ಚಿಕ್ಕಮಗಳೂರು: ದತ್ತಜಯಂತಿ ಹಿನ್ನೆಲೆ ಆರು ದಿನಗಳ ಕಾಲ ಮುಳ್ಳಯ್ಯನಗಿರಿ ಭಾಗದ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ನಿಷೇಧ ಹೇರಿ ಜಿಲ್ಲಾಧಿಕಾರಿ ಡಾ.ಬಗಾಧಿ ಗೌತಮ್ ಆದೇಶ ಹೊರಡಿಸಿದ್ದಾರೆ.
ಡಿ. 25ರಿಂದ ಡಿ. 30ರವರೆಗೆ ಆರು ದಿನಗಳ ಕಾಲ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದ್ದು, ಜಿಲ್ಲೆಯ ಯಾವುದೇ ಪ್ರವಾಸಿತಾಣಕ್ಕೆ ಅವಕಾಶ ಇಲ್ಲ. ಆದರೆ, ಡಿ. 31ರ ಬಳಿಕ ಜಿಲ್ಲೆಗೆ ಆಗಮಿಸಲು ಮುಕ್ತ ಅವಕಾಶವಿದೆ ಎಂದು ತಿಳಿಸಿದ್ದಾರೆ.
ಡಿ 19 ರಿಂದ ದತ್ತಜಯಂತಿ ಆರಂಭವಾಗಿದ್ದು, 29ರವರೆಗೂ ಇರಲಿದೆ. ಭಕ್ತರು ಡಿಸೆಂಬರ್ 27 ರಂದು ಅನಸೂಯ ಜಯಂತಿ, 28ರಂದು ನಗರದಲ್ಲಿ ಸಾಂಕೇತಿಕ ಶೋಭಾಯಾತ್ರೆ ಹಾಗೂ 29ರಂದು ದತ್ತಪೀಠದಲ್ಲಿ ಪೂಜೆ ನಡೆಸಿ ದತ್ತಪಾದುಕೆ ದರ್ಶನ ಮಾಡಲಿದ್ದಾರೆ. ಈ ಮೂರು ದಿನಗಳ ಕಾಲ ಕೂಡ ದತ್ತಪೀಠದಲ್ಲಿ ಪೂಜೆ ನಡೆಯಲಿದೆ. ಜೊತೆಗೆ, ರಾಜ್ಯಾದ್ಯಂತ ಮಾಲೆ ಧರಿಸಿರುವ ಭಕ್ತರು ಕೂಡ ಅಂದು ದತ್ತಪೀಠಕ್ಕೆ ಬಂದು ಪೂಜೆ ಸಲ್ಲಿಸಿ ದತ್ತಪಾದುಕೆ ದರ್ಶನ ಪಡೆಯಲಿದ್ದಾರೆ. ಹಾಗಾಗಿ, ಮುಂಜಾಗೃತ ಕ್ರಮವಾಗಿ ಜಿಲ್ಲಾಡಳಿತ ತಾಲೂಕಿನ ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿ, ಹೊನ್ನಮ್ಮನ ಹಳ್ಳ ಹಾಗೂ ಮಾಣಿಕ್ಯಧಾರ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಡಿಸೆಂಬರ್ 25 ಸಂಜೆ ಆರು ಗಂಟೆಯಿಂದ ಡಿಸೆಂಬರ್ 30ರ ಬೆಳಗ್ಗೆ ಆರು ಗಂಟೆಯವರೆಗೆ ಪ್ರವಾಸಿಗರಿಗೆ ಮುಳ್ಳಯ್ಯನಗಿರಿ ಭಾಗದ ಪ್ರವಾಸಿ ತಾಣಗಳಿಗೆ ನಿಷೇಧ ಹೇರಲಾಗಿದೆ.