ಶ್ರೀ ಯಾದವೇಂದ್ರತೀರ್ಥರ ಆರಾಧನೆಯು ಮಾಘ ಶುಕ್ಲ ಚತುರ್ದಶಿಯಿಂದ ಹುಣ್ಣಿಮೆ ಮತ್ತು ಕೃಷ್ಣಪಕ್ಷದ ಪಾಡ್ಯದವರೆಗೆ ಮೂರು ದಿನಗಳು ನಡೆಯುತ್ತದೆ.
– ಜಯಭೀಮ ಜೋಶಿ, ಶಿವಮೊಗ್ಗ
ಯದನುಗ್ರಹ ಮಾತ್ರೇಣ ಪೂರ್ಣೋಹಂ ಸರ್ವ ಸಂಪದಾ/ಯಾದವೇಂದ್ರ ಮನಿಶಮ್ ವಂದೇ ವಿದ್ಯಾಗುರುಂ ಸದಾ//
ಶ್ರೀ ಯಾದವೇಂದ್ರತೀರ್ಥರು ಮಹಾ ವೈರಾಗ್ಯಶಾಲಿಗಳು. ಇವರು ಶ್ರೀ ಸುಧೀಂದ್ರ ತೀರ್ಥಗುರುಗಳ ಪೂರ್ವಾಶ್ರಮದ ಸೋದರಳಿಯಂದಿರು. ಇವರು ಶ್ರೀ ಸುಧೀಂದ್ರ ತೀರ್ಥರ ಕರಕಮಲಸಂಜಾತರು. ಪೂರ್ವಾಶ್ರಮದಲ್ಲಿ ಶ್ರೀ ಸುಧೀಂದ್ರತೀರ್ಥರಿಗೆ ತಮಗೆ ಸನ್ಯಾಸದೀಕ್ಷೆಯನ್ನು ಬೋಧಿಸಬೇಕೆಂದು ಬಹಳಸಾರಿ ನಿವೇದಿಸಿಕೊಂಡಿದ್ದಾರೆ.
ಬಾಲ್ಯದಿಂದಲೇ ಜ್ಞಾನ,ಭಕ್ತಿ ವೈರಾಗ್ಯಗಳ ಕಡೆಗೆ ಒಲವು ಹೊಂದಿದ್ದವರು ಶ್ರೀ ಯಾದವೇಂದ್ರತೀರ್ಥರು. ಬಹಳ ಸಲ ಶ್ರೀ ಸುಧೀಂದ್ರತೀರ್ಥರಲ್ಲಿ ಯಾದವೇಂದ್ರರು ಸನ್ಯಾಸದೀಕ್ಷೆ ಬೋಧಿಸುವಂತೆ ವಿನಂತಿ ಮಾಡಿದ್ದರೂ ಶ್ರೀಗಳವರು ಮನಸ್ಸು ಮಾಡಿರುವುದಿಲ್ಲ. ಒಂದು ದಿನ ಯಾದವೇಂದ್ರರು ಶ್ರೀ ಸುಧೀಂದ್ರ ತೀರ್ಥರಲ್ಲಿ ಬಂದು ತಮಗೆ ಸನ್ಯಾಸ ದೀಕ್ಷೆಯನ್ನು ಕೊಟ್ಟು ಮುಂದಿನ ಸಾಧನೆಗೆ ಅನುಗ್ರಹ ಮಾಡಬೇಕೆಂದು ಪ್ರಾರ್ಥಿಸುತ್ತಾರೆ.
ಶ್ರೀ ಸುಧೀಂದ್ರತೀರ್ಥರು ಇವರಿಗೆ ವೈರಾಗ್ಯದಿಂದ ಸನ್ಯಾಸಿಯಾಗಲು ಬಯಸಿದ್ದಾರೋ ಅಥವಾ ಸಂಸ್ಥಾನದ ಅಧಿಪತ್ಯವನ್ನು ಬಯಸಿ ದೀಕ್ಷೆ ಕೇಳುತ್ತಿದ್ದಾರೋ? ಎಂದು ಕೇಳುತ್ತಾರೆ. ಯಾದವೇಂದ್ರರು ಮಹಾಸಂಸ್ಥಾನದ ಅಧಿಪತ್ಯ ತಮಗೆ ಖಂಡಿತವಾಗಿಯೂ ಬೇಡ, ಸಾಧನೆ ಮಾಡುವ ಉದ್ದೇಶದಿಂದ ಸನ್ಯಾಸ ತೆಗೆದುಕೊಳ್ಳುತ್ತಿದ್ದೇನೆ ಎಂದು ವಿನಮ್ರತೆಯಿಂದ ಶ್ರೀಗಳವರಿಗೆ ಹೇಳುತ್ತಾರೆ.
ಸಾಧನೆಗಾಗಿಯೇ ಸನ್ಯಾಸದೀಕ್ಷೆಯನ್ನು ಯಾದವೇಂದ್ರರು ಬಯಸಿದ್ದಾರೆಂಬುದನ್ನು ತಿಳಿದ ಶ್ರೀಸುಧೀಂದ್ರ ತೀರ್ಥರು ಸನ್ಯಾಸದೀಕ್ಷೆ ಬೋಧಿಸುತ್ತಾರೆ. ಶ್ರೀಯಾದವೇಂದ್ರರು ಕೆಲವು ಕಾಲ ಶ್ರೀ ಸುಧೀಂದ್ರತೀರ್ಥರ ಮಾರ್ಗದರ್ಶನದಲ್ಲಿ ಶ್ರೀಮೂಲರಾಮದೇವರ ಪೂಜಾಕಾರ್ಯದಲ್ಲಿ ಭಾಗವಹಿಸಿ ತೀರ್ಥಯಾತ್ರೆಗೆ ಹೊರಡುತ್ತಾರೆ.
ಸುಮಾರು 10 ವರ್ಷಗಳಕಾಲ ನಿರಂತರ ಮಧ್ವಸಿದ್ಧಾಂತವನ್ನು ಪ್ರಚುರಪಡಿಸುತ್ತಾ ಜೊತೆಯಲ್ಲಿ ಶಿಷ್ಯರಿಗೆ ಪಾಠ ಪ್ರವಚನಗಳನ್ನು ಮಾಡುತ್ತಿರುತ್ತಾರೆ. ಸಂಚಾರ ಮಾಡುತ್ತಾ ಕುಂಭಕೋಣಂಗೆ ಶ್ರೀಯಾದವೇಂದ್ರರು ಬರುತ್ತಾರೆ. ಇಲ್ಲಿ ಸುಧೀಂದ್ರ ತೀರ್ಥರಿಂದ ಆಶ್ರಮ ಶಿಷ್ಯರಾಗಿ ಸಂಸ್ಥಾನಾಧಿಪತ್ಯವನ್ನು ವಹಿಸಿಕೊಂಡ ಶ್ರೀರಾಘವೇಂದ್ರತೀರ್ಥರು ಕುಂಭಕೋಣಂನಲ್ಲಿರುತ್ತಾರೆ.ಯಾದವೇಂದ್ರರು ಕುಂಭಕೋಣಂಗೆ ಬರುವ ಸುದ್ದಿತಿಳಿದ ಶ್ರೀರಾಘವೇಂದ್ರತೀರ್ಥರು ಶ್ರೀಯಾದವೇಂದ್ರತೀರ್ಥರಿಗೆ ಬಹಳ ವೈಭವದಿಂದ ಸ್ವಾಗತಿಸುತ್ತಾರೆ. ಆಶ್ರಮ ಜ್ಯೇಷ್ಠರಾದ ಯಾದವೇಂದ್ರರಿಗೆ ಸಂಸ್ಥಾನಾಧಿಪತ್ಯವನ್ನು ವಹಿಸಿಕೊಂಡು ಮುಂದುವರೆಸಿಕೊಂಡು ಬರಬೇಕೆಂತ ವಿನಂತಿಸುತ್ತಾರೆ. ಶ್ರೀರಾಘವೇಂದ್ರತೀರ್ಥರ ಈ ಮಾತಿಗೆ ಸಮ್ಮತಿಸದ ಶ್ರೀಯಾದವೇಂದ್ರರು ಶ್ರೀ ರಾಘವೇಂದ್ರತೀರ್ಥರೇ ಸಮರ್ಥರಾದವರು ಎಂದು ಹೇಳಿ ಸಂಸ್ಥಾನವನ್ನು ಮುಂದುವರೆಸಿಕೊಂಡು ಹೋಗಬೇಕೆಂತ ಅವರಿಗೆ ಹೇಳುತ್ತಾರೆ.
ಶ್ರೀರಾಘವೇಂದ್ರತೀರ್ಥರ ಅಪೇಕ್ಷೆಯಂತೆ ಆ ದಿನ ಶ್ರೀಮನ್ಮೂಲರಾಮಚಂದ್ರ ದೇವರನ್ನು ಪೂಜಿಸಿ ತಮಗೆ ಶ್ರೀ ಸುಧೀಂದ್ರತೀರ್ಥರು ಆಶೀರ್ವದಿಸಿ ಕೊಟ್ಟಿದ್ದ ಗರುಡವಾಹನ ರೂಢರಾದ ಲಕ್ಷ್ಮೀನಾರಾಯಣ ದೇವರ ಪ್ರತಿಮೆಯನ್ನು ಶ್ರೀ ರಾಘವೇಂದ್ರತೀರ್ಥರಿಗೆ ಒಪ್ಪಿಸಿ ಅಲ್ಲಿ ವಿರಾಜಮಾನರಾಗಿರುವ ತಮ್ಮ ಪರಮಗುರುಗಳಾದ ಶ್ರೀವಿಜಯೀಂದ್ರತೀರ್ಥಗುರುಗಳ ಬೃಂದಾವನ ದರ್ಶನಕ್ಕೆ ಹೋಗುತ್ತಾರೆ. ಮುಂದೆ ನವವೃಂದಾವನದಲ್ಲಿರುವ ಅವರ ಆಶ್ರಮಗುರುಗಳಾದ ಶ್ರೀ ಸುಧೀಂದ್ರತೀರ್ಥ ಗುರುಗಳ ಬೃಂದಾವನ ದರ್ಶನ ಮಾಡುತ್ತಾರೆ.
ಶ್ರೀಗಳವರು ಭಾಗವತ ವ್ಯಾಖ್ಯಾನ ಮತ್ತು ನ್ಯಾಯಾಮೃತ ವ್ಯಾಖ್ಯಾನ ಎನ್ನುವ ಗ್ರಂಥಗಳನ್ನು ರಚಿಸಿದ್ದಾರೆಂದು ತಿಳಿದು ಬರುತ್ತದೆ. ಸಂಚಾರ ಮಾಡುತ್ತಾ ಶ್ರೀಗಳವರು ತೆಲಂಗಾಣ ರಾಜ್ಯದ ಕೃಷ್ಣಾ ನದೀತೀರದಲ್ಲಿರುವ ಮೂಡುಮಾಲೆ ಎನ್ನುವ ಊರಿನಲ್ಲಿ ಬೃಂದಾವನಸ್ಥರಾಗುತ್ತಾರೆ.
ಅವರ ಆರಾಧನೆಯು ಮಾಘ ಶುಕ್ಲ ಚತುರ್ದಶಿಯಿಂದ ಹುಣ್ಣಿಮೆ ಮತ್ತು ಕೃಷ್ಣಪಕ್ಷದ ಪಾಡ್ಯದವರೆಗೆ ಮೂರು ದಿನಗಳು ನಡೆಯುತ್ತದೆ. ಅವರ ಉತ್ತರಾರಾಧನಾ ದಿನದಂದು ಭಕ್ತಿಯ ನಮನಗಳನ್ನು ಸಲ್ಲಿಸಿ ಅವರ ಅನುಗ್ರಹಕ್ಕೆ ಪಾತ್ರರಾಗೋಣ.