ಬೆಂಗಳೂರು: ತಮೋಹಾ ಆರ್ಟ್ಸ್ ಫೌಂಡೇಶನ್ ಸಂಸ್ಥೆಯು ತನ್ನ 8ನೇ ವರ್ಷದ ವಾರ್ಷಿಕೋತ್ಸವವನ್ನು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಇದೇ ಆಗಸ್ಟ್ 10ರಂದು ಆಯೋಜಿಸಿತ್ತು, ಗುರು ಶ್ರೀಮತಿ ಗಾಯತ್ರಿ ಮಯ್ಯರವರು ತಮ್ಮ ಸುಮಾರು 65ಕ್ಕೂ ಹೆಚ್ಚು ಶಿಷ್ಯರಿಂದ “ಜಗತಿ” ಎಂಬ ಶೀರ್ಷಿಕೆಯಲ್ಲಿ ದೇವಿ ದುರ್ಗಾಮಾತೆಯ ಕಥಾವಸ್ತುವನ್ನು ಪ್ರದರ್ಶಿಸಿದರು. ಶ್ರೀ ಲಲಿತ ಕಲಾ ನಿಕೇತನದ ಕಲಾತ್ಮಕ ನಿರ್ದೇಶಕಿ ಗುರು ಶ್ರೀಮತಿ ರೇಖಾ ಜಗದೀಶ್ ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯೆ ಗುರು ಶ್ರೀಮತಿ ಉಷಾ ಬಸಪ್ಪರವರು ಮುಖ್ಯ ಅತಿಥಿಗಳಾಗಿ ಈ ಸಂದರ್ಭದಲ್ಲಿ ಭಾಗವಹಿಸಿದ್ದರು.
ಈ ಕಾರ್ಯಕ್ರಮವು ಯಾವುದೇ ಸಾಮಾನ್ಯ ವಾರ್ಷಿಕೋತ್ಸವಕ್ಕಿಂತ ವಿಭಿನ್ನವಾಗಿದ್ದು, ನೃತ್ಯಸಂಯೋಜನೆ, ವಸ್ತ್ರವಿನ್ಯಾಸ, ವೇದಿಕೆ ವಿನ್ಯಾಸವು ಅಮೋಘವಾಗಿತ್ತು ಎಂದು ಮುಖ್ಯ ಅತಿಥಿಗಳು ಶ್ಲಾಘಿಸಿದರು. ಹಾಗೂ ತಮೋಹಾ ಆರ್ಟ್ಸ್ ಫೌಂಡೇಶನ್ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯಕ್ಕೆ ಹಾರೈಸಿದರು.