ಹಬ್ಬದ ಆಚರಣೆ ಮೂಲಕ ಪ್ರಕೃತಿಯಲ್ಲಿ ದೇವರು, ದೈವವನ್ನು ಕಾಣುವ ಪರಂಪರೆ ನಮ್ಮದು. ದೀಪಾವಳಿ ಹಬ್ಬವನ್ನು ಪ್ರಕೃತಿಯೊಂದಿಗೇ ಆಚರಿಸುತ್ತಾರೆ. ಅರ್ಥಾತ್ ದೀಪಾವಳಿ ಹಬ್ಬ ಪರಿಸರದೊಂದಿಗೆ ಬಾಂಧವ್ಯ ಬೆಸೆದುಕೊಂಡಿದೆ.
ದೀಪಾವಳಿ ಅಂದರೆ ಕೇವಲ ದೀಪಗಳ ಹಬ್ಬವಲ್ಲ. ಮನಸು ಮನಸುಗಳನ್ನು ಬೆಸೆಯುವ ಹಬ್ಬ. ಹೊರಗಿನ ಕತ್ತಲನ್ನು ಹೋಗಲಾಡಿಸುವ ಬೆಳಕಿನ ಹಬ್ಬದಂತೆ ಕಂಡು ಬಂದರೂ, ಮನಸಿನೊಳಗಿನ ಅಜ್ಞಾನವೆಂಬ ಕತ್ತಲೆಯನ್ನು ಹೋಗಲಾಡಿಸಬೇಕು ಎಂಬುದು ಈ ಆಚರಣೆಯ ಹಿಂದಿರುವ ಅರ್ಥ. ನಾಲ್ಕು ದಿನ ಆಚರಿಸಲ್ಪಡುವ ಬೆಳಕಿನ ಹಬ್ಬದಲ್ಲಿ ವಿವಿಧ ಆಚರಣೆಗಳು ನಡೆಯುತ್ತವೆ. ಅವುಗಳು ಪರಿಸರದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ.
ಹಬ್ಬದ ಆಚರಣೆ ಮೂಲಕ ಪ್ರಕೃತಿಯಲ್ಲಿ ದೇವರು, ದೈವವನ್ನು ಕಾಣುವ ಪರಂಪರೆ ನಮ್ಮದು. ದೀಪಾವಳಿ ಹಬ್ಬವನ್ನು ಪ್ರಕೃತಿಯೊಂದಿಗೇ ಆಚರಿಸುತ್ತಾರೆ. ಅರ್ಥಾತ್ ದೀಪಾವಳಿ ಹಬ್ಬ ಪರಿಸರದೊಂದಿಗೆ ಬಾಂಧವ್ಯ ಬೆಸೆದುಕೊಂಡಿದೆ.
ದೀಪಾವಳಿ ಸಂಭ್ರಮ ಸಡಗರದ ಹಬ್ಬ. ಹೊಸ ಬಟ್ಟೆಧರಿಸಿ, ಪಟಾಕಿ ಸಿಡಿಸಿ, ಸಿಹಿತಿಂಡಿ ಹಂಚಿ ಸಂಭ್ರಮಿಸುತ್ತಾರೆ. ಕಾರ್ತಿಕ ಮಾಸದ ಆಗಮನ, ದುಡಿಮೆಯ ಸಂಕೇತ ಫಲಭರಿತ ಭತ್ತದ ಸಸಿಗಳು, ಬಣ್ಣಬಣ್ಣದ ಹೂಗಳಿಂದ ನಳನಳಿಸುತ್ತಿರುವ ಹೂವಿನ ಗಿಡಗಳು ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡುತ್ತದೆ.
ಅಂತರಂಗದಲ್ಲಿರುವ ಕತ್ತಲೆಯನ್ನೋಡಿಸಿ, ಮನೆ ಮನ ಬೆಳಗುವ ದೀಪಗಳ ಹಬ್ಬ ದೀಪಾವಳಿ. ನರಕಚತುರ್ದಶಿ ದೀಪಾವಳಿಯ ಪ್ರಮುಖ ದಿನ. ತೈಲದಲ್ಲಿ ಲಕ್ಷ್ಮೀದೇವಿ, ನೀರಿನಲ್ಲಿ ಗಂಗೆ ದೀಪಾವಳಿಯ ಚತುರ್ದಶಿಯಂದು ಭುವಿಗೆ ಬರುತ್ತಾರೆ ಎಂಬ ನಂಬಿಕೆ.
ನರಕ ಚತುರ್ದಶಿಯಂದು ಹಬ್ಬದ ಆರಂಭ, ಅಂದೇ ನೀರು ತುಂಬುವ ಹಬ್ಬ, ಸ್ನಾನ ಮಾಡುವ ಹಂಡೆಗೆ ಹೂವಿನ ಹಾರ ಹಾಕಿ ಪೂಜೆ ಸಲ್ಲಿಸುತ್ತಾರೆ. ವಿಷ್ಣು ಪುರಾಣದ ಪ್ರಕಾರ ಶ್ರೀಕೃಷ್ಣನು ಗೋವರ್ಧನಗಿರಿಯನ್ನು ಎತ್ತಿದ್ದು ಪಾಡ್ಯದಂದು. ಹಾಗಾಗಿ ಈ ದಿನ ಗೋಪೂಜೆ ಹಾಗೂ ಗೋವರ್ಧನನ ಪೂಜೆಯನ್ನೂ ಮಾಡುತ್ತಾರೆ. ಬಲೀಂದ್ರ ಪೂಜೆಯ ನಂತರ ಗೋವುಗಳಿಗೆ ಪೂಜೆ (ಗೋಪೂಜೆ) ಸಲ್ಲಿಸುತ್ತಾರೆ. ದೀಪಾವಳಿಯಂದು ವ್ಯಾಪಾರಸ್ಥರು ಲಕ್ಷ್ಮೀ ಪೂಜೆ ಕೈಗೊಳ್ಳುತ್ತಾರೆ. ಹೊಸ ವಸ್ತುವನ್ನು ಖರೀದಿಸುವ ಕ್ರಮ ಇದೆ. ಖರೀದಿಸಿದ ವಸ್ತು ಇಮ್ಮಡಿಯಾಗುತ್ತದೆ ಎಂಬುದು ಒಂದು ನಂಬಿಕೆ.
ದೀಪಾವಳಿ ಕುರಿತಂತೆ ಪೌರಾಣಿಕ ಕಥೆ
ಒಂದು ಐತಿಹ್ಯದ ಪ್ರಕಾರ ಹದಿನಾಲ್ಕು ವರ್ಷಗಳ ವನವಾಸ ಮುಗಿಸಿ ಅಯೋಧ್ಯೆಗೆ ಹಿಂದಿರುಗಿದಾಗ ಬೀದಿಬೀದಿಗಳಲ್ಲಿ ದೀಪಗಳು ಅಲಂಕೃತಗೊಂಡಿರುತ್ತವೆ. ಪ್ರಜೆಗಳು ಬಂಗಾರದ ಕಲಶವನ್ನು ಮಣಿರತ್ನಗಳಿಂದ ಅಲಂಕರಿಸಿ ದೀಪ ಹಚ್ಚಿ ಶ್ರೀರಾಮನನ್ನು ಸ್ವಾಗತಿಸುತ್ತಾರೆ. ಅಂದಿನಿಂದ ಆ ಸಂಭ್ರಮವನ್ನು ದೀಪೋತ್ಸವವಾಗಿ ಆಚರಿಸುತ್ತಾರೆ. ಇನ್ನೊಂದು ಕಥೆಯ ಪ್ರಕಾರ ಭಗವಾನ್ ಶ್ರೀಕೃಷ್ಣನು ನರಕಾಸುರನನ್ನುವಧಿಸಿ ಭೋಗ, ಲೋಭ, ಅನಾಚಾರ ಹಾಗೂ ದುಷ್ಟ ಪ್ರವೃತ್ತಿಯಿಂದ ಆತನನ್ನು ಮುಕ್ತಗೊಳಿಸುತ್ತಾನೆ. ಆ ದಿನವನ್ನು ನರಕ ಚತುರ್ದಶಿ ಎಂದು ಆಚರಣೆ ಮಾಡುತ್ತಾರೆ.
ನರಕ ಚತುರ್ದಶಿ
ಭೂದೇವಿಯ ಮಗನಾದ ನರಕಾಸುರ ಎಲ್ಲ ದೇವತೆಗಳನ್ನು ಎದುರಿಸಿ ಹದಿನಾರು ಸಾವಿರ ಮಂದಿ ಸ್ತ್ರೀಯರನ್ನು ಸೆರೆಯಲ್ಲಿಟ್ಟು ಕಿರುಕುಳ ಕೊಡುತ್ತಾನೆ. ಇದನ್ನರಿತ ಭಗವಾನ್ ಶ್ರೀಕೃಷ್ಣ ನರಕಾಸುರನ್ನು ಕೊಂದು ಎಲ್ಲರನ್ನೂ ರಕ್ಷಿಸುತ್ತಾನೆ. ತನ್ನ ಮಗನ ಸಾವನ್ನು ತಿಳಿದ ಭೂದೇವಿಯ ಅವತಾರವಾದ ಸತ್ಯಭಾಮೆ ತನ್ನ ಮಗ ತೀರಿದ ಆ ದಿನ (ಚತುರ್ದಶಿಯಂದು) ತನ್ನ ಮಗನ ಹೆಸರಲ್ಲಿ ಬೆಳಕಿನ ಹಬ್ಬವನ್ನು ಆಚರಿಸಲಿ ಎಂದಾಗ ಶ್ರೀಕೃಷ್ಣನಲ್ಲಿ ವರವನ್ನು ಬೇಡುತ್ತಾಳೆ. ಅಂದಿನಿಂದ ಆ ದಿನವನ್ನು ನರಕ ಚತುರ್ದಶಿ ಎಂಬುದಾಗಿ ಆಚರಿಸಲಾಗುತ್ತದೆ
ಲಕ್ಷ್ಮೀ ಪೂಜೆ
ಅಮವಾಸ್ಯೆಯ ದಿನ ಲಕ್ಷ್ಮೀ ಪೂಜೆ ಮಾಡುತ್ತಾರೆ. ಧನ ಹಾಗೂ ಭಾಗ್ಯ ದೇವತೆಯಾದ ಲಕ್ಷ್ಮೀ ದೇವಿಯು ಭೂಮಿಗೆ ಆಗಮಿಸುತ್ತಾಳೆ ಹಾಗೂ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆ ಎಂಬುದು ಜನರ ನಂಬಿಕೆ. ದಿನಪೂರ್ತಿ ಎಣ್ಣೆದೀಪವನ್ನು(ಹಣತೆ) ಬೆಳಗುತ್ತಾರೆ. ಗೂಡುದೀಪಗಳಿಂದ ಅಲಂಕರಿಸುತ್ತಾರೆ. ದೇವಿಯು ಸಂತೃಪ್ತಳಾಗಿ ತಮ್ಮ ಮನೆಯಲ್ಲಿ ನೆಲೆಸಲಿ ಎಂಬ ಬಯಕೆಯಿಂದ ಸಾಲು ದೀಪ ಹಚ್ಚಿ ಮನೆಯನ್ನು ಅಲಂಕರಿಸಿ ಲಕ್ಷ್ಮೀಯನ್ನು ಸ್ವಾಗತಿಸುತ್ತಾರೆ. ಕೆಟ್ಟ ಶಕ್ತಿಯನ್ನು ಧ್ವಂಸ ಮಾಡುವ ಸಲುವಾಗಿ ಪಟಾಕಿ ಸಿಡಿಸುತ್ತಾರೆ.
ನೀರು ತುಂಬುವ ಹಬ್ಬ
ದೀಪಾವಳಿ ಸಂದರ್ಭದಲ್ಲಿ ಭತ್ತದ ಕೃಷಿ ಕಾರ್ಯ ಮುಗಿದಿರುತ್ತದೆ. ಗದ್ದೆಗಳಲ್ಲಿ ಬೆಳೆದು ನಿಂತ ಪೈರನ್ನು ಕಟಾವು ಮಾಡುವ ಸಮಯ. ಭತ್ತದ ಮೊಕ್ಕು ರೈತನ ಮೈಗಟ್ಟಿರುವುದರಿಂದ ಚರ್ಮದ ಅಲರ್ಜಿ ಉಂಟಾಗುತ್ತದೆ. ಹಾಗಾಗಿ ಮೈಗೆ ಎಣ್ಣೆ ಹಚ್ಚಿ ನಂತರ ಬಿಸಿ ನೀರಿನಿಂದ ಸ್ನಾನ ಮಾಡುತ್ತಿದ್ದರು. ಆ ಕ್ರಮ ಪದ್ಧತಿಯಾಗಿ ಬೆಳೆದು ಬಂದಿರಬಹುದು. ನರಕಚತುರ್ದಶಿಯಂದು ವಿಶೇಷವಾಗಿ ಅಭ್ಯಂಗ ಸ್ನಾನ ಮಾಡುವ ಕ್ರಮ ಇದೆ.
ಗೋ ಪೂಜೆ
ಪೌರಾಣಿಕ ಕಥೆಯ ಪ್ರಕಾರ ಲಕ್ಷ್ಮಿ ಗೋ ರೂಪ ಧರಿಸಿ ಬಂದಾಗ ಪಾರ್ವತಿ ಪೂಜಿಸಿದಳಂತೆ. ಆದ್ದರಿಂದ ಗೋಪೂಜೆಗೆ ವಿಶೇಷ ಮಹತ್ವ. ಗೋವುಗಳಲ್ಲಿ ಲಕ್ಷ್ಮಿ ನೆಲೆಸಿದ್ದಾಳೆ ಎಂಬುದು ನಂಬಿಕೆ.
ಬಲೀಂದ್ರನಿಗೆ ಪೂಜೆ ಸಲ್ಲಿಸಿದ ಬಳಿಕ ಗೋವುಗಳಿಗೆ ಪೂಜೆ ಮಾಡುತ್ತಾರೆ. ಸಾತ್ವಿಕ ಗುಣವನ್ನು ಹೊಂದಿರುವುದರಿಂದ ಗೋಮಾತೆಗೆ ಪೂಜೆ ಮಾಡಿ ಸಾತ್ವಿಕ ಗುಣವನ್ನು ಕರುಣಿಸುವಂತೆ ಬೇಡುತ್ತಾರೆ. ಗೋವುಗಳಿಗೆ ಹೂವಿನ ಹಾರ ಹಾಕಿ, ಹಣೆಗೆ ಶ್ರೀಗಂಧದ ತಿಲಕವಿಟ್ಟು, ಶೋಬಾನೆ ಹಾಡುತ್ತಾ ಆರತಿ ಬೆಳಗುತ್ತಾರೆ. ನಂತರ ದೀಪಾವಳಿಗೆಂದು ಮಾಡಿದ ಸಿಹಿ ಖಾದ್ಯ, ಬಾಳೆಹಣ್ಣು, ಅವಲಕ್ಕಿ, ಬೆಲ್ಲವನ್ನು ತಿನ್ನಿಸುತ್ತಾರೆ.
ತೆನೆತುಂಬುವ ಹಬ್ಬ (ಮನೆ ತುಂಬಿಸುವುದು)
ಗದ್ದೆಗಳಲ್ಲಿ ಬೆಳೆದು ನಿಂತ ಪೈರಿನಲ್ಲಿ ಒಂದು ಹಿಡಿ (ಭತ್ತದ ತೆನೆಯನ್ನು) ತಂದು ದೇವರ ಮನೆಯಲ್ಲಿಟ್ಟು ಪೂಜಿಸುತ್ತಾರೆ. ನಂತರ ಅದನ್ನು ಮನೆಯ ಬಾಗಿಲು, ಹೊಸ್ತಿಲು, ದೇವರ ಕೋಣೆಯಲ್ಲಿ, ಕಿಟಕಿ, ಮಂಚ, ದನದ ಕೊಟ್ಟಿಗೆ ಹೀಗೆ ಎಲ್ಲ ಕಡೆ ಕಟ್ಟಲಾಗುತ್ತದೆ. ಕರಾವಳಿ ಭಾಗದಲ್ಲಿ ಹೆಚ್ಚಾಗಿ ಆಚರಣೆಯಲ್ಲಿರುವ ಈ ಕ್ರಮವನ್ನು ಮನೆತುಂಬಿಸುವುದು ಎಂದು ಕರೆಯುತ್ತಾರೆ. `ತೆನೆ’ ಸಮೃದ್ಧಿಯನ್ನು ಸಂಕೇತಿಸುತ್ತದೆ. ವರ್ಷಪೂರ್ತಿ ಮನೆ ತುಂಬಾ ಸಮೃದ್ಧಿ ಬರಲಿ ಎಂಬ ಆಶಯದೊಂದಿಗೆ ಈ ಆಚರಣೆಯನ್ನು ನೆರವೇರಿಸುತ್ತಾರೆ.