ವಿದುಷಿ ರಂಜಿನಿ ಸಿದ್ಧಾಂತಿ ಸಾರಥ್ಯ
- 6ನೇ ವರ್ಷದ ನಾದ- ವಾದನ ಸಮಾರಾಧನೆ
- ಸುಭದ್ರಮ್ಮ ವೆಂಕಟಪ್ಪ ಸಂಗೀತ ವಿದ್ಯಾಲಯ ಟ್ರಸ್ಟ್ ಆಯೋಜನೆ
ಬೆಂಗಳೂರು: ಯಶವಂತಪುರದ ಸುಭದ್ರಮ್ಮ ವೆಂಕಟಪ್ಪ ಸಂಗೀತ ವಿದ್ಯಾಲಯ ಟ್ರಸ್ಟ್ ಹಾಗೂ ಭೋಪಾಲ್‌ನ ಸ್ವರಾಲಯ ಸಂಗೀತ ಅಕಾಡೆಮಿ ಸಂಯುಕ್ತ ಆಶ್ರಯದಲ್ಲಿ 6ನೇ ವರ್ಷದ ಸಂಗೀತ ಮಹೋತ್ಸವ ಜ. 4 ಮತ್ತು 5 ರಂದು ಆಯೋಜನೆಗೊಂಡಿದೆ.
ಮಲ್ಲೇಶ್ವರ 6ನೇ ಮುಖ್ಯರಸ್ತೆ 17ನೇ ತಿರುವಿನ ಭೂಮಿಕಾ ಸಭಾಂಗಣದಲ್ಲಿ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.
ದಿಟ್ಟ ಮಹಿಳೆಯ ದೊಡ್ಡ ಸಾಹಸ
ಮೃದಂಗ ವಾದನದಲ್ಲಿ ಮಹಿಳಾ ಕಲಾವಿದರು ಅಪರೂಪ. ಅದರಲ್ಲೂ ಗಾಯನ- ವಾದನ ಸಮನ್ವಯ ಮಾಡಿಕೊಂಡವರು ವಿರಳಾತಿ ವಿರಳ. ಈ ಸ್ಥಾನ ತುಂಬಿದವರಲ್ಲಿ ವಿದುಷಿ ರಂಜಿನಿ ಸಿದ್ಧಾಂತಿ ಅಗ್ರ ಪಂಕ್ತಿಯವರು.ಮೊದಲ ಪಾಠ ಗಳನ್ನು ಮರಿಯಣ್ಣ ಅವರಲ್ಲಿ ಕಲಿತುಕಲಿತು,
ನಂತರ ವಿದ್ವಾನ್ ರವಿ ಅವರ ಗರಡಿಯಲ್ಲಿ ಪಳಗಿದರು ರಂಜಿನಿ. ಪಾಠ- ಕಛೇರಿ ಇವರಿಗೆ ಎರಡು ಕಣ್ಣು. ಮತ್ತೂ ನಾನು ಕಲಿಯುತ್ತಲೇ ಇರಬೇಕು ಎಂದು ಹಿರಿಯ ವಿದ್ವಾನ್ ಸುಧೀಂದ್ರ ಅವರಲ್ಲಿ ಶಿಷ್ಯತ್ವ ಮುಂದುವರಿಸಿರುವುದು ರಂಜಿನಿ ಅವರ ಕಲಿಕಾಸಕ್ತಿಗೆ ಕನ್ನಡಿ ಹಿಡಿದಿದೆ. ವಿದುಷಿ ಆಗಿದ್ದರೂ, ಅನೇಕ ದಿಗ್ಗಜರಿಗೆ ಕಛೇರಿ ಗಳಲ್ಲಿ ಮೃದಂಗ ಸಾಥ್ ನೀಡಿ ಖ್ಯಾತ ರಾಗಿದ್ದರೂ ಅಹಂ ತೊರೆದು ಮತ್ತೆ ಮತ್ತೆ ನಾನು ಕಲಿಕಾ ಕಮ್ಮಟದಲ್ಲೇ ಕಲಿಯಬೇಕು ಎಂಬ ಮನೋ ಭಾವದ ಸಾಧಕಿಯಾಗಿದ್ದಾರೆ ಈ ರಂಜಿನಿ ಎಂಬುದೇ ಮಹತ್ವದ ಸಂಗತಿ. ಯಾವತ್ತೂ
ಗುರುವೆಂಬುದೇ ಪ್ರತಿಮೆ. ನಾನು ಕೇವಲ ಪ್ರತಿಬಿಂಬ ಎಂಬುದು ಅವರ ಅಂತರಂಗ ಸಂಕಲ್ಪ. ಬಹಿರಂಗದಲ್ಲಿ ಇದು ಬಹುವಿಧ ಕಲಾ ಚಟುವಟಿಕೆಗಳನ್ನು ನಡೆಸಲು ಪ್ರೇರಣೆ ನೀಡುತ್ತ ಇರುವುದು ಮಾದರಿ ಆಗಿದೆ.
ಕಾರ್ಯಕ್ರಮ ವಿವರ:
ಜ. 4ರ ಬೆಳಗ್ಗೆ 9:30ಕ್ಕೆ ಖ್ಯಾತ ಮೃದಂಗ ವಿದ್ವಾಂಸ ಡಾ. ಎನ್.ಜಿ. ರವಿ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ, ವಿಶ್ವವಿಖ್ಯಾತ ಮೃದಂಗ ವಿದ್ವಾಂಸ ವಿದ್ವಾನ್ ಎಚ್.ಎಸ್. ಸುಧೀಂದ್ರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಬೆಳಗ್ಗೆ 10ಕ್ಕೆ ಸಂಗೀತ ಪ್ರಾತ್ಯಕ್ಷಿಕೆ ಆಯೋಜನೆಗೊಂಡಿದೆ. ಮಾನಸಿಕ ಸ್ಥಿಮಿತದಲ್ಲಿ ಸಂಗೀತದ ಪಾತ್ರ- ಸದ್ಗುರು ಶ್ರೀ ತ್ಯಾಗರಾಜರ ಕೃತಿಗಳ ಸಾರ - ವಿಷಯ ಕುರಿತು ವಿದುಷಿ ಡಾ. ಮೀನಾಕ್ಷಿ ರವಿ ಅವರು ಪ್ರೌಢ ಉಪನ್ಯಾಸದೊಂದಿಗೆ ಪ್ರಾತ್ಯಕ್ಷಿಕೆ ನೀಡಲಿದ್ದಾರೆ. ನಂತರ ವಿದ್ಯಾಲಯದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಲಿದೆ.
ಲಯ ವೈಭವ’ ತನಿ ಆವರ್ತನ
ಮಧ್ಯಾಹ್ನ 12:30ಕ್ಕೆ ‘ಲಯ ವೈಭವ’ ತನಿ ಆವರ್ತನ ಇದೆ. ವಿದ್ವಾನ್ ಡಾ. ಎಂ.ಜಿ. ರವಿ ಮೃದಂಗ, ವಿದ್ವಾನ್ ಗುರು ಪ್ರಸನ್ನ ಅವರು ಖಂಜಿರ ವಾದನದಲ್ಲಿ ರಂಜಿಸಲಿದ್ದಾರೆ.ಮಧ್ಯಾಹ್ನ 2:45 ಕ್ಕೆ ಆಯೋಜನೆ ಗೊಂಡಿರುವ ಕಾರ್ಯಕ್ರಮದಲ್ಲಿ ವಿದ್ವಾನ್. ಎಂ. ಶೇಷಗಿರಿ ಆಚಾರ್ಯ ಮಾಡಿರುವ ರಚನೆಗಳ ಶಿಬಿರದಲ್ಲಿ ಭಾಗವಹಿಸಿದ್ದ ಕಲಾವಿದರಿಂದ ಕಾರ್ಯಕ್ರಮ ನೆರವೇರಲಿದೆ ಮಧ್ಯಾಹ್ನ 3:20ಕ್ಕೆ ವಿದ್ಯಾರ್ಥಿಗಳಿಂದ ಮೃದಂಗ ವಾದನ ಕಾರ್ಯಕ್ರಮವಿದೆ.
ವಿದ್ವಾನ್ ಸುಧೀಂದ್ರ ಅವರಿಗೆ ಪ್ರಶಸ್ತಿ
ಜ.4ರ ಸಂಜೆ 4:30ಕ್ಕೆ ಪ್ರಶಸ್ತಿ ಪ್ರದಾನ ನೆರವೇರಲಿದೆ.ಖ್ಯಾತ ಮೃದಂಗ ವಿದ್ವಾನ್ ಎಚ್.ಎಸ್. ಸುಧೀಂದ್ರ ಅವರಿಗೆ ‘ ನಾದಲಯ ಸಿದ್ದಾಂತ’ ಪ್ರಶಸ್ತಿ ( ಸರೋಜಾ- ಭೀಮಭಟ್ ಸಿದ್ಧಾಂತಿ ಸ್ಮರಣಾರ್ಥ)ಪ್ರದಾನ ನೆರವೇರಲಿದೆ. ಹಿರಿಯ ಗಾಯಕ ವಿದ್ವಾನ್ ಎಸ್. ಶಂಕರ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಖ್ಯಾತ ಕೊಳಲು ವಿದ್ವಾಂಸ ಎಸ್.ಎ. ಶಶಿಧರ ಹಾಗೂ ವಿದ್ವಾನ್ ಡಾ. ಎನ್.ಜಿ. ರವಿ ಭಾಗವಹಿಸಲಿದ್ದಾರೆ.
ಕಲಾವತಿ ಅವಧೂತ ಗಾಯನ: ಜ. 4ರ ಸಂಜೆ 6ಕ್ಕೆ ಹಮ್ಮಿಕೊಂಡಿರುವ ವಿಶೇಷ ಕಚೇರಿಯಲ್ಲಿ ಹಿರಿಯ ಕಲಾವಿದೆ ಕಲಾವತಿ ಅವಧೂತ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಡಿ ರಂಜಿಸಲಿದ್ದಾರೆ.
ವಿವೇಕ ಸದಾಶಿವಂ ಗಾನಸುಧೆ :
ಜ. 5ರ ಬೆಳಗ್ಗೆ 9:15ಕ್ಕೆ ಮೃದಂಗ ವಿದ್ವಾಂಸ ಎಚ್.ಎಲ್. ಗೋಪಾಲಕೃಷ್ಣ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬೆಳಗ್ಗೆ 9:30 ರಿಂದ 10.30 ರವರೆಗೆ ವಿದ್ಯಾರ್ಥಿಗಳಿಂದ ಕಾರ್ಯಕ್ರಮವಿದೆ. 10:45 ಕ್ಕೆ ಖ್ಯಾತ ಗಾಯಕ ವಿದ್ವಾನ್ ವಿವೇಕ ಸದಾಶಿವಂ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ನೆರವೇರಲಿದೆ. ಮೃದಂಗದಲ್ಲಿ ವಿದ್ವಾನ್ ಸುಧೀಂದ್ರ, ಪಿಟೀಲು ವಾದನದಲ್ಲಿ ಮತ್ತೂರು ಆರ್. ಶ್ರೀನಿಧಿ, ಘಟದಲ್ಲಿ ಓಂಕಾರ ರಾವ್ ಸಹಕಾರ ನೀಡಲಿದ್ದಾರೆ ಎಂದು ಕಾರ್ಯಕ್ರಮದ ಮುಖ್ಯ ಆಯೋಜಕಿ, ವಿದುಷಿ ರಂಜಿನಿ ಸಿದ್ಧಾಂತಿ ತಿಳಿಸಿದ್ದಾರೆ.
ಸುಭದ್ರಮ್ಮ ವೆಂಕಟಪ್ಪ ಸಂಗೀತ ವಿದ್ಯಾಲಯ ಟ್ರಸ್ಟ್
ಬೆಂಗಳೂರಿನಲ್ಲಿ ಸಂಗೀತ ಸಾಮ್ರಾಜ್ಯ ಹೆಸರಿನ ಅಡಿಯಲ್ಲಿ ಸರಣಿ ಸಂಗೀತ ಕಚೇರಿಗಳು ಮತ್ತು ಗಾಯನ ಸಮರ್ಪಣಾ ಶೀರ್ಷಿಕೆ ಅಡಿಯಲ್ಲಿ ಪ್ರತಿ ವರುಷವೂ ಶಾಸ್ತ್ರೀಯ ಸಂಗೀತ ಸೇವೆಯನ್ನು ಸಂಪನ್ನಗೊಳಿಸಲಾಗುತ್ತಿದೆ. ಹಿರಿಯ ಸಂಗೀತ ವಿದ್ವನ್ಮಣಿಗಳಿಗೆ ಪ್ರಶಸ್ತಿ ಸಹಿತ ಗೌರವಾದರಗಳನ್ನು ನೀಡುವುದು ಟ್ರಸ್ಟ್ ನ ಪ್ರಮುಖ ಧ್ಯೇಯವಾಗಿದೆ. ಕರ್ಣಾಮೃತ ಮತ್ತು ಶ್ರೀ ಪುರಂದರ ಪಂಚರತ್ನ ಕೃತಿ ಎಂಬ ಪುಸ್ತಕ ಮತ್ತು ಸಿ.ಡಿ.ಗಳನ್ನು ಟ್ರಸ್ಟ್ ಈಗಾಗಲೇ ಬಿಡುಗಡೆ ಮಾಡಿದೆ.
ಕಳೆದ 25 ವರ್ಷಗಳಿಂದ ಮೃದಂಗ ಮತ್ತು ಶಾಸ್ತ್ರೀಯ ಸಂಗೀತ ಪಾಠ ಮಾಡುತ್ತಿರುವ ನಾನು ಕಲಾವಿದರೂ ಆಗಿದ್ದ ನನ್ನ ತಂದೆ, ತಾತ, ಅಜ್ಜಿ ಹೆಸರಿನಲ್ಲಿ ಈವರೆಗೆ 5 ಸಂಗೀತ ಮಹೋತ್ಸವ ಮಾಡಿರುವೆ. ಇದು ನಮಗೆ ಬಹು ದೊಡ್ಡದಾದ ಹಬ್ಬ.ನಮ್ಮ ವಿದ್ಯಾರ್ಥಿಗಳ ಸಹಕಾರ, ವಿದ್ವಾಂಸರ ಸೌಜನ್ಯ, ಹಿರಿಯರ ಆಶೀರ್ವಾದದಿಂದ ನಮ್ಮ 6ನೇ ವರ್ಷದ ಮಹೋತ್ಸವದ ಕಳೆ ಹೆಚ್ಚಿದೆ.
- ವಿದುಷಿ ರಂಜಿನಿ ಸಿದ್ಧಾಂತಿ
- ಕಲಾವಿದೆ