ಪುಂಸವನ ವ್ರತ ಅಂದರೇನು, ಆ ವ್ರತದ ನಿಯಮಗಳೇನು, ಪೌರಾಣಿಕ ಕಥೆಯಾದರೂ ಮನುಷ್ಯ ತನ್ನ ಬದುಕಿನಲ್ಲಿ ಅಳವಡಿಸಿಕೊಳ್ಳುವುದಕ್ಕೆ ಹೇಗೆ ಸಾಧ್ಯ ಎಂಬುದರ ಕುರಿತು ಅವಲೋಕನ ಮಾಡಿದ್ದಾರೆ ಚಿಂತಕ ದೇವಿಪ್ರಸಾದ್ ಸಜಂಕು ಅವರು.
ಪುಂಸವನ ವ್ರತ ಭಾಗವತ ಪುರಾಣದಲ್ಲಿ ಬರುವ ಕತೆ. ದಿತಿ- ಕಶ್ಯಪರ ಮಕ್ಕಳಾದ ಹಿರಿಣ್ಯಾಕ್ಷ ಮತ್ತು ಹಿರಣ್ಯಕಶಿಪುರನ್ನು ಭಗವಂತನಾದ ಶ್ರೀಮನ್ನಾರಾಯಣ ವಧಿಸಿದ ನಂತರ ದಿತಿದೇವಿ ಪುತ್ರ ಶೋಕದಿಂದ ಬೆಂದು ಹೋಗಿ ತನ್ನ ಮಕ್ಕಳ ಸಾವಿಗೆ ತನ್ನ ಸವತಿ ಅದಿತಿಯ ಮಗ ದೇವೇಂದ್ರನೇ ಕಾರಣ, ಆತನನ್ನು ವಧಿಸುವ ಮಗನನ್ನು ಪಡೆಯುವ ಬಗೆಯನ್ನು ಯೋಚಿಸಿ ತನ್ನ ಪತಿಯಾದ ಕಶ್ಯಪರನ್ನು ಶ್ರದ್ಧೆಯಿಂದ ಪತಿಸೇವೆ ಮಾಡಿದಳು.
ಪತ್ನಿಯ ದುರುದ್ಧೇಶದ ಬಗ್ಗೆ ಅರಿವಿಲ್ಲದೆ, ಪತ್ನಿಯ ಪತಿಸೇವೆಯ ಬಗ್ಗೆ ಅತೀ ಪ್ರಸನ್ನರಾಗಿ ಪತ್ನಿಗೆ ನಿನಗೇನು ವರಬೇಕು ಎಂದು ಕೇಳಿದಾಗ, ದಿತಿಯು- “ದೇವೇಂದ್ರನನ್ನು ಸಂಹರಿಸುವ ಮಗ ಬೇಕು’ ಎಂದು ಕೇಳುತ್ತಾಳೆ.
ಕಶ್ಯಪರಿಗೆ ತಾನು ಇಕ್ಕಟ್ಟು ಪರಿಸ್ಥಿತಿಯಲ್ಲಿ ಬಿದ್ದಿರುವುದು ಅರಿವಾಗಿ, ಆ ಕಡೆ ತನ್ನ ಮತ್ತು ಅದಿತಿಯ ಮಗ ದೇವೇಂದ್ರನಿಗೂ ಏನೂ ಆಗಬಾರದು, ಈ ಕಡೆ ಪತ್ನಿಯಾದ ದಿತಿ ದೇವಿಗೆ ನೀಡಿದ ಮಾತೂ ಉಳಿಯಬೇಕು ಎಂದು ಯೋಚಿಸಿ ಒಂದು ಯುಕ್ತಿಯನ್ನು ಹೂಡುತ್ತಾರೆ. ಅದೇ ಪುಂಸವನ ವ್ರತ.
ಈ ವ್ರತವನ್ನು ಒಂದು ವರ್ಷ ಪತಿಪಾರಾಯಣಳಾಗಿ ಭಗವಂತನನ್ನು ಆರಾಧನೆ ಮಾಡಬೇಕು. ಈ ವ್ರತಕ್ಕೆ ಹಲವು ನಿಯಮ ಇದ್ದು ವ್ರತ ಭಂಗ ಅದರೆ ಹುಟ್ಟಿದ ಮಗು ದೇವೇಂದ್ರನನ್ನು ವಧಿಸುವ ಬದಲು ಆತನ ಸ್ನೇಹಿತನಾಗುತ್ತಾನೆ ಎಂದಾಗ ದಿತಿಯ ಎಷ್ಟೇ ಕಷ್ಟ ಆದರೂ, ಏನೇ ನಿಯಮ ಇದ್ದರೂ ತಾನು ಮಾಡುತ್ತೇನೆ ಎಂದಾಗ ಕಶ್ಯಪರು ಈ ವ್ರತವನ್ನು ತನ್ನ ಪತ್ನಿ ದಿತಿಗೆ ಉಪದೇಶ ಮಾಡುತ್ತಾರೆ.
ಈ ವ್ರತದ ನಿಯಮದಂತೆ ಒಂದು ವರ್ಷ ಭಗವಂತನಾದ ಶ್ರೀಮನ್ನಾರಾಯಣನ ಆರಾಧನೆ ಜೊತೆಗೆ ಬ್ರಾಹ್ಮಣರನ್ನು ಸಂತುಷ್ಠಿ ಮಾಡಬೇಕು. ವ್ರತ ಮಾಡುವಾಗ ಕೆಲವು ನಿಯಮ ಪಾಲಿಸಬೇಕು.
ಅವೇ 1. ಬೆತ್ತಲಾಗಿ ನೀರಿನಲ್ಲಿ ಮುಳುಗಿ ಸ್ನಾನ ಮಾಡಬಾರದು. 2. ಕೂದಲು ಉಗುರು ಬೇಕಾಬಿಟ್ಟಿ ಕತ್ತರಿಸ ಬಾರದು ಹಾಗೆಯೇ ಶುಚಿಯಾಗಿರಬೇಕು. 3. ಮಡಿಯಾದ ಶುಭ್ರವಾದ ಬಟ್ಟೆಯನ್ನೇ ಧರಿಸಬೇಕು. 4. ತೊಳೆಯದೇ ಇರುವ ಬಟ್ಟೆ ಧರಿಸಬಾರದು. 5. ಯಾರ ಮೇಲೂ ಕೋಪಿಸಬಾರದು, ಯಾರನ್ನೂ ಶಪಿಸ ಬಾರದು, ಬಯ್ಯಬಾರದು ಮತ್ತು ಸುಳ್ಳು ಹೇಳಬಾರದು. 6. ಪ್ರಾಣಿ ಹಿಂಸೆ ಮಾಡಬಾರದು, ಮಾಂಸ ಸೇವನೆ ಮಾಡಬಾರದು. 7. ದುರ್ಜನರನ್ನು ಮಾತನಾಡಿಸಬಾರದು. 8. ಎಂಜಲು ಅನ್ನ, ಅಶುಚಿ ಇರುವವರು ನೀಡಿದ ಅನ್ನ ತಿನ್ನಬಾರದು. ಬೊಗಸೆಯಲ್ಲಿ ನೀರು ಕುಡಿಯಬಾರದು. 9. ಎಂಜಲು ಬಾಯಿಂದ ಆರಾಧನೆ ಮಾಡಬಾರದು. 10. ಎಂಜಲು ಬಾಯಿಂದ, ಉತ್ತರಿಯ ಇಲ್ಲದೆ, ಏಕ ವಸ್ತ್ರಧಾರಿಯಾಗಿ ತಲೆಕೂದಲು ಕೆದರಿಕೊಂಡು, ಶೃಂಗಾರವಿಲ್ಲದೆ, ಮಾತಿನ ಸಂಯಮ ಇಲ್ಲದೆ ಹೊರಗೆ ಹೋಗಬಾರದು. 11. ಹೊರಗೆ ಹೋಗಿ ಬಂದಾಗ ಕೈ ಕಾಲು ತೊಳೆಯದೆ ಗೃಹದ ಒಳಗೆ ಪ್ರವೇಶ ಮಾಡಬಾರದು. 12. ಕಾಲು ತೊಳೆಯದೆ, ಒದ್ದೆ ಕಾಲುಗಳಿಂದ, ಅಪವಿತ್ರ ಸ್ಥಿತಿಯಲ್ಲಿ ಉತ್ತರ/ ಪಶ್ಚಿಮ ಕಡೆಗೆ ತಲೆ ಹಾಕಿ ಮಲಗಬಾರದು. 13. ಬೆತ್ತಲಾಗಿ, ಬೇರೊಬ್ಬರ ಜೊತೆಗೆ ಮಲಗಬಾರದು. 14. ನಿಂತು ಕೊಂಡು ಪಾನೀಯ, ಆಹಾರ ಸೇವನೆ ಮಾಡಬಾರದು. 15. ಸದಾ ಪವಿತ್ರವಾಗಿ ಇರಬೇಕು. 16. ಪ್ರಾತಃ ಕಾಲದಲ್ಲಿ ಉಪಹಾರದ ಮುಂಚೆ ಗೋವು, ಬ್ರಾಹ್ಮಣ, ಲಕ್ಷ್ಮಿ ಹಾಗೂ ನಾರಾಯಣರನ್ನು ಪೂಜಿಸಿ/ಧ್ಯಾನಿಸಿ ಸೇವಿಸ ಬೇಕು. ಇತ್ಯಾದಿ ನಿಯಮ ಇರುವ ಪುಂಸವನ ವ್ರತ ದಿತಿ ಅನುಷ್ಠಾನ ಮಾಡುತ್ತಾಳೆ.
ಇದರ ಸುಳಿವು ಪಡೆದ ದೇವೇಂದ್ರ ದಿತಿ ದೇವಿಯ ಸೇವಕನಾಗಿ ಸೇರಿ ದಿತಿದೇವಿಯು ಯಾವಾಗ ನಿಯಮ ಮುರಿಯುತ್ತಾಳೆ ಎಂದು ಕಾಯುತ್ತಾನೆ. ಅದೊಂದು ದಿನ ದಿತಿ ಕಾಲುಗಳನ್ನು ತೊಳೆಯದೆ ಸಂಜೆ ಸಮಯದಲ್ಲಿ ಪಶ್ಚಿಮ ದಿಕ್ಕಿಗೆ ತಲೆ ಹಾಕಿ ಮಲಗುತ್ತಾಳೆ. ಈ ಸಮಯಕ್ಕೆ ಕಾದ ದೇವೇಂದ್ರ ದಿತಿದೇವಿಯ ಗರ್ಭ ಪ್ರವೇಶ ಮಾಡಿ ಗರ್ಭದ ಶಿಶುವನ್ನು ವಜ್ರಾಯುಧದಿಂಧ 7 ಭಾಗ ಮಾಡಿ ಆ ಭಾಗಗಳನ್ನು ಮತ್ತೆ 7 ತುಂಡು ಮಾಡಿದರೂ ಭಗವಂತನ ಅನುಗ್ರಹದಿಂದ, ವ್ರತದ ಮಹಿಮೆಯಿಂದ ಅವು ಮರಣಿಸದೆ ಅಳುತ್ತಾ ಅಣ್ಣಾ ನಮ್ಮನ್ನು ಕೊಲ್ಲ ಬೇಡ, ನಾವು ನಿನ್ನ ತಮ್ಮಂದಿರು ನಿನ್ನ ಅನುಯಾಯಿಗಳಾಗುತ್ತೇವೆ ಎಂದಾಗ ದೇವೇಂದ್ರ ಪ್ರಸನ್ನನಾಗಿ ಅವರನ್ನು ಬಿಡುತ್ತಾನೆ ಮತ್ತು ಅವರಿಗೆ ಸೋಮ ಪಾನ ಮಾಡಿಸಿ ದೇವತೆಗಳನ್ನಾಗಿ ಸ್ವೀಕರಿಸುತ್ತಾನೆ. ಆ 49 ಜನ ದೇವತೆಗಳೇ ಮರುದ್ಗಣ ದೇವತೆಗಳು.
ಹೀಗೆ ಪುಂಸವನ ವ್ರತ ಮಾಡಿ ಮಕ್ಕಳನ್ನು ಪಡೆದರೆ ಅವರಿಗೆ ಮೇಲಿನ ವ್ರತದ ಎಲ್ಲಾ ನಿಯಮಗಳು ತಮ್ಮ ಜೀವನದಲ್ಲಿ ಹಾಸುಹೊಕ್ಕಾಗಿ ಜನ್ಮ ಜಾತವಾಗಿ ಪಡೆಯುತ್ತಾರೆ. ಹೀಗೆ ಈ ನಿಯಮಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯಾವುದೇ ದೈಹಿಕ ಮತ್ತು ಮಾನಸಿಕ ಅನಾರೋಗ್ಯಕ್ಕೆ ಈಡಾಗುವುದಿಲ್ಲ.
ಪುಂಸವನ ಎನ್ನುವುದು ಹಿಂದೂ ಸಂಪ್ರದಾಯದ 16 ಸಂಸ್ಕಾರಗಳಲ್ಲಿ ಎರಡನೇಯದು. ಮೊದಲನೆಯದು ಗರ್ಭದಾನ, ಎರಡನೆಯದು ಪುಂಸವನ, ಮೂರನೆಯದು ಸೀಮಂತ. ಹೀಗೆ ಗರ್ಭಸ್ಥ ಶಿಶುವಿಗೇ ಸಂಸ್ಕಾರ ನೀಡಿದರೆ ಉತ್ತಮ ಸಂತಾನ ಪ್ರಾಪ್ತಿ ಆಗುತ್ತದೆ. ಬದಲಾದ ಕಾಲಘಟ್ಟದಲ್ಲಿ ಇದಕ್ಕೆ ಮಹತ್ವ ನೀಡದೆ ಇರುವುದು ಕೂಡಾ ನಮ್ಮ ಮಕ್ಕಳು ಅಧರ್ಮದ ಹಾದಿ ಹಿಡಿಯಲು ಕಾರಣ. ಇಂದು ಗರ್ಭದಾನ ವಿವಾಹ ಪೂರ್ವಕ್ಕೇ ಆಗುತ್ತದೆ, ಪ್ರಸ್ಥ ಅಪ್ರಸ್ತುತ ಆಗಿದೆ. ಇನ್ನು ಪುಂಸವನ ಎಲ್ಲಿ. ಇಂತಹ ವ್ರತಗಳನ್ನು ನಿಯಮಗಳು ನಮ್ಮ ಜೀವನದಲ್ಲಿ ನಾವು ಪಾಲಿಸಿದರೆ ಕೊರೋನಗಿಂತಲೂ ಭೀಕರವಾದ ರೋಗಗಳು ನಮ್ಮನ್ನೇನೂ ಮಾಡದು. ಏನಂತೀರಿ?