ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ ಹೆಗಡೆಯವರು ನಿನ್ನೆ ಶ್ವಾಸಯೋಗ ಸಂಸ್ಥೆಗೆ ಭೇಟಿ ನೀಡಿದ್ದರು. ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ವಚನಾನಂದ ಸ್ವಾಮೀಜಿ, ಜಯಪ್ರಕಾಶ ಹೆಗಡೆ ಅವರೊಂದಿಗೆ ನಡೆಸಿದ ಮಾತುಕತೆ ವಿವರವನ್ನು ಸ್ವತಃ ಮಾಹಿತಿ ಹಂಚಿಕೊ0ಡಿದ್ದಾರೆ.
ಜಯಪ್ರಕಾಶ ಹೆಗಡೆಯವರು ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಸದರಾಗಿದ್ದಾಗಿನಿಂದಲೂ ನಮಗೆ ತುಂಬು ಪರಿಚಯ. ಯೋಗದ ಬಗ್ಗೆ ಅವರಿಗೆ ಅಪಾರ ಜ್ಞಾನವಿದೆ. ಯೋಗವನ್ನು ಪಾಲಿಸುತ್ತಾರೆ. ಶ್ರೀ ಹೆಗಡೆಯವರಿಗೂ ನಮಗೂ ಒಂದು ಹಲವು ವರ್ಷಗಳ ಆತ್ಮೀಯ ಸಂಬಂಧವಿದೆ. ಭೇಟಿ ಸಂದರ್ಭದಲ್ಲಿ ಪ್ರಮುಖವಾಗಿ ಮೀಸಲಾತಿ ಕುರಿತು ಚರ್ಚೆ ನಡೆಯಿತು. ಪಂಚಮಸಾಲಿ ಸಮುದಾಯವು 2ಎ ಪ್ರವರ್ಗದಡಿ ಮೀಸಲಾತಿ ಕೋರಿ ದನಿ ಎತ್ತಿರುವುದು ಸರಿಯಷ್ಟೆ. ಆ ದನಿ ಈಗ ರಾಜ್ಯದೆಲ್ಲೆಡೆ ಮೊಳಗುತ್ತಿರುವುದು ಸತ್ಯ. ಆ ಕುರಿತಂತೆ ನಾವು ಜಯಪ್ರಕಾಶ ಹೆಗಡೆಯವರ ಜೊತೆ ಚರ್ಚಿಸಿದಾಗ ಅವರಿಗೆ ಸಮುದಾಯದ ಹೋರಾಟದ ಬಗ್ಗೆ ಅರಿವಿರುವುದು, ಕಳಕಳಿ ಇರುವುದು ನಮ್ಮ ಅರಿವಿಗೆ ಬಂತು.
ಶ್ರೀ ಹೆಗಡೆಯವರು ಮೊದಲು ಕುಲಶಾಸ್ತ್ರ ಅಧ್ಯಯನ ನಡೆಸಿ ಅದಕ್ಕೆ ಸಂಬಂಧಪಟ್ಟ ವರದಿಯನ್ನು ತ್ವರಿತವಾಗಿ ಸರ್ಕಾರಕ್ಕೆ ಸಲ್ಲಿಸುವ ಭರವಸೆ ನೀಡಿದ್ದಾರೆ. ಪಂಚಮಸಾಲಿ ಸಮುದಾಯವನ್ನ ಪ್ರವರ್ಗ 2ಎಗೆ ಸೇರಿಸಲು ಶಕ್ತಿ ಮೀರಿ ಪ್ರಯತ್ನ ಮಾಡುವುದಾಗಿ ಆಶ್ವಾಸನೆ ನೀಡಿದ್ದಾರೆ. ಶ್ರೀ ಜಯಪ್ರಕಾಶ ಹೆಗಡೆಯವರಿಗೆ ಶುಭವಾಗಲಿ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಹೆಚ್ಚೆಚ್ಚುಕೆಲಸ ಮಾಡಲು ಭಗವಂತ ಆಯುರಾರೋಗ್ಯ ನೀಡಲಿ ಎಂದು ನಾವು ಬಸವಾದಿ ಪ್ರಮಥರಲ್ಲಿ, ಹರ ಮಹಾದೇವನಲ್ಲಿ ಪ್ರಾರ್ಥಿಸುತ್ತೇವೆ.