ಮುನವಳ್ಳಿ: ನಮ್ಮ ಸಂಸ್ಕೃತಿ ಅನುಭಾವಿಗಳಿಂದ ಕೂಡಿದೆ. ವೇದ ಉಪನಿಷತ್ಭ, ಭಗವದ್ಗೀತೆಯಂತಹ ಪಠಣ ಮತ್ತು ಅವುಗಳ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ದೋಗಿ ಮುನವಳ್ಳಿಯ ಶ್ರೀ ನಿತ್ಯಾನಂದ ಸತ್ಸಂಗ ಆಶ್ರಮದ ಶ್ರೋತ್ರೀಯ ಬ್ರಹ್ಮನಿಷ್ಠ ಸದ್ಗುರು ಮುಕ್ತಾನಂದ ಪೂಜ್ಯರು ನುಡಿದರು.
ಮುನವಳ್ಳಿಯ ಅನ್ನದಾನೇಶ್ವರ ಪಿ.ಯು.ಕಾಲೇಜ್ ಮೈದಾನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಇತ್ತೀಚೆಗೆ ನಡೆದ ಸಂಕ್ರಾಂತಿ ಉತ್ಸವ ಹಾಗೂ ಶ್ರೀ ರಾಮ ಶಾಖೆಯ ವಾರ್ಷಿಕೋತ್ಸವ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.
ನಮ್ಮ ಸಂಸ್ಕೃತಿಯಲ್ಲಿ ಪ್ರತಿಯೊಂದು ಹಬ್ಬಗಳಿಗೂ ವೈಜ್ಞಾನಿಕ ಹಿನ್ನಲೆಯಿದೆ. ಹಬ್ಬಗಳಂದು ಮಾಡುವ ಅಡುಗೆಯಲ್ಲಿಯೂ ಕೂಡ ಶರೀರದ ಸ್ವಾಸ್ತ್ಯವನ್ನು ಕಾಪಾಡುವ ಗುಣವಿದೆ. ನಮ್ಮ ಅಡುಗೆ ಮನೆಯಲ್ಲಿ ವೈದ್ಯಕೀಯ ತತ್ವಗಳಿವೆ. ಮೂಲ ಪರಂಪರೆಯನ್ನು ನಾವು ಉಳಿಸಿದರೆ ಭಾರತ ವಿಶ್ವಗುರು ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬೆಳಗಾವಿ ವಿಭಾಗದ ಬೌದ್ಧಿಕ ಪ್ರಮುಖ ಹಾಗೂ ವೀರವಾಣಿ ಮರಾಠಿ ವಾರಪತ್ರಿಕೆಯ ಸಂಪಾದಕರಾದ ರಾಮಚಂದ್ರ ಏಡಕೆ ಮಾತನಾಡಿ, “ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ ಉದ್ದೇಶ ಸಂಘದ ಇತಿಹಾಸ ಕುರಿತು ತಿಳಿಸುತ್ತ ಕಿತ್ತೂರು ಚನ್ನಮ್ಮ ಸಂಗೊಳ್ಳಿ ರಾಯಣ್ಣ ಅಮಟೂರ ಬಾಳಣ್ಣನಂತಹ ಬ್ರಿಟಿಷರ ಹೋರಾಟಗಾರರ ಇತಿಹಾಸವನ್ನು ಇಂದಿನ ಪೀಳಿಗೆಗೆ ತಿಳಿಸಬೇಕು. ನಮ್ಮ ದೇಶ ನಮ್ಮ ಸಂಸ್ಕೃತಿಯ ಅರಿವನ್ನು ನಮ್ಮ ಹಬ್ಬ ಹರಿದಿನಗಳ ಆಚರಣೆಗಳ ಮೂಲಕ ತಿಳಿಸುವ ಜೊತೆಗೆ ಎಲ್ಲರೂ ಸಂಸ್ಕೃತಿಯ ಆಚರಣೆಯನ್ನು ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಭಾರತದ ಸನಾತನ ಧರ್ಮವನ್ನು ಉಳಿಸಬೇಕು” ಎಂದು ಕರೆ ನೀಡಿದರು.
ಮುನವಳ್ಳಿ ಸೋಮಶೇಖರ ಮಠದ ಮುರುಘೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ, “ಮೊದಲು ದೇಶ ಮುಖ್ಯ ನಮ್ಮ ಭಾರತೀಯ ಸಂಸ್ಕೃತಿ ತಾಯಿಗೆ ವಿಶಿಷ್ಟ ಸ್ಥಾನವನ್ನು ನೀಡಿದೆ. ಅದಕ್ಕೆ ನಾವು ಮಾತೃದೇವೋಭವ ಎಂಬುದನ್ನು ಇಂದಿಗೂ ಅನುಸರಿಸಿಕೊಂಡು ಬಂದಿರುವುದು. ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ. ಎದ್ದೊಂದು ಗಳಿಗೆ ನೆನೆದೇನ ಭೂತಾಯಿ” ಎನ್ನುವುದು ಕೂಡ ನಮ್ಮ ಮಾತೃಭೂಮಿಗೆ ನಾವು ನೀಡುವ ಗೌರವವಾಗಿದೆ. ಈ ದಿಸೆಯಲ್ಲಿ ಸಂಕ್ರಾಂತಿ ಹಬ್ಬದ ಮೌಲ್ಯವನ್ನು ತಿಳಿಸುವ ಈ ಕಾರ್ಯಕ್ರಮ ಮಹತ್ವದ್ದಾಗಿದೆ”ಎಂದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ದಂಡ, ನಿಯುದ್ಧ, ಆಟ, ಗೀತ ಸಂಚಲನ ಶಾರೀರಿಕ ಪ್ರದರ್ಶನಗಳು ಜರುಗಿದವು, ಅಮೃತವಚನವನ್ನು ಸಂತೋಷ ಪಾಟೀಲ ಹೇಳಿದರು. ವೈಯುಕ್ತಿಕ ಗೀತೆಯನ್ನು ಸುನೀಲ ನಲಗೆ ಪಂಚು ಈಟಿ ಹೇಳಿದರು.
ಮುನವಳ್ಳಿ ಹೋಬಳಿಯ ಕಾರ್ಯವಾಹ ಪಂಚಾಕ್ಷರಿ ಅಷ್ಟಗಿಮಠ ವಂದಿಸಿದರು.