- ಕಥಕ್ ರಂಗಾರೋಹಣ 28ರಂದು
- ಬೆಂಗಳೂರಿನ ಜೆಎಸ್‌ಎಸ್ ಸಭಾಂಗಣದಲ್ಲಿ ನೃತ್ಯ ವೈಭವ
ಬೆಂಗಳೂರು: ಸಾವಿರಾರು ಪ್ರತಿಭೆಗಳನ್ನು ಕಲಾ ರಂಗಕ್ಕೆ ವಿಶೇಷ ಕಾಣಿಕೆಯಾಗಿ ನೀಡಿದಂತಹ ರಾಜಧಾನಿಯ ಪ್ರತಿಷ್ಠಿತ ನೃತ್ಯ ತರಬೇತಿ ಸಂಸ್ಥೆ ಸಾಯಿ ಆಟ್ಸ್ಸ್‌ಂಟರ್ ನ್ಯಾಷನಲ್‌ನ ಗುರು ಶ್ವೇತಾ ವೆಂಕಟೇಶ್‌ಶಿಷ್ಯೆ ಸಂಜನಾ ರಮೇಶ್ ಈಗ ಕಥಕ್ ರಂಗಪ್ರವೇಶಕ್ಕೆ ಅಣಿಯಾಗಿದ್ದಾರೆ. ಡಿ. 28ರ ಸಂಜೆ 5ಕ್ಕೆ ಬೆಂಗಳೂರಿನ ಜಯನಗರ 8ನೇ ಬಡಾವಣೆಯ ಜೆಎಸ್‌ಎಸ್ ಸಭಾಂಗಣದಲ್ಲಿ ರಂಗಪ್ರವೇಶಕ್ಕೆವೇದಿಕೆ ಸಜ್ಜುಗೊಂಡಿದೆ. ಮುಖ್ಯ ಅತಿಥಿಗಳಾಗಿ ಖ್ಯಾತ ನೃತ್ಯ ವಿದುಷಿ, ಸಂಗೀತ-ನೃತ್ಯ ವಿದುಷಿ ಶುಭಾ ಧನಂಜಯ, ಐಸಿಸಿಆರ್ ವಲಯ ನಿರ್ದೇಶಕ ಪ್ರದೀಪ ಕುಮಾರ್, ವಿದುಷಿ ಸುಪರ್ಣಾ, ಕಲಾವಿದೆ ಡಾ. ಎಲ್. ಸುಬ್ಬುಲಕ್ಷ್ಮೀ, ಇಂಜಿನಿಯರ್ ರಮೇಶ ಸಾಕ್ಷಿಯಾಗಲಿದ್ದಾರೆ.
ಇಷ್ಟಪಟ್ಟು ಮಾಡುವ ಕೆಲಸದಿಂದ ವಿಜಯ:
ಯಾವ ಕೆಲಸವನ್ನು ಮಾಡಿದರೂ ಅದನ್ನು ಸಂಪೂರ್ಣ ಇಷ್ಟಪಟ್ಟು ಮಾಡು. ನಾಲ್ಕು ಜನ ಪ್ರಾಜ್ಞರು ಮೆಚ್ಚುವಂತೆ ಮಾಡು. ಅದು ವಿಜಯ ತಂದುಕೊಡುತ್ತದೆ. ಜೀೀವನ ಪೂರ್ಣ ಕೈ ಹಿಡಿದು ನಡೆಸುತ್ತದೆ. ಕೀರ್ತಿ ಮತ್ತು ಆತ್ಮಾನಂದ ತಂದುಕೊಡುತ್ತದೆ- ಹೀಗೆ ಅಮ್ಮ ಬಾಲ್ಯದಲ್ಲಿ ಹೇಳಿದ ಕಿವಿ ಮಾತುಗಳೇ ಒಬ್ಬ ಅತ್ಯುತ್ತಮ ವಿನ್ಯಾಸಗಾರ್ತಿಯನ್ನು, ನೃತ್ಯ ಕಲಾವಿದೆಯನ್ನು ನಾಡಿಗೆ ನೀಡಿದೆ. ಹೌದು ಬೆಂಗಳೂರಿನ ಕಥಕ್ ನೃತ್ಯಪಟು ಸಂಜನಾ ರಮೇಶ್ ಇದಕ್ಕೆ ಒಂದು ದೊಡ್ಡ ಉದಾಹರಣೆ. ಅಮ್ಮನ ಕನಸುಗಳನ್ನು ಎರಡು ಪಟ್ಟು ನನಸಾಗಿಸಿದ ಹೆಮ್ಮೆ ಮಾತೆಗೆ ಪ್ರಾಪ್ತವಾಗಿದೆ. ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು. ಅಮ್ಮ ಡಾ. ಎಲ್. ಸುಬ್ಬುಲಕ್ಷ್ಮೀ. ಮೂಲತಃ ಕಲಾವಿದೆ. ಚಾಮರಾಜನಗರದಲ್ಲಿ ಬೆಳೆದ ಇವರು ಕುಟುಂಬದ ಕೊಡುಗೆಯಾಗಿ ಬಂದ ಕ್ರಿಯಾಶೀಲತೆಯನ್ನು ತಮ್ಮದಾಗಿಸಿಕೊಂಡು ಬೆಂಗಳೂರಿನ ಮನೆಯಲ್ಲಿಯೇ ಸಮೃದ್ಧಿ ಆರ್ಟ್ಸ್ ಫೌಂಡೇಷನ್ ನೆಲೆಗೊಳಿಸಿದ್ದಾರೆ. ರಂಗೋಲಿ ಟೆರಾಕೋಟ, ಕಿನ್ನಾಳ ಕಲೆಗಳನ್ನು ಸಿದ್ಧಿಸಿಕೊಂಡು ಲಿಮ್ಕಾ ದಾಖಲೆಗೂ ಭಾಜನರಾಗಿದ್ದಾರೆ ಡಾ. ಸುಬ್ಬುಲಕ್ಷ್ಮೀ.
ಚೌಕಟ್ಟುಗಳನ್ನು ಹಾಕಲೇ ಇಲ್ಲ:
ಮಗಳಿಗೆ ಎಂದೂ ಬಿಗಿಯಾದ ಚೌಕಟ್ಟುಗಳನ್ನು ಹಾಕಲೇ ಇಲ್ಲ ಅಮ್ಮನನ್ನು ನೋಡಿಯೇ ಮಗಳು ಕಲಾವಿದೆಯಾಗಿ ರೂಪುಗೊಂಡಳು. ಪ್ರಾಥಮಿಕ ಶಾಲಾ ಹಂತದಲ್ಲಿ ಭರತನಾಟ್ಯ ಕಲಿಯಲು ಮುಂದಾದ ಸಂಜನಾ, ಪಿಯು ಹಂತದಲ್ಲಿ ಕಥಕ್ ಕಲಿಕೆಗೆ ತನ್ನನ್ನು ಸಮರ್ಪಿಸಿಕೊಂಡಳು. ಗುರು ಸುಪರ್ಣಾ ವೆಂಕಟೇಶ ಮತ್ತು ಶ್ವೇತಾ ಬಳಿ ಶಿಷ್ಯತ್ವ ಪಡೆದು ಸಾಯಿ ಆರ್ಟ್ಸ್ ಸಂಸ್ಥೆಯಲ್ಲಿ ಪಳಗಿದರು.
ವಿವಿಧ ವೇದಿಕೆಗಳಲ್ಲಿ ಕಲಾ ಪ್ರದರ್ಶನ:
ಕಥಕ್ ಸೀನಿಯರ್ ಪರೀಕ್ಷೆ ಪೂರ್ಣಗೊಳಿಸಿರುವ ಸಂಜನಾ ಈಗಾಗಲೇ ಉಡುಪಿ, ಧರ್ಮಸ್ಥಳ, ಹಂಪಿ ಉತ್ಸವ, ಸಾಯಿ ನೃತ್ಯೋತ್ಸವ, ಅರ್ಜುನ ಉತ್ಸವ, ನಾಟ್ಯನಿನಾದ ನೃತ್ಯ ಮಹೋತ್ಸವ, ಕಾದಂಬರಿ ಕಲಾಕ್ಷೇತ್ರದ ನರ್ತನ ಸಮಾರಾಧನೆ
ಸೇರಿದಂತೆ ಸೇರಿದಂತೆ ಹಲವು ನೃತ್ಯ ಕಾರ್ಯಕ್ರಮ ನೀಡಿ ರಸಿಕರ ಮೆಚ್ಚುಗೆ ಗಳಿಸಿದ್ದಾರೆ. ಪರಶಿವನ ಮೇಲೆ ಸಿದ್ಧಪಡಿಸಿದ ಚಂದ್ರಧಾಕ್ ಎಂಬ ಸಾಕ್ಷ ಚಿತ್ರ (ಸಂಸ್ಕೃತದ ಹಾಡುಗಳನ್ನು ಮರಾಠಿಯಲ್ಲಿ ಪ್ರಸ್ತುತಪಡಿಸಿ) ಲೈವ್ ಪ್ರದರ್ಶನದ ಮೂಲಕ ಪ್ರಸ್ತುತಿ ಮಾಡಿದ್ದಾರೆ. ಲಂಡನ್‌ನಲ್ಲಿ ಆಯೋಜನೆಗೊಂಡಿದ್ದ ಸೆವೆನ್ ಸೀಸ್ ಇಂಟರ್ ನ್ಯಾಷನಲ್ ಫೆಸ್ಟಿವಲ್ ನಲ್ಲಿ ಭಾರತದ ಪ್ರತಿನಿಧಿಯಾಗಿ ಸಂಜನಾ ಕಲಾಚಾತುರ್ಯ ಮೂಡಿಸಿದ್ದಾರೆ.
ಗ್ರಾಫಿಕ್ ಡಿಸೈನ್‌ನಲ್ಲಿ ಎಂಎ ಮಾಡಲು ಲಂಡನ್‌ಗೆ ತೆರಳಿದ ಸಂಜನಾ, ಕಲಾ ಹವ್ಯಾಸವನ್ನು ಎಂದಿಗೂ ಮರೆಯಲಿಲ್ಲ. ವಿದ್ಯಾಭ್ಯಾಸ ಮಾಡುವಾಗಲೇ ನೌಕರಿ ದೊರೆತರೂ ಕಥಕ್ ನಲ್ಲಿ ಒಂದಿಷ್ಟು ಸಾಧನೆ ಮಾಡಬೇಕೆಂದು ಭಾರತಕ್ಕೆ ಮರಳಿದರು. ಬೆಳಗಿನಿಂದ ಮಧ್ಯಾಹ್ನ 3 ಗಂಟೆಯವರೆಗೆ ಸಿಂಗಪುರದ ಕಂಪನಿಯೊಂದಕ್ಕೆ ಡಿಸೈನರ್ ಆಗಿ ವೃತ್ತಿ . ನಂತರ ತಮ್ಮನ್ನು ನರ್ತನಾಭ್ಯಾಸಕ್ಕೆ ಸಂಪೂರ್ಣ ತೊಡಗಿಸಿಕೊಳ್ಳುತ್ತಾರೆ. ವಿದ್ವತ್ ಪರೀಕ್ಷೆ ಮಾಡಿಕೊಳ್ಳಬೇಕು ಎಂಬ ಮಹತ್ತರ ಗುರಿ ಇಟ್ಟುಕೊಂಡಿದ್ದು, ದಿನಕ್ಕೆ 4 ತಾಸು ಕಾಲ ಪರಿಶ್ರಮದ ಅಭ್ಯಾಸ ಮಾಡುವಲ್ಲಿ ನಿರತರಾಗಿದ್ದಾರೆ.
ಕಥಕ್ ಕೂಡಾ ವೃತ್ತಿ- ಪ್ರವೃತ್ತಿ:
ಕಥಕ್ ನನಗೆ ವೃತ್ತಿ- ಪ್ರವೃತ್ತಿ ಆಗಿದೆ. ಇದಕ್ಕೆ ತನ್ನದೇ ಆದ ಶೈಲಿ ಮತ್ತು ಘನತೆ ಇದೆ. ಹಾವ, ಭಾವಗಳು ಪ್ರೇಕ್ಷಕರಿಗೂ ಬೇಗ ಅರ್ಥವಾಗುತ್ತದೆ. ನನ್ನ ಮನಸ್ಸಿಗೆ ಮತ್ತು ಅಂಗಿಕ ಅಭಿನಯಕ್ಕೆ ಪೂರಕ ವಾಗಿದೆ. ನಾನುನನ್ನ ಜೀವದಷ್ಟೇ ನೃತ್ಯವನ್ನೂ ಪ್ರೀತಿಸುತ್ತೇನೆ ಎನ್ನುತ್ತಾರೆ ಸಂಜನಾ. ಈ ನಿಟ್ಟಿನಲ್ಲಿ ಅವರ ಕಲಾಯಾನ ಈಗ ರಂಗಪ್ರವೇಶದವರೆಗೂ ಸಾಗಿದೆ. ಮುಂದೆ ಮಹಾ ನದಿಯಾಗಿನೂರಾರು ಯುವ ಪೀಳಿಗೆಗಳಿಗೆ ಮಾದರಿಯಾಗಿ ನಿಲ್ಲುವಂತಹ ವ್ಯಕ್ತಿತ್ವ ಅವರಲ್ಲಿ ಪಡ ಮೂಡಲಿದೆ.
ಹಿಮ್ಮೇಳ ಕಲಾವಿದರು: ರಂಗ ಪ್ರವೇಶಕ್ಕೆ ಖ್ಯಾತ ವಿದ್ವಾಂಸ ಶಂಕರ ಶ್ಯಾನುಭಾಗ್ ಗಾಯನ, ಶ್ವೇತಾ ಅವರ ಪದಾಂತ್, ಗುರುಮೂರ್ತಿ ವೈದ್ಯರ ಪಖ್ವಾಜ್, ಕಾರ್ತಿಕ ಭಟ್ ತಬಲಾ, ಸಮೀರ ರಾವ್ ಕೊಳಲು, ಶ್ರುತಿ ಕಾರಂತರ ಸಿತಾರ ವಾದನ ಸಹಕಾರವಿದೆ.
ಕಲೆಗಳು ನಮ್ಮಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ.ಅದನ್ನು ಮೊದಲು ಇಷ್ಟಪಟ್ಟು ಮಾಡಬೇಕು. ಹಾಗಾಗಿ ನಾನು ನನ್ನ ಮಗಳಿಗೆ ಯಾವುದೇ ಕೆಲಸ ಮಾಡಿದರೂ ಶ್ರದ್ಧೆಯಿಂದ ಮಾಡು ಎಂದಷ್ಟೇ ಹೇಳುವೆ. ಒತ್ತಡ ರಹಿತಗಿ, ಮನಸ್ಸಿಗೆ ಖುಷಿ ಕೊಡುವ ಚಟುವಟಿಕೆಗಳನ್ನು ಮಾಡಿದಾಗ ಅವೇ ನಮನ್ನು ಎತ್ತರಕ್ಕೆ ಕೊಂಡೊಯ್ಯುತ್ತವೆ . ಈ ನಿಟ್ಟಿನಲ್ಲಿ ಸಂಜನಾ ನನ್ನ ಕನಸುಗಳನ್ನು ಈಡೇರಿಸಿದ್ದಾಳೆ ಎಂಬ ಧನ್ಯತೆ ಇದೆ.
ಡಾ. ಎಲ್. ಸುಬ್ಬುಲಕ್ಷ್ಮೀ
ಕಿನ್ನಾಳ, ರಂಗೋಲಿ ಲಿಮ್ಕಾ ದಾಖಲೆ ಕಲಾವಿದೆ