ಧರ್ಮಸ್ಥಳ: ಪ್ರಸಿದ್ಧ ತೀರ್ಥಕ್ಷೇತ್ರ ಧರ್ಮಸ್ಥಳದಲ್ಲಿ ಈಗ ಲಕ್ಷದೀಪೋತ್ಸವದ ಸಂಭ್ರಮ. ನವೆಂಬರ್ 29ರಿಂದ ಡಿಸೆಂಬರ್ 4ರವರೆಗೆ ಮಂಜುನಾಥನ ಸನ್ನಿಧಿಯಲ್ಲಿ ಲಕ್ಷ ದೀಪೋತ್ಸವ ನಡೆಯಲಿದ್ದು, ನಿರಂತರ ಅನ್ನದಾನ, ಸಾಹಿತ್ಯ, ಸರ್ವಧರ್ಮ ಸಮ್ಮೇಳನ, ಸಾಂಸ್ಕೃತಿಕ ಕಾರ್ಯಕ್ರಮ, ಲಕ್ಷ ಲಕ್ಷ ದೀಪಗಳಿಂದ ಧರ್ಮಸ್ಥಳದ ವೈಭವ ಹೆಚ್ಚಲಿದೆ.
ಒಟ್ಟು 5 ದಿನಗಳ ಕಾಲ ನಡೆಯುವ ಈ ಸಂಭ್ರಮ ಡಿ.4ರಂದು ಪೂರ್ಣಗೊಳ್ಳಲಿದೆ. ಡಿಸೆಂಬರ್ 1ರ ಬುಧವಾರ ಲಲಿತೋದ್ಯಾನ ಉತ್ಸವ, ಡಿಸೆಂಬರ್ 2ರ ಗುರುವಾರ ಕಂಚಿ ಮಾರುಕಟ್ಟೆ ಉತ್ಸವ, ಡಿಸೆಂಬರ್ 3ರ ಶುಕ್ರವಾರ ಗೌರಿ ಮಾರುಕಟ್ಟೆ ಉತ್ಸವ ಮತ್ತು ಡಿಸೆಂಬರ್ 4ರ ಶನಿವಾರ ಕೊನೆಯ ದಿನ ಶ್ರೀಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಲಿದೆ.
ಹೀಗಾಗಿ, ಈಗ ಇಡೀ ಧರ್ಮಸ್ಥಳವೇ ದೀಪಗಳಿಂದ ಸಿಂಗಾರಗೊಂಡಿದೆ. ಕಾರ್ತಿಕ ಮಾಸದ ಈ ವಿಶೇಷ ಲಕ್ಷದೀಪ ಸಂಭ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರುವ ಸಾಧ್ಯತೆ ಇದೆ. ಆದರೆ ಈ ವರ್ಷ, ಕೊರೊನಾ ಕಾರಣದಿಂದ ಕಲಾವಿದರ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ.
ಡಿ.4ರ ಸೋಮವಾರ ರಾತ್ರಿ ಮಂಜುನಾಥ ಸ್ವಾಮಿಗೆ ಲಕ್ಷ ದೀಪೋತ್ಸವದ ವಿಶೇಷ ಪೂಜೆ ನಡೆಯಲಿದೆ. ದೀಪೋತ್ಸವದ ಅಂಗವಾಗಿ ಕ್ಷೇತ್ರದಲ್ಲಿ ಸರ್ವಧರ್ಮ ಸಮ್ಮೇಳನ ಹಾಗೂ ಸಾಹಿತ್ಯ ಸಮ್ಮೇಳವೂ ಪ್ರತೀ ವರ್ಷದಂತೆ ನಡೆಯಲಿದ್ದು ಎಲ್ಲಾ ಕಾರ್ಯಕ್ರಮಗಳಲ್ಲಿ ಕೊವಿಡ್ ನಿಯಮಗಳನ್ನು ಪಾಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಆನ್ಲೈನ್ನಲ್ಲಿ ವೀಕ್ಷಿಸಬಹುದು ಲಕ್ಷದೀಪೋತ್ಸವ ಸಂಭ್ರಮ
ಡಿ.4ರಂದು ರಾತ್ರಿ 2 ಗಂಟೆಗೆ ಆರಂಭವಾಗುವ ರಥೋತ್ಸವ ಮುಂಜಾನೆ 6.30ಕ್ಕೆ ಸ್ವಸ್ಥಾನ ಸೇರಲಿದೆ. ಈ ಬಾರಿ, ಆನ್ಲೈನ್ನಲ್ಲೇ ಲಕ್ಷದೀಪೋತ್ಸವವನ್ನು ವೀಕ್ಷಿಸುವ ಅವಕಾಶವನ್ನು ಕಲ್ಪಿಸಲಾಗಿದೆ. ಈಗಾಗಲೇ ಹೊಸಕಟ್ಟೆ ಉತ್ಸವ, ಕೆರೆಕಟ್ಟೆ ಉತ್ಸವ ನೆರವೇರಿದೆ. ಲಲಿತೋದ್ಯಾನ ಉತ್ಸವ, ಗೌರಿಮಾರುಕಟ್ಟೆ ಉತ್ಸವ ನಡೆಯಲಿದೆ. ಸುಗಮ ಸಂಗೀತ, ರಾಮಕಥಾ ನೃತ್ಯರೂಪಕ ನಡೆಯಲಿದೆ. ಸರ್ವಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನ ವಿವಿಧ ಗಣ್ಯರು ಭಾಗಿಯಾಗಲಿದ್ದಾರೆ.