ಶ್ರೀಮಜ್ಜಯತೀರ್ಥರ ಆರಾಧನಾ ಮಹೋತ್ಸವ

*ಪ್ರಸನ್ನ ಕುಲಕರ್ಣಿ
ಹರಿ ಭಜನೆ ಮಾಡೋ ನಿರಂತರ ಸೇವಾ ಪ್ರತಿಷ್ಠಾನ ಸಿಂಧನೂರು

ಮಾಧ್ವ ಸಿದ್ಧಾಂತವೆಂಬೊ ಗಗನದಲ್ಲಿ ಪ್ರಕಾಶಿಸಿದ ಪ್ರಖರವಾದ ಜ್ಞಾನ ಕಿರಣ ಶ್ರೀ ಜಯತೀರ್ಥರು. ಅವರ ಹೆಸರಿನ ಮೊದಲೆರಡು ಕ್ಷೇತ್ರಗಳು ಸೂಚಿಸುವಂತೆ ವೇದಾಂತ ಸಾಮ್ರಾಜ್ಯದಲ್ಲಿ ಜಯದ ಮಾಲೆಯನ್ನು ಧರಿಸಿದ ಮಹಾನುಭಾವರು. ಜಯ ಎಂದರೆ ಇಂದ್ರಿಯಗಳನ್ನು ಜಯಿಸಿದವರೂ, ತೀರ್ಥ ಎಂದರೆ ಜ್ಞಾನ ಸಂಪನ್ನರೂ ಎಂದು ಅರ್ಥೈಸಿದ್ದಾರೆ. ಶ್ರೀಮಂತ ಮನೆತನದಲ್ಲಿ ಹುಟ್ಟಿದವರಾದರೂ ಚಿಕ್ಕ ವಯಸ್ಸಿನಲ್ಲಿಯೇ ಸಕಲ ವೈಭೋಗಗಳನ್ನೂ ತ್ಯಜಿಸಿ ಸನ್ಯಾಸ ದೀಕ್ಷೆ ಪಡೆದವರು.

ಶ್ರೀ ಜಯತೀರ್ಥರು
ನಾದಬ್ರಹ್ಮ ಪಾಂಡುರಂಗ ವಿಠಲನು ನೆಲೆಸಿರುವ ಪಂಢರಪುರದ ಹತ್ತಿರವಿರುವ ಮಂಗಳವೇಡೆ ಎಂಬ ಊರಿನಲ್ಲಿ ಹುಟ್ಟಿದರು. ಇವರಿಗೆ ತಂದೆ- ತಾಯಿಗಳು ಇಟ್ಟ ಹೆಸರು ರಘುನಾಥ ಎಂದು. ಮಗ ಗಟ್ಟಿಮುಟ್ಟಾಗಿ ಬೆಳೆಯಲಿ ಎಂದು ಪ್ರೀತಿಯಿಂದ ಧೋಂಡೋಪಂಥ ಎಂದು ಕರೆಯುತ್ತಾರೆ. ಧೋಂಡೋ ಎಂದರೆ ಮರಾಠಿಯಲ್ಲಿ ಕಲ್ಲು ಎಂದರ್ಥ. ಶ್ರೀ ಅಕ್ಷೋಭ್ಯತೀರ್ಥರು ಇವರ ಆಶ್ರಮ ಗುರುಗಳು ಮತ್ತು ವಿದ್ಯಾಗುರುಗಳು. ಧೋಂಡೋಪಂಥ ಒಂದು ಸಾರಿ ಅಶ್ವ ಸವಾರಿಯೊಂದಿಗೆ ಬೇಟೆಯಾಡಲು ಕಾಡಿಗೆ ಹೋಗುತ್ತಾನೆ. ಬಿಸಿಲಿನ ಬೇಗೆಯಿಂದ ಬಾಯಾರಿ ನೀರು ಕುಡಿಯಲೆಂದು ಕಾಡಿನ ಹತ್ತಿರದಲ್ಲೇ ಹರಿಯುತ್ತಿದ್ದ ಭೀಮಾ ನದಿಗೆ ನೀರು ಕುಡಿಯಲೆಂದು ಬರುತ್ತಾನೆ. ಕುದುರೆಯ ಮೇಲೆ ಕುಳಿತುಕೊಂಡೇ ನದಿಯಲ್ಲಿ ಪ್ರಾಣಿಗಳು ಕುಡಿಯುವ ಹಾಗೆ ನೀರನ್ನು ಕುಡಿಯುತ್ತಾನೆ.ಈ ದೃಶ್ಯವನ್ನು ನದಿಯ ಎದುರಿನ ದಡದಲ್ಲಿ ಕುಳಿತಿದ್ದ ಶ್ರೀ ಅಕ್ಷೋಭ್ಯತೀರ್ಥರು ನೋಡುತ್ತಾರೆ. ಯತಿಗಳನ್ನು ನೋಡಿದ ಧೋಂಡೋಪಂಥನು ಶ್ರೀ ಅಕ್ಷೋಭ್ಯತೀರ್ಥ ಗುರುಗಳ ಆಶೀರ್ವಾದ ಪಡೆಯಲು ಬರುತ್ತಾನೆ. ಅಕ್ಷೋಭ್ಯತೀರ್ಥರು ಕಿಂ ಪಶು ಪೂರ್ವದೇಹೇ? (ನೀನು ಹಿಂದಿನ ಜನ್ಮದಲ್ಲಿ ಪಶುವಾಗಿದ್ದೆಯಾ?) ಎಂದು ಧೋಂಡೋಪಂಥನಿಗೆ ಕೇಳುತ್ತಾರೆ. ಗುರುಗಳ ಈ ಪ್ರಶ್ನೆ ಧೋಂಡೋಪಂಥನ ಮನಸ್ಸನ್ನು ಜಾಗೃತಗೊಳಿಸಿತು.

ತನ್ನ ಹಿಂದಿನ ಜನ್ಮದಲ್ಲಿ ಪಶುವಾಗಿ ಅವತರಿಸಿದ್ದು, ಆಚಾರ್ಯ ಮಧ್ವರ ಗ್ರಂಥಗಳನ್ನು ಬೆನ್ನ ಮೇಲೆ ಹೊತ್ತಿದು, ಆಚಾರ್ಯರ ಪಾಠಗಳನ್ನು ಆಲಿಸಿದ್ದು ಎಲ್ಲಾ ಸ್ಮರಣೆಗೆ ಬರುತ್ತದೆ. ಧೋಂಡೋಪಂಥನು ಗುರುಗಳಿಗೆ ಭಕ್ತಿಯಿಂದ ನಮಸ್ಕರಿಸುತ್ತಾರೆ. ಅಕ್ಷೋಭ್ಯತೀರ್ಥರು ತಮ್ಮ ಉತ್ತರಾಧಿಕಾರಿಗೆ ಹುಡುಕುತ್ತಿದ್ದರು. ತಮಗಾದ ಸ್ವಪ್ನ ಸೂಚನೆಯಂತೆ ತಮ್ಮ ಹತ್ತಿರ ಬಂದು ಆಶೀರ್ವಾದ ಪಡೆದ ಧೋಂಡೋಪಂಥನ ಪ್ರಾರ್ಥನೆಯಂತೆ ಆಶ್ರಮ ನೀಡಿ ಜಯತೀರ್ಥರು ಎಂದು ನಾಮಕರಣ ಮಾಡುತ್ತಾರೆ.

ಶ್ರೀ ಜಯತೀರ್ಥರು ಶ್ರೀಮನ್ಯಾಯಸುಧಾ ಎಂಬ ಶ್ರೇಷ್ಠ ಗ್ರಂಥವನ್ನು ರಚಿಸಿದ್ದಾರೆ. ಜಯತೀರ್ಥರನ್ನು ಟೀಕಾರಾಯರು, ಟೀಕಾಚಾರ್ಯರೆಂದೂ ಕರೆಯುತ್ತಾರೆ. ಶ್ರೀಜಯತೀರ್ಥರು ತಮ್ಮ ಬಹಳಷ್ಟು ಟೀಕಾ ಗ್ರಂಥಗಳನ್ನು ಯರಗೋಳ ಗುಹೆಯಲ್ಲಿ ರಚಿಸಿದರು ಎಂದು ಹೇಳಲಾಗುತ್ತದೆ.

ಶ್ರೀವ್ಯಾಸರಾಜರು ಜಯತೀರ್ಥರು ಕುರಿತು ಎದುರಾರೈ ಗುರುವೇ ಸಮರಾರೈ ಎಂದು ಕೊಂಡಾಡಿದ್ದಾರೆ. ಹರಿದಾಸರುಗಳು ಶ್ರೀಜಯತೀರ್ಥರನ್ನು ಹಾಡಿ ಹೊಗಳಿದ್ದಾರೆ. ಶ್ರೀವಿಜಯದಾಸರು ಟೀಕಾಚಾರ್ಯರ ಪಾದ ಧೂಳಿಯ ಕಣವು ತಾಕಿದ ಮನುಷ್ಯನ್ನೇ ಧನ್ಯನೆಂದು ವರ್ಣಿಸಿದ್ದಾರೆ.

ಜ” ಎನ್ನಲು ಜಯಶೀಲನಾಗುವ
“ಯ” ಎನ್ನಲು ಯಮನಂಜುವ
“ತೀ” ಎನ್ನಲು ತಿಮಿರಪಾತಕನಾಶ
“ರ್ಥ” ಎನ್ನಲು ತಾಪತ್ರಯ ಶಮನ

ಶ್ರೀ ಜಯತೀರ್ಥರು 1364ರಲ್ಲಿ ಸನ್ಯಾಸಶ್ರಮ ಸ್ವೀಕರಿಸಿ 23 ವರ್ಷಗಳ ಕಾಲ ವೇದಾಂತ ಸಾಮ್ರಾಜ್ಯವನ್ನು ಅಲಂಕರಿಸಿ 1387 ಆಷಾಢ ಕೃಷ್ಣ ಪಂಚಮಿಯಂದು ಶ್ರೀ ಹರಿಯ ಪಾದರವಿಂದ ಸೇರುತ್ತಾರೆ.(ಆಷಾಡ ಕೃಷ್ಣ ಪಂಚಮಿ ಮದ್ಯಾರಾಧನಾ ಮಹೋತ್ಸವ)

ಸಾರಿ ಭಜಿಸಿರೋ ಟೀಕಾರಾಯರಂಘ್ರಿಯಾ
ಘೋರಪಾತಕಾಂಭುದಿಯ ಪಾರು ಮಾಳ್ಪರಾ !!

ಚಿತ್ರೈ: ಪದೈಶ್ಚ ಗಂಭೀರೈ- ರ್ವಾಕ್ಯೈರ್ಮಾನೈರಖಂಡಿತೈ: |
ಗುರುಭಾವಂ ವ್ಯಂಜಯಂತೀ
ಭಾತಿ ಶ್ರೀಜಯತೀರ್ಥವಾಕ್ ||

ಎಲ್ಲರಿಗೂ ಶ್ರೀ ಜಯತೀರ್ಥರ ಆರಾಧನ ಮಹೋತ್ಸವದ ಶುಭಾಶಯಗಳು. ಅವರ ಆರಾಧನಾ ಪರ್ವಕಾಲದಲ್ಲಿ ಶ್ರೀ ಗುರುಗಳ ಅನುಗ್ರಹ ನಮ್ಮ ನಿಮ್ಮೆಲ್ಲರ ಮೇಲೆ ಸದಾ ಇರಲಿ ಎಂದು ಪ್ರಾರ್ಥಿಸುತ್ತೆ.

Related Articles

ಪ್ರತಿಕ್ರಿಯೆ ನೀಡಿ

Latest Articles