ಸಂಸ್ಕಾರ ಸಾಧನೆಯಿಂದ ವ್ಯಕ್ತಿತ್ವ ವಿಕಸನ : ಶ್ರೀ ರಂಭಾಪುರಿ ಜಗದ್ಗುರು

ರಂಭಾಪುರಿ ಪೀಠ (ಬಾಳೆಹೊನ್ನೂರು): ಮನುಷ್ಯನಿಗೆ ವ್ಯಕ್ತಿತ್ವದಿಂದ ಗೌರವ ಘನತೆಗಳು ಪ್ರಾಪ್ತವಾಗುತ್ತವೆ. ವ್ಯಕ್ತಿತ್ವ ವಿಕಸನಗೊಳ್ಳಲು ಸಂಸ್ಕಾರ ಸಾಧನೆ ಅತ್ಯಂತ ಅವಶ್ಯಕವೆಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.


ಅವರು ಶ್ರೀ ರಂಭಾಪುರಿ ಪೀಠದಲ್ಲಿ ಜರುಗಿದ ಹುಣ್ಣಿಮೆ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.


ಸತ್ಕಾರ್ಯಕ್ಕೆ ಪ್ರೇರೇಪಣೆ ನೀಡುವುದೇ ಸುವಿಚಾರ. ಅನ್ಯಾಯ ಅಧರ್ಮಕ್ಕೆ ಪ್ರೋತ್ಸಾಹಿಸುವುದು ಅಪಚಾರ. ಸದಾ ಒಳ್ಳೆಯ ಕಾರ್ಯದಲ್ಲಿ ತೊಡಗಿಸಿಕೊಂಡು ಕಾರ್ಯ ನಿರ್ವಹಿಸುವುದೆ ಸದಾಚಾರ. ಮನೆಯ ಸಿರಿವಂತಿಕೆ ನಾಗರಿಕತೆಯ ಸಂಕೇತ. ಮನದ ಸಿರಿವಂತಿಕೆ ಸಂಸ್ಕೃತಿಯ ಸಂಕೇತ. ಕಾಯಕದಿಂದ ಕಳಾ ಚೈತನ್ಯ ದೊರಕುವುದೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿಯಲ್ಲಿ ಬೋಧಿಸಿದ್ದಾರೆ. ಜಾತಿ ಮತ ಪಂಥಗಳನ್ನು ಮೀರಿ ವಿಶ್ವ ಬಂಧುತ್ವದ ನೆಲೆಗಟ್ಟಿನ ಮೇಲೆ ಆರೋಗ್ಯ ಪೂರ್ಣ ಸಮಾಜ ಕಟ್ಟಿ ಬೆಳೆಸಬೇಕೆಂದರು.


ಇದೇ ಸಂದರ್ಭದಲ್ಲಿ ಚಿಕ್ಕಮಗಳೂರಿನ ಶ್ರೀ ಜಗದ್ಗುರು ರೇಣುಕಾಚಾರ್ಯ ಟ್ರಸ್ಟಿನ ಉಪಾಧ್ಯಕ್ಷರನ್ನಾಗಿ ಸುಪ್ರಸಿದ್ಧ ಕಾಫೀ ಬೆಳೆಗಾರರಾದ ಎ.ಬಿ. ಸುದರ್ಶನ ಅವರನ್ನು ನಿಯುಕ್ತಿಗೊಳಿಸಿ ಶಾಲು ಫಲ ಪುಷ್ಪವಿತ್ತು ಶುಭ ಹಾರೈಸಿದರು. ಧಾರವಾಡ ಜಿಲ್ಲೆ ಹಳೇ ಹುಬ್ಬಳ್ಳಿಯಿಂದ ಆಗಮಿಸಿದ ನೂರಾರು ಸದ್ಭಕ್ತರು ತಮ್ಮಲ್ಲಿಗೆ ಆಗಮಿಸಲು ಬಿನ್ನಹ ಪತ್ರವನ್ನು ಸಮರ್ಪಿಸಿದರು. ಉಪ್ಪಳ್ಳಿ ಬಸವರಾಜ, ಶ್ರೀನಿವಾಸ ರೆಡ್ಡಿ, ಬೆಂಗಳೂರು ಹಾಲ್ಜೇನು ವೀರಭದ್ರಯ್ಯ, ಹುಬ್ಬಳ್ಳಿ ಅಜ್ಜಪ್ಪ ಮಟ್ಟಿ ಬಸವಲಿಂಗಪ್ಪ ಲಕ್ಕುಂಡಿ ಇನ್ನೂ ಹಲವಾರು ಗಣ್ಯರು ಪಾಲ್ಗೊಂಡಿದ್ದರು.

ಕೂಡ್ಲಿಗೆರೆ ಎಂ. ನಾಗರಾಜಪ್ಪ ಅಗಲಿಕೆಗೆ ಶ್ರೀ ರಂಭಾಪುರಿ ಜಗದ್ಗುರುಗಳ ಸಂತಾಪ
ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದ ಭದ್ರಾವತಿ ತಾಲೂಕ ಕೂಡ್ಲಿಗೆರೆ ಎಂ.ನಾಗರಾಜಪ್ಪ ಇವರ ಅಗಲಿಕೆಗೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.


ಧಾರ್ಮಿಕ ಪ್ರವೃತ್ತಿಯವರಾದ ಎಂ. ನಾಗರಾಜಪ್ಪ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಶ್ರೀ ಜಗದ್ಗುರು ರಂಭಾಪುರಿ ಪೀಠದ ಮೇಲೆ ಅತ್ಯಂತ ಶ್ರದ್ಧಾ ಮನೋಭಾವ ಹೊಂದಿದ ಅವರು ಶ್ರೀ ರಂಭಾಪುರಿ ಜಗದ್ಗುರುಗಳಿಗೆ ಆತ್ಮೀಯರಾಗಿದ್ದರು. ಅವರÀ ಅಗಲಿಕೆ ದು:ಖವನ್ನುಂಟು ಮಾಡಿದೆ. ಅಗಲಿದ ಅವರ ಪವಿತ್ರ ಆತ್ಮಕ್ಕೆ ದಯಾಘನನಾದ ಪರಮಾತ್ಮನು ಚಿರಶಾಂತಿ ನೀಡಲಿ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಶ್ರೀ ಜಗದ್ಗುರು ರೇಣುಕಾಚಾರ್ಯರು ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಅವರ ಕುಟುಂಬ ವರ್ಗದವರಿಗೆ ನೀಡಲಿ ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ತಮ್ಮ ಸಂತಾಪ ಸೂಚಿಸಿದ್ದಾರೆ.

ವರದಿ: ಸಿ.ಎಚ್. ಬಾಳನಗೌಡ್ರ
ವಾರ್ತಾ ಸಂಯೋಜನಾಧಿಕಾರಿ,
ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ,
ಬಾಳೆಹೊನ್ನೂರು

Related Articles

ಪ್ರತಿಕ್ರಿಯೆ ನೀಡಿ

Latest Articles