ದೇವರು ಒಬ್ಬನೇ ನಾಮ ಹಲವು ಎಂಬ ಮಾತು ಇದ್ದರೂ, ತಮ್ಮ ಧರ್ಮ, ನಂಬಿಕೆಗಳಿಗೆ ಅನುಗುಣವಾಗಿ ದೇವರನ್ನು ಪೂಜಿಸುವ ಮೂಲಕ ಬಹುತೇಕರಿಗೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಅದರಲ್ಲೂ ಹಿಂದೂಗಳು ವಿಭಿನ್ನ ದೇವರನ್ನು ವಿವಿಧ ರೂಪಗಳಲ್ಲಿ ಪೂಜಿಸುವುದರಲ್ಲಿ ನಂಬಿಕೆ ಇಟ್ಟಿದ್ದಾರೆ.
1. ಭಾನುವಾರ- ಸೂರ್ಯ: ಭಾನುವಾರ ಸೂರ್ಯನ ವಾರ. ಈ ದಿನವನ್ನು ಸೂರ್ಯ ದೇವನಿಗೆ ಅರ್ಪಿಸಲಾಗಿದೆ. ಹಿಂದೂ ಪುರಾಣಗಳಲ್ಲಿ ಭಗವಾನ್ ಸೂರ್ಯನಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಭಗವಾನ್ ಸೂರ್ಯ ದೇವ ಭೂಮಿ ಮೇಲಿರುವ ಸಕಲ ಜೀವ ರಾಶಿಗಳಿಗೂ ಜೀವನ, ಆರೋಗ್ಯ ಮತ್ತು ಸಮೃದ್ಧಿಯನ್ನು ನೀಡುತ್ತಾನೆ. ಅಲ್ಲದೇ ಆತ ತನ್ನ ಭಕ್ತರಿಗೆ ಉತ್ತಮ ಆರೋಗ್ಯ, ಸಕಾರಾತ್ಮಕತೆ ಮತ್ತು ಚರ್ಮದ ಕಾಯಿಲೆಗಳು ಬರದಂತೆ ಅಥವಾ ಶೀಘ್ರ ಗುಣಮುಖವಾಗುವಂತೆ ಆಶೀರ್ವದಿಸುತ್ತಾನೆ ಎಂಬ ನಂಬಿಕೆ ಇದೆ. ಭಾನುವಾರದಂದು ಸೂರ್ಯನನ್ನು ಪೂಜಿಸುವ ಮೊದಲು ಮನೆಯನ್ನು ಸ್ವಚ್ಛಗೊಳಿಸಿ, ನೀವು ಸಹ ಮುಂಜಾನೆಯೇ ಶುದ್ಧವಾಗಿ ಸ್ನಾನ ಮಾಡಿ ಗಾಯತ್ರಿ ಮಂತ್ರವನ್ನು ಜಪಿಸುವಾಗ ಅರ್ಘ್ಯವನ್ನು ಅರ್ಪಿಸಬೇಕು. ನೀವು ಭಗವಾನ್ ಸೂರ್ಯನನ್ನು ಪೂಜಿಸುವಾಗ ಕುಂಕುಮ ಮಿಶ್ರಿತ ಶ್ರೀಗಂಧವನ್ನು ನಿಮ್ಮ ಹಣೆಗೆ ಹಚ್ಚಿಕೊಳ್ಳಿ. ಈ ದಿನ ನೀವು ಉಪವಾಸವನ್ನು ಆಚರಿಸಿ ಸೂರ್ಯನನ್ನು ಪೂಜಿಸಿದರೆ ಒಳ್ಳೆಯದು. ಅಥವಾ ಆಚರಣೆಯ ಭಾಗವಾಗಿ ನೀವು ದಿನಕ್ಕೆ ಒಂದು ಬಾರಿ ಮಾತ್ರ ಆಹಾರ ಸೇವಿಸಬಹುದು, ಅದೂ ಸೂರ್ಯಾಸ್ತದ ಮೊದಲು. ನೀವು ಸೇವಿಸುವ ಆಹಾರದಲ್ಲಿ ಬೆಳ್ಳುಳ್ಳಿ, ಈರುಳ್ಳಿ ಮತ್ತು ಉಪ್ಪು ಇಲ್ಲದಿರುವ ಬಗ್ಗೆ ಖಚಿತಪಡಿಸಿಕೊಳ್ಳಿ. ಸೂರ್ಯನಿಗೆ ಕೆಂಪು ಬಣ್ಣ ಎಂದರೆ ಇಷ್ಟ ಎಂದು ಹೇಳಲಾಗುತ್ತದೆ ಆದ್ದರಿಂದ ಕೆಂಪು ಬಟ್ಟೆಗಳನ್ನು ಧರಿಸಿದರೆ ಒಳ್ಳೆಯದು. ಕೆಂಪು ಬಣ್ಣದ ಹೂವುಗಳನ್ನು ಸೂರ್ಯನಿಗೆ ಅರ್ಪಿಸಿದರೆ ಶ್ರೇಷ್ಠ .
2. ಸೋಮವಾರ – ಈಶ್ವರ: ಸೋಮವಾರದ ದಿನವನ್ನು ಶಿವನಿಗೆ ಅರ್ಪಿಸಲಾಗಿದೆ. ಶಿವ ಮತ್ತು ಪಾರ್ವತಿ ದೇವಿ ಬ್ರಹ್ಮಾಂಡದ ಸೃಷ್ಟಿಯನ್ನು ಪ್ರತಿನಿಧಿಸುತ್ತಾರೆ. ಶಿವನನ್ನು ಅಲಂಕರಿಸುವ ಚಂದ್ರನಿಗೆ ಈ ದಿನವನ್ನು ಅರ್ಪಿಸಲಾಗಿದೆ ಎಂದು ನಂಬಲಾಗಿದೆ. ಶಿವನನ್ನು ಮೆಚ್ಚಿಸುವ ಸಲುವಾಗಿ ಸೋಮವಾರದಂದು ಭಕ್ತರು ಉಪವಾಸ ಆಚರಿಸುತ್ತಾರೆ. ಶಿವನು ತನ್ನ ಭಕ್ತರಿಗೆ ಶಾಶ್ವತ ಶಾಂತಿ, ದೀರ್ಘಾಯುಷ್ಯ ಮತ್ತು ಆರೋಗ್ಯವನ್ನು ಆಶೀರ್ವದಿಸುತ್ತಾನೆ ಎಂದು ನಂಬಲಾಗಿದೆ. ಭಗವಾನ್ ಶಿವ ಮಗುವಿನಂತೆ ಮುಗ್ಧ ಮತ್ತು ಸರ್ವೋತ್ತಮ ಕೂಡ. ಸೋಮವಾರದಂದು ಶಿವನ ಪೂಜೆಗೆ ಮುನ್ನ, ಮುಂಜಾನೆ ಸ್ನಾನ ಮಾಡಿ ಮತ್ತು ಮಡಿಯಾದ ಬಿಳಿ ಅಥವಾ ತಿಳಿ ಬಣ್ಣದ ಬಟ್ಟೆಗಳನ್ನು ಧರಿಸಿ ಪೂಜಿಸಿ. ಶಿವನ ಪೂಜೆಗೆ ಗಂಗಾಜಲ, ಹಾಲಿನ ಮೂಲಕ ಶಿವಲಿಂಗಕ್ಕೆ ಅಭಿಶೇಷ ಮಾಡಿ. ‘ಓಂ ನಮಃ ಶಿವಾಯ” ಎಂದು ಜಪಿಸುವಾಗ ಶ್ರೀಗಂಧ, ಬಿಳಿ ಹೂವುಗಳು ಮತ್ತು ಬಿಲ್ವಪತ್ರೆ ಎಲೆಗಳನ್ನು ಶಿವಲಿಂಗಕ್ಕೆ ಅರ್ಪಿಸಿ. ಶಿವನು ಬಿಳಿ ಬಣ್ಣವನ್ನು ಇಷ್ಟಪಡುತ್ತಾನೆ ಆದ್ದರಿಂದ ಸೋಮವಾರ ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸಿ.
3.ಮಂಗಳವಾರ – ಆಂಜನೇಯ: ಮಂಗಳವಾರವನ್ನು ಹನುಮನಿಗೆ ಅರ್ಪಿತವಾದ ದಿನ. ಹಿಂದೂ ಪುರಾಣಗಳಲ್ಲಿ, ಹನುಮನನ್ನು ಶಿವನ ಅವತಾರ ಎಂದು ಪರಿಗಣಿಸಲಾಗಿದೆ. ಭಗವಾನ್ ಹನುಮ ಶಕ್ತಿ , ಧೈರ್ಯದ ಸಂಕೇತ. ಆಂಜನೇಯ ಭಕ್ತರ ಜೀವನದ ಅಡೆತಡೆಗಳು ಮತ್ತು ಭಯಗಳನ್ನು ನಿವಾರಿಸುತ್ತಾನೆ ಎಂದು ನಂಬುತ್ತಾರೆ. ಆದ್ದರಿಂದ ಧೈರ್ಯ ಸ್ವರೂಪಿ ಹನುಮನನ್ನು ಈ ದಿನ ಭಕ್ತರು ಹನುಮನನ್ನು ಪೂಜಿಸುತ್ತಾರೆ ಮತ್ತು ಕೆಲವರು ಉಪವಾಸವನ್ನು ಸಹ ಆಚರಿಸುತ್ತಾರೆ. ಮುಂಜಾನೆಯೇ ಎದ್ದು ಸ್ನಾನ ಮಾಡಿ ಶುದ್ಧವಾದ ಬಟ್ಟೆಗಳನ್ನು ಧರಿಸಬೇಕು. ಸೂರ್ಯ ಭಗವಂತನಿಗೆ ಅರ್ಘ್ಯವನ್ನು ಅರ್ಪಿಸಿ ಹನುಮಾನ್ ಚಾಲಿಸಾ ಜಪ ಮಾಡಬೇಕು. ನೀವು ಹನುಮಾನ್ ಚಾಲಿಸಾ ಜಪಿಸುತ್ತಿರುವಾಗ, ಕೆಂಪು ಮತ್ತು ಕಿತ್ತಳೆ ಬಣ್ಣದ ಹೂವುಗಳನ್ನು ಅರ್ಪಿಸಿ ದೀಪ ಹಚ್ಚಿ.
4. ಬುಧವಾರ- ಗಣಪತಿ:
ಬುಧವಾರ ದಿನವನ್ನು ಬುದ್ಧಿಶಕ್ತಿ, ಕಲಿಕೆ ಮತ್ತು ಕಲೆಗಳ ದೇವರು ಆದಿಪೂಜಿತ ಗಣೇಶನಿಗೆ ಅರ್ಪಿಸಲಾಗಿದೆ. ಭಕ್ತರ ಜೀವನದಿಂದ ನಕಾರಾತ್ಮಕತೆ ಮತ್ತು ಅಡೆತಡೆಗಳನ್ನು ತ್ಯಜಿಸುವವನು ವಿನಾಯಕ ಎಂದೂ ನಂಬಲಾಗಿದೆ. ಶುಭ ಕಾರ್ಯವನ್ನು ಪ್ರಾರಂಭಿಸುವ ಮೊದಲು ಹಿಂದೂಗಳು ಗಣೇಶನನ್ನು ಪೂಜಿಸುವುದು ವಾಡಿಕೆ. ಗಣೇಶನನ್ನು ಪೂಜಿಸುವುದರ ಜೊತೆಗೆ ಜನರು ಶ್ರೀಕೃಷ್ಣನ ಅವತಾರವೆಂದು ನಂಬಲಾದ ವಿಠ್ಠಲನನ್ನು ಸಹ ಪೂಜಿಸುತ್ತಾರೆ. ಬುಧವಾರದ ದಿನ ಗಣೇಶನನ್ನು ಪೂಜಿಸುವ ವೇಳೆ ಗರಿಕೆ, ಕೆಂಪು ಬಣ್ಣದ ಹೂವು ಮತ್ತು ಬಿಳಿ ಎಕ್ಕದ ಹೂವುಗಳು, ಬಾಳೆಹಣ್ಣು, ಮೋದಕ ಮತ್ತು ಸಿಹಿತಿಂಡಿಗಳನ್ನು ಅರ್ಪಿಸುವ ಮೂಲಕ ಅವನನ್ನು ಮೆಚ್ಚಿಸಬಹುದು. ಗಣೇಶನನ್ನು ಪ್ರಾರ್ಥಿಸುವ ವೇಳೆ ‘ಓಂ ಗಣೇಶಾಯ ನಮಃ’ ಎಂದು ಜಪಿಸಿ.
5.ಗುರುವಾರ – ಮಹಾವಿಷ್ಣು ಮತ್ತು ಗುರು ಗುರುವಾರ ಮಹಾವಿಷ್ಣು ಮತ್ತು ಗುರು ಬೃಹಸ್ಪತಿಗೆ ಸಮರ್ಪಿಸಲಾದ ದಿನವಾಗಿದೆ. ಅಲ್ಲದೇ, ಗುರುವಾರದಂದು ಗುರು ದತ್ತಾತ್ರೇಯ, ದಕ್ಷಿಣಾ ಮೂರ್ತಿ, ರಾಘವೇಂದ್ರ, ಸಾಯಿಬಾಬಾರನ್ನು ಪೂಜಿಸುತ್ತಾರೆ ಮತ್ತು ದೇವಾಲಯಗಳಲ್ಲಿ ಪ್ರಾರ್ಥನೆ ಸಲ್ಲಿಸುವುದು ಸಹ ವಾಡಿಕೆಯಲ್ಲಿದೆ. ಗುರು ಬೃಹಸ್ಪತಿ ಗುರುವನ್ನು ಮತ್ತು ಈ ದಿನವನ್ನು ಆಳುತ್ತಾನೆ ಎಂದು ಭಕ್ತರು ನಂಬುತ್ತಾರೆ. ಈ ದಿನ ವಿಷ್ಣುವನ್ನು ಪೂಜಿಸುವುದರಿಂದ ವೈವಾಹಿಕವಾಗಿ ನೆಮ್ಮದಿ ಮತ್ತು ಸಂತೋಷ ಸಿಗುತ್ತದೆ, ಕುಟುಂಬದೊಳಗಿನ ಘರ್ಷಣೆ ನಿವಾರಣೆಯಾಗುತ್ತದೆ ಎಂದು ನಂಬಲಾಗಿದೆ. ವಿಷ್ಣು ಮತ್ತು ಬೃಹಸ್ಪತಿಯನ್ನು ಮೆಚ್ಚಿಸಲು ಬಾಳೆ ಮರದ ಮೇಲೆ ಕುಂಕುಮ ಹಚ್ಚಿ ದೀಪವನ್ನು ಬೆಳಗಿಸಿದರೆ ಒಳ್ಳೆಯದು. ಅಲ್ಲದೇ ಈ ದೇವತೆಗಳಿಗೆ ತುಪ್ಪ, ಹಾಲು, ಹಳದಿ ಹೂವು ಮತ್ತು ಬೆಲ್ಲವನ್ನು ಅರ್ಪಿಸಿ. ವಿಷ್ಣು ಮತ್ತು ಬೃಹಸ್ಪತಿ ಹೆಚ್ಚಾಗಿ ಹಳದಿ ಬಟ್ಟೆಗಳನ್ನು ಧರಿಸುವುದರಿಂದ ನೀವು ಅದೇ ಬಣ್ಣದ ಬಟ್ಟೆಗಳನ್ನು ಧರಿಸಬಹುದು. ಯಾವುದೇ ಕಾರಣಕ್ಕೂ ಈ ದಿನ ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಬೇಡಿ.
6 ಶುಕ್ರವಾರ – ಮಹಾಲಕ್ಷ್ಮೀ ಶುಕ್ರವಾರವನ್ನು ಶುಕ್ರನಿಗೆ ಸಮರ್ಪಿಸಲಾಗಿದೆ. ಇದು ಮಹಾಲಕ್ಷ್ಮೀ, ದುರ್ಗಾ ಮತ್ತು ಅನ್ನಪೂರ್ಣೇಶ್ವರಿ ದೇವಿಯನ್ನು ಸಂಕೇತಿಸುವ ದಿನವಾಗಿದೆ. ಈ ಮೂವರು ದೇವತೆಗಳು ಹಿಂದೂ ಪುರಾಣಗಳಲ್ಲಿ ಹೆಚ್ಚಿನ ಮಹತ್ವವನ್ನು ಹೊಂದಿದ್ದಾರೆ. ಈ ದಿನ ಉಪವಾಸವನ್ನು ಆಚರಿಸುವುದು ಮತ್ತು ಮೂರು ದೇವತೆಗಳನ್ನು ಪೂಜಿಸುವುದರಿಂದ ಅವರ ಜೀವನದಲ್ಲಿ ಸಮೃದ್ಧಿ, ಸಂಪತ್ತು, ಸಕಾರಾತ್ಮಕತೆ ಮತ್ತು ಸಂತೃಪ್ತಿ ಸಿಗುತ್ತದೆ ಎಂದು ಭಕ್ತರು ನಂಬುತ್ತಾರೆ. ಈ ದಿನ ದೇವತೆಗಳಿಗೆ ಪೂಜೆ ಮಾಡುವ ಮುನ್ನ ಭಕ್ತರು ಮುಂಜಾನೆ ಸ್ನಾನ ಮಾಡಿ, ಬಿಳಿ ಹೂವುಗಳು ಅರ್ಪಿಸಿ ಪೂಜೆ ಸಲ್ಲಿಸಬೇಕು. ಬೆಲ್ಲ, ಕಡಲೆ, ತುಪ್ಪ ಮತ್ತು ಹಾಲಿನ ಉತ್ಪನ್ನಗಳನ್ನು (ಮೊಸರು ಹೊರತುಪಡಿಸಿ) ಈ ದೇವತೆಗಳಿಗೆ ಅರ್ಪಿಸಿದರೆ ಅವರ ಕೃಪಾಶೀರ್ವಾದಕ್ಕೆ ಕಾರಣರಾಗಬಹುದು. ಇಂದು ಉಪ್ಪು, ಬೆಳ್ಳುಳ್ಳಿ ಮತ್ತು ಈರುಳ್ಳಿ ಇಲ್ಲದೇ ತಯಾರಿಸಿದ ಆಹಾರವನ್ನು ಹೊರತುಪಡಿಸಿ ಬೇರೇನನ್ನೂ ತಿನ್ನಬಾರದು. ಸೂರ್ಯಾಸ್ತದ ನಂತರವೇ ಆಹಾರ ಸೇವಿಸಬೇಕು. ಈ ದಿನ ನೀವು ಬಿಳಿ ಮತ್ತು ತಿಳಿ ಬಣ್ಣದ ಬಟ್ಟೆಗಳನ್ನು ಧರಿಸಿದರೆ ಒಳ್ಳೆಯದು.
7 ಶನಿವಾರ- ಶನೈಶ್ಚರ ಶನಿವಾರ ಶನಿ ದೇವರಿಗೆ ಸಮರ್ಪಿಸಲಾದ ದಿನವಾಗಿದೆ. ಭಗವಾನ್ ಶನಿ ನಮ್ಮ ಕಾರ್ಯಗಳಿಗೆ ಅನುಗುಣವಾಗಿ ಪ್ರತಿಫಲ ನೀಡುವನು ಅಥವಾ ಶಿಕ್ಷಿಸುವವನು ಎಂಬ ಬಲವಾದ ನಂಬಿಕೆ ಜನರಲ್ಲಿದೆ. ಅವನನ್ನು ಕರ್ಮದ ಪ್ರತಿಪಾದಕ ಎಂದೂ ಕರೆಯಬಹುದು. ಜ್ಯೋತಿಷ್ಯದಲ್ಲಿ ನಂಬಿಕೆ ಇರುವವರು ಹೆಚ್ಚಾಗಿ ಶನಿವಾರವನ್ನು ಆರಾಧಿಸುತ್ತಾರೆ ಮತ್ತು ಇಂದು ತಪ್ಪದೇ ಶನಿ ದೇವರ ದರ್ಶನ ಪಡೆಯುತ್ತಾರೆ. ಈ ದಿನ ಶನಿಯನ್ನು ಪೂಜಿಸುವುದರಿಂದ ಸಂತೋಷ, ಸಂಪತ್ತು ಮತ್ತು ಅದೃಷ್ಟ ಸಿಗುತ್ತದೆ ಎಂದು ಹೇಳಲಾಗುತ್ತದೆ. ಶನಿಯ ಕೃಪೆಗೆ ಒಳಗಾಗಲು ಬಡವರಿಗೆ ಭಿಕ್ಷೆ ನೀಡಿದರೆ ಶೀಘ್ರ ಉತ್ತಮ ಪ್ರತಿಫಲ ಪಡೆಯುವಿರಿ. ಅಲ್ಲದೇ ಈ ದಿನ ಶನಿಗೆ ಕಪ್ಪು ಸಾಸಿವೆ, ಧೂಪ, ದೀಪ, ಪಂಚಾಮೃತ ಮತ್ತು ಹೂವುಗಳನ್ನು ಅರ್ಪಿಸಿ.