ಈ ಬಾರಿ ಡಿ. 18 ರಿಂದ 24ವರೆಗೆ ಶಿವಮೊಗ್ಗೆಯ ರವೀಂದ್ರ ನಗರದ ಪ್ರಸನ್ನ ಗಣಪತಿ ದೇವಾಲಯದಲ್ಲಿ ರಾಷ್ಟ್ರೀಯ ಮಾರ್ಗಶಿರ ವೀಣಾ ಉತ್ಸವ ಆಯೋಜನೆಗೊಂಡಿದ್ದು, ನಿತ್ಯ ಸಂಜೆ 6ಕ್ಕೆ ವಿದ್ವಾಂಸರಿಂದ ಕಛೇರಿಗಳು ಮೊಳಗಲಿವೆ.
- ವಾರುಣಿ ಮೈಸೂರು
ಶ್ರೀ ವೀಣೇ ನಮಸ್ತೇ ತ್ರಿವರ್ಗ ಮೋಕ್ಷ ಪ್ರದಾಯಿನೀ
ಶೃತಿ ಸ್ಥಾನ ಲಯ ತ್ರಯ ಸಪ್ತವ್ಯಾ ಹೃತಿ ಸೂಚಿನಿ
ಸರಸ್ವತೀ ಮಹತೀ ಕಚ್ಛಪೀನಕುಲೇತ್ಯಾದಿ ಪ್ರಭೇದಿನಿ
ವಾಣೀ ದಕ್ಷಿಣಾಮೂರ್ತಿ ಗಣೇಶಾದಿ ಕರಣಭೂಷಣಿ…….
ಎಂದು ವೀಣೆಯ ಮಹತ್ವವನ್ನು ಅತ್ಯಂತ ಪ್ರೌಢ ಪದಗಳಲ್ಲಿ ಹಾಡಿ ಹೊಗಳಿದ್ದಾರೆ ಪದ್ಮಶ್ರೀ ಪುರಸ್ಕೃತ ಮಹಾಮಹೋಪಾಧ್ಯಾಯ ಮೈಸೂರು ಡಾ. ರಾ. ಸತ್ಯ ನಾರಾಯಣರು.
ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ದಾಖಲಾರ್ಹವಾಗುವ ಸಮಾರೋಹವೊಂದು ಜರುಗಲು ಶಿವಮೊಗ್ಗ ಮತ್ತೆ ವೇದಿಕೆಯಾಗುತ್ತಿದೆ. ರಾಷ್ಟ್ರೀಯ ಮಟ್ಟದ ಕಲಾ ದಿಗ್ಗಜರು ಇದಕ್ಕೆ ಸಾಕ್ಷಿಯಾಗಲಿದ್ದಾರೆ. ಅವರೆಲ್ಲರ ವಿದ್ವತ್ತು ನಿತ್ಯ ವಿಜೃಂಭಿಸಲಿದೆ. ಪಾಂಡಿತ್ಯ ಅನಾವರಣಗೊಂಡು ಕಲಾರಸಿಕರಿಗೆ ರಸದೌತಣ ನೀಡಲಿದೆ. ಇದುವೇ ರಾಷ್ಟ್ರೀಯ ಮಾರ್ಗಶಿರ ವೀಣಾ ಉತ್ಸವ.
ಹೌದು.
ಒಂದು ಸಂಗೀತ ವಾದ್ಯವನ್ನು ಕುರಿತು ರಾಷ್ಟ್ರಮಟ್ಟದಲ್ಲಿ ಸಪ್ತಾಹ ಕಾರ್ಯಕ್ರಮ ನಡೆಸುವಲ್ಲಿ ಶಿವಮೊಗ್ಗ ಕಳೆದ 18ವರ್ಷಗಳಿಂದ ತನ್ನ ಹಿರಿಮೆ ಪಾಲಿಸಿಕೊಂಡಿ ಬಂದಿದ್ದು, ಇದೀಗ ೧೯ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದೆ. ಈ ಬಾರಿ ಡಿ. 18 ರಿಂದ 24ವರೆಗೆ ಶಿವಮೊಗ್ಗೆಯ ರವೀಂದ್ರ ನಗರದ ಪ್ರಸನ್ನ ಗಣಪತಿ ದೇವಾಲಯದಲ್ಲಿ ರಾಷ್ಟ್ರೀಯ ಮಾರ್ಗಶಿರ ವೀಣಾ ಉತ್ಸವ ಆಯೋಜನೆಗೊಂಡಿದ್ದು, ನಿತ್ಯ ಸಂಜೆ ೬ಕ್ಕೆ ವಿದ್ವಾಂಸರಿAದ ಕಛೇರಿಗಳು ಮೊಳಗಲಿವೆ. ಶಾಸ್ತ್ರೀಯ ಸಂಗೀತದ ವಿವಿಧ ಪ್ರಾಕಾರಗಳಿಗೆ ಆಶ್ರಯ-ಅಪೂರ್ವ ವೇದಿಕೆ ನೀಡಿದ ಅಗ್ರಗಣ್ಯ ಸಂಸ್ಥೆ, ಶ್ರೋತೃಪರಂಪರೆ ಪಾಲನೆಗೆ ಮಹೋನ್ನತ ಕೊಡುಗೆ ನೀಡಿದ ನಗರದ ಶ್ರೀ ಗುರುಗುಹ ವಾಗ್ಗೇಯ ಪ್ರತಿಷ್ಠಾನ ಮತ್ತು ಗುರುಗುಹ ಸಂಗೀತ ಮಹಾವಿದ್ಯಾಲಯ ಈ ಉತ್ಸವಕ್ಕೆ ವೇದಿಕೆಯಾಗಿರುವುದು ನಾಡಿನ ಹೆಮ್ಮೆಯ ಪ್ರತೀಕ.
ಅನಾದಿಕಾಲದಿಂದಲೂ ನಾದೋಪಾಸನೆ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಈ ಪ್ರಕಾರದಲ್ಲಿ ವೀಣಾನಾದ ಮಹತ್ತರವಾದ ಅಧ್ಯಾತ್ಮಿಕ ಸ್ಫುರಣೆಯನ್ನು ಮಾಡುತ್ತದೆ. ಹಿರಿಯ ಸಂಗೀತ ವಿದ್ವಾಂಸ ಎಚ್.ಎಸ್. ನಾಗರಾಜ್ ಅವರು ಶಿವಮೊಗ್ಗದಲ್ಲಿ ರಾಷ್ಟ್ರೀಯ ವೀಣಾ ಉತ್ಸವದ ಮೂಲಕ ಕಲಾ ರಂಗಕ್ಕೆ ಒಂದು ಮಹತ್ತರ ಸೇವೆ ಮಾಡುತ್ತಿದ್ದಾರೆ.
| ಶ್ರೀ ಮಧುಸೂದನಾನಂದ ಪುರಿ ಸ್ವಾಮೀಜಿ
ಓಂಕಾರ ಆಶ್ರಮ, ಬೆಂಗಳೂರು.
ಕಲಾವಿದರ ಪಾಂಡಿತ್ಯ ಅನಾವರಣ:
ಈ ಬಾರಿಯ ಸಪ್ತಾಹದಲ್ಲಿ ಪ್ರೌಢಿಮೆ ಮೆರೆಯುತ್ತಿರುವ ಕಲಾವಿದರು ಅಸಾಮಾನ್ಯ ಪ್ರತಿಭಾನ್ವಿತರು. ಚೆನ್ನೈ ಜಿ.ಆರ್. ಎಸ್. ಮೂರ್ತಿ, ತಿರುವನಂತಪುರಂ ಮಹದೇವನ್, ವಿಶಾಖಪಟ್ಟಣಂ ಪಪ್ಪು ಪದ್ಮಾ, ಬೆಂಗಳೂರಿನ ಶ್ರೀನಿವಾಸ ಪ್ರಸನ್ನ, ಶಿವಮೊಗ್ಗದ ಬಿ.ಕೆ. ವಿಜಯಲಕ್ಷ್ಮಿ ರಾಘು, ಮೈಸೂರಿನ ಆರ್.ಕೆ. ಪದ್ಮನಾಭ ಮತ್ತು ಉದಯೋನ್ಮುಖ ಕಲಾವಿದೆಯರಾದ ಸಂಗೀತಾ, ನಿಖಿತಾ ಮತ್ತು ಶ್ರೀನಿಧಿ (ತ್ರಯ ವೀಣಾ ವಾದನ) ಅವರ ವಿದ್ವತ್ತು ಪ್ರಸ್ತುತಗೊಳ್ಳಲಿದೆ.
ಪರಂಪರೆ ಹೀಗಿದೆ :
ರಾಜ್ಯದಲ್ಲಿ ಒಬ್ಬ ವೀಣಾ ಪಂಡಿತ ಮಾಡಲು ಸಾಧ್ಯವಾಗದ ಉತ್ಸವವನ್ನು ನಾವು ಮಾಡುತ್ತೇವೆ ಎಂಬ ಯಾವುದೇ ಹಮ್ಮು-ಬಿಮ್ಮು ಇಲ್ಲದೇ ಕೇವಲ `ಶುದ್ಧ ಶಾಸ್ತ್ರೀಯ ಸಂಗೀತವನ್ನು ಕೇಳುವ ಕಿವಿಗಳು ವೀಣಾನಾದ ಆಲಿಸುವುದರಿಂದ ಪರಿಶುದ್ಧ ಗೊಳ್ಳಬೇಕು, ಆ ಮೂಲಕ ನಮ್ಮ ಸನಾತನ ಸಂಸ್ಕೃತಿ ಮತ್ತು ಸಂಗತಿಗಳನ್ನು ಜಾಗೃತಿಗೊಳಿಸಬೇಕು ಎಂಬ ಧ್ಯೇಯದಿಂದ ವೀಣಾವಾದನ ಕಛೇರಿಯನ್ನು ವಿದ್ವಾನ್ ನಾಗರಾಜ್ ಆರಂಭಿಸಿದರು. 1976ರಿಂದ ಗುರುಗುಹ ಸಂಗೀತ ಮಹಾವಿದ್ಯಾಲಯ ಇದಕ್ಕೆ ಆಶ್ರಯವಾದರೆ, ಜಯನಗರದ ಶ್ರೀ ರಾಮಮಂದಿರ ವೇದಿಕೆಯಾಯಿತು. ಮೊದಮೊದಲಿಗೆ 3 ದಿನ, 5 ದಿನದ ಉತ್ಸವವಾಗಿ ಚಾಲನೆ ಪಡೆದ ವೀಣಾ ಉತ್ಸವ ಕಳೆದ 18ವರ್ಷಗಳಿಂದ ರಾಷ್ಟ್ರೀಯ ಸಪ್ತಾಹವಾಗಿ ರೂಪುಗೊಂಡಿದೆ. 30-40 ಶ್ರೋತೃಗಳಿಂದ ಮೊದಲುಗೊಂಡು ಇದೀಗ ನಿತ್ಯ ನೂರಿನ್ನೂರು ಕೇಳುಗರು ಸಮ್ಮಿಲನಗೊಳ್ಳುವ ಮಹಾಸಮಾರಾಧನೆಯಾಗಿ ಪರಿವರ್ತನೆಗೊಂಡಿದೆ. ಮೊದಲ ಹಂತದಲ್ಲಿ ವಿದುಷಿಯರಾದ ಎಂ.ಕೆ. ಸರಸ್ವತಿ, ಗೀತಾ ರಮಾನಂದ್, ಡಾ.ಅರುಂಧತಿ ರಾವ್, ಬಿ.ಕೆ. ವಿಜಯಲಕ್ಷ್ಮೀ ರಾಘು ಮತ್ತಿತರರು ಉತ್ಸವದಲ್ಲಿ ಪ್ರೌಢಿಮೆ ಅನಾವರಣಗೊಳಿಸಿದ್ದು ಈಗ ಸವಿ ಸವಿ ನೆನಪು…. ಸಾವಿರ ನೆನಪಾಗಿ ದಾಖಲಾಗಿದೆ.
ಕಲಾ ರಸಿಕರ- ವಿದ್ಮನ್ಮಣಿಗಳ ಸಮ್ಮಿಲನ
ವೀಣೆಯು ಪ್ರಮುಖ ಕಚೇರಿಗಳಲ್ಲಿ ಪಕ್ಕವಾದ್ಯವಾಗಿ ಮಾತ್ರ ಬಳಕೆಯಾಗುತ್ತಿದೆ.ನಮ್ಮಲ್ಲಿ ಕರ್ನಾಟಕ ಶಾಸ್ತಿçÃಯ ಸಂಗೀತ ಗಾಯನಕ್ಕೆ ಸಿಕ್ಕಷ್ಟು ಸಮೃದ್ಧ ವೇದಿಕೆ ವೀಣಾವಾದನಕ್ಕೆ ದೊರಕುತ್ತಿಲ್ಲ. ಇದಕ್ಕಾಗಿಯೇ ಉತ್ಸವಗಳನ್ನು ಆಯೋಜಿಸುವುದು ವಿರಳವಾಗಿ ವಾದ್ಯದಲ್ಲಿ ಪರಿಣತರ ಸಂಖ್ಯೆ ಕೂಡ ಮುಂದಿನ ದಿನಮಾನಗಳಲ್ಲಿ ಕಡಿಮೆಯಾಗುವ ಆತಂಕವೂ ಇದೆ. ಈ ಎಲ್ಲ ಒತ್ತಟ್ಟಿನ ಚಿಂತನೆಯಿಂದ, ಹಿಂದಿನ ಆದ್ಯತೆ- ಮಾನ್ಯತೆ ಪಡೆಯುವ ದೃಷ್ಟಿಯಿಂದ ಪ್ರಸ್ತುತ ೧೯ನೇ ವರ್ಷದ ರಾಷ್ಟ್ರೀಯ ವೀಣಾ ಸಪ್ತಾಹವು ವಿದ್ವಾಂಸರ-ಕಲಾ ರಸಿಕರ ಮತ್ತು ಕಲಿಕಾರ್ಥಿಗಳ ನಡುವೆ ಹೊಸ ಬಾಂಧವ್ಯದ ಬೆಸುಗೆ ಹಾಕಲಿದೆ.
ಪರಪರೆ ಉಳಿಸುವ ದೊಡ್ಡ ಯತ್ನ
ನಾವು ಇಂದು ಕೇಳುತ್ತಿರುವ ಬಹುತೇಕ ಸಂಗೀತ, ಅಬ್ಬರ, ಚಮತ್ಕಾರ, ಓಟದಿಂದ ಕೂಡಿದ್ದಾಗಿದೆ. ಇದೇ ನಿಜವಾದ ಶಾಸ್ತ್ರೀಯ ಸಂಗೀತ ಎಂದಾಗಿಬಿಟ್ಟಿದೆ. ಆದರೆ ಅಬ್ಬರ ರಹಿತವಾದ ರಂಜನೆ ಹಾಗೂ ಆನಂದದ ಅನುಭವ ನೀಡುವ ಸಂಗೀತ ಆಲಿಸುವ ಶೈಲಿಗೆ ಪುನ: ಶೋತೃಗಳನ್ನು ಅಣಿಗೊಳಿಸುವ ಕೆಲಸ ಈ ವೀಣಾ ಉತ್ಸವದ ಮೂಲಕ ಸಾಕಾರಗೊಳ್ಳುತ್ತಿದೆ.
ವಿಶ್ವದ ಎಲ್ಲ ರೀತಿಯ ಸಂಗೀತ ಕೇಳ್ಮೆ ಇಂದು ಬೆರಳ ತುದಿಯಲ್ಲೇ ಇದೆ. ಆನಂದ, ತನ್ಮಯತೆಗಿಂತ ಕೇವಲ ರಂಜನೆಯೇ ಮುಖ್ಯವಾಗುತ್ತಿರುವ ಕಾಲದಲ್ಲಿ ನಮ್ಮತನ ಕಾಪಾಡಿಕೊಳ್ಳಲು ಪರಂಪರಾಗತವಾಗಿ ಹಿರಿಯರು ನೀಡಿದ ಮೂಲ್ಯ ಸಂಗೀತ ಪರಂಪರೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ವೀಣಾ ಉತ್ಸವ ಮಹತ್ವದ ಮೈಲಿಗಲ್ಲಾಗಿದೆ.