ಕುವೆಂಪು ಜನ್ಮ ಸಂಭ್ರಮ- ಶ್ರೀರಾಮಾಯಣ ದರ್ಶನಂ ವಚನ ದೀಪಿಕೆ ಗ್ರಂಥ ಲೋಕಾರ್ಪಣೆ

ಬೆಂಗಳೂರು: ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಅನ್ನಪೂರ್ಣ ಪಬ್ಲಿಷಿಂಗ್ ಹೌಸ್‌ರವರು ಕುವೆಂಪು ಜನ್ಮ ಸಂಭ್ರಮ-ಡಾ. ಜಿ ಕೃಷ್ಣಪ್ಪ ರವರ ‘ಕುವೆಂಪು ಶ್ರೀರಾಮಾಯಣ ದರ್ಶನಂ ವಚನ ದೀಪಿಕೆ ‘ (ಗದ್ಯಾನುವಾದ) ಗ್ರಂಥ ಲೋಕಾರ್ಪಣೆ ಸಮಾರಂಭವನ್ನು ಗಾಂಧಿ ಶಾಂತಿ ಪ್ರತಿಷ್ಠಾನ, ಶೇಷಾದ್ರಿಪುರಂ ಸಂಜೆ ಪದವಿ ಕಾಲೇಜು, ಉದಯ ಪ್ರಕಾಶನ ಸಹಯೋಗದಲ್ಲಿ ನಗರದ ಗಾಂಧಿಭವನದ ಬಾಪು ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ರವರು ಕೃತಿ ಲೋಕಾರ್ಪಣೆ ಮಾಡಿ ಮಾತನಾಡುತ್ತ ಶ್ರೀ ಕುವೆಂಪು ಅವರು ೧೯೪೯ರಲ್ಲಿ ರಚಿಸಿದ ಮಹಾಕಾವ್ಯ ಶ್ರೀರಾಮಾಯಣದರ್ಶನಂ ಆಧುನಿಕ ಕನ್ನಡ ಸಾಹಿತ್ಯದ ಮೇರುಕೃತಿ. ಕುವೆಂಪು ಅವರು ‘ಪಾಪಿಗುದ್ದಾರಮಿಹುದೌಸೃಷ್ಟಿಯ ಮಹದ್‌ವ್ಯೂಹ ರಚನೆಯೊಳ್’ ಎಂಬ ಮಾನವೀಯ ನೆಲೆಯ ಉದಾತ್ತ ಚಿಂತಕರು. ಆ ವಿಶಾಲ ದೃಷ್ಟಿಯಲ್ಲಿ ಮನೋವೈಜ್ಞಾನಿಕ ವಿಶ್ಲೇಷಣೆಯಲ್ಲಿ ಅವರು ದುಷ್ಟ ಪಾತ್ರಗಳಾದ ಮಂಥರೆ, ಕೈಕೆ, ವಾಲಿ, ಚಂದ್ರನಖಿ, ಮಾರೀಚ, ರಾವಣ ಮುಂತಾದ ಪಾತ್ರಗಳು ಪಶ್ಚಾತ್ತಾಪಗೊಂಡು ಆತ್ಮ ಶೋಧಕ್ಕೆ ಒಳಗಾಗುವಂತೆ ಮರುಸೃಷ್ಟಿಸಿದ್ದಾರೆ. ಆ ಮಹಾಕಾವ್ಯ ಪ್ರವೇಶಕ್ಕೆ ಹಲವು ಗದ್ಯ ರೂಪಿ ಕೃತಿಗಳು ಈಗಾಗಲೇ ಹೊರಬಂದಿವೆ. ಜಿ. ಕೃಷ್ಣಪ್ಪನವರು ಆ ಮಹಾಕಾವ್ಯದ ದರ್ಶನ ದೀಪ್ತಿಗೆ ಒಳಗಾಗಿ ಅದನ್ನು ‘ವಚನ ದೀಪಿಕೆ’ಯಾಗಿ ನೀಡಿದ್ದಾರೆ. ಇದು ಕುವೆಂಪು ಕಾವ್ಯ ಸಹೃದಯರಿಗೆ ಆಪ್ತವಾಗುವ ಸರಳ, ಸುಂದರ ಶೈಲಿಯಲ್ಲಿದೆ. ಮೂಲಕಾವ್ಯವನ್ನು ಅಭ್ಯಾಸ ಮಾಡುವ ಆಸಕ್ತರಿಗೆ ಉಪಯುಕ್ತವಾಗುವ “ಶ್ರೀ ರಾಮಾಯಣದರ್ಶನಂ ನಿಘಂಟು’ ಇದರ ಜೊತೆಯಲ್ಲಿರುವುದು ಈ ಕೃತಿಯ ವಿಶೇಷ. ಬೇಂದ್ರೆ ಕೃಷ್ಣಪ್ಪನವರು ಮಹಾಕವಿ ಕುವೆಂಪು ಅವರ ಕಾವ್ಯರಸಾಬ್ಧಿಯಲ್ಲಿ ಮಿಂದು ರಚಿಸಿರುವ ಈ ಕೃತಿ ಕನ್ನಡ ಸಾಹಿತ್ಯಕ್ಕೆ ನೀಡಿದ ಉತ್ತಮ ಕೊಡುಗೆಯಾಗಿದೆ ಎಂದು ಹೇಳಬಹುದು ಎಂದು ಅಭಿಪ್ರಾಯಪಟ್ಟರು.


ಹಿರಿಯ ಶಿಕ್ಷಣ ತಜ್ಞ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಹಾಗೂ ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಗೌ. ಪ್ರಧಾನ ಕಾರ್ಯದರ್ಶಿ, ನಾಡೋಜ ಡಾ. ವೂಡೇ.ಪಿ. ಕೃಷ್ಣ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಬಿ.ಎಂ.ಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ. ಬೈರಮಂಗಲ ರಾಮೇಗೌಡರವರು ಗ್ರಂಥದ ಕುರಿತು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಗಾಂಧೀ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಜೀರಿಗೆ ಲೋಕೇಶ್ ಭಾಗವಹಿಸಿದ್ದರು


ಶ್ರೀರಾಮಾಯಣ ದರ್ಶನಂ ಕಾವ್ಯ ವಾಚನವನ್ನು ವಿದ್ವಾನ್ ಖಾಸಿಂ ಮಲ್ಲಿಗೆಮಡುವುರವರು ನಡೆಸಿಕೊಟ್ಟರು. ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಗೌರವ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ, ಶೇಷಾದ್ರಿಪುರಂ ಸಂಜೆ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಎನ್.ಎಸ್.ಸತೀಶ್ ಹಾಗೂ ಅನ್ನಪೂರ್ಣ ಪಬ್ಲಿಷಿಂಣ್ ಹೌಸ್ ನ ಸುರೇಶ್ ಬಿ.ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

Related Articles

ಪ್ರತಿಕ್ರಿಯೆ ನೀಡಿ

Latest Articles