ನಳನ ಮನದರಸಿ ದಮಯಂತಿ

ಹಿಂದೂ ಪುರಾಣಗಳ ಪ್ರಕಾರ ನಳ ಮತ್ತು ದಮಯಂತಿ ಅಮರ ಪ್ರೇಮಿಗಳು. ದಮಯಂತಿ ನಿಷಧ ಸಾಮ್ರಾಜ್ಯದ ರಾಜ ನಳನ ಕೌಶಲ, ಸೌಂದರ್ಯವನ್ನು ನೆನೆದು ಆತನನ್ನು ಮನದಲ್ಲಿಯೇ ಪ್ರೀತಿಸುತ್ತಿರುತ್ತಾಳೆ. ಆ ರಾಜನನ್ನೇ ಸ್ವಯಂವರದಲ್ಲಿ ವಿವಾಹವಾಗುತ್ತಾಳೆ. ಕಷ್ಟಗಳು ಅವರಿಬ್ಬರನ್ನೂ ದೂರ ಮಾಡುತ್ತದೆ. ಆದರೂ ವಿಚಲಿತರಾಗದೆ ಒಬ್ಬರನ್ನೊಬ್ಬರು ಕನವರಿಸುತ್ತಿರುತ್ತಾರೆ. ವಿದರ್ಭ ಎಂಬ ರಾಜ್ಯದಲ್ಲಿ ಭೀಮನೆಂಬ ಅರಸ ಆಳುತ್ತಿದ್ದ. ದಮ ಮುನಿಯ ಅನುಗ್ರಹದಿಂದ ಹುಟ್ಟಿದುದರಿಂದ ಮಗಳಿಗೆ ದಮಯಂತಿ ಎಂದು ಹೆಸರನ್ನಿಡುತ್ತಾನೆ.

ನಳನ ಹಂಸವಾಣಿ
ನಳ ನಿಷಧ ದೇಶದ ದೊರೆ. ರೂಪ, ಗುಣ, ಶೌರ್ಯ, ವಿದ್ಯೆಗಳಲ್ಲಿ ನಳನಿಗೆ ಸಮಾನರೇ ಇರಲಿಲ್ಲ. ಅವನು ಏಳು ದ್ವೀಪಗಳನ್ನು ಗೆದ್ದು ಚಕ್ರವರ್ತಿಯಾದ. ಒಂದು ದಿನ ನಳ ಉದ್ಯಾನದಲ್ಲಿ ತಿರುಗಾಡುತ್ತಿದ್ದಾಗ ಹೊಂಬಣ್ಣದ ಹಂಸವೊಂದನ್ನು ಹಿಡಿದುಕೊಂಡ. ಅದು `ಮಹಾರಾಜ, ನನ್ನನ್ನು ಬಿಟ್ಟುಬಿಡು. ನಾನು ದಮಯಂತಿಯ ಬಳಿಗೆ ಹೋಗಿ ನಿನ್ನ ವಿಷಯ ಹೇಳುತ್ತೇನೆ’ ಎಂದಿತು. ಆ ಹಂಸ ದಮಯಂತಿಯ ಬಳಿ ಬಂದು ನಳನ ಶೌರ್ಯವನ್ನು ವರ್ಣಿಸಿ `ಅವನನ್ನೇ ಮದುವೆಯಾಗು’ ಎನ್ನುತ್ತದೆ.

ಮದುವೆ ಸಿದ್ಧತೆ
ದಮಯಂತಿ ಮದುವೆಯ ವಯಸ್ಸು. ಮಗಳಿಗೆ ಸೂಕ್ತ ವರನನ್ನು ಹುಡುಕಲು ಭೀಮ ಸ್ವಯಂವರ ಏರ್ಪಡಿಸುತ್ತಾನೆ. ದೇವಲೋಕದಿಂದ ಇಂದ್ರ, ಆಗ್ನಿ, ವರುಣ, ಯಮ ಬಂದರು. ನಳನೂ ಆಗಮಿಸುತ್ತಾನೆ. ನಳನ ಬಳಿಗೆ ದಮಯಂತಿ ಹಾರ ಹಿಡಿದು ಹೋದುದನ್ನು ಕಂಡ ಇತರರು ನಳನಂತೆಯೇ ರೂಪ ಧರಿಸಿದರು. ದಮಯಂತಿ ಪ್ರಾರ್ಥಿಸಿಕೊಂಡ ಮೇಲೆ ಅವರು ನಿಜರೂಪ ತಳೆದರು. ದಮಯಂತಿ ನಳನಿಗೆ ಮಾಲೆ ಹಾಕಿದಳು. ನಳ ಬೇಕೆಂದ ಕಡೆ ಬೆಂಕಿ ಮತ್ತು ನೀರು ಬರುವುದೆಂದು ಅನುಗ್ರಹಿಸಿ ದೇವತೆಗಳು ಮಾಯವಾದರು. ನಳ- ದಮಯಂತಿ ನಿಷಧದಲ್ಲಿ ಸುಖವಾಗಿ ಇದ್ದರು. ಆಗ ಕಲಿಯೆಂಬುವವನು ಬಂದು ಪುಷ್ಕರ ಎಂಬುವವನನ್ನು ನಳನ ಎದುರಾಗಿ ಪಗಡೆ ಆಡಲು ಪ್ರೇರೇಪಿಸುತ್ತಾನೆ. ಆಟದಲ್ಲಿ ನಳ ತನ್ನೆಲ್ಲವನ್ನೂ  ಕಳೆದುಕೊಳ್ಳುತ್ತಾನೆ. ಕೊನೆಗೆ ಉಟ್ಟ ಬಟ್ಟೆಯಲ್ಲಿ ಹೆಂಡತಿಯೊಡನೆ ಊರು ಬಿಟ್ಟು ಅರಣ್ಯ ಸೇರುತ್ತಾನೆ.
`ದಮಯಂತಿ, ನನ್ನೊಡನೆ ನೀನ್ಯಾಕೆ ಕಷ್ಟಪಡಬೇಕು? ನಿನ್ನ ತಂದೆಯ ಮನೆಗೆ ಹೋಗು’ ಎಂದ. ಆದರೆ ದಮಯಂತಿ ಒಪ್ಪಲಿಲ್ಲ. ಅವಳನ್ನು ಬಿಟ್ಟು  ಹೋದರೆ ಹೇಗಾದರೂ ಅವಳು ತಂದೆ ಮನೆಯನ್ನು ಸೇರುವಳೆಂದು ನಳ ಯೋಚಿಸುತ್ತಾನೆ. ರಾತ್ರಿ ದಮಯಂತಿ ಮಲಗಿದ್ದಾಗ ಅವಳನ್ನು ಬಿಟ್ಟು ದೂರ ಹೊರಟುಹೋಗುತ್ತಾನೆ. ದಮಯಂತಿ ಎದ್ದು  ನೋಡಿದಾಗ ನಳ ಮಹಾರಾಜ ಅಲ್ಲಿ ಇರಲಿಲ್ಲ. ಎಲ್ಲ ಕಡೆ ಹುಡುಕಾಡಿ `ರಾಜಾ ನನ್ನ ಬಿಟ್ಟು ಎಲ್ಲಿ ಹೋದೆ’ ಎಂದು ಬೊಬ್ಬೆ ಹೊಡೆಯುತ್ತಾಳೆ. ಸುತ್ತಮುತ್ತಲೆಲ್ಲ ಅಲೆದು ಕೊನೆಗೆ ತನ್ನ ತಂದೆಯ ಮನೆ ಸೇರುತ್ತಾಳೆ.

ನಳ ಋತುಪರ್ಣನ ಸಾರಥಿಯಾದದ್ದು
ಅತ್ತಕಡೆ ನಳನಿಗೆ ಉರಿಯುತ್ತಿದ್ದ ಬೆಂಕಿ ಕಾಣಿಸುತ್ತದೆ. ಅದರೊಳಗಿನಿಂದ `ನಳ ಮಹಾರಾಜ, ನನ್ನನ್ನು ರಕ್ಷಿಸು’ ಎಂದು ಯಾರೋ ಕೂಗಿದ ಹಾಗೆ ಕೇಳಿಸಿತು. ನಳ ಬೆಂಕಿಯೊಳಗೆ ನುಗ್ಗಿ ಕಾರ್ಕೊಟಕ ಎಂಬ ಹಾವನ್ನು ಹೊರಗೆತ್ತಿಕೊಂಡು ಬಂದ. ಹಾವು ಅವನನ್ನು ಕಚ್ಚಿ ಅವನ ರೂಪವನ್ನು ವಿಕಾರಗೊಳಿಸುತ್ತದೆ. `ನಳನೇ ನಿನ್ನನ್ನು ಯಾರೂ ಗುರುತು ಹಿಡಿಯಬಾರದೆಂದು ಈ ರೀತಿ ಮಾಡಿದೆ. ನೀನೀಗ ಅಯೋಧ್ಯಾ ದೇಶದ ಋತಪರ್ಣನೆಂಬ ರಾಜನಲ್ಲಿಗೆ ಹೋಗಿ ಅವನ ಸಾರಥಿಯಾಗು. ಮುಂದೆ ನಿನ್ನ ಹೆಂಡತಿ ನಿನಗೆ ಸಿಗುತ್ತಾಳೆ. ನಿನ್ನ ಮೊದಲ ರೂಪ ಬೇಕಾದಾಗ ನನ್ನನ್ನು ನೆನೆದು ಈ ವಸ್ತ್ರಗಳನ್ನು ಹೊದ್ದುಕೋ’ ಎಂದು ಹೇಳಿ ವಸ್ತ್ರಗಳನ್ನು ಕೊಟ್ಟು ಮಾಯಾವಾಯಿತು. ನಳ ಋತುಪರ್ಣನಲ್ಲಿಗೆ ಹೋಗಿ ಸಾರಥಿಯಾದ.
ನಳನನ್ನು ಹುಡುಕಲು ದಮಯಂತಿ ಮಾಡದ ಪ್ರಯತ್ನಗಳಿಲ್ಲ.  ಜನ ಸೇರಿರುವಡೆ ನಿಂತು `ಅಯ್ಯಾ ಜೂಜುಗಾರ, ರಾತ್ರಿಯ ವೇಳೆ ನಿದ್ದೆ ಮಾಡುತ್ತಿದ್ದ ಹೆಂಡತಿಯನ್ನೇಕೆ ಬಿಟ್ಟುಹೋದೆ?’ ಎಂದು ಕೇಳಬೇಕೆಂದು ನಿಯಮಿಸಿ ಭಟರನ್ನು ಕಳುಹಿಸಿದಳು. ಋತುಪರ್ಣನ ರಾಜ್ಯಕ್ಕೆ ಹೋದ ಭಟರು,  `ತಾಯಿ, ಋತುಪರ್ಣನ ಸಾರಥಿಯಾದ ಕುರೂಪಿಯೊಬ್ಬ ನಿನ್ನ ಪ್ರಶ್ನೆಗೆ ಉತ್ತರ ಕೊಟ್ಟ’ ಎಂದರು. ದಮಯಂತಿಗೆ ಅವನೇ ನಳನಿರಬಹುದು ಎಂಬ ಸಂಶಯದಲ್ಲಿ, ಬೇರೆ ದೂತರನ್ನು ಕರೆಸಿ, `ಋತುಪರ್ಣನಲ್ಲಿಗೆ ಹೋಗಿ, ದಮಯಂತಿ ಮತ್ತೆ ಮದುವೆಯಾಗುತ್ತಾಳೆ, ತಾವೂ ಸ್ವಯಂವರಕ್ಕೆ ಬರಬೇಕು’ ಎಂದು ಕರೆಯುವಂತೆ ಹೇಳುತ್ತಾಳೆ.
ದಮಯಂತಿಯನ್ನು ಮದುವೆಯಾಗುವ ಆಶೆಯಿಂದ ಋತುಪರ್ಣ ವಿದರ್ಭ ರಾಜ್ಯವನ್ನು ತಲುಪಿದಾಗ ಮದುವೆಯ ಸಿದ್ಧತೆಗಳಿಲ್ಲದುದನ್ನು ಕಂಡು ಆಶ್ಚರ್ಯವಾಗುತ್ತದೆ. ಕುರೂಪಿ ಸಾರಥಿಯನ್ನು ನೋಡಿ ದಮಯಂತಿಗೆ ನಿರಾಶೆ. ಅವನ ಕೊಠಡಿಗೆ ಬೆಂಕಿಯನ್ನೂ ನೀರನ್ನೂ ಕೊಡಬಾರದೆಂದು ಆಜ್ಞೆ ಮಾಡಿದಳು. ಆದರೆ ನಳ ಬರಿದಾದ ಬಿಂದಿಗೆಯನ್ನು ಬಗ್ಗಿಸುತ್ತಲೇ ನೀರು ಸುರಿಯಿತು. ಹುಲ್ಲನ್ನು ತಿರುಚಿದ ಕೂಡಲೇ ಬೆಂಕಿ ಬರುತ್ತದೆ. ಇದನ್ನು ಗಮನಿಸಿದ ದಮಯಂತಿ  `ನೀನ್ಯಾರು ? ನಿಜ ಹೇಳು’ ಎಂದಳು. ನಳನು ಸರ್ಪ ಕೊಟ್ಟ ವಸ್ತ್ರಗಳನ್ನು ಧರಿಸಿದೊಡನೆ ಮೊದಲಿನ ರೂಪ ಪಡೆದ. ದಮಯಂತಿಗೆ ನಳನ ದರ್ಶನವಾಗುತ್ತದೆ. ಆತನನ್ನು ಬಿಗಿದಪ್ಪಿಕೊಂಡಳು. ನಳ, ದಮಯಂತಿಯರು ಮತ್ತೆ ನಿಷಧ ರಾಜ್ಯಕ್ಕೆ ಹೋಗುತ್ತಾರೆ. ಪುಷ್ಕರನನ್ನು ಜೂಜಿನಲ್ಲಿ ಸೋಲಿಸಿ ಮತ್ತೆ ರಾಜ್ಯವನ್ನು ಪಡೆದುಕೊಳ್ಳುತ್ತಾನೆ. ಅವರಿಬ್ಬರೂ ಸುಖ ಸಂಸಾರ ನಡೆಸುತ್ತಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles