ಭಕ್ತಿ ಅಂದರೆ ನಿಸ್ವಾರ್ಥ ಪ್ರೀತಿಯ ಒಂದು ರೂಪ

*ಕೃಷ್ಣಪ್ರಕಾಶ್ ಉಳಿತ್ತಾಯ

ಕನಕಾಂಗದಕೇಯೂರಕಮನೀಯಭುಜಾನ್ವಿತಾ|ರತ್ನಗ್ರೈವೇಯಚಿಂತಾಕಲೋಲಮುಕ್ತಾಫಲಾನ್ವಿತಾ||

ಕನಕಾಂಗದಕೇಯೂರಕಮನೀಯಭುಜಾನ್ವಿತಾ”

 ಚಿನ್ನದ ಅಂಗದ ಅಂದರೆ ತೋಳಿನ ಆಭರಣ ಮತ್ತು ವಂಕಿಗಳು ತಾಯಿಯ ಬಾಹುಗಳಲ್ಲಿ ಇದ್ದು ತಾಯಿಯ ಬಾಹುಗಳನ್ನು ಕಮನೀಯವಾಗಿ ಅತ್ಯಂತ ಮನೋಹರವಾಗಿ ರಮಣೀಯವಾಗಿ ಕಾಣುವಂತೆ ಮಾಡಿವೆ. ಮಾತ್ರವಲ್ಲ ಆ ಆಭರಣಗಳು ಆ ಅಲ್ಲಿ ನೆಲೆಯಾಗಿ ತಾವು  ಕೃತಾರ್ಥತೆಯನ್ನು ಅನುಭವಿಸುತ್ತಿವೆ ಎಂಬ ದರ್ಶನ ಭಕ್ತನಿಗೆ ಧ್ವನಿಸಬೇಕಾದದ್ದು. ಶರಣಾದ ಭಕ್ತನಿಗೆ ಅಲಂಕೃತೆಯೇ ಪ್ರಧಾನವಾಗಿ ಕಾಣುತ್ತಾಳಲ್ಲದೆ  ಆಲಂಕಾರಿಕ ಒಡವೆಗಳಲ್ಲ. ಒಡವೆಗಳ ಸೌಭಾಗ್ಯವನ್ನು ಮಾತ್ರವೇ ನೆನೆಯುತ್ತಾನೆ.

  “ರತ್ನಗ್ರೈವೇಯಚಿಂತಾಕಲೋಲಮುಕ್ತಾಫಲಾನ್ವಿತಾ”

ತಾಯಿಯ ಕೊರಳಲ್ಲಿ ರತ್ನಖಚಿತವಾದ “ಮುಕ್ತಾಫಲ” ಅಂದರೆ ಮುತ್ತಿನ ಹಾರ ರಾರಾಜಿಸುತ್ತಿದೆ. ಆ ಮುತ್ತು ಜೋಲಾಡುತ್ತಾ ಇದೆಯಂತೆ. ಅಂತಹಾ ಜೋಲಾಡುತ್ತಿರುವ ಮುತ್ತನ್ನು ಹೊಂದಿರುವ ರತ್ನಖಚಿತ ಹಾರವನ್ನು ಋಷಿ ಧ್ಯಾನಿಸುತ್ತಾರೆ. 

ಆಚಾರ್ಯ ಶಂಕರರು ತಾಯಿಯ ಕಂಠವನ್ನು ನೋಡಿದ ಬಗೆ ಹೀಗೆ:

ಗಲೇ ರೇಖಾಸ್ತಿಸ್ರೋ ಗತಿಗಮಕಗೀತೈಕನಿಪುಣೇ

ವಿವಾಹವ್ಯಾನದ್ಧ ಪ್ರಗುಣಗುಣಸಂಖ್ಯಾಪ್ರತಿಭುವಃ|

ವಿರಾಜಂತೇ ನಾನಾವಿಧಮಧುರರಾಗಾಕರಭುವಾಂ

ತ್ರಯಾಣಾಂ ಗ್ರಾಮಾಣಾಂ ಸ್ಥಿತಿನಿಯಮಸೀಮಾನ ಇವ ತೇ||

“ಗಲೇ ಲೇಖಾಸ್ತಿಸ್ರೋ” ಕುತ್ತಿಗೆಯಲ್ಲಿರುವ ಮೂರು ಭಾಗ್ಯರೇಖೆಗಳು ಆಕೆಯ ವಿವಾಹ ಸಂದರ್ಭ ಕಟ್ಟಿರುವ ಮಂಗಳಸೂತ್ರದಂತೆ ತೋರುತ್ತದೆ ಎಂದು ವರ್ಣಿಸಿದ್ದಾರೆ. ಷಡ್ಜ, ಮಧ್ಯಮ ಮತ್ತು ಗಾಂಧಾರ ಎಂಬ ಮೂರು ಸ್ವರಗ್ರಾಮಗಳು ಒಂದನ್ನೊAದು ಸೇರದ ಸೀಮಾನಿಯಮದಂತೆ ರಾರಾಜಿಸುತ್ತಿದೆ ಎಂದು ಆಚಾರ್ಯ ಶಂಕರರು ಸೌಂದರ್ಯಲಹರಿಯ ಅರವತ್ತೊಂಭತ್ತನೆಯ ಪದ್ಯದಲ್ಲಿ ತಾಯಿಯ ಕಂಠವನ್ನು ಕಂಡು ನುಡಿದಿದ್ದಾರೆ.

ಭಕ್ತಿಯ ಉದ್ದೀಪನಕ್ಕೆ ನಿರ್ವ್ಯಾಜ ಪ್ರೀತಿಯಿಂದ ಕೂಡಿದ ಅಂತಃಕರಣ ಇದ್ದರೆ ದರ್ಶನದ ಸೌಭಾಗ್ಯ ಭಕ್ತನಿಗೆ ದೊರಕುತ್ತದೆ. ಜೀವನದ ಅನೇಕಾನೇಕ ಅನುಭವ ಬಿಂದುಗಳು ತಾಯಿಯನ್ನು ವರ್ಣಿಸುವ ವ್ಯಂಜಕಾಂಶಗಳಾಗಿ ಒದಗಿಬರುತ್ತದೆ. ಸ್ಫುರಿಸುವ ಭಾವಗಳಿಗೆ ಭಕ್ತಿಯ ಪುಷ್ಟಿದೊರೆತು ವರ್ಣನೆಗಳು ಸಾರ್ಥಕ್ಯವನ್ನು ಪಡೆದುಕೊಳ್ಳುತ್ತದೆ. ಭಕ್ತಿ ಅಂದರೆ ನಿಸ್ವಾರ್ಥ ಪ್ರೀತಿಯ ಒಂದು ರೂಪ. ತನ್ನತನವನ್ನು ಮರೆತು ವಸ್ತುವಿನಲ್ಲಿ ಸೌಂದರ್ಯವನ್ನು ಕಾಣುವ ಬಗೆಯಿಂದ ತಾನೇ ಕೃತಕೃತ್ಯತೆಯನ್ನು ಪಡೆದುಕೊಳ್ಳುವುದು. ತಾನು ಬಿಡುಗಡೆಯ ಭಾವವನ್ನು ಹೊಂದುವುದೇ ಆಗಿದೆ.

(ಲೇಖಕರು ಕರ್ಣಾಟಕ ಬ್ಯಾಂಕ್ ಉದ್ಯೋಗಿ ಯಕ್ಷಗಾನ ಕಲಾವಿದ, ಬರಹಗಾರ, ಖ್ಯಾತ ಮದ್ದಳೆವಾದಕರು, ಮಂಗಳೂರು)

Related Articles

ಪ್ರತಿಕ್ರಿಯೆ ನೀಡಿ

Latest Articles