಂತಾದವರು ಉಪಸ್ಥಿತರಿದ್ದರು.
ಕೃತಿ ಪರಿಚಯ ಮಾಡಿಕೊಟ್ಟ ನಿವೃತ್ತ ಪ್ರಾಂಶುಪಾಲ ಟಿ.ಎಸ್.ಗೋಪಾಲ ಮಾತನಾಡಿ, ಲೇಖಕ ಕೆ.ಎಸ್.ರಾಮಮೂರ್ತಿ ಸಾಹಿತ್ಯ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸದ್ದುಗದ್ದಲವಿಲ್ಲದೆ ಶ್ರಮಿಸುತ್ತಿರುವ ಸಜ್ಜನರು. ಧಾರ್ಮಿಕ ಶ್ರದ್ದೆಯೊಂದಿಗೆ ಅನುವಾದಿಸಿರುವ ‘ತಿರುಪತಿಯ ಹಿನ್ನೆಲೆಯಲ್ಲಿ ಶ್ರೀ ವೆಂಕಟೇಶ್ವರ ಸುಪ್ರಭಾತ’ ಜಗದ್ವಿಖ್ಯಾತ ತಿರುಮಲದಲ್ಲಿ ಶ್ರೀನಿವಾಸ ದೇವರನ್ನು ಎಬ್ಬಿಸಲು ಬಂಗಾರದ ಬಾಗಿಲ ಬಳಿ ಪ್ರತಿನಿತ್ಯ ಪ್ರಾತಃಕಾಲದಲ್ಲಿ ಪಠಿಸುವ ವಿಶೇಷ ಸ್ತೋತ್ರ ಇದಾಗಿದ್ದು, ೧೪ನೇ ಶತಮಾನದಲ್ಲಿ ಪ್ರತಿವಾದಿ ಭಯಂಕರ ಅನ್ನಂಗರಾಚಾರ್ಯರು (ಅಣ್ಣನ್) (ಖ್ಯಾತ ಹಿನ್ನೆಲೆಗಾಯಕರಾಗಿದ್ದ ಪಿ.ಬಿ.ಶ್ರೀನಿವಾಸ್ ಈ ಮನೆತನಕ್ಕೆ ಸೇರಿದವರು) ಸಂಸ್ಕೃತದಲ್ಲಿ ರಚಿಸಿರುವ ಈ ಸುಪ್ರಭಾತ ; ಭಕ್ತ ಸಮೂಹದಲ್ಲಿ ಅದು ಉಂಟುಮಾಡುವ – ಮಾಡುತ್ತಿರುವ ಪ್ರಭಾವ ಪರಿಣಾಮಗಳು ಹೃದಯಂಗಮವಾದವು. ಅರುಣೋದಯಕಾಲದ ನಿಸರ್ಗ ಸೌಂದರ‍್ಯ ವರ್ಣನೆ, ವೆಂಕಟೇಶನ ಮಹಿಮೆ , ಶರಣಾಗತಿ ಭಾವ, ಮಂಗಳಾಶಾಸನದಿ0ದ ಕೂಡಿದ ಈ ಸ್ತೋತ್ರರತ್ನದ ಅರ್ಥ – ಆಶಯವನ್ನು ಕನ್ನಡಿಗರೆಲ್ಲರೂ ಓದಬೇಕೆಂದು ತಿಳಿಗನ್ನಡದಲ್ಲಿ ಅನುವಾದಿಸಿ ಕಿರುಕೃತಿಯನ್ನು ಸಿದ್ದಪಡಿಸಿ ಪ್ರಕಟಿಸಲಾಗಿದೆ ಎಂದರು.