ವಾಸ್ತುದೋಷ ನಿವಾರಣೆಗೆ ತುಳಸಿ ಗಿಡ ಪರಿಹಾರ

ತುಳಸಿ ಗಿಡದ ಮಹತ್ವವನ್ನು ಪದ್ಮ ಪುರಾಣದಲ್ಲಿ ಹೀಗೆ ವಿವರಿಸಲಾಗಿದೆ: “ಯಾ ದೃಷ್ಟ್ವಾ ನಿಖಿಲಾಘಸಂಘಶಮನೀ ಸ್ಪೃಷ್ಟಾ ವಪುಃಪಾವನೀ ರೋಗಾಣಾಮಭಿವಂದಿತಾ ನಿರಸನೀ ಸಿಕ್ತಾsoತಕತ್ರಾಸಿನೀ | ಪ್ರತ್ಯಾಸತ್ತಿವಿಧಾಯಿನೀ ಭಗವತಃ ಕೃಷ್ಣಸ್ಯ ಸಂರೋಪಿತಾ ನ್ಯಸ್ತಾ ತಶ್ಚರಣೇ ವಿಮುಕ್ತಿಫಲದಾ ತಸ್ಯೈ ತುಳಸ್ಯೈ ನಮಃ ||​.

ತುಳಸಿ ಗಿಡವನ್ನು ನೋಡುವುದರಿಂದ ನಮ್ಮ ದೇಹವು ಪವಿತ್ರಗೊಳ್ಳುತ್ತದೆ ಮತ್ತು ಪಾಪಗಳು ಕಳೆಯುತ್ತವೆ. ತುಳಸಿ ಗಿಡವನ್ನು ಸ್ಪರ್ಶಿಸುವುದರಿಂದ ನಮ್ಮ ದೇಹವು ಸ್ವಚ್ಛಗೊಂಡು, ಮನಸ್ಸು ಭಗವಂತನ ಚಿಂತನೆಗೆ ತಯಾರಾಗುತ್ತದೆ.

ಪ್ರತಿದಿನ ತುಳಸಿ ಗಿಡಕ್ಕೆ ನಮಸ್ಕರಿಸುವುದರಿಂದ ರೋಗ – ರುಜಿನಗಳು ದೂರವಾಗುತ್ತವೆ. ಪ್ರತಿದಿನ ತುಳಸಿಯನ್ನು ನೀರೆರೆದು ಸಂರಕ್ಷಿಸುವವರ ಮನೆಗೆ ಯಮ ಧರ್ಮರಾಯನು ಪ್ರವೇಶಿಸಲು ಹೆದರುತ್ತಾನೆ. ತುಳಸಿ ಗಿಡವನ್ನು ನೆಟ್ಟು ಪೋಷಿಸುವವರು ಕೃಷ್ಣ ಪರಮಾತ್ಮನಿಗೆ ಹತ್ತಿರವಾಗುತ್ತಾರೆ. ಭಕ್ತಿಯಿಂದ ಕೃಷ್ಣನಿಗೆ ತುಳಸಿ ಅರ್ಪಿಸಿ ಮೋಕ್ಷವನ್ನೂ ಪಡೆಯಬಹುದು ​ಎಂದು ಹೇಳುತ್ತಾರೆ.

ತುಳಸಿ ಮಾಲೆಯನ್ನು ಧರಿಸುವುದರಿಂದ ಹೃದಯ ಮತ್ತು ಶ್ವಾಸಕೋಶದ ತೊಂದರೆಗಳು ಬರುವುದಿಲ್ಲ. ತುಳಸಿ ಮಾಲೆಯನ್ನು ಧರಿಸುವುದರಿಂದ ಸಾತ್ವಿಕ ಭಾವ ನಮ್ಮಲ್ಲಿ ಮೂಡುತ್ತದೆ. ಮಣಿಕಟ್ಟಿನಲ್ಲಿ ತುಳಸಿ ಮಾಲೆ ಧರಿಸುವುದರಿಂದ ನಾಡಿ ಬಡಿತ ಸರಿಯಾಗಿರುತ್ತದೆ ಮತ್ತು ಭುಜದ ನೋವು ಬರುವುದಿಲ್ಲ. ಗರ್ಭಿಣಿಯರ ಸೊಂಟಕ್ಕೆ ತುಳಸಿಯ ಬೇರನ್ನು ಕಟ್ಟುವುದರಿಂದ ಪ್ರಸವ ವೇದನೆ ಕಡಿಮೆಯಾಗುತ್ತದೆ.

ಪುರುಷರು ಮಾತ್ರ ತುಳಸಿಯನ್ನು ಕೀಳುವ ಪದ್ಧತಿ ಇದೆ. ತುಳಸಿ ಗಿಡವನ್ನು ಬಹಳ ಎಚ್ಚರಿಕೆಯಿಂದ ಎಡಗೈಲಿ ಹಿಡಿದು ಬಲಗೈಯಿಂದ ಎಲೆಯನ್ನು ಕೀಳಬೇಕು. ತುಳಸಿ ಎಲೆಯನ್ನು ತೆಗೆದುಕೊಳ್ಳುವಾಗ ಈ ಶ್ಲೋಕವನ್ನು ಹೇಳಬೇಕು- “ತುಲಸ್ಯಮೃತನಾಮಾಸಿ ಸದಾತ್ವಂ ಕೇಶವಪ್ರಿಯೆ | ಕೇಶವಾರ್ಥ ವಿಚಿನ್ವಾಮಿ ವರದಾಭವ ಶೋಭನೆ ||

ಅರ್ಥ: ಓ ತುಳಸಿ, ನೀನು ಅಮೃತದಿಂದ ಜನಿಸಿದವಳು. ನೀನು ಸದಾ ಕೇಶವನ ಪ್ರಿಯಳು. ಈಗ, ಕೇಶವನ ಪೂಜೆಗೆಂದು ನಾನು ನಿನ್ನ ದಳಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ನನ್ನನ್ನು ರಕ್ಷಿಸಮ್ಮ. ಎಂಬುದಾಗಿದೆ.

ದ್ವಾದಶಿಯಂದು, ರಾತ್ರಿ ಹೊತ್ತು, ಗ್ರಹಣ ದಿನಗಳಂದು ತುಳಸಿಯನ್ನು ಕೀಳಬಾರದು. ಬೇರೆ ಗಿಡಗಳನ್ನು ಎಸೆಯುವಂತೆ ತುಳಸಿ ಗಿಡವನ್ನು ಎಸೆಯಬಾರದು. ಅವಕಾಶವಿದ್ದರೆ ನದಿಯಲ್ಲಿ ವಿಸರ್ಜಿಸಬೇಕು. ತುಳಸಿ ಗಿಡವನ್ನು ಉತ್ತರ ಹಾಗೂ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ದಕ್ಷಿಣ ದಿಕ್ಕಿನಲ್ಲಿ ತುಳಸಿ ಗಿಡವನ್ನು ಇಡಬಾರದು. ಸಂಜೆ ಹೊತ್ತು ತುಳಸಿಯ ಮುಂದೆ ದೀಪ ಹಚ್ಚಿಡಬೇಕು.​

ತುಳಸಿ ಗಿಡ ಹೆಚ್ಚು ಆಮ್ಲಜನಕ ನೀಡುವ ಸಸ್ಯವಾಗಿದ್ದು, ತನ್ನ ಸುತ್ತಮುತ್ತಲಿನ ವಾತಾವರಣವನ್ನು ಶುಚಿಗೊಳಿಸುತ್ತದೆ. ಆದ್ದರಿಂದ ತುಳಸಿಯ ಸುತ್ತ ಪ್ರದಕ್ಷಿಣೆ ಹಾಕಬೇಕು. ತುಳಸಿ ಗಿಡ ವಾಸ್ತು ದೋಷವನ್ನು ನಿವಾರಣೆ ಮಾಡುತ್ತದೆ. ಮನೆಯ ಸುತ್ತ ಮುತ್ತ ಸ್ಮಶಾನ, ಅಥವಾ ವಾಸ್ತು ದೋಷವನ್ನು ನೀಡುವಂತಹ ವಾತಾವರಣ, ಅಥವಾ ಸೈಟು — ಜಮೀನು, ಇವುಗಳಿಗೆ ಸಂಬಂದಿಸಿದಂತೆ ವಾಸ್ತು ದೋಷವಿದ್ದಲ್ಲಿ, ಕಾಂಪೌಂಡ್ ನ ಸುತ್ತ ತುಳಸಿ ಗಿಡವನ್ನು ಅಲ್ಲಲ್ಲಿ ಬೆಳೆಸುವುದರಿಂದ ಪಾಸಿಟವ್ ಎನರ್ಜಿ ಉಂಟಾಗುವುದು. ಹಾಗೂ ವಾಸ್ತು ದೋಷ ನಿವಾರಣೆಯಾಗುವುದು..

ಮಾಹಿತಿ: ಶೋಭಶ್ರೀ ಬಿ. ಕೆ

Related Articles

ಪ್ರತಿಕ್ರಿಯೆ ನೀಡಿ

Latest Articles