ನಮ್ಮ ನಾಡು ಕರ್ನಾಟಕ ಭಿನ್ನತೆಯಲ್ಲಿ ಏಕತೆಯನ್ನು ಸಾರುವ ಸಂದೇಶವನ್ನು ನೀಡುತ್ತದೆ. ಅಂತಹ ವಿಶಿಷ್ಟ ಸಂಸ್ಕೃತಿ ನಮ್ಮದು. ರಾಜ್ಯದ ಗಡಿಜಿಲ್ಲೆಗಳ ಬಗ್ಗೆ ಅಲ್ಲಿನ ವಿಶೇಷತೆಗಳ ಬಗ್ಗೆ ಇಲ್ಲಿ ಸಂಕ್ಷಿಪ್ತವಾಗಿ ಮಾಹಿತಿ ಹಂಚಿಕೊ0ಡಿದ್ದಾರೆ ಚಿಂತಕ ಧಾರವಾಡದ ಹನುಮೇಶ್. ಜಿ ಮಳಗಿ ಅವರು
ಕರ್ಣಾಟಕದ ಭೌಗೋಳಿಕವನ್ನು ಕಾಲ್ಪನಿಕವಾಗಿ ನಾಲ್ಕು ಭಾಗಗಳನ್ನಾಗಿ ಮಾಡಲಾಗಿದೆ. ಉತ್ತರ ಕರ್ಟಾಟಕ ದಕ್ಷಿಣ ಕರ್ಣಾಟಕ ಮಧ್ಯ ಕರ್ಣಾಟಕ ಹಾಗೂ ಕರಾವಳೀ ಕರ್ಣಾಟಕ. ಗಡಿರಾಜ್ಯಗಳ ಜಿಲ್ಲೆಗಳು ಈ ನಾಲ್ಕೂ ಭಾಗಗಳಲ್ಲಿವೆ. ಕಳೆದ ಮೂರು ಸಂಚಿಕೆಗಳಲ್ಲಿ ಈ ಗಡಿಜಿಲ್ಲೆಗಳ ಪ್ರವಾಸ ಮಾಡಿದ್ದೆವು. ಕರ್ನಾಟಕದ ಒಳನಾಡಿನ ಜಿಲ್ಲೆಗಳೂ ಅದ್ಭತಗಳ ಸಾಗರವೇ ವೇಷ ಭಾಷೆ, ಆಹಾರ ಮಾತಿನ ಧಾಟಿ, ಐತಿಹಾಸಿಕ ಮಹತ್ವ ಸಾಧಕರು ಸಂಗೀತ ಸಾಹಿತ್ಯ ಕಲೆ ಎಲ್ಲವೂ ಅದ್ಭುತ… ಈಗ ಅವುಗಳ ಬಗ್ಗೆಯೂ ತಿಳಿದುಕೊಳ್ಳಲು ಪ್ರವಾಸ ಮಾಡೋಣ.
೧. ಧಾರವಾಡ ಜಿಲ್ಲೆಯು ಕರ್ಣಾಟಕದ ಸಾಂಸ್ಕೃತಿಕ ರಾಜಧಾನಿ ಎಂದೇ ಪ್ರಸಿದ್ಧಿ ಪಡೆದಿದೆ. ಧಾರವಾಡ ಪೇಡಾ, ದ ರಾ ಬೇಂದ್ರೆ ಧಾರವಾಡದ ಕಿರೀಟಗಳಿದ್ದಂತೆ. ಯಾರಾದರೂ ಸುಮ್ಮನೇ ಹೀಗೊಂದು ಕಲ್ಲು ಎಸೆದರೆ ಅದು ಸಾಹಿತಿಯ ಮೇಲೆಯೇ ಬೀಳುತ್ತದೆಂಬ ಮಾತು ಅತಿಶಯೋಕ್ತಿಯಲ್ಲ. ಅಸಂಖ್ಯ ಸಾಹಿತಿಗಳು ಕವಿಗಳು ನಾಟಕಕಾರರು ತುಂಬಿ ತುಳುಕುತ್ತಿದ್ದಾರೆ. ಐತಿಹಾಸಿಕವಾಗಿ ಚಾಲುಕ್ಯರು, ಪೇಶ್ವೇಗಳು, ವಿಜಯನಗರದರಸರು, ಬಹಮನಿಗಳು, ಮೊಘಲರು ಧಾರವಾಡವನ್ನು ಆಳಿದವರು. ಸ್ವಾತಂತ್ರ್ಯ ಹೋರಾಟದಲ್ಲಿ ಅಸಂಖ್ಯ ಜನರು ಧುಮುಕಿದ್ದರು. ವಿದ್ಯಾಕಾಶೀ ಪೇಡಾನಗರಿ ಧಾರಾನಗರೀ ಎಂಬ ಉಪನಾಮಗಳೂ ಪ್ರಸಿದ್ಧ. ಇಲ್ಲಿನ ಜವಾರೀ ಕನ್ನಡ, ಜೋಳದಕಡಕ್ ರೊಟ್ಟಿ ಎಣ್ಣಿಗಾಯಿ ಪಲ್ಯಾ ಜನಪ್ರೀಯ. ಕರ್ಣಾಟಕ ವಿವಿ ಕಾನೂನು ವಿವಿ ಕೃಷಿ ವಿವಿ, ಅಸಂಖ್ಯ ಶಾಲಾ ಕಾಲೇಜುಗಳು… ಸಂಪೂರ್ಣ ಕನ್ನಡಮಯ.
೨. ಗದಗ ಸಾಂಸ್ಕೃತಿಕವಾಗಿ ಅವಿಭಜಿತ ಧಾರವಾಡ ಜಿಲ್ಲೆಯ ಭಾಗ. ಕುಮಾರವ್ಯಾಸ, ಭೀಮಸೇನ್ ಜೋಶೀ, ವೀರನಾರಾಯಣ, ಹುಯಿಲಗೋಳ ನಾರಾಯಣ ರಾವ್, ಆಲೂರು ವೆಂಕಟರಾವ್ ಪುಟ್ಟರಾಜ್ ಗವಾಯಿಗಳು ಗದಗಿನ ಹೆಗ್ಗುರುತು. ಹೊಯ್ಸಳ ಚಾಲುಕ್ಯರಾಳಿದ ನಾಡು. ಡಂಬಳ ಲಕ್ಕುಂಡಿ ಶಿಲ್ಪಕಲಾ ಕ್ಷೇತ್ರಗಳು..ಜೋಳ ಬ್ಯಾಡಗೀ ಮೆಣಸಿನಕಾಯಿಗೆ ಪ್ರಸಿದ್ಧ. ಸಂಪೂರ್ಣ ಕನ್ನಡಮಯ.
೩. ಹಾವೇರಿ ಸಾಂಸ್ಕೃತಿಕವಾಗಿ ಅವಿಭಜಿತ ಧಾರವಾಡ ಜಿಲ್ಲೆಯ ಭಾಗ…ದಾರ್ಶನಿಕ ಕನಕದಾಸರು ಸರ್ವಜ್ಞ ಕವಿ, ಕಾದಂಬರಿಕಾರ ಗಳಗನಾಥರ ಬೀಡು. ಇಲ್ಲಿ ತಯ್ಯಾರಾಗುವ ಏಲಕ್ಕೀ ಹಾರಗಳಿಂದಾಗಿ ಏಲಕ್ಕಿ ನಗರವೆಂದು ಪ್ರಸಿದ್ಧ. ಬ್ಯಾಡಗೀ ಮೆಣಸಿನಕಾಯಿ ಜಗತ್ಪ್ರಸಿದ್ಧ. ಒಂದೊಮ್ಮೆ ಇಲ್ಲಿ ಸಾವಿರ ಮಠಗಳಿದ್ದವಂತೆ. ಜವಾರಿ ಕನ್ನಡಮಯ. ಹೊಯ್ಸಳ ಕಲಾವೈಭವದ ಮುಕ್ತೇಶ್ವರ ಕದಂಬೇಶ್ವರ ಗಳಗೇಶ್ವರ ಮುಂತಾದ ಅತ್ಯಂತ ಸುಂದರ ದೇವಸ್ಥಾನಗಳಿವೆ. ನವಿಲೋದ್ಯಾನ ಶಿಗ್ಗಾವಿಯ ರಾಕ್ ಗಾರ್ಡನ್ ಪ್ರಸಿದ್ಧ ಪ್ರವಾಸೀ ತಾಣಗಳು.
೪. ಬಾಗಲಕೋಟೆ ಉತ್ತರಕರ್ಣಾಟಕದ ಮತ್ತೊಂದು ಪ್ರಮುಖ ಒಳನಾಡು ಜಿಲ್ಲೆ. ವಿಜಯೊಉರ ಜಿಲ್ಲೆಯನ್ನು ವಿಭಜಿಸಿ ಬಾಗಲಕೋಟೆ ಜಿಲ್ಲೆಯಾಯಿಯು. ಸಿಮೆಂಟ್ ಕಾರ್ಖಾನೆಗೆ ಪ್ರಸಿದ್ಧ. ವಿಶ್ವ ವಿಖ್ಯಾತ ಇಲಕಲ್ ಸೀರೆಗಳು. ಚಾಲುಕ್ಯರ ರಾಜಧಾನಿ ಬಾದಾಮಿ ಪುರಾಣಪ್ರಸಿದ್ಧ ವಾತಾಪಿಯಾಗಿತ್ತು. ಬಾದಾಮಿಯ ಬನಶಂಕರಿ, ಗುಹಾ ದೇವಾಲಯಗಳು ಐಹೊಳೆ ಪಟ್ಟದಕಲ್ಲು ಚಾಲುಕ್ಯ ಶೈಲಿಯ ಶಿಲ್ಪಕಲೆ. ಕೂಡಲಸಂಗಮ ಯಲಗೂರ ಆಂಜನೇಯ ಆಲಮಟ್ಟಿ ಡ್ಯಾಂ ಹಾಗೂ ಗಾರ್ಡನ್ ಪ್ರವಾಸಿ ತಾಣಗಳು. ಕಡಕ್ ರೊಟ್ಟಿಗೆ ಪ್ರಸಿದ್ಧ. ಕೃಷಿ ಪ್ರಮುಖ ಉದ್ಯೋಗ ಸರ್ವವೂ ಕನ್ನಡಮಯ.
೫. ಕೊಪ್ಪಳ ಉತ್ತರ ಒಳನಾಡಿನ ಸಿರಿವಂತ ಜಿಲ್ಲೆ. ಚಾರಿತ್ರಿಕವಾಗಿ ಕೋಪಣ ನಗರ ಎನ್ನಿಸಿಕೊಂಡಿತ್ತು. ವಿಶ್ವ ಪಾರಂಪರಿಕ ತಾಣ ಹಂಪಿಯ ಆನೆಗೊಂದಿ ಮುಂತಾದವುಗಳ ಕೆಲವು ಭಾಗಗಳು ಈ ಜಿಲ್ಲೆಯಲ್ಲಿವೆ. ಸಮೃದ್ಧ ಗಣಿಗಳ ನಾಡು. ಕಿನ್ನಾಳ ಆಟಿಗೆಗಳು ಮುರಲ್ ಕಲೆ ವಿಶ್ವಪ್ರಸಿದ್ಧ. ಮುಂಡರಗಿ ಭೀಮರಾವ್ ಹೆಮ್ಮಿಗೆ ಕೆಂಚನಗೌಡ ಖ್ಯಾತ ಸ್ವಾತಂತ್ರ್ಯ ಸೇನಾನಿಗಳು. ಛೋಲೆಬಟೂರ, ಭಜಿ, ರೊಟ್ಟಿ ಎಣ್ಗಾಯ್ ಪಲ್ಯಾ ಪ್ರಖ್ಯಾತಿ ಪಡೆದ ಆಹಾರ ಪದಾರ್ಥ. ಕೊಪ್ಪಳದ ಕೋಟೆ ಪ್ರಸಿದ್ಧ. ಜೈನ ಕಾಶಿ ಎಂದೂ ಹೆಸರು. ತುಂಗಭದ್ರಾ ನದಿ ನಡುಗಡ್ಡೆಯಲ್ಲಿರುವ ಮಾಧ್ವಯತಿಗಳ ನವವೃಂದಾವನವೂ ಪವಿತ್ರ ಯಾತ್ರಾಸ್ಥಳ. ಚಾಲುಕ್ಯ ವಂಶಸ್ಥ ತ್ರಿಭುವನಮಲ್ಲ ರಾಜ ಕಟ್ಟಿಸಿದ ಮಹಾದೇವ ದೇವಸ್ಥಾನ, ಕುಕನೂರಿನ ಪುರಾಣಪ್ರಸಿದ್ಧ ಮಹಾಮಾಯಾ ದೇವಸ್ಥಾನ ನೋಡತಕ್ಕದ್ದಾಗಿದೆ.
೬. ಶಿವಮೊಗ್ಗ ಮಲೆನಾಡಿನ ಜಿಲ್ಲೆ. ಕನ್ನಡ ಬಿಟ್ಟು ಬೇರೆ ಭಾಷೆ ಮಾತನಾಡದಷ್ಟು ಭಾಷಾಭಿಮಾನ. ಮೊದಲ ಜ್ಞಾನಪೀಠ ಪುರಸ್ಕೃತ ಕುವೆಂಪುರವರ ಜನ್ಮಸ್ಥಾನದ ಜಿಲ್ಲೆ. ಸಾಗರಗ ಕೆಳದಿ ಇಕ್ಕೇರಿ ಇತಿಹಾಸ ಪ್ರಸಿದ್ಧ. ಶ್ರೀಧರ ಕ್ಷೇತ್ರ ಯಾತ್ರಾಸ್ಥಳ. ಶಿಕಾರಿಪುರದ ಹತ್ತಿರ ಇರುವ ಬಳ್ಳಿಗಾವೆಯ ಮಧುಕೇಶ್ವರ ದೇವಸ್ಥಾನ. ರಾಜ್ಯಕ್ಕೆ ಮೂರು ಮೂರು ಮುಖ್ಯಮಂತ್ರಿಗಳನ್ನು ನೀಡಿದ ಜಿಲ್ಲೆ. ತೀರ್ಥಹಳ್ಳಿಯ ತೀರ್ಥರಾಮೇಶ್ವರ ಜಾತ್ರೆ ಪ್ರಸಿದ್ಧಿ ಪಡೆದಿದೆ. ಆಗುಂಬೆ, ಸಕ್ರೆಬೈಲಿನ ಆನೆ ಬಿಡಾರ ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಸಿಂಹಧಾಮ, ತುಂಗಾ ಆಣೆಕಟ್ಟೆ, ಭದ್ರಾ ಆಣೆಕಟ್ಟೆ, ಕೂಡ್ಲಿಯ ಮಧ್ವಪರಂಪರೆಯ ಮಠಗಳು. ಶ್ರದ್ಧಾಳುಗಳ ಕೇಂದ್ರಗಳು. ಭದ್ರಾವತಿಯ ವಿಶ್ವೇಶ್ವರಾಯ ಸ್ಟೀಲ್ ಕಾರ್ಖಾನೆ, ಸಕ್ಕರೆ ಕಾರ್ಖಾನೆ, ಮೈಸೂರು ಕಾಗದ ಕಾರ್ಖಾನೆಗಳಿವೆ. ಸುಂದರ ಮಳೆಕಾಡುಗಳೂ ಇವೆ. ಶಿವಮೊಗ್ಗ ಉತ್ತರಕನ್ನಡ ಜಿಲ್ಲೆಗಳ ಗಡಿಯಲ್ಲಿರುವ ಜೋಗ ಜಲಪಾತವು ಹತ್ತಿರ ಇರುವ ಇನ್ನೊಂದು ಜಗದ್ವಿಖ್ಯಾತ ಪ್ರವಾಸಿ ತಾಣ. ಮಲೆನಾಡಿನ ವಿದ್ಯಾಕೇಂದ್ರ. ಬತ್ತ ತೆಂಗು ಅಡಿಕೆಗಳಿಗಾಗಿ ಪ್ರಸಿದ್ಧ ಕೂಡಾ.
೭. ದಾವಣಗೆರೆ ಚಿತ್ರದುರ್ಗ ಶಿವಮೊಗ್ಗ ಬಳ್ಳಾರಿಗಳ ಭಾಗಗಳನ್ನು ವಿಭಜಿಸಿ ನಿರ್ಮಾಣಗೊಂಡ ಜಿಲ್ಲೆ. ಹತ್ತಿಯ ಉದ್ಯಮದಿಂದಾಗಿ ಮ್ಯಾಂಚೆಸ್ಟರ್ ನಗರವೆಂದು ಖ್ಯಾತಿಯನ್ನು ಪಡೆದಿದೆ. ಮಧ್ಯ ಕರ್ಣಾಟಕದ ಪ್ರಮುಖ ಕೃಷಿ ಕೇಂದ್ರ. ದಾವಣಗೆರೆ ಬೆಣ್ಣೆದೋಸೆ ದೇಶದ ರುಂಬ ಪ್ರಖ್ಯಾತಿ ಪಡೆದಿದೆ. ಚಾಲುಕ್ಯ ಸೈನಿಕರು ದೂರದ ಪ್ರಯಾಣದಿಂದ ದಣಿದು ಬಳಲಿ ನೀರಡಿಸಿ ಇಲ್ಲಿಗೆ ಬಂದಾಗ ಇಲ್ಲಿನ ಅಸಂಖ್ಯ ಸಮೃದ್ಧ ಕೆರೆಗಳನ್ನು ಕಂಡು ದಣಿವಿನ ಕೆರೆ ಎಂದು ಉದ್ಗರಿಸಿದ್ದರಿಂದ ದಾವಣಗೆರೆ ಎಂದು ಹೆಸರಾಯಿತು ಎನ್ನುವುದು ಇತಿಹಾಸಕಾರರ ಅಂಬೋಣ. ಚೆನ್ನಗಿರಿ ಹತ್ತಿರದ ಏಶಿಯಾದಲ್ಲಿಯೇ ದೊಡ್ಡದಾದ ಸೂಳೆಕೆರೆ ಆಗಿನ ನೀರಾವರಿ ಮೂಲ. ಹನ್ನೆರಡನೆ ಶತಮಾನದಲ್ಲಿದ್ದ ಸ್ವರ್ಗಾವತಿ ನಗರದ ವಿಕ್ರಮರಾಜನ ಮಗಳು ಶಾಂತವ್ವ ಸಾಮಾನ್ಯ ಯುವಕ ಸಿದ್ದೇಶ್ವರನನ್ನು ಪ್ರೀತಿಸಿ ಮದುವೆಯಾದದ್ದಕ್ಕೆ ಜನ ಅವಳಿಗೆ ಸೂಳೆ ಪಟ್ಟ ಕಟ್ಟುತ್ತಾರೆ. ಗಂಡಹೆಂಡತಿ ಸೇರಿ ಈ ಕೆರೆ ಕಟ್ಟಿ ಶಾಂತವ್ವ ಕೆರೆಗೆ ಹಾರವಾಗುತ್ತಾಳೆ. ಅವಳ ಅಗಲಿಕೆಯಿಂದ ವಿಚಲಿತನಾಸ ಸಿದ್ದೇಶ್ವರ ಬೆಟ್ಟದ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಅಂದಿನಿಂದ ಅಲ್ಲಿ ಜಾತ್ರೆಯೂ ಈ ಕೆರೆಗೆ ಶಾಂತಿಸಾಗರವೆಂದು ಹೆಸರಾಯಿತಂತೆ.
೮. ಚಿಕ್ಕಮಗಳೂರು ದಕ್ಷಿಣ ಕರ್ಣಾಟಕದ ಪ್ರಮುಖ ಜಿಲ್ಲೆ. ಸಖರಾಯಪಟ್ಟಣದ ರುಕ್ಮಾಂಗದ ತನ್ನ ಕಿರಿಯ ಮಗಳಿಗೆ ಬಳುವಳಿಯಾಗಿ ಈ ನಗರವನ್ನು ನೀಡಿದ್ದಾಗಿ ತಿಳಿದು ಬರುತ್ತದೆ. ಸಂಪದ್ಭರಿತ ಕಾಫಿ ತೋಟಗಳಿಗಾಗಿ ವಿಶ್ವವಿಖ್ಯಾತ. ಹಚ್ಚಹಸುರಿನ ಬೆಟ್ಟಗುಡ್ಡಗಳು. ಕಣ್ಣು ತುಂಬುವ ಕಾಡು. ಸಣ್ಣಸಣ್ಣ ಜಲಪಾತಗಳು ಸೆಳೆಯುತ್ತವೆ. ಚಾರ್ಮಾಡಿ ಘಾಟ್ ರೋಮಾಂಚನ ಉಂಟು ಮಾಡುತ್ತವೆ. ಬಾಬಾಬುಡನ್ ಗಿರಿ, ರಾಜ್ಯದಲ್ಲಿಯೇ ಎತ್ತರವಾದ ಮುಳ್ಳಯ್ಯನಗಿರಿ, ಕುದರೇಮುಖ ರಾಷ್ಟ್ರೀಯ ಉದ್ಯಾನ. ಭದ್ರಾ ಹುಲಿ ಅಭಯಾರಣ್ಯ, ಕೆಮ್ಮಣ್ಣುಗುಂಡಿ ಪ್ರವಾಸಿಗರ ನೆಚ್ಚಿನ ತಾಣಗಳು. ಎಲ್ಲವೂ ಕನ್ನಡಮಯ. ಹಿರೇಮಗಳೂರಿನ ಕೋದಂಡರಾಮ ಪುರಾಣ ಪ್ರಸಿದ್ಧ. ಸನಾತನದ ಧರ್ಮದ ಪುನರ್ ಪ್ರತಿಷ್ಠಾಪನಾಚಾರ್ಯ ಅದ್ವೈತ ಸಾಮ್ರಾಜ್ಯ ಚಕ್ರವರ್ತಿ ಜಗದ್ಗುರು ಶ್ರೀ ಶಂಕರಾಚಾರ್ಯರು ದೇಶದ ನಾಲ್ಕು ದಿಕ್ಕಿನಲ್ಲಿ ಪ್ರತಿಷ್ಠಾಪಿಸಿದ ಆಮ್ನಾಯ ಪೀಠಗಳ್ಲಿ ಮೊದಲನೇಯದು ಶ್ರಂಗೇರಿಯಲ್ಲಿದೆ. ಶ್ರೀ ಶಾರದಾಮಾತೆ ವಿಶ್ವಪ್ರಸಿದ್ಧ. ಹೊಯ್ಸಳ ದ್ರಾವಿಡ ಶೈಲಿಯ ವಿದ್ಯಾಶಂಕರ ದೇವಸ್ಥಾನವೂ ಅದ್ಭುತ ಕಲೆಯ ಆಗರ. ಕನ್ನಡದ ಪೂಜಾರಿ ಎಂದು ಖ್ಯಾತರಾಗಿರುವ ಹಿರೇಮಗಳೂರು ಕಣ್ಣನ್ ಇಲ್ಲಿ ಅರ್ಚಕರು. ಹನ್ನೆರಡನೆ ಶತಮಾನದ ಹೊಯ್ಸಳರ ಎರಡನೇಯ ವೀರಬಲ್ಲಾಳ ಕಟ್ಟಿಸಿದ ಅಮೃತೇಶ್ವರ ದೇವಸ್ಥಾನ. ಬಾಬಾಬುಡನ್ಗಿರಿಯ ದತ್ತ ಪಾದುಕೆಗಳು ಶ್ರದ್ಧಾಳುಗಳ ಕೇಂದ್ರಗಳು. ರೈಸ್ ಫಿಶ್ ಕರಿ ನೇಂದ್ರ ಬಾಳೇಹಣ್ಣಿನ ಚಿಪ್ಸ್ ಪ್ರಸಿದ್ಧ. ಕಾಫೀ ತೋಟಗಳಲ್ಲಿ ಕೆಲಸ ಮಾಡುವ ಮಲೆಯಾಳ ತಮಿಳು ಕಾರ್ಮಿಕರಿಂದಾಗಿ ಆ ಎರಡೂ ಭಾಷೆಗಳ ಪ್ರಭಾವವೂ ಇದೆ.
೯. ಹಾಸನ ಗಂಗ ಹಾಗೂಹೊಯ್ಸಳ ಸಾಮ್ರಾಜ್ಯದ ಕೇಂದ್ರ. ಬೇಲೂರು ಹಳೇಬೀಡುಗಳ ದೇವಸ್ಥಾನಗಳು ವಿಶ್ವವಿಖ್ಯಾತ. ಹೊಯ್ಸಳ ಅರಸು ವಿಷ್ಣುವರ್ಧನನ ಪತ್ನಿ ನಾಟ್ಯರಾಣಿ ಶಕುಂತಲಾದೇವಿ ಕಲಾಪ್ರೀಯರು. ಶ್ರವಣಬೆಳಗೊಳದ ಜೈನಧರ್ಮದ ಪ್ರಮುಖ ಶ್ರದ್ಧಾಕೇಂದ್ರ. ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಗೊಮ್ಮಟೇಶ್ವರ ಬಾಹುಬಲಿಯ ಮಹಾಮಸ್ತಕಾಭಿಷೇಕವೂ ಪ್ರಸಿದ್ಧ. ಹಾಸನದ ಹಾಸನಾಂಬ ದೇವಿಯ ಭಕ್ತರು ದೇಶಾದ್ಯಂತ ಇದ್ದಾರೆ. ವಿಜಯನಗರ, ಆದಿಲ್ ಶಾಹಿ ಮೊಘಲರು ಮೈಸೂರರಸರು ಕೆಳದಿಯ ನಾಯಕರು ಆಳಿದ ನಾಡು. ಕೃಷಿ ಪ್ರಧಾನ. ಸಕಲೇಶಪುರ ಕಾಫಿಗೆ ಪ್ರಸಿದ್ಧ. ನಾಡು.ಕನ್ನಡ ಬಿಟ್ಟು ಬೇರೆ ಭಾಷೆ ಆಡದ ಜನರು. ಎಸ್ ಎಲ್ ಬೈರಪ್ಪ, ಜಾವಗಲ್ ಶ್ರೀನಾಥ್ ಮಾಜೀ ಪ್ರಧಾನಿ ದೇವೇಗೌಡರು ಪ್ರಮುಖರು.
೧೦. ಮಂಡ್ಯ ದಕ್ಷಿಣ ಕರ್ಣಾಟಕದ ಗಂಡುಮೆಟ್ಟಿನ ನಾಡು. ಸಕ್ಕರೆಯ ಬೀಡು. ಶಿವನಸಮುದ್ರದ ಗಗನ ಚುಕ್ಕಿ ಭರಚುಕ್ಕಿ ಜಲಪಾತಗಳು ಶ್ರೀರಂಗಪಟ್ಟಣ ಪ್ರಮುಖ ಪ್ರವಾಸೀ ತಾಣಗಳು. ಕೃಷ್ಣರಾಜ ಸಾಗರ ಬೃಂದಾವನ ಉದ್ಯಾನ ವಿಶ್ವವಿಖ್ಯಾತ. ಕನ್ನಡಮಯ ಈ ಜಿಲ್ಲೆ. ಮದ್ದೂರು ವಡೆ ಬಲು ಜನಪ್ರೀಯ. ಟಿಪ್ಪುವಿನ ರಾಜಧಾನಿಯಾಗಿತ್ತು. ಮೈಸೂರರಸರು ಹೈದರಾಲಿ ನಂತರ ಟಿಪ್ಪುವಿನ ಆಡಳಿತ. ಬ್ರಿಟಿಷರೊಂದಿಗಿನ ಶ್ರೀರಂಹಪಟ್ಟಣ ನಿರ್ಣಾಯಕ. ಕಾವೇರಿ ತೀರದ ಶ್ರೀರಂಗನಾಥಸ್ವಾಮಿಯ ಐದು ಪ್ರಸಿದ್ಧ ಕ್ಷೇತ್ರಗಳ ಪೈಕಿ ಇದು ಮೊದಲನೆಯದು. ಅದಕ್ಕಾಗಿಯೇ ಇದನ್ನು ಆದಿರಂಗ ಎನ್ನುತ್ತಾರೆ. ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ಶ್ರೀವೈಷ್ಣವ ಅನುಯಾಯಿಗಳ ಅತ್ಯಂತ ಪವಿತ್ರ ಸ್ಥಾನ. ಶ್ರೀರಾಮಾನುಜರ ಸಾಧನಾ ಕ್ಷೇತ್ರ. ಇಲ್ಲಿಗೆ ಕರ್ಣಾಟಕದ ನಮ್ಮ ಪ್ರವಾಸ ಮುಗಿಯಿತು.
ಹತ್ತೊಂಬತ್ತು ಗಡಿಜಿಲ್ಲೆಗಳು. ಹನ್ನೊಂದು ಒಳನಾಡ ಜಿಲ್ಲೆಗಳು. ಒಂದೊಂದರ ಸಂಸ್ಕೃತಿ ವೇಷಭೂಷ ವಿವಿಧ ಧಾಟಿಯ ಕನ್ನಡಭಾಷೆ. ಇಲ್ಲಿನ ಶಾಂತ ವಾತಾವರಣ. ಸರ್ವಕಾಲದ ಹಿತಕೆರ ಹವಾಮಾನವು ಎಲ್ಲರನ್ನೂ ಆಕರ್ಷಿಸುತ್ತಿದೆ. ಭಾರತದಲ್ಲಿ ಮಾತನಾಡುವ ಹೆಚ್ಚಿನ ಭಾಷೆಗಳನ್ನು ಮಾತನಾಡುವ ಜನ ರಾಜ್ಯದ ತುಂಬೆಲ್ಲ ಹರಡಿಕೊಂಡಿದ್ದಾರೆ. ಬದುಕು ಕಟ್ಡಿಕೊಂಡಿದ್ದಾರೆಅದು ಆಹಾರ ವಿಹಾರ ಆಟೋಟ ಸಾಹಿತ್ಯ ಕಲೆ ವಿಶೇಷತೆಗಳು. ಪ್ರಖ್ಯಾತರು, ರಾಜಕಾರಣಿಗಳು, ಅಂತಾರಾಷ್ಟ್ರೀಯ ಮಟ್ಟದ ಆಟಗಾರರು, ಸಿನಿಮಾ, ನಾಟಕ, ಯಕ್ಷಗಾನ ಬಯಲಾಟ, ಜ್ಞಾನ ವಿಜ್ಞಾನ, ಎಲ್ಲವೂ ಒಳಗೊಂಡ ಹೆಮ್ಮೆಯ ನಾಡು ನಮ್ಮ ಕನ್ನಡ ನಾಡು.
ಕರ್ಣಾಟಕ ದರ್ಶನವೆಂದರೆ ಅದು ಭಾರತದ ದರ್ಶನವೇ ಆಗಿದೆ. ರಾಜ್ಯವನ್ನು ಸುತ್ತಲು ಅಲ್ಲಿನ ವಿಶೇಷತೆಗಳನ್ನು ವಿಸ್ಮಯಗಳನ್ನು ಅರಿಯಲು ಒಂದಿಡೀ ಜನ್ಮ ಸಾಕಾಗದು. ಅಖಂಡ ಕರ್ಣಟಕವು ಕನ್ನಡಿಗರ ಅಸ್ಮಿತೆ. ಬ್ರಿಟಿಷರ ಕಾಲದಲ್ಲಿದ್ದ ಬಾಂಬೆ ಕರ್ನಾಟಕ ಮದ್ರಾಸ್ ಕರ್ನಾಟಕ ಹೈದ್ರಾಬಾದ್ ಕರ್ನಾಟಕ ಎಂಬ ದಾಸ್ಯವು ಈಗಲೂ ಆಡಳಿತದಲ್ಲಿ ಅನಧಿಕೃತವಾಗಿ ಇದೆ. ಇದರಿಂದ ಹೊರಗೆ ಬರಬೇಕು. ಅದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ಇತ್ತೀಚೆಗೆ ಹೈದ್ರಾಬಾದ್ ಕರ್ಣಾಟಕವನ್ನು ಕಲ್ಯಾಣ ಕರ್ಣಾಟಕ ಎಂದು ಬದಲಾಯಿಸಿರುವುದು. ಈ ಮಧ್ಯೆ ಬೆಳಗಾವಿಯಲ್ಲಿ ಅಲ್ಲೊಂದು ಇಲ್ಲೊಂದು ಪ್ರತ್ಯೇಕತೆಯ ಕೂಗು ಕೇಳಿದರೂ ಜನ ಅದಕ್ಕೆ ತಲೆಕೆಡಿಸಿಕೊಂಡಿಲ್ಲ. ವಿವಿಧತೆಯೇ ಏಕತೆಯ ಪ್ರತ್ಯಕ್ಷ ನಿದರ್ಶನ ನಮ್ಮ ಕರ್ಣಾಟಕ.