ಹರಿಹರದಲ್ಲಿ ಹರ ಜಾತ್ರಾ ಮಹೋತ್ಸವ, ವರ್ಚುವಲ್ ಜಾತ್ರೆ, ಸರಳ ಆಚರಣೆಗೆ ನಿರ್ಧಾರ: ಸ್ವಾಮಿ ವಚನಾನಂದ

ಹರಿಹರ: 2021ನೇ ವರ್ಷದಲ್ಲಿ ಜನವರಿ 14, 15ರಂದು ಎರಡು ದಿನಗಳ ಕಾಲ ವರ್ಚುವಲ್ ಹರ ಜಾತ್ರಾ ಮಹೋತ್ಸವ ಸರಳವಾಗಿ ಮನೆ ಮನೆಯಲ್ಲಿ ಆಚರಣೆಯಾಗಲಿದೆ ಎಂದು ಹರಿಹರ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮಿಗಳು ತಿಳಿಸಿದರು.

ಹರಿಹರದ ಪಂಚಮಸಾಲಿ ಪೀಠದಲ್ಲಿ ಹರಜಾತ್ರೆಯ ನಿಮಿತ್ತ ಶನಿವಾರ ನಡೆದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಕೊರೋನಾ ಹಿನ್ನೆಲೆಯಲ್ಲಿ ಯಾವುದೇ ಸನ್ಮಾನ ಗೌರವ ಸಮಾರಂಭ ಇರುವುದಿಲ್ಲ. ಬದಲಾಗಿ ಈ ಎರಡು ದಿನಗಳಂದು ನಾಡಿನ ಪ್ರಮುಖ ಸಾಹಿತಿ, ಅನುಭಾವಿತರೊಂದಿಗೆ ಆತ್ಮನಿರ್ಭರ ಭಾರತಕ್ಕಾಗಿ ಕೃಷಿ-ಋಷಿ ಸಮಾವೇಶ, ಯುವ ಸಮಾವೇಶ ಮೂಲಕ ಚಿಂತನ ಮಂಥನ ಮಾಡುವುದು ಹಾಗೂ ಪೀಠಾರೋಹಣದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಹರಿಹರದಲ್ಲಿ ನಡೆಯುವ ಸಮಾವೇಶಕ್ಕೆ ಬರುವ ಭಕ್ತರಿಗೆ ತೊಂದರೆಯಾಗದಂತೆ ಸರ್ಕಾರದ ನಿಯಾಮಾನುಸಾರ ಸಾಮಾಜಿಕ ಅಂತರ, ಮಾಸ್ಕ್ ಬಳಕೆಗೆ ಕ್ರಮ ಕೈಗೊಳ್ಳಲಾಗುವುದು. ಎಲ್ಲರು ಭಾಗವಹಿಸಿ ಜಾತ್ರೆ ಯಶಸ್ವಿಗೆ ತಮ್ಮ ತನು, ಮನ ಧನ ಸಹಾಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಧರ್ಮದರ್ಶಿ ಚಂದ್ರಶೇಖರ ಪೂಜಾರ ಮಾತನಾಡಿ, ಕೊರೋನಾದಿಂದಾಗಿ ವ್ಯಾಪಾರ ವ್ಯವಹಾರ ಇಲ್ಲದೆ ಸಾಕಷ್ಟು ಆರ್ಥಿಕ ಸಂಕಷ್ಟ ಎದುರಾಗಿದೆ. ಅಲ್ಪಾವಧಿಯ ಸಹಾಯ ಮಾಡಿ, ಶ್ರೀಗಳ ಸಮ್ಮುಖದಲ್ಲಿ ಜಾತ್ರೆ ಮಾಡೋಣ. 2ಎ ಮತ್ತು ಓಬಿಸಿ ಸೌಲಭ್ಯ ಗಳ ಬಗ್ಗೆ ಹಕ್ಕೋತ್ತಾಯವನ್ನು ಸರ್ಕಾರದ ಮಟ್ಟದಲ್ಲಿ ಗಮನ ಸೆಳೆಯುವ ಪ್ರಯತ್ನ ಮಾಡಲಾಗುವುದು ಎಂದರು.

ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ ಅವರು ಮಾತನಾಡಿ, ಇದು ಕೇವಲ ಧಾರ್ಮಿಕ ಕಾರ್ಯಕ್ರಮವಲ್ಲ. ಸಮಾಜ ಇಷ್ಟೊಂದು ದೊಡ್ಡದಾಗಿರುವ ಬಗ್ಗೆ ಗೊತ್ತಾಗಿದ್ದು ಹರಜಾತ್ರೆಯಿಂದ. ಈ ಬಾರಿ ಸಂಕಷ್ಟ ಎದುರಾಗಿದ್ದು ಇದರ ನಡುವೆಯು ಎಲ್ಲಾ ಕಾರ್ಯಕ್ರಮಗಳ ಕುರಿತು ಪೂರ್ವಭಾವಿ ಸಭೆಯ ಮೂಲಕ ಸಂಕ್ರಾಂತಿ, ಹರ ಜಾತ್ರೆ ಮಾಡಬೇಕಾಗಿದೆ. ಜಾತ್ರೆ ಸರಳವಾಗಿ ನಡೆಯಲಿದೆ. ನಮ್ಮಲ್ಲಿರುವ ವೈಮನಸ್ಸುಗಳನ್ನು ಬಿಟ್ಟು ಸಂಘಟಿತರಾಗಿ ಮಾಡೋಣ ಎಂದರು.

ಇದೇ ಸಂದರ್ಭದಲ್ಲಿ ಜಾತ್ರಾಮಹೋತ್ಸವದ ಸಮಿತಿಯ ಅಧ್ಯಕ್ಷರಾಗಿ ಬಿ.ಲೋಕೇಶ, ಉಪಾಧ್ಯಕ್ಷರಾಗಿ ವಸಂತ ಹುಲ್ಲತ್ತಿ ಅವರನ್ನು ಆಯ್ಕೆ ಮಾಡಲಾಯಿತು.

Related Articles

ಪ್ರತಿಕ್ರಿಯೆ ನೀಡಿ

Latest Articles