ತುಮಕೂರು: ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಧಾರ್ಮಿಕ ಪ್ರಜ್ಞೆ ಜಾಗೃತಿಯಾಗಿದೆ ಎಂದು ಸೋಸಲೆ ಶ್ರೀ ವ್ಯಾಸರಾಜರ ಮಠದ ಶ್ರೀ ವಿದ್ಯಾಶ್ರೀಶ ತೀರ್ಥ ಶ್ರೀಪಾದಂಗಳವರು ಹೇಳಿದರು.
ನಗರದ ಚಿಕ್ಕಪೇಟೆಯಲ್ಲಿರುವ ಶ್ರೀ ವ್ಯಾಸರಾಜರ ಮಠದಲ್ಲಿ ಚಾತುರ್ಮಾಸ್ಯ ಸಮಿತಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಭಾಗವತ ಮಂಗಳ ಮಹೋತ್ಸವದಲ್ಲಿ ಅವರು ತುಲಾಭಾರ ಸ್ವೀಕರಿಸಿ ಆಶೀರ್ವಚನ ನೀಡಿದರು.
46 ದಿನಗಳ ಚಾತುರ್ಮಾಸ್ಯ ಸಂದರ್ಭ ಯುವಕರೇ ಹೆಚ್ಚಾಗಿ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಇಂದು ಅನೇಕರು ಯುವಕರಿಗೆ ಧರ್ಮಪ್ರಜ್ಞೆ ಇಲ್ಲವೆಂದು ಟೀಕಿಸುತ್ತಾರೆ. ಆದರೆ ಅದು ಸುಳ್ಳು. ಯುವ ಸಮುದಾಯದಲ್ಲಿ ಇತ್ತೀಚಿನ ದಶಕದದಲ್ಲಿ ದೇಶ, ಧರ್ಮ ಮತ್ತು ಧಾರ್ಮಿಕ ಆಚರಣೆ ಬಗ್ಗೆ ವಿಶೇಷ ಆಸಕ್ತಿ ಬೆಳೆಯುತ್ತಿದೆ. ಇದು ಕೇವಲ ಆ ಯುವಕ, ಯುವತಿಯರ ಉದ್ಧಾರಕ್ಕೆ ಮಾತ್ರವಲ್ಲದೇ ನಮ್ಮ ನಾಡಿನ ಅಭ್ಯುದಯದ ಬಹುದೊಡ್ಡ ಸಂಕೇತವಾಗಿದೆ ಎಂದವರು ಶ್ಲಾಘಿಸಿದರು.
ಹಿರಿಯರು ಮತ್ತು ಗುರು ಸ್ಥಾನದಲ್ಲಿರುವವರು ಯುವ ಸಮುದಾಯಕ್ಕೆ ಹೆಚ್ಚಿನ ಜವಾಬ್ದಾರಿ ನೀಡಬೇಕು. ಹಿಂದೆ ಇದ್ದು ಯುವ ಪಡೆಗೆ ಉತ್ತೇಜನ ನೀಡಿ ಧಾರ್ಮಿಕ ಮತ್ತು ಸಾಂಸ್ಕೃತಿಕ ರಂಗದಲ್ಲಿ ಅವರು ಬೆಳೆಯುವಂತೆ ಪ್ರೇರಣೆ ನೀಡಬೇಕು. ಆಗ ಮಾತ್ರ ಸನಾತನ ಭಾರತೀಯ ಹಿಂದು ಧರ್ಮ, ಮಧ್ವಮತ, ಶ್ರೀಮದ್ ಆನಂದತೀರ್ಥರ ತತ್ವ, ವಿಚಾರ ಮತ್ತು ಹಾಕಿಕೊಟ್ಟ ಸಂಪ್ರದಾಯಗಳು ಮುಂದಿನ ಪೀಳಿಗೆಗೆ ಉಳಿಯುತ್ತದೆ ಎಂದು ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಸಲಹೆ ನೀಡಿದರು.
ತಾಯಂದಿರ ಕೊಡುಗೆ ಅಪಾರ:
ಮನೆ, ಮನೆಯಲ್ಲಿ ಧರ್ಮ ಉಳಿಯಬೇಕು ಎಂದರೆ ಅದಕ್ಕೆ ತಾಯಂದಿರು, ಮಾತೆಯರ ಕೊಡುಗೆ ಅಪಾರವಾಗಿದೆ. ಚಾತುರ್ಮಾಸ ಅವಧಿಯಲ್ಲಿ ನೂರಾರು ಮಾತೆಯರು ಸೇವೆ ಸಲ್ಲಿಸಿದ್ದಾರೆ. ಅವರೆಲ್ಲರ ಮನೆಗಳು, ವಂಶಗಳು ಬೆಳಗಲಿ ಎಂದು ಸ್ವಾಮೀಜಿ ಹಾರೈಸಿದರು.
ಮರುತಾಚಾರ್ಯ ನೇಮಕ:
ಇದೇ ಸಂದರ್ಭ ವಿದ್ವಾನ್ ಮರುತಾಚಾರ್ಯ ಅವರನ್ನು ತುಮಕೂರು ವ್ಯಾಸರಾಜರ ಮಠದ ಪೀಠಾಧಿಕಾರಿಯನ್ನಾಗಿ ಶ್ರೀಗಳು ಘೋಷಣೆ ಮಾಡಿ ಅವರಿಗೆ ಗೌರವಾರ್ಪಣೆ ಮಾಡಿದರು. ಮಠದ ದಿವಾನರಾದ ವಿದ್ವಾನ್ ಬ್ರಹ್ಮಣ್ಯಾಚಾರ್, ಬಲಸೇವೆ ಕೃಷ್ಣಾಚಾರ್, ಚಾತುರ್ಮಾಸ ಸಮಿತಿ ಪ್ರಮುಖರಾದ ಜಯಸಿಂಹರಾವ್, ಕೌಶಿಕ್ ಸಿಂಹ, ಎಲ್.ಎಂ. ಕೃಷ್ಣ, ಹರೀಶ್, ಸತ್ಯನಾರಾಯಣ ರಾವ್, ವಸುಧಾ ಇತರರು ಹಾಜರಿದ್ದರು.
ದೇವರಾಯನ ದುರ್ಗಕ್ಕೆ ಸೀಮೋಲ್ಲಂಘನ:
ಚಾತುರ್ಮಾಸ್ಯ ಸೀಮೋಲ್ಲಂಘನ ಅಂಗವಾಗಿ ಶ್ರೀ ವಿದ್ಯಾಶ್ರೀಶ ತೀರ್ಥರು ಸಮೀಪದ ದೇವರಾಯನ ದುರ್ಗ ಮತ್ತು ಸೀಬಿ ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀ ನರಸಿಂಹ ದೇವರ ದರ್ಶನ ಪಡೆದರು. ನೂರಾರು ಭಕ್ತರು ಇದಕ್ಕೆ ಸಾಕ್ಷಿಯಾದರು.
- ತುಮಕೂರಿನ ಚಿಕ್ಕಪೇಟೆಯ ಶ್ರೀ ವ್ಯಾಸರಾಜರ ಮಠದಲ್ಲಿ ಸೋಸಲೆ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಅವರಿಗೆ ನಾಣ್ಯ-ಧಾನ್ಯ ತುಲಾಭಾರ ನೆರವೇರಿತು. ಪಂಡಿತ ಬ್ರಹ್ಮಣ್ಯಾಚಾರ್ಯ, ಬಲಸೇವೆ ಕೃಷ್ಣಾಚಾರ್ಯ, ಕೌಶಿಕ್ ಸಿಂಹ, ಎಲ್.ಎಂ. ಕೃಷ್ಣ, ಹರೀಶ್, ಸತ್ಯನಾರಾಯಣ ರಾವ್ ಹಾಜರಿದ್ದರು.
- ತುಮಕೂರಿನ ಚಿಕ್ಕಪೇಟೆಯ ಶ್ರೀ ವ್ಯಾಸರಾಜರ ಮಠದಲ್ಲಿ ಚಾತುರ್ಮಾಸ್ಯ ಸೇವೆ ಸಲ್ಲಿಸಿದ ಮಾತೆಯರ ತಂಡದೊ0ದಿಗೆ ಸೋಸಲೆ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ.