ಬಾಗಿ ನಮಿಸುವೆ ರಘೋತ್ತಮ ತೀರ್ಥರೆ
ಸಾಗಿ ಬಂದು ಸಲಹಿರಿ ಗುರುವರ್ಯರೆ
ರಘುನಾಥತೀರ್ಥರ ಪ್ರೀತಿಯ ಶಿಷ್ಯರೆ
ಜಗದ್ಗುರು ಮಧ್ವರ ಕೃಪೆ ಪಡೆದವರೆ
ತಿರುಕೊಯಿಲೂರಿನಲ್ಲಿ ನೆಲೆನಿಂತವರೆ
ಪರಮಕಾರುಣ್ಯರೆ ಭಾವಬೋಧರೆ
ಪರಿಪೂರ್ಣ ಜ್ಞಾನವನ್ನು ಕೊಟ್ಟ ಶ್ರೇಷ್ಠರೆ
ಸರಿಯಾದ ಅರ್ಥಗಳ ತಿಳಿಸಿದವರೆ
ಮಣ್ಣೂರಿನ ಸುಬ್ಬಾಭಟ್ಟರ ಮಗನಾಗಿ
ಅಣ್ಣನ ಕೃಪೆಯಿಂದ ಗಂಗಾಬಾಯಿಯಲ್ಲಿ ಜನಿಸಿ
ಕಣ್ಣು ಬಿಡುವ ಮುನ್ನ ಮಠಕೆ ಬಂದು ಸೇರುತ
ತಣ್ಣನೆ ನೈವೇದ್ಯದ್ಹಾಲ ಕುಡಿದು ಬೆಳೆಯುತ
ಏಳು ವರುಷಕೆ ಉಪನಯನ ಸಂಸ್ಕಾರವು
ಬಳಿಕ ಎಂಟು ವರುಷಕೆ ಸನ್ಯಾಸ ದೀಕ್ಷೆಯು
ಹೊಳೆವ ಯತಿಗೆ ಆದ್ಯ ವರದಾಚಾರ್ಯರಲ್ಲಿ ಪಾಠವು
ಬೆಳೆವ ಮೊದಲೆ ಪೀಠದ ಜವಾಬ್ದಾರಿಯು
ಹದಿನಾಲ್ಕನೆ ಪೀಠಾಧಿಪತಿ ನೀವು ಆದಿರಿ
ಆದ್ಯರಲ್ಲಿ ವಿದ್ಯಾಭ್ಯಾಸ ಮುನ್ನಡೆಸಿದಿರಿ
ಅದ್ಯರಿಂದ ಅಗೌರವ ಶ್ರೀಪೀಠಿಕೆ ಆಗಲು
ಮುದದಿ ರಘುನಾಥ ತೀರ್ಥರ ಬೇಡಿಕೊಂಡಿರಿ
ಕರುಣಾಮಯಿ ಗುರುವರ್ಯರು ಆಗ ಬಂದರು
ಪರಮದಯದಿ ಸ್ವರ್ಣಾಕ್ಷರ ಜಿಹ್ವೆಲಿ ಬರೆದರು
ಪರಿಪೂರ್ಣ ಜ್ಞಾನವನ್ನು ಧಾರೆ ಎರೆದರು
ಪರಮ ಜ್ಞಾನ ಕಾರ್ಯಕ್ಕೆ ಸಿದ್ಧಮಾಡಿದರು
ಬರೆದಿರಿ ಭಾವಬೋಧ ಗ್ರಂಥಗಳನು
ಸರಿಯಾಗಿ ವಿವರಿಸುವ ಟೀಕೆಗಳನು
ಬರುವ ಜಿಜ್ಞಾಸುಗಳಿಗೆ ಅರ್ಥಾರ್ಥವನು
ಸರಿಮಾಡಿ ಪರಿಹರಿಸುತ ಪ್ರಶ್ನೆಗಳನು
ಮೂವತ್ತೊಂಬತ್ತು ವರುಷ ಮಠವ ನಡೆಸುತ
ಭಾವಬೋಧರೆಂದೆ ಪ್ರಖ್ಯಾತರಾಗುತ
ನೋವಿಲ್ಲದೆ ನಡೆದಿರಿ ಧ್ಯಾನಸ್ಥರಾಗುತ
ಭುವಿಯಲಿ ಬೃಂದಾವನ ನಮಗಾಗಿ ಬಿಡುತ
ಅಮಾನುಷ ಶಕ್ತಿಯಿಂದ ಪೊರೆಯುತಲಿಹಿರಿ
ಸಮಾನವಿಲ್ಲದ ಸಾಧನೆ ಮಾಡಿರುವಿರಿ
ಸಾಮಾನ್ಯರ ಕಷ್ಟವ ಪರಿಹರಿಸುವಿರಿ
ರಮಾಪತಿ ಸಿರಿಹರಿಗೆ ಪ್ರಿಯರಾಗಿಹಿರಿ