ಬೆಂಗಳೂರು: ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ 11-4-23 ರಿಂದ ಹನ್ನೆರಡು ದಿನಗಳ ಕಾಲ ವಿಶಿಷ್ಟವಾದ ಧಾರ್ಮಿಕ ಬೇಸಿಗೆ ಶಿಬಿರ ನಡೆಯಿತು. 40ಕ್ಕೂ ಹೆಚ್ಚು ವರ್ಷಗಳಿಂದ ನಡೆಯುತ್ತಿರುವ ಇದು ಸಾಂಸ್ಕೃತಿಕ ಉತ್ಸವದಂತೆ ಕಣ್ಮನ ಸೆಳೆಯಿತು.
ಹಕ್ಕಿಗಳಂತೆ ಚಿಲಿಪಿಲಿಗುಟ್ಟಿದ ಪುಟಾಣಿಗಳು ಸಂತಸ ತಂದರು. ಆರರಿಂದ ಹದಿನಾರು ವಯಸ್ಸಿನ ಸುಮಾರು 500 ಮಕ್ಕಳು ಏಳೆಂಟು ವಿಭಾಗಗಳಲ್ಲಿ ಹೊಸ ಹೊಸ ವಿಷಯಗಳನ್ನು ಕಲಿತು ಜೀವನಕ್ಕೆ ಹೊಸ ಮೌಲ್ಯವನ್ನು ಸೇರಿಸಿಕೊಂಡರು.
ದೇಶದ ಬೇರೆ ಬೇರೆ ಕಡೆಯಿಂದ ಬಂದಿದ್ದ 120 ವಿದ್ಯಾರ್ಥಿಗಳು ಹನ್ನೆರಡು ದಿನಗಳ ಕಾಲ ವಿದ್ಯಾಪೀಠದಲ್ಲಿಯೇ ಇದ್ದು ಗುರುಕುಲ ಜೀವನ ಪದ್ಧತಿಯ ಪರಿಚಯ ಮಾಡಿಕೊಂಡರು. ಬೆಂಗಳೂರಿನ ವಿವಿಧ ಕಡೆಗಳಿಂದ ಬಂದ 150 ಜನ ವಟುಗಳು ಬೆಳಗ್ಗೆಯಿಂದ ಸಂಜೆವರೆಗೆ ಇರುತ್ತಿದ್ದರು. ಉಳಿದಂತೆ ಮಧ್ಯಾಹ್ನ 2 ರಿಂದ 5 ರವರೆಗೆ 520 ಜನ ಭಾಗವಹಿಸಿದರು. ಹಾಡು, ಸ್ತೋತ್ರ, ಕಥೆ, ಸಂಧ್ಯಾವಂದನೆ, ದೇವಪೂಜಾಪದ್ಧತಿ – ಹೀಗೆ ಹಲವು ವಿಷಯಗಳನ್ನು ವಯಸ್ಸಿಗೆ ಅನುಗುಣವಾಗಿ ಕಲಿಸಿಕೊಡಲಾಯಿತು.
14 ವರ್ಷ ಮೇಲ್ಪಟ್ಟ ತರುಣ-ತರುಣಿಯರ ವೈಚಾರಿಕ ಪ್ರಗತಿಗೆ ಕಾರಣವಾಗುವ ವಿಚಾರ ಸಂಕಿರಣಗಳನ್ನು ಪ್ರತಿದಿನ ಏರ್ಪಡಿಸಿದ್ದು ಈ ಶಿಬಿರದ ಹೊಸ ವೈಶಿಷ್ಟ್ಯ ಆಗಿತ್ತು. ಪರಮಪೂಜ್ಯ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥರ ದಕ್ಷ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ಶಿಬಿರಕ್ಕೆ ಕಳೆದ ವರ್ಷಕ್ಕಿಂತ 300 ಜನ ಹೆಚ್ಚು ಬಂದಿದ್ದು ಇದರ ಯಶಸ್ಸಿಗೆ ಸಾಕ್ಷಿ.
20ಕ್ಕೂ ಹೆಚ್ಚು ಜನ ಅಧ್ಯಾಪಕರು ಹಾಗೂ 30 ಜನ ಸ್ವಯಂಸೇವಕರು ಶಿಬಿರವನ್ನು ನಿರ್ವಹಿಸಿದರು. ಶ್ರೀ ಹರಿದಾಸಮಯ್ಯ ಹಾಗೂ ರಾಮಚಂದ್ರಾಚಾರ್ಯ ಕೆ. ಎಲ್. ಊಟೋಪಚಾರದ ಜವಾಬ್ದಾರಿಯನ್ನು ಹೊತ್ತಿದ್ದರು. ವಿಶ್ವಾಸಾಚಾರ್ಯರು ಶಿಬಿರದ ಸರ್ವಾಂಗೀಣ ಹೂಣೆ ಹೂತ್ತು ಅದನ್ನು ಅದ್ಭುತವಾಗಿ ನಿರ್ವಹಿಸಿದರು.
ಪ್ರಾಂಶುಪಾಲರಾದ ಡಾ.ಹೆಚ್ ಸತ್ಯನಾರಾಯಣ ಆಚಾರ್ಯ ಹಾಗೂ ವಿದ್ವಾನ್ ಶೇಷಾದ್ರಿ ಅವರ ಸಹಕಾರವೂ ಅವಿಸ್ಮರಣೀಯವಾದದ್ದು. ಪೇಜಾವರ ಶ್ರೀಗಳಾದ ವಿಶ್ವೇಶ ತೀರ್ಥಶ್ರೀ ಪಾದರ ದಿವ್ಯ ಆಶೀರ್ವಾದದಿಂದ ಈ ಬಾರಿ ದೇಶದ ಬೇರೆ ಬೇರೆ ಪ್ರದೇಶಗಳಲ್ಲಿ ಒಟ್ಟು 50 ಕಡೆಗಳಲ್ಲಿ ಬೇಸಿಗೆ ಶಿಬಿರವು ನಡೆಯುತ್ತಿದೆ.