*ವೈ.ಬಿ.ಕಡಕೋಳ
ನವೆಂಬರ್ 16 ತುಳಸಿ ವಿವಾಹದ ದಿನ. ದೀಪಾವಳಿ ಮುಗಿದು ನಂತರದ ಕಾರ್ತಿಕ ಶುದ್ಧ ದ್ವಾದಶಿಯಂದು ಬರುವ ಹಬ್ಬವೇ ತುಳಸಿ ವಿವಾಹ. ಇದನ್ನು ಉತ್ಥಾನ ದ್ವಾದಶಿ ಎಂತಲೂ ಕರೆಯುವರು.
ಉತ್ಥಾನ ಎಂದರೆ ಏಳುವುದು ಎಂದರ್ಥ. ಅ0ದರೆ ಶ್ರೀಮನ್ನಾರಾಯಣನು ಪಾಲ್ಗಡಲಿನಲ್ಲಿ ತನ್ನ ಸುಖಶಯನದಿಂದ ಮೇಲೆದ್ದು ತನ್ನ ನಿದ್ರಾಮುದ್ರೆಯನ್ನು ಭಕ್ತರಿಗೆ ಸಾಕ್ಷಾತ್ಕರಿಸುವ ದಿನ. ಈ ದಿನ ಸಂಜೆಯ ಸಮಯದಲ್ಲಿ ತುಳಸಿ ವಿವಾಹ ಏರ್ಪಡುವುದು. ತುಳಸಿ ವೃಂದಾವನಕ್ಕೆ ಮಂಟಪವನ್ನು ಕಟ್ಟಿ ಶ್ರೀ ಕೃಷ್ಣನ ಮೂರ್ತಿಯನ್ನು ಇಟ್ಟು ಪೂಜಿಸಲಾಗುತ್ತದೆ. ಈ ದಿನದಂದು ತುಳಸಿ ಕಟ್ಟೆಯನ್ನು ರಂಗೋಲಿ ಹೂವು ಹಾಗೂ ಮಾವಿನ ತಳಿರು ತೋರಣಗಳಿಂದ ಶೃಂಗರಿಸುವರು. ತುಳಸಿ ಗಿಡದ ಪಕ್ಕದಲ್ಲಿ ಬೆಟ್ಟದ ನೆಲ್ಲಿಕಾಯಿಯನ್ನು ಇಟ್ಟು ಪೂಜಿಸುವರು. ತುಳಸಿ ವೃಂದಾವನದ ಸುತ್ತಲೂ ದೀಪಗಳನ್ನು ಇಡಲಾಗುತ್ತದೆ. ತುಳಸಿಯ ಮಹಿಮೆಯು ಹಿರಿದಾಗಿದೆ. ತುಳಸಿ ಅಂದರೆ “ತುಲನ ನಸ್ತಿ” ಎಂದರ್ಥ. “ಗುಣದಲ್ಲಿ ತುಲನೆ ಮಾಡಲು ಸಾಧ್ಯವಾಗದಿರುವುದು” ತುಳಸಿ ಗಿಡ ಔಷಧೀಯ ಗುಣವುಳ್ಳದ್ದು. ಮನೆಯ ಸುತ್ತಮುತ್ತ ತುಳಸಿ ಗಿಡ ಬೆಳೆಸಿದರೆ ಸೋಂಕು ಕ್ರಿಮಿ ಕೀಟಗಳು ರೋಗ ರುಜಿನಗಳು ಬರುವ ಸಾಧ್ಯತೆ ಕಡಿಮೆ.
ತುಳಸಿ ಕತೆ
ಹಿಂದೆ ಜಲಂಧರನೆ0ಬ ರಾಕ್ಷಸನಿದ್ದ. ಆತನ ಹೆಂಡತಿ ವೃಂದೆ. ಈಕೆ ಪರಮ ಪತಿವ್ರತೆ. ಅಷ್ಟೇ ಅಲ್ಲ ವಿಷ್ಣುವಿನ ಪರಮ ಭಕ್ತೆ. ಇದು ಜಲಂಧರನಿಗೆ ಇಷ್ಟವಿರುವುದಿಲ್ಲ. ಈಕೆಯ ಪಾತಿವ್ರತ್ಯದ ಬಲದಿಂದ ಯಾವ ಯುದ್ದದಲ್ಲಿಯೂ ಜಲಂಧರನಿಗೆ ಸೋಲಾಗುತ್ತಿರಲಿಲ್ಲ. ಆದರೆ ಆತ ತನ್ನ ವಿಜಯೋನ್ಮತ್ತತೆಯಲ್ಲಿ ದೇವಾದಿ ದೇವತೆಗಳೊಡನೆ ಯುದ್ದ ಮಾಡುತ್ತ ಸೋಲಿಸತೊಡಗಿದ. ಇದನ್ನು ತಿಳಿದಿದ್ದ ವಿಷ್ಣು ವೃಂದೆಯ ಪಾತಿವೃತ್ಯವನ್ನು ಭಂಗ ಮಾಡಲು ಜಲಂಧರನು ದೇವತೆಗಳೊಂದಿಗೆ ಯುದ್ದ ಮಾಡುತ್ತಿದ್ದಾಗ ಜಲಂಧರನ ವೇಷ ಧರಿಸಿ ಬೇರ್ಪಟ್ಟ ರುಂಡ, ಮು0ಡಗಳ ವಿಕೃತ ರೂಪದಲ್ಲಿ ವೃಂದೆಯ ಮುಂದೆ ಕಾಣಿಸಿದ.ಸತಿ ವೃಂದೆಯು ಪತಿಯನ್ನು ಕಳೆದುಕೊಂಡೆನೆ0ಬ ದುಃಖದಲ್ಲಿ ಶೋಕಿಸಿದಳು.ಅಷ್ಟರಲ್ಲಿ ವಿಷ್ಣು ಸಾಧು ವೇಷದಿಂದ ಪುನಃ ಕಾಣಿಸಿಕೊಂಡು ಸಂಜೀವಿನಿ ವಿದ್ಯೆಯಿಂದ ಬೇರ್ಪಟ್ಟ ರುಂಡ ಮುಂಡಗಳನ್ನು ಕೂಡಿಸಿದನು.ವೃಂದೆಯು ಸಂತೋಷದಿ0ದ ಪತಿಯನ್ನಪ್ಪಿದಳು. ಆದರೆ ವಾಸ್ತವವಾಗಿ ವ್ರತ ಭಂಗವಾಯಿತು. ಇತ್ತ ಶಿವನು ಜಲಂಧರನನ್ನು ಸಂಹರಿಸುವನು. ಸತ್ಯ ಸಂಗತಿ ತಿಳಿದ ವೃಂದೆಯು ವಿಷ್ಣುವಿಗೆ “ನಿನಗೆ ಪತ್ನಿ ವಿಯೋಗ ಬರಲಿ” ಎಂದು ಶಪಿಸಿದಳು(ಸೀತಾವಿಯೋಗ) ಅನಂತರ ಚಿತೆಯನ್ನೇರಿದಳು.
ರಾಮಾಯಣದಲ್ಲಿ ವಿಷ್ಣು ರಾಮನ ಅವತಾರವೆತ್ತಿದಾಗ ಸೀತೆಯೊಂದಿಗೆ ವಿಯೋಗವುಂಟಾಗುತ್ತದೆ.ಇದು ತುಳಸಿಯ ಶಾಪ.
ಅನಂತರ ವೃಂದೆ ತುಳಸಿಯಾಗಿ ಪಾರ್ವತಿ ತಯಾರಿಸಿದ ಬೃಂದಾವನದಲ್ಲಿ ಜನಿಸುವಳು.ಇವಳೆ ಮುಂದೆ ರುಕ್ಮಿಣಿಯಾಗಿ ಕಾರ್ತಿಕ ಶುದ್ಧ ದ್ವಾದಶಿಯಂದು ಕೃಷ್ಣನನ್ನು ವಿವಾಹವಾಗುತ್ತಾಳೆ ಎಂಬ ಪ್ರತೀತಿಯಿದೆ. ಇನ್ನೊಂದು ನಂಬಿಕೆಯ ಪ್ರಕಾರ ದೇವ ದಾನವರು ಕ್ಷೀರ ಸಾಗರವನ್ನು ಕಡೆದಾಗ ಕೊನೆಯಲ್ಲಿ ಅಮೃತ ಕಳಶ ಉದ್ಬವವಾಯಿತು. ಅದನ್ನೆತ್ತಿಕೊಂಡ ವಿಷ್ಣು ಕಂಗಳಿ0ದ ಆನಂದ ಭಾಷ್ಪ ಆ ಕಳಶದಲ್ಲಿ ಬಿದ್ದುದರಿಂದ ಒಂದು ಸಣ್ಣ ಗಿಡ ಉತ್ಪತ್ತಿಯಾಯಿತು. ಅದಕ್ಕೆ “ತುಳಸಿ” ಎಂದು ಕರೆಯಲಾಯಿತು. ಬಳಿಕ ಲಕ್ಷ್ಮೀಯಯೊಂದಿಗೆ ವಿಷ್ಣು ತುಳಸಿಯನ್ನು ಮದುವೆಯಾದ ಎಂದು ಹೇಳುವರು.
ತುಳಸಿ ಗಿಡವು ಹಿಂದೂ ಪದ್ದತಿಯ ಮದುವೆಯ ಸಂಕೇತವಾಗಿರುವುದರಿಂದ ಹಿಂದೂಗಳ ಮನೆಗಳಲ್ಲಿ ಈ ಆಚರಣೆ ನಡೆಸಲಾಗುತ್ತದೆ. ಈ ದಿನ ಪೂಜೆಯಲ್ಲಿ ಪಾಲ್ಗೊಳ್ಳುವ ಹೆಣ್ಣು ಮಕ್ಕಳು ಉಪವಾಸ ಮಾಡುವರು. ತುಳಸಿ ವಿವಾಹಕ್ಕೆ ಎಲ್ಲರನ್ನು ಕರೆಯುವರು. ಪುರೋಹಿತರಂತೆ ಶಾಸ್ತ್ರ ಮಾಡಿ ಪೂಜೆ ನೆರವೇರಿಸಿ ಹೆಣ್ಣು ಮಕ್ಕಳಿಗೆ ಉಡಿ ತುಂಬುವ ಮೂಲಕ ಸಂಪ್ರದಾಯ ಆಚರಣೆ ಮಾಡುವರು.ಈ ದಿನ ವೃಂದಾದೇವಿಯ ಅನುಗ್ರಹಕ್ಕೆ ಪಾತ್ರರಾಗಲು ತ್ರಿಮೂರ್ತಿಗಳೂ ಅವರ ಪತ್ನಿಯರಾದ ಶಕ್ತಿದೇವಿಯರು ಇತರೆ ದೇವತೆಗಳು ಒಟ್ಟಾಗಿ ಸೇರುತ್ತಾರೆ ಎಂಬ ನಂಬಿಕೆ.ತುಳಸಿಯೆಂದರೆ ಪಾವಿತ್ರ ಮತ್ತು ಸಾತ್ವಿಕತೆಯ ಪ್ರತೀಕ.
ತುಳಸಿಯಲ್ಲಿ ಬಿಳಿ ತುಳಸಿ, ಕಪ್ಪು ತುಳಸಿ, ಅರಣ್ಯ ತುಳಸಿ, ಬಿಲ್ವಗಂಧ ತುಳಸಿ, ವಿಶ್ವಗಂಧ ತುಳಸಿ ಎಂಬ ಅನೇಕ ವಿಧಗಳುಂಟು.
ವೈದ್ಯ ಶಾಸ್ತ್ರದಲ್ಲಿ ತುಳಸಿಗೆ ಹೆಚ್ಚು ಪ್ರಾಧಾನ್ಯತೆಯಿದೆ. ತುಳಸಿಯಿರುವೆಡೆ ಸೊಳ್ಳೆಗಳ ಕಾಟವಿಲ್ಲ. ಅಂಟುರೋಗಗಳ ಬಾಧೆಯಿಲ್ಲ.ಮಕ್ಕಳ ಕೆಮ್ಮು ನೆಗಡಿಗೆ ಇದು ಹತ್ತಿರದ ವೈದ್ಯೆ. ಕೆಮ್ಮು ಬಿಕ್ಕಳಿಕೆ ಬಳಲಿಕೆ ಜ್ವರ ಮೊದಲಾದವುಗಳಲ್ಲಿ ತುಳಸಿಯನ್ನು ವಿವಿಧ ರೂಪದಲ್ಲಿ ಬಳಸುವುದರಿಂದ ಗುಣ ಕಾಣಬಹುದಾಗಿದೆ. ತುಳಸಿ ಗಿಡವನ್ನು ಹಾಯ್ದು ಅದರ ಸುವಾಸನೆಯನ್ನು ಪಸರಿಸುವ ಗಾಳಿಯು ದಶದಿಕ್ಕುಗಳಲ್ಲಿರುವ ಎಲ್ಲ ಬಗೆಯ ಪಾಪಗೃಹದೋಷಗಳನ್ನು ನಿವಾರಿಸುತ್ತದೆ.ಒಂದು ತುಳಸಿ ಗಿಡವು ತನ್ನ ಸುತ್ತಲಿನ ಸುಮಾರು ಇನ್ನೂರ ಚದರ ಅಡಿ ಪ್ರದೇಶವನ್ನು ಶುದ್ದವಾಗಿಡುತ್ತದೆ. ಚರ್ಮದಲ್ಲಿ ತುರಿಕೆ ಕಜ್ಜಿಗೆ ತುಳಸಿ ಎಲೆಯನ್ನು ಉಪ್ಪಿನ ಜೊತೆ ಜಜ್ಜಿ ಲೇಪಿಸುವುದರಿಂದ ಪರಿಹಾರವಾಗುತ್ತದೆ. ಪ್ರತಿನಿತ್ಯ ತುಳಸಿ ಎಲೆಯನ್ನು ಅಗಿಯುತ್ತಿದ್ದರೆ ಬಾಯಿಯಲ್ಲಿನ ದುರ್ಗಂಧ ವಾಸನೆ ದೂರವಾಗುವುದು. ಆಹಾರ ಪಚನವಾಗುವುದು.
ತುಳಸಿ ಸೇವನೆಯಿಂದ ಸಂತಾನ ಪ್ರಾಪ್ತಿಯೆಂದು ಹೇಳುವರು.ಆರೋಗ್ಯವಂತಳಾದ ಸ್ವತ್ರೀಯು ಪುಷ್ಪವತಿಯಾದ ನಾಲ್ಕನೆಯ ದಿನ ಸಂಜೆ ಒಂದು ಚಕ್ರಕೇಳಿ ಬಾಳೆಯ ಹಣ್ಣನ್ನು ತಂದು ಸುಲಿದು ಅದರೊಳಗೆ ‘ತವಾಕ್ಷರಿ’ ಚೂರ್ಣವನ್ನು ತುಂಬಿ ತುಳಸಿ ಗಿಡದ ಬುಡದಲ್ಲಿಟ್ಟು ಮರುದಿನ ಬೆಳಿಗ್ಗೆ ಸ್ನಾನ ಮಾಡಿ ಆ ಹಣ್ಣನ್ನು ತಿಂದು ಹಾಲನ್ನು ಸೇವಿಸಬೇಕು. ಈ ರೀತಿ ಎರಡು ಸಲ ಮಾಡಿದರೆ ಆ ಸ್ತ್ರೀಯು ಫಲವತಿಯಾಗುವಳು.(ಪ್ರೊ.ಡಿ.ಟಿ.ರಂಗಸ್ವಾಮಿಯವರ ಭಾರತದ ಹಬ್ಬಗಳು ಪುಸ್ತಕದಿಂದ ) ಸೂರ್ಯೋದಯಕ್ಕೆ ಮುನ್ನ ಬ್ರಾಹ್ಮಿ ಮುಹೂರ್ತದಲ್ಲಿ ಇದರ ಸೇವನೆಯಿಂದ ಸಾಕಷ್ಟು ರೋಗಗಳು ನಿವಾರಣೆಯಾಗುತ್ತವೆ. ಅಲ್ಲದೇ ಶರೀರ ಸ್ವಾಸ್ಥ್ಯದಿಂದ ಕೂಡಿರುತ್ತದೆ.ಅಜೀರ್ಣ ಮಲಬದ್ದತೆ ಮತ್ತು ಗ್ಯಾಸ್ ಹುಳಿಗೆ ಇದು ರಾಮಬಾಣ.
ದೇಹಾಂತ್ಯ ಕಾಲದಲ್ಲಿ ಬಾಯಿಗೆ ತುಳಸಿ ನೀರು ಬಿಡುವುದರಿಂದ ಪ್ರಾಣೋತ್ತಮನ ಸುಲಭವಾಗಿ ಆಗುತ್ತದೆ ಮತ್ತು ಆತ್ಮ ಮನಸ್ಸುಗಳ ಶುದ್ಧಿಯಾಗಿ ಮೋಕ್ಷಪ್ರಾಪ್ತಿಯಾಗುತ್ತದೆ ಎಂಬುದು ಶಾಸ್ತ್ರಕಾರರ ಅಭಿಪ್ರಾಯ. ಒಟ್ಟಾರೆ ಆಯುರ್ವೇದದಲ್ಲಿ ತುಳಸಿಯನ್ನು ಅನೇಕ ವಿಧವಾಗಿ ವಿವಿಧ ಕಾಯಿಲೆಗಳಿಗೆ ಬಳಕೆ ಮಾಡುವರು. ಹೀಗಾಗಿ ತುಳಸಿಯ ಮಹತ್ವ ಅರಿತವರು ತಮ್ಮ ಮನೆಯ ಮುಂದೆ ತುಳಸಿ ಗಿಡವನ್ನು ಹಚ್ಚುವ ಜೊತೆಗೆ ನಿತ್ಯವೂ ಪೂಜಿಸುವರು.ಅದರ ಎಲೆಗಳನ್ನು ಕೂಡ ಸೇವಿಸುವರು.