ಕತ್ತಲೆ ಕಳೆಯಲು ಬೆಳಕು ಬೇಕು: ಶ್ರೀ ರಂಭಾಪುರಿ ಜಗದ್ಗುರುಗಳು

ರಿಪ್ಪನ್‌ಪೇಟೆ:
ಕತ್ತಲೆ ಅಜ್ಞಾನದ ಸಂಕೇತವಾದರೆ ಬೆಳಕು ಜ್ಞಾನದ ಸಂಕೇತ. ಬಾಹ್ಯ ಕತ್ತಲೆ ಕಳೆಯಲು ದೀಪ ಬೇಕು. ಮನದ ಅಜ್ಞಾನ ದೂರ ಮಾಡಲು ಜ್ಞಾನ ಬೋಧಾಮೃತ ಬೆಳಕಿನ ಕಿರಣ ಮುಖ್ಯವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.


ಅವರು ಸಮೀಪದ ಶ್ರೀಮದ್ ರಂಭಾಪುರಿ ಖಾಸಾ ಶಾಖಾ ಮಳಲಿ ಸಂಸ್ಥಾನ ಮಠದಲ್ಲಿ ನವೆಂಬರ್ 18 ರಂದು ಜರುಗಿದ ಕಾರ್ತೀಕ ದೀಪೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.


ದೀಪ ಶ್ರೀಮಂತನ ಮನೆಯಲ್ಲಿ ಎಷ್ಟು ಬೆಳಕನ್ನು ಕೊಡುತ್ತದೆಯೋ ಅಷ್ಟೇ ಬೆಳಕನ್ನು ಬಡವನ ಮನೆಯಲ್ಲೂ ಕೊಡುತ್ತದೆ. ಮನುಷ್ಯನ ಸ್ವಭಾವ ಕೂಡಾ ದೀಪದಂತಿರಬೇಕು. ಅಂಗಳದಲ್ಲಿ ಹುಲ್ಲು ವೇಗವಾಗಿ ಬೆಳೆದಷ್ಟು ಬಿಲ್ವ ವೃಕ್ಷ ಬೆಳೆಯುವುದಿಲ್ಲ. ಮೋಸ ವಂಚನೆ ಮಾಡುವ ಮನುಷ್ಯ ಬಹು ಬೇಗ ಬೆಳೆಯುವಂತೆ ಒಳ್ಳೆಯವರು ಬೆಳೆಯುವುದಿಲ್ಲ. ನಡೆಯುವ ದಾರಿಯಲ್ಲಿ ನಿಯತ್ತು ಇದ್ದರೆ ಅದನ್ನು ತಡೆಯುವ ತಾಕತ್ತೂ ಯಾರಿಗೂ ಇರುವುದಿಲ್ಲ. ಹಣದಿಂದ ಕಟ್ಟಿದ ಮನೆಯಲ್ಲಿ ಎಲ್ಲರೂ ಇರುತ್ತಾರೆ. ಆದರೆ ಗುಣದಿಂದ ಕಟ್ಟಿದ ಮನೆಯಲ್ಲಿ ಯೋಗ್ಯರಷ್ಟೇ ನೆಲೆಸುತ್ತಾರೆ.

ಪ್ರಾಮಾಣಿಕ ಸಂಬ0ಧಗಳು ಶುದ್ಧ ನೀರಿನ ಹಾಗೆ. ಅವುಗಳಿಗೆ ಬಣ್ಣ ಆಕಾರ ಇರುವುದಿಲ್ಲ. ಆದರೂ ನೀರು ಅತ್ಯವಶ್ಯಕ. ಸತ್ಯ ಮನುಷ್ಯನನ್ನು ಬದಲಿಸುತ್ತದೆ. ಆದರೆ ಸತ್ಯವನ್ನು ಯಾರಿಂದಲೂ ಬದಲಿಸಲಾಗದು. ವೀರಶೈವ ಧರ್ಮ ಮಾನವೀಯ ಸಂಬ0ಧಗಳನ್ನು ಬೆಸೆದು ಸಮಾಜದಲ್ಲಿ ಸಾಮರಸ್ಯ ಶಾಂತಿ ನೆಲೆಗೊಳಿಸಲು ಸಾಧ್ಯವಾಗುವುದೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ಸ್ಪಷ್ಟವಾಗಿ ನಿರೂಪಿಸಿದ್ದಾರೆ. ಮಳಲಿ ಸಂಸ್ಥಾನ ಮಠ ಶ್ರೀ ರಂಭಾಪುರಿ ಖಾಸಾ ಶಾಖಾ ಮಠವಾಗಿದ್ದು ಪ್ರತಿ ವರ್ಷ ಕಾರ್ತೀಕ ದೀಪೋತ್ಸವ ಸಮಾರಂಭವನ್ನು ಅದ್ದೂರಿಯಿಂದ ಆಚರಿಸುತ್ತಿರುವುದು ತಮಗೆ ಸಂತಸ ತಂದಿದೆ. ಇಂದಿನ ಪಟ್ಟಾಧ್ಯಕ್ಷರಾದ ಡಾ. ಗುರುನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಕ್ರಿಯಾಶೀಲ ಬದುಕನ್ನು ಹೊಂದಿ ಮಲೆನಾಡ ಭಕ್ತರ ಬಾಳಿಗೆ ಆಶಾಕಿರಣರಾಗಿದ್ದಾರೆ. ಶ್ರೀಗಳವರಿಂದ ಇನ್ನಷ್ಟು ಅಭಿವೃದ್ಧಿ-ಜನಹಿತ ಕಾರ್ಯಗಳು ನಡೆಯಲೆಂದು ರೇಶ್ಮೆ ಮಡಿ ಹೊದಿಸಿ ಫಲ ಪುಷ್ಟವಿತ್ತು ಶುಭ ಹಾರೈಸಿದರು.


ಧರ್ಮ ಸಮಾರಂಭ ಉದ್ಘಾಟಿಸಿದ ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಮಳಲಿ ಸಂಸ್ಥಾನ ಮಠದ ಆಶೀರ್ವಾದದಿಂದ ಬೆಳೆದ ನಾನಿಂದು ಗೃಹ ಸಚಿವರಾಗಿ ಧರ್ಮ ಜಾಗೃತಿ ಸಮಾರಂಭ ಉದ್ಘಾಟಿಸಿದ ಭಾಗ್ಯ ನನ್ನದಾಗಿದೆ. ಜೀವನ ಉನ್ನತಿ ಮತ್ತು ಶ್ರೇಯಸ್ಸಿಗೆ ಧರ್ಮವೇ ಮೂಲವಾಗಿದೆ. ಸ್ಥಾನಮಾನ ಹಾಗೂ ಆಸ್ತಿಗಳು ಬದಲಾಗಬಹುದು. ಆದರೆ ಮಾನವೀಯ ಮೌಲ್ಯಗಳು ಮತ್ತು ಸಂಬ0ಧಗಳು ಎಂದೆ0ದಿಗೂ ಶಾಶ್ವತವಾಗಿ ಉಳಿಯಲು ಸಂಸ್ಕಾರಯುಕ್ತ ಜೀವನ ಕಾರಣವಾಗಿದೆ. ಎಲ್ಲ ಧರ್ಮಗಳು ಉದಾತ್ತವಾದ ಚಿಂತನೆಗಳನ್ನು ಕೊಟ್ಟಿದ್ದು ಅವುಗಳ ಅನುಷ್ಠಾನ ನಾವೆಲ್ಲಾ ಮಾಡಬೇಕಾಗಿದೆ. ಮಳಲಿ ಮಠದ ಡಾ. ನಾಗಭೂಷಣ ಶ್ರೀಗಳು ಮಠದ ಸರ್ವಾಂಗೀಣ ಅಭಿವೃದ್ಧಿಯ ಜೊತೆಗೆ ಸಮಾಜದಲ್ಲಿ ಶಾಂತಿ ಸದ್ಭಾವನೆ ಬೆಳೆಸಲು ಸದಾ ಶ್ರಮಿಸುತ್ತಿದ್ದಾರೆ ಎಂದು ಹರುಷ ವ್ಯಕ್ತಪಡಿಸಿದರು.

ರಿಪ್ಪನಪೇಟೆ ಆರ್.ಎಸ್.ಪ್ರಶಾಂತ ಅವರು ತಮ್ಮ ಪ್ರಾಸ್ತಾವಿಕವಾಗಿ ಮಾತನಾಡಿ, ಮಳಲಿ ಸಂಸ್ಥಾನ ಮಠದ ಗುರು ಪರಂಪರೆ ಶ್ರೀಮಠ ಮಲೆನಾಡ ಪ್ರಾಂತದಲ್ಲಿ ಭಕ್ತರ ಕಲ್ಯಾಣಕ್ಕಾಗಿ ಸದಾ ಶ್ರಮಿಸುತ್ತಾ ಬಂದಿದೆ. ಸಕಲ ಜೀವಾತ್ಮರಿಗೂ ಸದಾ ಒಳಿತನ್ನೇ ಬಯಸಿದ ವೀರಶೈವ ಧರ್ಮ ಕಾಯಕ ಮತ್ತು ದಾಸೋಹಕ್ಕೆ ಹೆಚ್ಚಿನ ಮಹತ್ವ ಕೊಟ್ಟಿದೆ. ಅಕ್ಷರ ಕಲಿತ ವ್ಯಕ್ತಿ ಭ್ರಷ್ಟನಾದರೂ ಆಗಬಹುದು. ಆದರೆ ಸಂಸ್ಕಾರವನ್ನು ಕಲಿತ ವ್ಯಕ್ತಿ ಎಂದಿಗೂ ಭ್ರಷ್ಟನಾಗಲಾರ. ಸತ್ಯ ಶಾಂತಿ ಸಂಸ್ಕಾರದ ಬದುಕು ಕಟ್ಟಿ ಕೊಡುವಲ್ಲಿ ಡಾ. ಗುರುನಾಗಭೂಷಣ ಶ್ರೀಗಳು ಸದಾ ಶ್ರಮಿಸುತ್ತಿದ್ದಾರೆ ಎಂದರು. ಮುಖ್ಯ ಅತಿಥಿಗಳಾಗಿ ಡಾ.ಆರ್.ಎಂ.ಮ0ಜುನಾಥಗೌಡ, ಕೋಣಂದೂರು ಕೆ.ಆರ್.ಪ್ರಕಾಶ, ಇಂಜನೀಯರ್ ಇಂಜಿನಿಯರ್ ಹೆಚ್.ಎಸ್.ಜಗದೀಶ, ಬಿ.ಯುವರಾಜ್, ವೀರೇಶ ಆಲವಳ್ಳಿ, ಆನಂದ ಮೆಣಸೆ ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.


ಬಂಕಾಪುರದ ರೇವಣಸಿದ್ಧ ಶ್ರೀ, ಕವಲೇದುರ್ಗದ ಮರುಳಸಿದ್ಧ ಶ್ರೀ, ಶಾಂತಪುರ ಶಿವಾನಂದ ಶ್ರೀ, ಕೋಣಂದೂರು ಶ್ರೀಪತಿ ಪಂಡಿತಾರಾಧ್ಯ ಶ್ರೀ, ಸಂಗೊಳ್ಳಿ ಗುರುಲಿಂಗ ಶ್ರೀ, ಕಡೇನಂದಿಹಳ್ಳಿ-ದುಗ್ಲಿಯ ರೇವಣಸಿದ್ಧ ಶ್ರೀಗಳವರು ಸಮಾರಂಭದ ಸಮ್ಮುಖವನ್ನು ವಹಿಸಿದ್ದರು. ಜಿ.ಯು.ಶಂಕರ್, ಹೊಸನಗರದ ಹೆಚ್.ಬಿ. ಈಶ್ವರಪ್ಪಗೌಡ್ರು, ಆನಂದ ಮೆಣಸೆ ಇವರೆಲ್ಲರಿಗೂ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ ಮಳಲಿ ಮಠಾಧ್ಯಕ್ಷರಾದ ಡಾ. ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಮನಸ್ಸು ನಿರ್ಮಲವಾದಷ್ಟು ನೆಮ್ಮದಿ ಹೆಚ್ಚುತ್ತದೆ. ಒಳ್ಳೆಯವರಿಗೆ ಇರುವಷ್ಟು ಶತ್ರುಗಳು ಕೆಟ್ಟವರಿಗೆ ಇರುವುದಿಲ್ಲ. ಕೆಟ್ಟವರಿಗೆ ಇರುವಷ್ಟು ಮಿತ್ರರು ಒಳ್ಳೆಯವರಿಗೆ ಇರುವುದಿಲ್ಲ. ಹೂವಿನ ಹಾರ ಕಂಡರೂ ಅದರಲ್ಲಿರುವ ದಾರ ಕಾಣದು. ಮರ ಬಿಟ್ಟ ಹಣ್ಣು ಕಾಣುತ್ತೇವೆ ಹೊರತು ಅದರ ತಾಯ್ಬೇರು ಕಾಣುವುದಿಲ್ಲ. ವೀರಶೈವ ಧರ್ಮ ಸರ್ವ ಜನಾಂಗದ ಶ್ರೇಯಸ್ಸಿಗೆ ದಾರಿ ತೋರಿ ಮುನ್ನಡಸಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಧರ್ಮದ ದಶ ಸೂತ್ರಗಳು ಮತ್ತು ೧೨ನೇ ಶತಮಾನದ ಶರಣರ ಸಾಮಾಜಿಕ ಚಿಂತನಗಳು ಬದುಕಿ ಬಾಳುವ ಜನಾಂಗಕ್ಕೆ ದಾರಿ ದೀಪವೆಂದರು. ಬೆಳಿಗ್ಗೆ ಶ್ರೀ ರಂಭಾಪುರಿ ಜಗದ್ಗುರುಗಳು ಶ್ರೀ ಗುರು ನಾಗಾರ್ಜುನ ಸಭಾ ಭವನದಲ್ಲಿ ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಭಕ್ತಸಂಕುಲಕ್ಕೆ ಶುಭ ಹಾರೈಸಿದರು.

ಕ್ಷೇತ್ರದ ಕುಲದೈವ ಮೊದಲ್ಗೊಂಡು ಎಲ್ಲ ಪರಿವಾರ ದೈವಗಳಿಗೆ ವಿಶೇಷ ಪೂಜೆ ಜರುಗಿದವು. ಬಿ.ಎಂ.ಸುರೇಶ ಜಮ್ಮಲದಿನ್ನಿ ಸಂಗೀತ ಸೇವೆ ಸಲ್ಲಿಸಿದರು. ಶಿವಮೊಗ್ಗದ ಶಾಂತಾ ಆನಂದ ನಿರೂಪಿಸಿದರು. ರಿಪ್ಪನಪೇಟೆ ಎಸ್.ವರ್ತೇಶ ವಂದನಾರ್ಪಣೆ ಸಲ್ಲಿಸಿದರು. ಸಮಾರಂಭದ ನಂತರ ದೀಪೋತ್ಸವ ಸಮಾರಂಭ ಅದ್ದೂರಿಯಾಗಿ ಜರುಗಿತು. ಬಂದ ಎಲ್ಲ ಭಕ್ತರಿಗೆ ಅನ್ನ ದಾಸೋಹ ಏರ್ಪಡಿಸಲಾಗಿತ್ತು.

ವರದಿ: ಸಿ.ಎಚ್. ಬಾಳನಗೌಡ್ರ
ವಾರ್ತಾ ಸಂಯೋಜನಾಧಿಕಾರಿ,
ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ,
ಬಾಳೆಹೊನ್ನೂರು

Related Articles

ಪ್ರತಿಕ್ರಿಯೆ ನೀಡಿ

Latest Articles