ಸಕಲ ಅಭೀಷ್ಠ ಈಡೇರಿಸುವ ವೈಕುಂಠ ಏಕಾದಶಿ

ಈ ಏಕಾದಶಿಯ ಪರ್ವಕಾಲದಲ್ಲಿ ಮನಸ್ಸಿನಲ್ಲಿ ಏನೇ ಒಳ್ಳೆಯ ಕೆಲಸವನ್ನು ಸಂಕಲ್ಪಿಸಿಕೊಂಡು ಮಾಡಿದರೆ ಸಿದ್ಧಿಯಾಗುವುದರಲ್ಲಿ ಯಾವ ಸಂದೇಹವೇ ಇಲ್ಲ. ಹಾಗಾಗಿ ಈ ವೈಕುಂಠ ಏಕಾದಶಿಯನ್ನು ಕಾಮದಾ ಏಕಾದಶಿ ಎಂದೂ ಕರೆಯುವುದುಂಟು.

ವಿದ್ಯಾಶ್ರೀ ಕಟ್ಟಿ ಮಾನವಿ

ಹರಿದಿನವಾದ ಈ ಏಕಾದಶಿಯನ್ನು ಶ್ರದ್ಧಾನಿಷ್ಠೆಯಿಂದ ಹರಿಪ್ರೀತಿಗಾಗಿ ಆಚರಿಸುವ ದಿನ. ಹರಿ ಭಕುತರಿಗಾಗಿ ಇರುವ ಪುಣ್ಯಕರ ದಿನ.

ವೈಕುಂಠ ಏಕಾದಶಿ ಶ್ರೀಮನ್ನಾರಾಯಣನೇ ಸ್ವತಃ ವೈಕುಂಠದಿಂದ ಬಂದು ಭಕ್ತರಿಗೆ ದರುಶನದ ಭಾಗ್ಯ ಕೊಡುವ ದಿನ ಎನ್ನುವ ನಂಬಿಕೆ ಇದೆ. ಈ ಏಕಾದಶಿಯ ಪರ್ವಕಾಲದಲ್ಲಿ ಮನಸ್ಸಿನಲ್ಲಿ ಏನೇ ಒಳ್ಳೆಯ ಕೆಲಸವನ್ನು ಸಂಕಲ್ಪಿಸಿಕೊಂಡು ಮಾಡಿದರೆ ಸಿದ್ಧಿಯಾಗುವುದರಲ್ಲಿ ಯಾವ ಸಂದೇಹವೇ ಇಲ್ಲ. ಹಾಗಾಗಿ ಈ ವೈಕುಂಠ ಏಕಾದಶಿಯನ್ನು ಕಾಮದಾ ಏಕಾದಶಿ ಎಂದೂ ಕರೆಯುವುದುಂಟು.

“ವೈಕುಂಠ ಏಕಾದಶಿ” ಮಹತ್ವ

“ವೈಕುಂಠ” ಎಂದರೆ ವಿಷ್ಣುಲೋಕ. ವಿಷ್ಣುವಿಗೆ ವೈಕುಂಠ ಎಂಬ ಹೆಸರು ಬರಲು ಕಾರಣ ಚಾಕ್ಷುಷ ಮನ್ವಂತರದಲ್ಲಿ ವಿಷ್ಣುವು `ವಿಕುಂಠ’ಯೆಂಬ “ಸ್ತ್ರೀ” ಯಲ್ಲಿ ಅವತರಿಸಿದನು, ಇದರಿಂದ ನಾರಾಯಣನಿಗೆ ವೈಕುಂಠನೆಂಬ ಹೆಸರು ಬಂತೆಂದು ಮಹಾಭಾರತದ ಶಾಂತಿಪರ್ವದಿಂದ ತಿಳಿದುಬರುತ್ತದೆ. ವಿಷ್ಣುಸಹಸ್ರನಾಮದಲ್ಲಿಯೂ ವೈಕುಂಠ ಎಂಬ ಹೆಸರಿನ ಉಲ್ಲೇಖವಿದೆ. ನಮಗೆ ತಿಳಿದಿರುವಂತೆ `ಕುಂಠ’ ಎಂದರೆ ಅಸಾಮರ್ಥ್ಯ, `ವಿಕುಂಠ’ ಎಂದರೆ ಬದುಕಿನ ನಡೆಯಲ್ಲಿ ಎಂದೂ ಜಾರದವರು, ಅಂದರೆ ಭಗವಂತನ ಸಾಕ್ಷಾತ್ಕಾರವಾದ ಮುಕ್ತರು ಎಂದರ್ಥ. ಆದ್ದರಿಂದ ಬದುಕಿನ ಅಸಾಮರ್ಥ್ಯಗಳನ್ನು ಹೋಗಲಾಡಿಸುವವನು ಎಂಬುದೂ ಈ ಹೆಸರಿಗೆ ಅರ್ಥವಾಗಿದೆ.

ಏಕಾದಶಿಯು ಉಪವಾಸಕ್ಕೆ ಭಗವತ್ಕೃಪೆಗಳಿಸಲು ಶ್ರೇಷ್ಠದಿನ ಎಂದು ಅಂದು ನಿರಾಹಾರವ್ರತ ಮಾಡುತ್ತಾರೆ. ಅಭಿಷೇಕದ ಚಮಚದಷ್ಟು “ತೀರ್ಥ” ಮತ್ತು ಪ್ರಸಾದವಾದ ಸಾಲಿಗ್ರಾಮದ ಮೇಲಿನ ತುಳಸೀದಳ ಒಂದನ್ನು ಬಿಟ್ಟು ಮತ್ತೇನೂ ಆಹಾರ ಭುಂಜಿಸದೆ “ಉಪವಾಸ” ಮಾಡಿ, ಮರುದಿನ ದ್ವಾದಶಿಯಂದು ಪೂಜಾ ನಂತರ ಉಪಹಾರ ಸೇವಿಸುವ ಭಕ್ತರು ಈಗಲೂ ಇದ್ದಾರೆ. ಕೆಲವರು ಹಣ್ಣು ಹಾಲು ಸೇವಿಸುತ್ತಾರೆ.

ಹೀಗೊಂದು ಹಿನ್ನಲೆ

ಕಲಿಯುಗದ ಜನರಿಗಾಗಿ ಶರಪಂಜರದ ಮೇಲೆ ಭೀಷ್ಮಾಚಾರ್ಯರು ವಿಷ್ಣುಸಹಸ್ರನಾಮ ಹೇಳಿದ ದಿನವೂ ಇದೇ. ಮುಕ್ಕೋಟಿ ದೇವತೆಗಳಿಗೆ ವಿಷ್ಣು ದರ್ಶನ ಕೊಡುವ ದಿನ. ಇಂದು ಉತ್ತರ  ದ್ವಾರದಿಂದ ಸ್ವಾಮಿಯ ದರುಶನ ಮಾಡಿದರೆ ಮೋಕ್ಷ ಪ್ರಾಪ್ತಿ ಎಂದು ಹೇಳುತ್ತಾರೆ. ಆದ್ದರಿಂದ ಈ ಏಕಾದಶಿಗೆ  ಬಹಳ  ಮಹತ್ವವಿದೆ.

ನಮ್ಮಲ್ಲಿ ಪುರಾಣಗಳಿಗೆ ಅತ್ಯಂತ ಮಹತ್ವವಾದ ಸ್ಥಾನವಿದೆ. ಅವು ಜನಜೀವನಕ್ಕೆ ಹೊಂದಿಕೊಂಡು ಹೋಗುವ ವಿಷಯಗಳನ್ನು ಪ್ರತಿಪಾದಿಸುತ್ತವೆ. ಲೋಕೋಪಕಾರಕ್ಕಾಗಿ ವ್ಯಾಸರ ರಚನೆಯ ಹದಿನೆಂಟು ಪುರಾಣಗಳಲ್ಲಿ ನಾರದೀಯ ಪುರಾಣ ಸಹ ಒಂದು. ಪವಿತ್ರ ವ್ರತಗಳಲ್ಲಿ ಅತ್ಯಂತ ಶ್ರೇಷ್ಠವಾದ, ಶ್ರೇಯಸ್ಕರವಾದ, ಸಕಲರೂ ಸುಲಭದಲ್ಲಿ ಆಚರಿಸಲು ಯೋಗ್ಯವಾದ ವ್ರತ ಎಂದರೆ ಅದು ಏಕಾದಶಿ ವ್ರತ.

ಭಗವಂತನ ಭಕ್ತನಾದ ಅಂಬರೀಷ ಮಹರಾಜನು ಏಕಾದಶಿ ಉಪವಾಸವನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸುತ್ತಿದ್ದ, ಪಾರಣೆಯಂದು ತೀರ್ಥ ಸೇವಿಸಲು, ಒಮ್ಮೆ ದೂರ್ವಾಸರ ಶಾಪಕ್ಕೆ ಗುರಿಯಾದಾಗ, ಏಕಾದಶಿ ಉಪವಾಸ ವ್ರತ ಮಾಡುತ್ತಿದ್ದ ಅಂಬರೀಷನ ಭಕ್ತಿಗೆ ಮೆಚ್ಚಿದ ಶ್ರೀ ನಾರಾಯಣನು ಸ್ವತಃ ತಾನೇ ಆ ಶಾಪವನ್ನು ತೆಗೆದುಕೊಂಡು ೧೦ ಅವತಾರವೆತ್ತುತ್ತಾನೆ. ತನ್ನ ಭಕ್ತನ ರಕ್ಷಣೆಗಾಗಿ ತನ್ನ ಸುದರ್ಶನ ಚಕ್ರವನ್ನೆ ಕಳಿಸುತ್ತಾನೆ. ಸುದರ್ಶನಚಕ್ರ ದೂರ್ವಾಸರ ಕಡೆಗೆ ಬೆನ್ನಟ್ಟಿದಾಗ ಕೊನೆಗೆ ಅಂಬರೀಷನೇ ಬಂದು ಭಗವಂತನಲ್ಲಿ ಬೇಡಿಕೊಂಡಾಗ ಅದು ತಿರುಗಿ ವಿಷ್ಣುವಿನ ಕಡೆಗೆ ಹೋದಾಗ ದೂರ್ವಾಸರಿಗೆ ಭಕ್ತಿಯ ಜೊತೆಗೆ ನಮಗೆ ಏಕಾದಶಿಯ ಮಹತ್ವವೂ ತಿಳಿಯುತ್ತದೆ. ಹೀಗೆ ಹಲವಾರು ಕಥೆಗಳು ಇವೆ.

ಕೃಷ್ಣಾಮೃತ ಮಹಾರ್ಣವದ ಪ್ರಕಾರ, ಸಕಲ ತೀರ್ಥಕ್ಷೇತ್ರಗಳಿಂದ, ಸಕಲ ಪುಣ್ಯಕ್ಷೇತ್ರಗಳಿಂದ ಲಭಿಸಿದ ಪುಣ್ಯ, ಏಕಾದಶಿಗೆ ಸಮನಾಗಲಾರದು. ವಸಿಷ್ಠರ ಪ್ರಕಾರ, ಹನ್ನೊಂದು ಇಂದ್ರಿಯ ಗಳಿಂದ ಸಂಪಾದಿಸಿದ ಸಕಲಪಾಪಗಳನ್ನು ಹನ್ನೊಂದನೆಯ ತಿಥಿಯಾದ ಏಕಾದಶಿಯು ಪರಿಹರಿಸುತ್ತದೆ, ಆದ್ದರಿಂದ ಏಕಾದಶಿಗೆ ಸಮವಾದದ್ದು ಯಾವುದೂ ಇಲ್ಲ.

ವೈಜ್ಞಾನಿಕ ಹಿನ್ನಲೆ

೧೫ ದಿನಗಳಿಗೊಮ್ಮೆ ೨೪ ಗಂಟೆಗಳ ಕಾಲ ಈ ದೇಹಕ್ಕೆ ಸಂಪೂರ್ಣ ವಿಶ್ರಾಂತಿ ದೊರಕಿದರೆ ಈ ದೇಹದಲ್ಲಿ ಸೇರಿಕೊಂಡಿರುವ ವಿಷಾಣುಗಳು ಎಲ್ಲವೂ ಸಾಯುತ್ತವೆ. ಇದರಿಂದ ಹೊಸಚೈತನ್ಯ ವೃದ್ಧಿಸುತ್ತದೆ. ಪಂಚೇಂದ್ರಿಯ ಮತ್ತೆ ದಕ್ಷವಾಗಿ ಕೆಲಸ ಮಾಡಲು ಸಿದ್ಧವಾಗುತ್ತದೆ.

ಏಕಾದಶಿ ದಿನದಂದು ಉಪವಾಸವಿದ್ದು, ದ್ವಾದಶಿಯ ದಿನ, ಆ ತಿಥಿಯಲ್ಲಿಯೇ ನಿತ್ಯಕರ್ಮ ಮುಗಿಸಿ ಭೋಜನ ಮಾಡಬೇಕು. ದಶಮಿಯಂದು ಅಂದರೆ ಏಕಾದಶಿಯ ಹಿಂದಿನ ದಿನ ಒಂದು ಹೊತ್ತು ಮಧ್ಯಾಹ್ನ ಊಟಮಾಡಿ, ಭೋಗಗಳನ್ನು ತ್ಯಜಿಸಿ, ಮರುದಿನ ಏಕಾದಶಿ ಉಪವಾಸಮಾಡಬೇಕು. ಇಲ್ಲಿ ಉಪವಾಸ ಎಂದರೆ ಆಹಾರ ಸೇವಿಸದಿರುವುದು ಎಂಬುದೊಂದು ಅರ್ಥವಾದರೆ ಇನ್ನೊಂದು ಅರ್ಥದಲ್ಲಿ ಹರಿಸ್ಮರಣೆ ಮಾಡುತ್ತಾ ಭಗವಂತನಿಗೆ ಪ್ರೀತಿಯಾದ ಕೆಲಸವನ್ನು ಮಾಡುವುದು ಎಂದರ್ಥ. ಇದರಿಂದ ಏಕಕಾಲಕ್ಕೆ ದೇಹಕ್ಕೆ ವಿಶ್ರಾಂತಿ, ಮನಸ್ಸಿಗೆ ಭಗವನ್ನಾಮ ಸ್ಮರಣೆಯಿಂದ ಶಾಂತಿ ದೊರೆಯುತ್ತದೆ. ಹೀಗೆ ಎಡೆಬಿಡದೆ ಏಕಾದಶಿವ್ರತ ಮಾಡುವುದರಿಂದ ದೇಹದ ಮತ್ತು ಮನಸ್ಸಿನ ಸ್ವಾಸ್ಥö್ಯ ಕಾಪಾಡಿಕೊಳ್ಳಬಹುದು.

ನಮ್ಮ ಪ್ರಾಚೀನ ಭಾರತೀಯರು ಹೇಳಿದಂತೆ ದೈಹಿಕ ಮಾನಸಿಕವಾಗಿ ಎಲ್ಲ ದೃಷ್ಟಿಯಿಂದ ಏಕಾದಶಿ ತುಂಬ ಮಹತ್ವದ ದಿನ.  ಅಂದು ವಾತಾವರಣದಲ್ಲಿ ಕೂಡ ಒಂದು ವಿಶಿಷ್ಟ ಶಕ್ತಿ ತುಂಬಿರುತ್ತದೆ.       ಕಲಿಯುಗದಲ್ಲಿ ಭೂ ವೈಕುಂಠವಾದ ತಿರುಮಲೆಯಲ್ಲಿನ ವೆಂಕಟೇಶ್ವರನ ಸನ್ನಿಧಾನದಲ್ಲಿ ವೈಕುಂಠ ಏಕಾದಶಿಯು ಮಹಾನ್ ವೈಭವದಿಂದ ಆಚರಿಸಲ್ಪಡುತ್ತದೆ.

ಈ ಏಕಾದಶಿಯ ಹಿಂದಿನ ದಿನವಾದ ದಶಮಿಯಂದು ರಾತ್ರಿ ಭಗವಂತನ ಏಕಾಂತ ಸೇವೆಯ ನಂತರ ಬಂಗಾರದ ಬಾಗಿಲುಗಳನ್ನು ಮುಚ್ಚುತ್ತಾರೆ. ಮರುದಿನ ಬೆಳಗಿನ ಜಾವ ಅಂದರೆ ವೈಕುಂಠ ಏಕಾದಶಿಯ ದಿನದಂದು ಸುಪ್ರಭಾತವು ಪ್ರಾರಂಭವಾಗಿ ಮರುದಿವಸ ದ್ವಾದಶಿ ಏಕಾಂತಸೇವೆಯವರೆಗೂ ಶ್ರೀ ಸ್ವಾಮಿಯ ಗರ್ಭಗುಡಿಗೆ ಆನಿಕೊಂಡಿರುವ ಮುಕ್ಕೋಟಿ ಪ್ರದಕ್ಷಿಣ ದ್ವಾರವನ್ನು ತೆರೆದಿಡುತ್ತಾರೆ. ಏಕಾದಶಿ ಮತ್ತು ದ್ವಾದಶಿಯಂದು ಎರಡು ದಿನಗಳ ಕಾಲ ಭಕ್ತರು ಶ್ರೀ ಸ್ವಾಮಿಯ ದರ್ಶನದ ನಂತರ ಮುಕ್ಕೋಟಿ ಪ್ರದಕ್ಷಿಣ ಮಾರ್ಗದಲ್ಲಿ ಸಾಗುತ್ತಾರೆ. ಈ ಮುಕ್ಕೋಟಿ ಪ್ರವೇಶ ದ್ವಾರವನ್ನೇ ವೈಕುಂಠ ದ್ವಾರವೆಂದೂ ಆ ದಾರಿಯನ್ನು ವೈಕುಂಠ ಪ್ರದಕ್ಷಿಣವೆಂದೂ ಅನ್ನುತ್ತಾರೆ. ಇಂತಹ ಪುಣ್ಯಕರವಾದ ಏಕಾದಶಿಯನ್ನು ಆಚರಿಸಿ ಭಗವಂತನ ಕೃಪೆಗೆ ಪಾತ್ರರಾಗೋಣ.

Related Articles

ಪ್ರತಿಕ್ರಿಯೆ ನೀಡಿ

Latest Articles