ನಿನ್ನೆ ಡಿ.13,2020 ರಂದು ವಿಧಿವಶರಾದ ವಿದ್ವಾನ್ ಶ್ರೀ ಬನ್ನಂಜೆ ಗೋವಿಂದಾಚಾರ್ಯ ಅವರ ಶಿಷ್ಯರಲ್ಲೊಬ್ಬರಾದ ಧಾರವಾಡದ ಎಚ್.ಜಿ.ಮಳಗಿ ಅವರು ಗುರುಗಳಿಗೆ ಕವನದ ಮೂಲಕ ನುಡಿ ನಮನ ಸಲ್ಲಿಸಿದ್ದಾರೆ.
ಒಂದು ಮಾತೂ ಹೇಳದೇ
ಮನದ ಮಾತೂ ಕೇಳದೇ
ಹೊರಟೇ ಹೋದರು
ನನ್ನ ಗುರುಗಳು.
ಭವದ ಬನ್ನಗಳ ಅಂಜಿಕೆಗಳ ಕಳೆಯುತ
ಮನದ ಕತ್ತಲೆಯೋಡಿಸುತ
ಮಾನಾಭಿಮಾನಗಳ ಹಿಡಿದುಡುವ ಕಲೆಯ ಕಲಿಸುತ
ಅವಧೂತರಂತೆ ತಾವು ಮಾತ್ರ
ಬಿಮ್ಮನೇ ಹೊರಟೇ ಹೋದರು.
ಮುಚ್ಚಿದ್ದನ್ನು ಬಿಚ್ಚುತ
ಅರಿವಿನ ಸಂಪತ್ತು ತೋರುತ
ಗಳಿಸಿದ್ದನ್ನು ಹಂಚುತ
ತಾವು ಮಾತ್ರ ಬರಿ ಜೋಳಿಗೆ ಝಾಡಿಸಿಕೊಳ್ಳುತ
ಹೊರಟೇ ಹೋದರು.
ಶಾಸ್ತ್ರದ ಮಿಥ್ಯಾಕಟ್ಟು ಕಳಚುತ
ಅಕಾರದಿಂದ ಓಂಕಾರ ನಿರ್ಮಿಸುತ
ಸ್ತ್ರೀಪುರುಷರೆಲ್ಲರೂ ಜಪಿಸುವಂತೆ ಹೇಳುತ
ತಾವು ಮಾತ್ರ ಮೌನವಾಗಿ
ಹೊರಟೇ ಹೋದರು.
ಮಧ್ವರ ದ್ವೈತಾಧ್ವರಕೆ ಅಶ್ವವಾಗಿ
ತಮ್ಮನ್ನೇ ಅರ್ಪಿಸಿಕೊಳ್ಳುತ
ನಮಗದರ ಫಲ ನೀಡುತ
ತಾವು ಮಾತ್ರ ಹಯಗ್ರೀವನನರಸಿ
ಹೊರಟೇ ಹೋದರು.
ಮಾತು ನಿಲ್ಲಿಸಿ ಮೌನವಾದರು
ನಮ್ಮ ಹೃದಯದೊಳಗೆ ಕಂಬನಿಯ ತುಂಬುತ
ತಾವು ಮಾತ್ರ ಸಂತರಾಗಿ
ಸಂತೆಯೊಳಗೆ ಕಳೆದೇ ಹೋದರು.
ಹೃದಯ ತುಂಬಿ ನಮಿಸುವುದೊಂದನ್ನೇ ನಮಗೆ ಬಿಟ್ಟು
ನಿರ್ವಿಕಾರವಾಗಿ ಬಾರದೂರಿನ ಅರಸರಾಗಿ
ಅನಂತದೊಳಗೆ ಕರಗಿ ಹೇಳದೇ ಕೇಳದೇ
ಹೊರಟೇ ಹೋದರು.