(ಮಾರ್ಚ್ 9, ಗುರುಗಳ ವರ್ಧಂತಿ ಪ್ರಯುಕ್ತ)
– ಜಯಭೀಮ ಜೋಯಿಸ್, ಶಿವಮೊಗ್ಗ
ಶ್ರೀ ರಾಯರು ತಾವು ವೃಂದಾವನವನ್ನು ಪ್ರವೇಶಿಸುವ ಸಮಯ ಸಮೀಪಿಸಿದಾಗ ತಮ್ಮ ಶಿಷ್ಯ ವೆಂಕಣ್ಣನನ್ನು ಕರೆದು ಮಂತ್ರಾಲಯದ ಸಮೀಪವಿರುವ ಮಾಧವಾವರಂನಲ್ಲಿರುವ ಶಿಲೆಯಿಂದ ತಮಗೆ ವೃಂದಾವನ ನಿರ್ಮಾಣ ಮಾಡುವಂತೆ ತಿಳಿಸುತ್ತಾರೆ. ವೆಂಕಣ್ಣಪಂತನು ಶ್ರೀರಾಯರ ಪರಮಾಪ್ತ ಶಿಷ್ಯರಲ್ಲೊಬ್ಬನಾಗಿರುತ್ತಾನೆ. ವೆಂಕಣ್ಣನು ಆಶ್ಚರ್ಯದಿಂದ ಗುರುಗಳನ್ನು ಇಲ್ಲೇ ಬೇಕಾದಷ್ಟು ಶಿಲೆ ದೊರೆಯುತ್ತಿರುವಾಗ ಮಾಧವಾವರಂನಲ್ಲಿರುವ ಶಿಲೆಯನ್ನೇ ಏಕೆ ರಾಯರು ಆಯ್ಕೆ ಮಾಡಿಕೊಂಡರು ಎಂದು ಕೇಳುತ್ತಾರೆ. ಶ್ರೀ ರಾಯರು ತಾವು ಏಕೆ ಆ ಶಿಲೆಯನ್ನು ಆಯ್ಕೆ ಮಾಡಿಕೊಂಡರೆಂಬುದನ್ನು ವೆಂಕಣ್ಣನಿಗೆ ತಿಳಿಸುತ್ತಾರೆ.
ಹಿಂದೆ ತ್ರೇತಾಯುಗದಲ್ಲಿ ಶ್ರೀ ರಾಮಚಂದ್ರ ದೇವರು ಸೀತಾಮಾತೆಯ ಜೊತೆಗೂಡಿ ಅರಣ್ಯಸಂಚಾರ ಮಾಡುತ್ತಾ ಬಂದಾಗ ಈ ಶಿಲೆಯ ಮೇಲೆ ಏಳು ಘಳಿಗೆಗಳ ಕಾಲ ಕುಳಿತು ವಿಶ್ರಮಿಸಿಕೊಂಡಿದ್ದರು.ಆ ಶಿಲೆಯು ಶ್ರೀರಾಮನಪಾದ ಸ್ಪರ್ಷದಿಂದ ಪಾವನವಾಗಿದೆ. ಮುಂದೆ ನಾನು (ಶ್ರೀರಾಯರು)ಆ ವೃಂದಾವನದಲ್ಲಿದ್ದು 700 ವರ್ಷಗಳ ಕಾಲ ನನ್ನ ಜೀವಿತಾವಧಿಯಿರುತ್ತೆ. ಅದು ಬಹಳ ಪವಿತ್ರವಾದ ಶಿಲೆಯಾದ್ದರಿಂದ ನಾವು ಪ್ರವೇಶ ಮಾಡುವ ವೃಂದಾವನವು ಆ ಶಿಲೆಯಿಂದಲೇ ನಿರ್ಮಾಣವಾಗಬೇಕೆಂತ ನಮ್ಮ ಅಪೇಕ್ಷೆಯಾಗಿರುತ್ತೆ ಎಂತ ಶ್ರೀರಾಯರು ತಿಳಿಸುತ್ತಾರೆ.
ಈಗಾಗಲೇ ನಿರ್ಮಾಣಗೊಂಡಿರುವ ವೃಂದಾವನಕ್ಕೆ ತಮ್ಮ ನಂತರ ಪೀಠಕ್ಕೆ ಬರುವ ಶ್ರೀವಾದೀಂದ್ರರಿಗೆ ಮೀಸಲಿರಲಿ ಎಂತ ಹೇಳುತ್ತಾರೆ. ಶ್ರೀಗಳವರ ಆಜ್ಞಾನುಸಾರ ಶಿಷ್ಯ ವೆಂಕಣ್ಣನವರು ಶ್ರೀರಾಮ ದೇವರು ಸ್ಪರ್ಷ ಮಾಡಿದ ಶಿಲೆಯಿಂದ ವೃಂದಾವನ ನಿರ್ಮಿಸಿದ ನಂತರ ಶ್ರೀರಾಘವೇಂದ್ರ ಗುರುಸಾರ್ವಭೌಮರು ಶ್ರೀ ವಿರೋಧಿಕೃತ್ ಸಂವತ್ಸರದ ಶ್ರಾವಣ ಮಾಸದ ಕೃಷ್ಣಪಕ್ಷದ ಬಿದಿಗೆಯಂದು ಸಶರೀರರಾಗಿ ವೃಂದಾವನ ಪ್ರವೇಶ ಮಾಡಿದರು. ಶ್ರೀರಾಯರಿಗೆ ವೃಂದಾವನ ಮಾಡಿ ಉಳಿದ ಶಿಲೆಯಿಂದ ಶ್ರೀ ಪ್ರಾಣದೇವರ ವಿಗ್ರಹವನ್ನು ನಿರ್ಮಿಸಿ ಅದನ್ನು ಶ್ರೀರಾಯರ ವೃಂದಾವನದ ಮುಂಭಾಗದಲ್ಲಿ ಪ್ರತಿಷ್ಠಾಪಿಸಲಾಗಿದೆ. ಶ್ರೀರಾಯರ ಪಕ್ಕದಲ್ಲಿರುವ ವೃಂದಾವನದಲ್ಲಿ ಸನ್ನಿಹಿತರಾಗಿರುವವರೇ ಶ್ರೀವಾದೀಂದ್ರತೀರ್ಥ ಶ್ರೀಪಾದಂಗಳವರು. ತಿ
ಳಿದವರು ಹೇಳಿದಂತೆ ನಾವು ಮಂತ್ರಾಲಯ ಕ್ಷೇತ್ರಕ್ಕೆ ಹೋದಾಗ ನಮ್ಮ ಇಷ್ಟಾರ್ಥಗಳನ್ನು ಈಡೇರಿಸಲು ಶ್ರೀರಾಯರಲ್ಲಿ ಪ್ರಾರ್ಥನೆ ಸಲ್ಲಿಸುವಾಗ, ಶ್ರೀವಾದೀಂದ್ರ ತೀರ್ಥರಲ್ಲಿಯೂ ಮೊದಲು ಇಷ್ಟಾರ್ಥಗಳನ್ನು ಈಡೇರಿಸಿಕೊಡುವಂತೆ ಪ್ರಾರ್ಥಿಸುವುದಲ್ಲದೆ ಶ್ರೀರಾಯರಿಂದ ನಾವು ಬೇಡಿಕೊಂಡ ಇಷ್ಟಾರ್ಥವನ್ನು ಅನುಗ್ರಹಿಸುವಂತೆ ದಯೆತೋರುವಂತೆ ಅವರಲ್ಲಿ ಪ್ರಾರ್ಥಿಸಿದರೆ , ಭಕ್ತರ ಇಷ್ಟಾರ್ಥಗಳು ಶೀಘ್ರವಾಗಿ ನೆರವೇರುತ್ತದೆಂಬ ದೃಢವಾದ ನಂಬಿಕೆಯಿದೆ. \