ಯಕ್ಷಗಾನದ ಗಾನಶ್ರೀ ಕುಕ್ಕೆ ಸುಬ್ರಹ್ಮಣ್ಯದ ಭವ್ಯಶ್ರೀ ಹರೀಶ್

ಭಾಗವತಿಕೆ ಸಾಮಾನ್ಯ ವಿದ್ಯೆಯಲ್ಲ. ಅದನ್ನು ಕಲಿಯಲು ಸಾಕಷ್ಟು ಶ್ರದ್ಧೆ ಹಾಗೂ ಪರಿಶ್ರಮ ಬೇಕು. ಯಾವುದೇ ವಿದ್ಯೆ ಆಗಿರಬಹುದು ಅದಕ್ಕೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡರೆ ಮಾತ್ರ ಆ ಕಲೆ ಕರಗತವಾಗುವುದಕ್ಕೆ ಸಾಧ್ಯ.

ಯಕ್ಷಗಾನ ಹಾಡುಗಾರಿಕೆ ಮಹಿಳೆಯರಿಗೆ ಕಷ್ಟ. ಮೇಳಗಳಲ್ಲಿ ರಾತ್ರಿಯಿಡೀ ಭಾಗವಹಿಸಬೇಕಾಗುತ್ತದೆ ಎಂಬೆಲ್ಲಾ ಮಾತುಗಳು ಕೇಳಿ ಬರುತ್ತವೆ. ಆದರೆ ನನಗೆ ಹವ್ಯಾಸವಾಗಿದ್ದ ಯಕ್ಷಗಾನ ಹಾಡುಗಾರಿಕೆಯ ವೃತ್ತಿ ಬದುಕಿಗೆ ಬೆಳಕಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಮಾನಸಿಕ ನೆಮ್ಮದಿ, ಖುಷಿ ನೀಡುತ್ತದೆ. – ಭವ್ಯಶ್ರೀ ಹರೀಶ್


ಯಕ್ಷಗಾನ ಕರಾವಳಿ ಕರ್ನಾಟಕದ ಗಂಡುಮೆಟ್ಟಿನ ಕಲೆ ಎಂದೇ ಪ್ರಸಿದ್ಧಿ. ಗೆಜ್ಜೆ ಕಟ್ಟಿ ಪಾತ್ರಗಳಿಗೆ ವೇಷಭೂಷಣ ಧರಿಸಿ ಹೆಜ್ಜೆ ಹಾಕುವ ಮಹಿಳಾ ಮಣಿಯರು ಸಿಗುತ್ತಾರೆ.
ಆದರೆ ಯಕ್ಷಗಾನ ಹಾಡುಗಳನ್ನು ಹಾಡುವವರು ಸಿಗುವುದು ತುಂಬಾ ಕಡಿಮೆ. ಕೆಲವೇ ಕೆಲವು ಮಹಿಳಾ ಭಾಗವತೆಯರಲ್ಲಿ ಮಂಡೆಕೋಲುನ ಭವ್ಯಶ್ರೀ ಕೂಡಾ ಒಬ್ಬರು. ಬಡತನದ ಹಿನ್ನೆಲೆಯಿಂದಲೇ ಬಂದವರಾದರೂ ಕಲಿಕೆಗೆ ಯಾವುದೇ ಬಡತನವಿರಲಿಲ್ಲ. ಶ್ರದ್ಧೆಯಿಂದ ಕಲಿತು ಭಾಗವತಿಕೆಯಲ್ಲಿ ಮಿಂಚುತ್ತಿರುವ ಭವ್ಯಶ್ರೀ ಅವರದ್ದು ಕಂಚಿನ ಕಂಠ. ಈಗಾಗಲೇ ಸಾವಿರಾರು ಕಾರ್ಯಕ್ರಮಗಳಲ್ಲಿ ಯಕ್ಷಗಾನದ ಹಾಡುಗಳನ್ನು ನಿರರ್ಗಳವಾಗಿ ಹಾಡಿ ಸೈ ಎನ್ನಿಸಿಕೊಂಡಿದ್ದಾರೆ.
ಇವರ ತಾತ ರಾಮಪ್ಪ ಗೌಡ ಅವರು ಯಕ್ಷಗಾನದ ಅಭಿಮಾನಿ. ತಂದೆ ವಿಶ್ವನಾಥ ಯಕ್ಷಗಾನ ಹವ್ಯಾಸಿ ವೇಷಧಾರಿ. ಹೀಗಾಗಿ ಯಕ್ಷಗಾನದ ಬಗ್ಗೆ ಎಳವೆಯಲ್ಲಿಯೇ ಈ ಕಲೆಯ ಬಗ್ಗೆ ವಿಶೇಷ ಅಭಿಮಾನ. ತಾತನೊಂದಿಗೆ ಯಕ್ಷಗಾನ ಪ್ರಸಂಗಗಳನ್ನು ಆಸಕ್ತಿಯಿಂದ ಕುಳಿತು ನೋಡುತ್ತಿದ್ದ ಭವ್ಯಶ್ರೀ ಅವರಿಗೆ ಯಕ್ಷಗಾನದ ಹಾಡುಗಳನ್ನು ಕೇಳುವಾಗಲೆಲ್ಲ ತಾನೂ ಒಂದು ದಿನ ವೇದಿಕೆಯಲ್ಲಿ  ಯಕ್ಷಗಾನದ ಹಾಡುಗಳನ್ನು ಹಾಡಬೇಕೆಂಬ ಬಯಕೆ. ಬಾಲ್ಯದಲ್ಲಿಯೇ ವಿಶ್ವವಿನೋದ ದೇಲಂಪಾಡಿ ಅವರಲ್ಲಿ ತರಬೇತಿ ಪಡೆದು ಇಂದು ಸಾವಿರಾರು ಯಕ್ಷಗಾನ ಮೇಳಗಳಲ್ಲಿ ಯಕ್ಷಗಾನದ ಹಾಡುಗಳನ್ನು ಹಾಡಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಸುಳ್ಯ, ಉತ್ತರಕನ್ನಡ, ಬೆಂಗಳೂರು, ಮುಂಬೈ, ದೆಹಲಿಯಲ್ಲಿಯೂ ಕಾರ್ಯಕ್ರಮ ನೀಡಿದ ಹೆಗ್ಗಳಿಕೆ ಇವರದ್ದು
ಯಕ್ಷಗಾನ ಹಾಡುಗಾರಿಕೆಯ ಮೂವತ್ತು ರಾಗಗಳಲ್ಲಿ ಪ್ರಾವೀಣ್ಯತೆ ಪಡೆದಿರುವ ಭವ್ಯಶ್ರೀ, ಯಕ್ಷಗಾನದ  ಛಂದಸ್ಸಿನ ಪಾಠವನ್ನು ಗಣೇಶ್ ಕೋಲೆಕ್ಕಾಡಿ ಅವರಲ್ಲಿ ಅಭ್ಯಸಿಸುತ್ತಿದ್ದಾರೆ. ಕಲಿತ ಛಂದಸ್ಸಿನ ಪ್ರಕಾರದಂತೆ ಈಗಾಗಲೇ ನಾಲ್ಕು ಯಕ್ಷಗಾನದ ಹಾಡುಗಳನ್ನು ಬರೆದಿದ್ದು, ಅವುಗಳಿಗೂ ರಾಗ ಸಂಯೋಜಿಸಿ ಹಾಡಿದ್ದಾರೆ.

30 ರಾಗಗಳಲ್ಲಿ ಪರಿಣತಿ ಹೊಂದಿರುವ  ಭವ್ಯಶ್ರೀ ಅವರು ಹೇಳುವ ಪ್ರಕಾರ ಯಕ್ಷಗಾನದಲ್ಲಿರುವುದು ಶಾಸ್ತಿçÃಯ ಸಂಗೀತದ ಹಾಗೆ ಶಾಸ್ತ್ರೀಯ ರಾಗಗಳಲ್ಲ. ಎಲ್ಲ ರಾಗಗಳು ಯಕ್ಷಗಾನದಲ್ಲಿ ಬಳಸುವುದಿಲ್ಲ. ಕೆಲವು ರಾಗಗಳನ್ನು ಮಾತ್ರ ಬಳಸಿಕೊಳ್ಳುತ್ತೇವೆ. ಯಕ್ಷಗಾನ ಪ್ರಸಂಗದ ಸಂದರ್ಭಕ್ಕೆ ಅನುಗುಣವಾಗಿ ರಾಗಗಳು ಬಳಕೆಯಾಗುತ್ತವೆ ಎನ್ನುತ್ತಾರೆ.
ಇತ್ತೀಚಿನ ದಿನಗಳಲ್ಲಿ ಕರಾವಳಿ ಭಾಗದಲ್ಲಿಹೆಚ್ಚಿನ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಯಕ್ಷಗಾನ ಕಾರ್ಯಕ್ರಮ ಇದ್ದೇ ಇರುತ್ತದೆ. ಗಾನವೈಭವ, ತಾಳಮದ್ದಳೆಯಂತಹ ಕಾರ್ಯಕ್ರಮಗಳು ಹೆಚ್ಚಾಗಿನಡೆಯುತ್ತಿರುತ್ತವೆ. ಹಾಗಾಗಿ ಅವಕಾಶಗಳು ಹೆಚ್ಚಿವೆ ಎನ್ನುತ್ತಾರವರು. ಪ್ರತಿ ಯಕ್ಷಗಾನ ಪ್ರಸಂಗದಲ್ಲಿ 30-5೦ ಹಾಡುಗಳು ಇರುತ್ತವೆ. ಕೆಲವೊಮ್ಮೆ ಒಂದೇ ದಿನ ನಾಲ್ಕು ಪ್ರಸಂಗಗಳಲ್ಲಿ ಭಾಗವಹಿಸಿದ್ದೂ ಇದೆ. ಹಾಡುವುದು ಕಷ್ಟವಲ್ಲ. ಅದಕ್ಕೆ ಶ್ರದ್ಧೆ, ಪರಿಶ್ರಮ, ಕಲೆಗೆ ತಮ್ಮನ್ನು ಅರ್ಪಿಸಿಕೊಳ್ಳುವ ಮನೋಭಾವ ಬೇಕು ಎನ್ನುತ್ತಾರವರು.
ಸ್ಥಳೀಯರ ಬೆಂಬಲ, ಗುರುಗಳು, ಸಾಹಿತಿ, ಯಕ್ಷಗಾನ ಕಲಾವಿದ ಪ್ರಭಾಕರ ಜೋಷಿ, ಗುರುಗಳಾದ ಗಣೇಶ್ ಕೊಲೆಕ್ಕಾಡಿ, ಪತಿ ಹರೀಶ್ ಕುಲ್ಕುಂದ, ಹೀಗೆ ಅನೇಕರ ಪ್ರೋತ್ಸಾಹವನ್ನು ಸ್ಮರಿಸುತ್ತಾರೆ. ಇವರ ಸಾಧನೆಗೆ ಹಲವು ಗೌರವ, ಸಮ್ಮಾನಗಳು ಸಂದಿವೆ.
ಬಿಎಡ್, ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರೂ ಯಕ್ಷಗಾನ ಹಾಡುಗಾರಿಕೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ.

ಯಕ್ಷಗಾನ ನಮ್ಮ ನಾಡಿನ ಕಲಾ ಸಂಸ್ಕೃತಿಯ ಪ್ರತೀಕ, ಅದನ್ನು ಜನತೆ ಪ್ರೋತ್ಸಾಹಿಸಿ ಪ್ರಚುರಪಡಿಸಬೇಕು. ಹಾಗಾದಾಗ ಮಾತ್ರ ಕಲೆಯ ಉಳಿವು ಸಾಧ್ಯ ಎನ್ನುತ್ತಾರೆ ಭವ್ಯಶ್ರೀ.

Related Articles

ಪ್ರತಿಕ್ರಿಯೆ ನೀಡಿ

Latest Articles