ಮುನವಳ್ಳಿ: ಮಾನಸಿಕ ನೆಮ್ಮದಿ ಸಂಸ್ಕಾರಕ್ಕೆ ಅಧ್ಯಾತ್ಮ ಪ್ರವಚನ ಮುಖ್ಯ. ಮನೆಯಲ್ಲಿ ನಾವು ಜ್ಯೋತಿ ಬೆಳಗಿಸುತ್ತೇವೆ. ಓಣಿಯಲ್ಲಿ ಬೀದಿ ದೀಪಗಳು ಬೆಳಗುತ್ತವೆ. ಹಡೆದ ತಾಯಿ ನಮಗೆ ಸಂಸ್ಕಾರದ ಜ್ಯೋತಿಯನ್ನು ಬೆಳಗುವಳು. ಒಂದು ಪುಟ್ಟ ಹಣತೆ ಎಣ್ಣೆಯ ಮೂಲಕ ಕೇವಲ ಬೆಳಕು ಅಥವ ಸೌಂದರ್ಯವನ್ನಷ್ಟೇ ಕೊಡುವುದಿಲ್ಲ, ಅದು ಸಂಸ್ಕಾರವನ್ನು ನೀಡುತ್ತದೆ’ ಎಂದು ಗುಳೇದಗುಡ್ಡದ ಶ್ರೀ ಒಪ್ಪತ್ತೇಶ್ವರ ಮಠದ ಶ್ರೀ ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ ನುಡಿದರು.
ಅವರು ಮುನವಳ್ಳಿಯ ಸೋಮಶೇಖರ ಮಠದಲ್ಲಿ ಪೂಜ್ಯ ಶ್ರೀ ಲಿಂ.ಬಸವಲಿಂಗ ಮಹಾಸ್ವಾಮಿಗಳವರ 66ನೇ ಪುಣ್ಯಸ್ಮರಣೋತ್ಸವದ ನಿಮಿತ್ತ ಜರುಗಿದ ಅಧ್ಯಾತ್ಮ ಪ್ರವಚನದ ಪ್ರಾರಂಭೋತ್ಸವ ಸಮಾರಂಭ ದಲ್ಲಿ ಸಂಸ್ಕಾರದ ಕುರಿತು ಪ್ರವಚನ ನೀಡಿದರು.
“ಶರಣರು ಸಾಧು ಸಂತರು ದಾರ್ಶನಿಕರು ಮಠ ಮಾನ್ಯಗಳ ಮೂಲಕ ಅನ್ನದಾನ ವಿದ್ಯಾದಾನ ಸಂಸ್ಕಾರಯುತ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದರಿಂದ ಸನಾತನ ಧರ್ಮದ ಸಂಸ್ಕೃತಿ ಇಂದಿಗೂ ಉಳಿದಿದೆ. ಅಂತಹ ಕಾರ್ಯದ ಮೂಲಕ ಮುನವಳ್ಳಿಯ ಶ್ರೀ ಸೋಮಶೇಖರ ಮಠದ ಹಿಂದಿನ ಪೀಠಾಧಿಪತಿಗಳಾಗಿದ್ದ ಬಸವಲಿಂಗ ಸ್ವಾಮಿಗಳು ಸ್ವಾತಂತ್ರ್ಯ ಚಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಆದರ್ಶಪ್ರಾಯರಾಗಿರುವರು ಎಂದು ವಿಧಾನಸಭಾ ಉಪಸಭಾಧ್ಯಕ್ಷ, ಶಾಸಕ ಆನಂದ ಮಾಮನಿ ಅಭಿಪ್ರಾಯಪಟ್ಟರು.
ಕಟಕೋಳದ ಸಹಸ್ರಮಾನರತ್ನ ಪ್ರಶಸ್ತಿ ಪುರಸ್ಕೃತ ಟಿ.ಪಿ.ಮನೋಳಿ ಮಾತನಾಡಿ “ಮುನವಳ್ಳಿ ಸೋಮಶೇಖರ ಮಠ ಐತಿಹಾಸಿಕ ಪ್ರಸಿದ್ಧ ಪಡೆದ ಮಠ. ಮುರುಘೇಂದ್ರ ಸ್ವಾಮಿಗಳು ಶ್ರೀ ಮಠಕ್ಕೆ ಪೀಠಾಧಿಪತಿ ಗಳಾದ ನಂತರ ಸರ್ವಧರ್ಮ ಸಮನ್ವಯ ತಾಣವಾಗಿ ಗುರುಪರಂಪರೆ ಮುಂದುವರೆಸಿಕೊಂಡು ಶೈಕ್ಷಣಿಕ ಸಾಮಾಜಿಕ ಧಾರ್ಮಿಕ ಕ್ರಾಂತಿಯ ಹರಿಕಾರ ರಾಗಿ ಮಠದ ಪರಂಪರೆ ಬೆಳಗಿಸುತ್ತಿರುವರು” ಎಂದು ಶ್ರೀ ಮಠದ ಕಾರ್ಯಗಳ ಕುರಿತು ಶ್ಲಾಘಿಸಿದರು.
ಗೊರವನಕೊಳ್ಳದ ಶಿವಾನಂದ ಸ್ವಾಮಿಗಳು ಮಾತನಾಡಿ “ಎಲ್ಲವನ್ನು ಸಹಿಸುವ ಗುಣ ಯಾರಲ್ಲಿರುವುದೋ ಅವರಲ್ಲಿ ಎಲ್ಲವನ್ನು ಎದುರಿಸುವ ಶಕ್ತಿ ಇರುತ್ತದೆ. ಸಂಸ್ಕಾರವಂತ ಸದ್ಗುಣಿಯಾಗಿ ಬದುಕಿ ಬಾಳಲು ಗುರು ಮಾರ್ಗದರ್ಶನ ಅವಶ್ಯಕ. ಸೂರ್ಯನಿಂದ ಕತ್ತಲೆ ಗುರುವಿನಿಂದ ಅಜ್ಞಾನ ದೂರವಾಗುತ್ತದೆ.ಈ ದಿಸೆಯಲ್ಲಿ ಪುಣ್ಯಸ್ಮರಣೋತ್ಸವ ಅಧ್ಯಾತ್ಮ ಪ್ರವಚನ ಮೂಲಕ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳವರು ಮಹತ್ವ ಕಾರ್ಯ ಕೈಗೊಳ್ಳುವ ಮೂಲಕ ಮಾದರಿಯಾಗಿರುವರು” ಎಂದರು.
“ಶರಣರು ಬಾಳಿದ ರೀತಿ-ನೀತಿಗಳು ಅವರ ನಡೆ ನುಡಿಗಳು ಹಾಗೂ ಅವರುಗಳು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಯಾರೂ ಮರೆಯಬಾರದು ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿರಬೇಕು” ಎಂದು ಸವದತ್ತಿಯ ಬಿದರಿ ಕಲ್ಮಠದ ಶ್ರೀ ಶಿವಲಿಂಗ ಸ್ವಾಮೀಜಿಯವರು ನುಡಿದರು.
ಇದೇ ಸಂದರ್ಭ ಗುರುನಾಥ ಕುಲಕರ್ಣಿ ಪೂಜಾ ಕುಲಕರ್ಣಿ ಚಿನ್ಮಯಾನಂದ ಪತ್ತಾರ ಅಭಿವೃದ್ಧಿಪಡಿಸಿದ ಸೋಮಶೇಖರ ಮಠದ ವೆಬ್ಸೈಟ್ ಲೋಕಾರ್ಪಣೆಗೊಳಿಸಲಾಯಿತು.
ಶ್ರೀ ಮುರುಘೆಂದ್ರ ಮಹಾಸ್ವಾಮಿಗಳು ನೇತೃತ್ವದಲ್ಲಿ ಜರುಗುತ್ತಿರುವ ಅಧ್ಯಾತ್ಮ ಪ್ರವಚನದ ವೇದಿಕೆಯಲ್ಲಿ ಸವದತ್ತಿಯ ಬಿದರಿ ಕಲ್ಮಠದ ಶ್ರೀ ಶಿವಲಿಂಗ ಸ್ವಾಮೀಜಿ, ಮೂಲಿಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಗೊರವನಕೊಳ್ಳದ ಶಿವಾನಂದ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಟಕೋಳದ ಸಹಸ್ರಮಾನರತ್ನ ಪ್ರಶಸ್ತಿ ಪುರಸ್ಕೃತ ಟಿ.ಪಿ.ಮನೋಳಿ. ಪುಂಡಲೀಕ ಹೊನ್ನಪ್ಪ ಮೇಟಿ.ಯರಗಟ್ಟಿಯ ರಾಜೇಂದ್ರ ವಾಲಿ ಮೊದಲಾದವರು ಉಪಸ್ಥಿತರಿದ್ದರು.
ಪ್ರವಚನದ ಪ್ರಸಾದ ಸೇವೆಯನ್ನು ಮಲ್ಲಿಕಾರ್ಜುನ ರಡರಟ್ಟಿ ಭಕ್ತಿ ಸೇವೆಯ ಮೂಲಕ ಕೈಗೊಂಡಿದ್ದರು.ಮುನವಳ್ಳಿಯ ಆರ್. ಎಸ್. ಎಸ್ ಶಾಖೆಯವರು ಮಾಸ್ಕ್ ವಿತರಿಸುವ ಮೂಲಕ ಕೋವಿಡ್ ನಿಯಮಾವಳಿ ಪಾಲಿಸಲು ಕ್ರಮ ಕೈಗೊಂಡರು. ಮಹಾ ಮಂಗಳಾರತಿ ಮೂಲಕ ಪ್ರವಚನ ಸಂಪನ್ನಗೊಂಡಿತು.
ಕಾರ್ಯಕ್ರಮದ ಪ್ರಾರಂಭದಲ್ಲಿ ಶಿಕ್ಷಕ ಬಿ.ಬಿ.ಹುಲಿಗೊಪ್ಪ ಸ್ವಾಗತಿಸುವ ಮೂಲಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಂಗಾಧರ ಗೋರಾಬಾಳ ನಿರೂಪಿಸಿದರು.