ರಂಭಾಪುರಿ ಪೀಠ (ಬಾಳೆಹೊನ್ನೂರು): ಕಾಲಿಗೆ ಆದ ಗಾಯ ಹೇಗೆ ನಡೆಯಬೇಕು. ಮನಸ್ಸಿಗೆ ಆದ ಗಾಯ ಹೇಗೆ ಬದುಕಬೇಕೆಂದು ಕಲಿಸುತ್ತದೆ. ಸಾಧನೆಗೆ ಸಹನೆ ನಿಜವಾದ ಮೆಟ್ಟಿಲು. ಸಾಧನೆ ನಿರಂತರವಾಗಿದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಶ್ರೀ ರಂಭಾಪುರಿ ಪೀಠದಲ್ಲಿ ಜರುಗಿದ ತಮ್ಮ ಪೀಠಾರೋಹಣ 31ನೇ ವರ್ಷದ ವರ್ಧಂತಿ ಮಹೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಸತ್ಯ ಸೂರ್ಯನಂತೆ ಮೋಡದಲ್ಲಿ ಸ್ವಲ್ಪ ಕಾಲ ಕಾಣದಂತಾಗಬಹುದು. ಆದರೆ ಅದರ ಪ್ರಖರತೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಬೆಳಕಿಗೆ ಮಹತ್ವ ಬಂದಿದ್ದೇ ಕತ್ತಲೆಯಿಂದ. ಸುಖಕ್ಕೊಂದು ಅರ್ಥ ಬಂದಿದ್ದೇ ಕಷ್ಟದಿಂದ. ಕಷ್ಟ ಸುಖಗಳ ಸಂಮಿಶ್ರಣದಿ0ದ ಬದುಕಿಗೆ ಬೆಲೆ ಬರುತ್ತದೆ. ಶ್ವಾಸ ಇಲ್ಲದಿದ್ದರೆ ಜೀವವಿಲ್ಲ. ವಿಶ್ವಾಸ ಇಲ್ಲದಿದ್ದರೆ ಜೀವನವಿಲ್ಲ. ಆಕಾಶ ತಲುಪುವ ಹಂಬಲವುಳ್ಳ ಗಿಡ ತನ್ನ ಬೇರುಗಳನ್ನು ಆಳಕ್ಕೆ ಇಳಿಸಬೇಕಾಗುತ್ತದೆ. ಅದರಂತೆ ಮನುಷ್ಯ ಉನ್ನತಿಯತ್ತ ಸಾಗಲು ಒಳನೋಟ ಹೆಚ್ಚಿಸಿಕೊಳ್ಳಬೇಕಾಗುತ್ತದೆ. ನೇರವಾಗಿ ಮಾತನಾಡುವವರ ಜೊತೆ ಯಾರೂ ಇರುವುದಿಲ್ಲ. ಬಣ್ಣ ಬಣ್ಣದ ಮಾತಾಡುವವರ ಜೊತೆ ಎಲ್ಲರೂ ಇರುತ್ತಾರೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಪೀಠಾರೋಹಣವಾಗಿ ಇಂದಿಗೆ 30ವರ್ಷಗಳು ಪೂರ್ಣಗೊಂಡು 31ನೇ ವರ್ಷದಲ್ಲಿ ಪಾದಾರ್ಪಣೆ ಮಾಡುತ್ತಿರುವುದು ಸಂತಸದ ಸಂಗತಿ. ಶ್ರೀ ಪೀಠದ ಅಭಿವೃದ್ಧಿ ಮತ್ತು ರಚನಾತ್ಮಕ ಕಾರ್ಯಗಳ ಮೂಲಕ ನಾಡಿನೆಲ್ಲೆಡೆ ಸಂಚರಿಸಿ ಜನ ಜಾಗೃತಿ, ಧರ್ಮ ಪ್ರಜ್ಞೆ ಮತ್ತು ಸ್ವಾಭಿಮಾನ ಬೆಳೆಸಿದ ಸಂತೃಪ್ತಿ ನಮ್ಮದಾಗಿದೆ. ಭವಿಷ್ಯತ್ತಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯ ಹಾಗೂ ಮಹತ್ವ ಪೂರ್ಣ ಯೋಜನೆ ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಂಕಲ್ಪ ಕೈಗೊಂಡಿದ್ದೇವೆ ಎಂದರು.
ರಂಭಾಪುರಿ ಬೆಳಗು ಫೆಬ್ರುವರಿ ಮಾಸ ಪತ್ರಿಕೆಯನ್ನು ಅ.ಭಾ.ವೀ.ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಹೆಚ್.ಎಂ. ಲೋಕೇಶ ಬಿಡುಗಡೆ ಮಾಡಿ ಮಾತನಾಡಿದರು.
ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಮತ್ತು ಮಳಲಿ ಮಠದ ಡಾ.ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಶ್ರೀ ರಂಭಾಪುರಿ ಜಗದ್ಗುರುಗಳ ಕ್ರಿಯಾಶೀಲ ಬದುಕು ಮತ್ತು ಸಾಧಿಸಿದ ಕೆಲಸ ಕಾರ್ಯಗಳ ಬಗೆಗೆ ಮಾತನಾಡಿದರು.
ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮಿಗಳು, ಬೇರುಗಂಡಿ ಬೃಹನ್ಮಠದ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮಿಗಳು, ಮಹಾರಾಷ್ಟç ರಾಜ್ಯದ ಪಾತರಿ ಹಿರೇಮಠದ ಕಾಶೀನಾಥ ಶಿವಾಚಾರ್ಯ ಸ್ವಾಮಿಗಳು ಉಪಸ್ಥಿತರಿದ್ದರು. ಶಿವಮೊಗ್ಗದ ಎಸ್.ಹೆಚ್. ಸಿದ್ಧಣ್ಣ, ಆಸಂದಿ ರುದ್ರಯ್ಯ, ಹುಬ್ಬಳ್ಳಿಯ ವೀರೇಶ ಪಾಟೀಲ, ಚಿಕ್ಕಮಗಳೂರು ಜಿಲ್ಲಾ ಪತ್ರಕರ್ತ ಸಂಘದ ಅಧ್ಯಕ್ಷ ರಾಜಶೇಖರ, ಪ್ರಭುಲಿಂಗಶಾಸ್ತಿç ಚಿಕ್ಕೊಳಲೆ, ಬೆಂಗಳೂರಿನ ಬಾಳಯ್ಯ, ಐ.ಟಿ.ಐ.ಕಾಲೇಜಿನ ಪ್ರಾಚಾರ್ಯ ಆನಂದ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಸದಾನಂದ ಮೊದಲಾದವರು ಪಾಲ್ಗೊಂಡಿದ್ದರು.
ಆಲ್ದೂರಿನ ಬಿ.ಬಿ. ರೇಣುಕಾಚಾರ್ಯರು ಸ್ವಾಗತಿಸಿದರು. ಚಿಕ್ಕಮಗಳೂರಿನ ಪಾರ್ವತಿ ಮಹಿಳಾ ಅಭಿವೃದ್ಧಿ ಮಂಡಳದ ಮಹಿಳಾ ಸದಸ್ಯರಿಂದ ಪ್ರಾರ್ಥನಾ ಗೀತೆ ನೆರವೇರಿತು. ಶಿವಮೊಗ್ಗದ ಶಾಂತಾ ಆನಂದ ನಿರೂಪಿಸಿದರು. ಎಂ. ದಯಾನಂದ ಅವರು ದಾಸೋಹ ಸೇವೆ ನೆರವೇರಿಸಿ ಶ್ರೀ ರಂಭಾಪುರಿ ಜಗದ್ಗುರುಗಳಿಂದ ಆಶೀರ್ವಾದ ಪಡೆದರು.
ಬೆಳಗಿನ ಜಾವ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ. ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿಗೆ, ಶ್ರೀ ಸೋಮೇಶ್ವರ ಮಹಾಲಿಂಗಕ್ಕೆ ಮತ್ತು ಶಕ್ತಿ ಮಾತೆ ಚೌಡೇಶ್ವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಪೂಜೆ ಸಲ್ಲಿಸಿದರು.
ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಕುಲಪತಿ ಗಂವ್ಹಾರ ಹಿರೇಮಠದ ವಿರೂಪಾಕ್ಷ ದೇವರು, ಶಿವಪ್ರಕಾಶ ಶಾಸ್ತಿçಗಳು, ರೇಣುಕಸ್ವಾಮಿ, ದಾನಯ್ಯಸ್ವಾಮಿ, ಬಸಯ್ಯಸ್ವಾಮಿ ಮೃತ್ಯುಂಜಯ ಹೋಮ ವಿಶೇಷ ಪೂಜೆ ನೆರವೇರಿಸಿದರು.
ವರದಿ: ಸಿ.ಎಚ್. ಬಾಳನಗೌಡ್ರ
ವಾರ್ತಾ ಸಂಯೋಜನಾಧಿಕಾರಿ,
ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ,