* ಹನುಮೇಶ್. ಜಿ ಮಳಗಿ
ಗೋಪುರದ ಮೇಲೆ ನಿಂತು/
ಕಾಗದ ಬಾಲ ಸೂತ್ರವಿಲ್ಲದ/
ಗಾಳಿಪಟ ಹಾರಿಸುವ ಕೈಕಾಲಿಲ್ಲದ ಮಹದಾಶಿಗನೆ//
ದಾರವಲ್ಲದ ದ್ವಾರಕೆ ಮಾಂಜಾ ಸವರಿ ಮೊಂಡಗೈ ಮೈ ಕೊರೆದುಕೊಂಡು/
ಸುರಿಯದಾ ರಕುತವ ನಿಲ್ಲಿಸಲೆಳಸುವ ಸಾಹಸಿಗನೆ//
ನೋಡಿಲ್ಲಿ ಹರಿದು ಮುರಿದು ಚೆಲ್ಲಾಪಿಲ್ಲಿ/
ಹರಡಿರುವ ಪಟಗಳು ಗಾಳಿ ಕಾಲಿಗೆ ಸಿಕ್ಕು/
ಹಾದಿ ಬೀದಿ ಹುಡುಗರು ಹರಿದ ಪಟಗಳ/
ದೋಣಿ ಮಾಡಿ ನೀರಿಲ್ಲದ ಕೆರೆಯಲಿ ಬಿಡುತಿಹವು//
ತೇಲಲಾರದೆ ತೆವಳುತಿಹ ದೋಣಿಗಳಲಿ ತುಂಬಿಹುದು ಮೂಟೆ ಮರಳು/
ಬಾನಲಿ ತುಂಬಿದ ಹತ್ತಿಯ ಬಿಳಿ ಮೋಡಹನಿ ನೀರಿರುವ ಕಿರಣಗಳ ಅಪ್ಪಲು/ ತವಕಿಸುತ //
ಬಂಧು ಬಳಗ ಬಳ್ಳಕ ಇರುವತನಕ/
ಅಂಧಾಧುಂದಿ ವೆಚ್ಚಕೆ ಮೂಲವೆಲ್ಲಿ/
ಅಂದುದಂದಿಗೆ ಹೊಂದಿಸಲು ತಿಣುಕುವ/
ಸಂದಿಯ ಕಸದಲಿ ಕಾಸಡಕುವ ನತದೃಷ್ಟ//
ಗೋಪುರದ ಗಾಳಿ ಸುಂಯ್ಗುಡುತ ಪಟದ ಚಾಪುಟವ ಅಣಕಿಸುತಿಹುದು ಸೂತ್ರ/
ಪಾಪ ಹಾರದ ಪಟದ ತಟವಟ ಕಂಡು ಮಗುಮನ ಕೈ ತಟ್ಟುತ ಕೇಕಿಸುತಿಹುದು// ಸೂತ್ರವಿಲ್ಲದ ಪದ್ಯ ಅರ್ಥವಿಲ್ಲದ ಪಟ/
ಇಳಿಯದೋ ಏರದೋ//