ಈ ಬಾರಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಮಂಜಮ್ಮ ಅವರು ನಡೆದು ಬಂದ ಹಾದಿ ಅಷ್ಟು ಸುಲಭದಲ್ಲ. ಆದರೆ ಆತ್ಮವಿಶ್ವಾಸದಿಂದಲೇ ಬದುಕನ್ನು ಎದುರಿಸಿದ ರೀತಿ ಅವರಿಗೆ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷೆಯಾಗುವವರೆಗಿನ ಯಶಸ್ಸು ತಂದುಕೊಟ್ಟಿದೆ. ಅವರ ಬದುಕಿನ ಕಥಾನಕವೇ ರೋಚಕ.
ಬಳ್ಳಾರಿ ಮೂಲದವರಾದ ಜೋಗತಿ ಮಂಜಮ್ಮ ಅವರು ಹುಲಿಗೆಮ್ಮ ದೇವಸ್ಥಾನದಲ್ಲಿಎರಡೂವರೆ ದಶಕಗಳ ಹಿಂದೆ ಜೋಗತಿಯಾಗಿ ದೀಕ್ಷೆ ತೆಗೆದುಕೊಳ್ಳುತ್ತಾರೆ. ಅಂದಿನಿಂದ ಇಂದಿನವರೆಗೆ ಜೋಗತಿ ಕಲೆಯ ಉಳಿವಿಗಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಇದರ ಜೊತೆಗೆ ನಾಟಕ, ಜಾನಪದ ಕಲಾ ಪ್ರಕಾರಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ತೃತೀಯ ಲಿಂಗಿಯೊಬ್ಬರು ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ರಾಗಿ ನೇಮಕಗೊಂಡಿರುವುದು ಇದೇ ಮೊದಲಬಾರಿ. ಇದು ಮಂಜಮ್ಮ ಅವರ ಕಲಾಸಾಧನೆಗೆ ಸಿಕ್ಕಿದ ಮನ್ನಣೆ.
ಜೋಗತಿ ನೃತ್ಯ ಉತ್ತರ ಕರ್ನಾಟಕ ಭಾಗದಲ್ಲಿಕಂಡುಬರುವ ನೃತ್ಯಪ್ರಕಾರಗಳಲ್ಲಿಒಂದು.ಯಲ್ಲಮ್ಮ, ರೇಣುಕಾದೇವಿ, ಹುಲಿಗೆಮ್ಮ ದೇವತೆಗಳ ಜಾತ್ರೆ ವೇಳೆ ದೇವಿಯರ ಸ್ತುತಿಗಾಗಿ ಹಾಡುವ, ನೃತ್ಯ ಮಾಡುವ ಪ್ರಕಾರಕ್ಕೆ ಜೋಗತಿ ಕಲೆ ಎನ್ನುತ್ತಾರೆ. ಹೊಟ್ಟೆಪಾಡಿಗಾಗಿ ಈ ನೃತ್ಯವನ್ನು ಅಭ್ಯಾಸ ಮಾಡಿ, ಈ ಜಾನಪದ ಕಲೆಗೆ ಜೀವನವನ್ನೇ ಮುಡುಪಾಗಿಟ್ಟಿರುವ ಜೋಗತಿ ಮಂಜಮ್ಮ, ಹುಟ್ಟಿದ್ದು ಮಂಜುನಾಥ ಆಗಿ. ಮಂಜಮ್ಮಳಾಗಿ ಬೆಳೆದ ಕಥೆ ನಿಜಕ್ಕೂ ಕುತೂಹಲ. ಅವರ ಸಾಧನೆಯ ಬಗ್ಗೆ ಹೇಳಿ ಎಂದು ಕೇಳಿದರೆ, ’’ನಾನು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ನನ್ನ ವ್ಯಥೆಯ ಕಥೆ ಹೇಳಲು 3 ದಿನ ಸಾಲದು’ ಎನ್ನುತ್ತಾರೆ.
ಇವರು ಬಳ್ಳಾರಿ ಜೊಲ್ಲೆಯ ಕಲ್ಲುಕಂಬ ಗ್ರಾಮದವರು. ತಂದೆ ಹನುಮಂತಯ್ಯ ಶೆಟ್ಟಿ, ತಾಯಿ ಜಯಲಕ್ಷ್ಮೀ. ಎಸ್‌ಎಸ್‌ಎಲ್‌ಸಿವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ.
7ನೇ ತರಗತಿಯಲ್ಲಿದ್ದಾಗ ತನ್ನ ದೇಹದಲ್ಲಾದ ಬದಲಾವಣೆ ಅವರ ಮನಸ್ಸಿಗೆ ಕಸಿವಿಸಿಯುಂಟು ಮಾಡುತ್ತದೆ. ಯಾರಲ್ಲೂಹೇಳಿಕೊಳ್ಳಲಾಗದ ಸಂಗತಿಯದು. 10ನೇ ತರಗತಿ ಓದುವಷ್ಟರ ಹೊತ್ತಿಗೆ ಎಲ್ಲರಿಗೂ ತಿಳಿಯುವಂತೆ ಇಡೀ ಶರೀರದಲ್ಲಿಬದಲಾವಣೆಯಾಗುತ್ತದೆ. ಹಾಗಾಗಿ ತಂದೆ ಮಗನನ್ನು ಶಾಲೆ ಬಿಡಿಸುತ್ತಾರೆ. ನಂತರ ಹೆತ್ತವರು ತನ್ನ ಮಗನನ್ನು ಹುಲಿಗೆಮ್ಮ ದೇವತೆಗೆ ಮುಡಿಪಾಗಿಡಲು ನಿರ್ಧರಿಸುತ್ತಾರೆ. ಅಲ್ಲಿನ ಪ್ರಸಿದ್ಧ ಹುಲಿಗೆಮ್ಮ ದೇಗುಲದಲ್ಲಿಜೋಗತಿ ದೀಕ್ಷೆ ಕೊಡಿಸುತ್ತಾರೆ.
ತೃತೀಯ ಲಿಂಗಿ ಆಗಿರುವ ಮಂಜಮ್ಮ ಅವರು ಹೇಳುವ ಪ್ರಕಾರ, ’’ಜೋಗತಿ ಕಲೆ ಇಂದಿಗೂ ಜೀವಂತವಾಗಿ ಇಟ್ಟಿರುವುದು ನಮ್ಮದೊಂದೇ ತಂಡ. ನಾವು ಹದಿನೈದು ಮಂದಿ ಇದ್ದೇವೆ. ಹಿಂದೆಲ್ಲಾಹೊಟ್ಟೆಪಾಡಿಗಾಗಿ ಜಾತ್ರೆಗಳಲ್ಲಿ, ಸಂತೆಗಳಲ್ಲಿ, ಗ್ರಾಮಗಳಿಗೆ ಹೋಗಿ ಜೋಗತಿ ಕಲಾ ಪ್ರದರ್ಶನ ಮಾಡಿ ಜನರು ಕೊಟ್ಟಷ್ಟು ಹಣ, ಅವರು ನೀಡಿದ ದವಸ ಧಾನ್ಯಗಳಿಂದ ಜೀವನ ನಡೆಸುತ್ತಿದ್ದೆವು. ಈಗೀಗ ಜಾನಪದ ವೇದಿಕೆಗಳು ನಮ್ಮನ್ನು ಕರೆಸಿ ಕಾರ್ಯಕ್ರಮ ನೀಡುವಂತೆ ಕೇಳಿಕೊಳ್ಳುತ್ತಾರೆ. ಸ್ವಲ್ಪ ಮಟ್ಟಿಗೆ ಅವಕಾಶಗಳು ಹೆಚ್ಚಿವೆ. ಆದರೆ ಇದನ್ನು ಕಲಿಯಲು ಬರುವವರ ಸಂಖ್ಯೆ ಕಡಿಮೆ. ಇಂತಹ ಕಲೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿಪ್ರಯತ್ನ ಮಾಡುತ್ತೇನೆ’ ಎನ್ನುತ್ತಾರವರು.
ಮಂಜಮ್ಮ ಮತ್ತು ಅವರ ತಂಡ ಜೋಗತಿ ನೃತ್ಯ ಮಾತ್ರವಲ್ಲಯಲ್ಲಮ್ಮನ ನಾಟಕ ಪ್ರದರ್ಶನ ಮಾಡುತ್ತಾ ಗ್ರಾಮೀಣ ರಂಗಭೂಮಿಗೆ ಒಂದು ಹೊಸ ಆಯಾಮ ನೀಡಿದ್ದಾರೆ. ಡಾ.ಕೆ.ನಾಗರತ್ನಮ್ಮ ಅವರೊಂದಿಗೆ ಕೈಜೋಡಿಸಿ ಪೌರಾಣಿಕ ನಾಟಕ ಸಾಮಾಜಿಕ ನಾಟಕಗಳಲ್ಲಿಯೂ ಅಭಿನಯಿಸುವ ಮೂಲಕ ಮಂಜಮ್ಮ ತಮ್ಮಲ್ಲಿರುವ ಕಲಾಪ್ರತಿಭೆಗೆ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ. ಹೇಮರೆಡ್ಡಿ ಮಲ್ಲಮ್ಮ, ಭಸ್ಮಾಸುರ, ನಾಟಕಗಳಲ್ಲಿಯೂ ಅಭಿನಯಿಸಿದ್ದಾರೆ. ಮಂಜಮ್ಮ ಅವರ ಆತ್ಮಕಥೆಯನ್ನು ಡಾ.ಸೊಬಟಿ ಚಂದ್ರಪ್ಪ ಅವರು ಬರೆದಿದ್ದಾರೆ. ಅಲ್ಲದೇ ವಿಜಯಪುರ ಜಿಲ್ಲೆಯ ಅಕ್ಕಮಹಾದೇವಿ ಮಹಾವಿದ್ಯಾಲಯದ ಪದವಿ ತರಗತಿಯ ಪಠ್ಯಪುಸ್ತಕದಲ್ಲಿವಿದ್ಯಾರ್ಥಿಗಳು ಅಭ್ಯಸಿಸಲಿದ್ದಾರೆ.
ಸಾಧನೆಗೆ ಸಾಕ್ಷಿ:
ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ಜಾನಪದ ಲೋಕ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಶ್ರೀತಾಯಮ್ಮ ಮಲ್ಲಯ್ಯ ದತ್ತಿನಿಧಿ ಪ್ರಶಸ್ತಿ, ಸಮಾಜಸಖಿ ಪ್ರಶಸ್ತಿ, ವಾವ್ ಅವಾರ್ಡ್, ಟಿ.ಆರ್.ಟಿ. ಕಲಾಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಸಮ್ಮಾನಗಳು ದೊರೆತಿವೆ.