ಯಶಸ್ವಿ ಬದುಕಿಗೆ ಆಧ್ಯಾತ್ಮ ಜ್ಞಾನ ಅವಶ್ಯಕ : ಶ್ರೀ ರಂಭಾಪುರಿ ಜಗದ್ಗುರು

ರಂಭಾಪುರಿ ಪೀಠ (ಬಾಳೆಹೊನ್ನೂರು): ಅಶಾಂತಿ ಅಜ್ಞಾನದ ತಾಕಲಾಟದಲ್ಲಿ ಜೀವನ ಬಡವಾಗಬಾರದು. ಬದುಕಿನ ಯಶಸ್ವಿಗಾಗಿ ಲೌಕಿಕ ಜ್ಞಾನ ಹೇಗೆ ಅಗತ್ಯವೋ ಹಾಗೆಯೇ ನೊಂದ ಬೆಂದ ಮನಕ್ಕೆ ಆಧ್ಯಾತ್ಮ ಜ್ಞಾನ ಅವಶ್ಯಕವಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.


ಅವರು ಶ್ರೀ ರಂಭಾಪುರಿ ಪೀಠದಲ್ಲಿ ಜನವರಿ 10 ರಂದು “ರಂಭಾಪುರಿ ಬೆಳಗು” ಮಾಸ ಪತ್ರಿಕೆ ಬಿಡುಗಡೆ ಮಾಡಿ ಆಶೀರ್ವಚನ ನೀಡಿದರು.


ಬಹಳ ಜನರು ಬಹಳಷ್ಟು ಓದಬಹುದು ಮತ್ತು ಬರೆಯಬಹುದು. ಇನ್ನು ಕೆಲವರು ಚೆನ್ನಾಗಿ ಮಾತನಾಡಬಲ್ಲರು. ಆದರೆ ಅದರಂತೆ ಬದುಕಿನಲ್ಲಿ ನಡೆದುಕೊಳ್ಳದಿದ್ದರೆ ಯಾವ ಪ್ರಯೋಜನವು ಇಲ್ಲ. ಬೆಳಗುವ ದೀಪ ಮಾತನಾಡುವುದಿಲ್ಲ. ಆದರೆ ಸದಾ ಬೆಳಕನ್ನು ಕೊಡುತ್ತದೆ. ಆಧುನಿಕ ವಿಜ್ಞಾನ ಎಲ್ಲಿ ನಿರುತ್ತರವಾಗುವುದೋ ಅಲ್ಲಿಂದ ಭಾರತೀಯ ಆಧ್ಯಾತ್ಮ ಚಿಂತನೆ ಪ್ರಾರಂಭಗೊಳ್ಳುತ್ತದೆ ಎಂಬ ಡಾ.ಎಸ್.ರಾಧಾಕೃಷ್ಣನ್ ಅವರ ಮಾತು ನಿಜವಾಗಿ ಸತ್ಯ ಎಂಬುದನ್ನು ಮರೆಯಬಾರದು. ಆಡಿದ ಮಾತು ಹರಿಯುವ ನೀರು ಸುಲಭವಾಗಿ ಹರಿದು ಹೋಗುತ್ತದೆ. ಆದ್ದರಿಂದ ಆಡುವ ಮಾತು ತೂಕ ತಾಳ್ಮೆ ತಪ್ಪಬಾರದು. ಶ್ರೀ ಜಗದ್ಗುರು ರೇಣುಕಾಚಾರ್ಯರ ಆದರ್ಶ ಜೀವನ ದರ್ಶನ ಮೌಲ್ಯಗಳನ್ನು ಬಿತ್ತುತ್ತಾ ರಂಭಾಪುರಿ ಬೆಳಗು ಮೂವತ್ತು ವರ್ಷಕ್ಕೂ ಮಿಕ್ಕಿ ಜನಮನದ ಕೊಳೆಯನ್ನು ಕಳೆಯುತ್ತಾ ಬಂದಿದೆ. ಎಂದು ಹರುಷ ವ್ಯಕ್ತ ಪಡಿಸಿದರು.

ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಕುಲಪತಿಗಳಾದ ವಿದ್ವಾನ್ ವಿರುಪಾಕ್ಷ ದೇವರು ಗಂವ್ಹಾರ. ಶ್ರೀ ಪೀಠದ ಲೆಕ್ಕಾಧಿಕಾರಿ ಡಿ.ಸಂಕಪ್ಪ, ಚಂದ್ರಶೇಖರ, ಚನ್ನವೀರಸ್ವಾಮಿ, ರವಿ, ಬಸಯ್ಯ ಮತ್ತು ಶಿವಕುಮಾರ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕ ವೀರೇಶ ಕುಲಕರ್ಣಿ ನಿರೂಪಿಸಿದರು.


ಸಿ.ಎಚ್. ಬಾಳನಗೌಡ್ರ
ವಾರ್ತಾ ಸಂಯೋಜನಾಧಿಕಾರಿ,
ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ,
ಬಾಳೆಹೊನ್ನೂರು

Related Articles

ಪ್ರತಿಕ್ರಿಯೆ ನೀಡಿ

Latest Articles