ಜನವರಿ 2 ರಿಂದ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೆ

ಸುಳ್ಯ (ದಕ್ಷಿಣ ಕನ್ನಡ): ಶ್ರೀ ಚೆನ್ನಕೇಶವ ದೇವರ ಸನ್ನಿಧಿಯಲ್ಲಿ ಜನವರಿ 2 ರಿಂದ 12ರವರೆಗೆ ಪೂರ್ವಶಿಷ್ಟ ಸಂಪ್ರದಾಯದಂತೆ ವರ್ಷಾವಧಿ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ. ಕೆ.ವಿ.ಚಿದಾನಂದ ಅನುವಂಶಿಕ ಆಡಳಿತ ಧರ್ಮದರ್ಶಿ ಡಾ. ಹರಪ್ರಸಾದ್ ತುದಿಯಡ್ಕ ತಿಳಿಸಿದ್ದಾರೆ.

ಕೊರೊನಾ ಹಿನ್ನಲೆಯಲ್ಲಿ ಕೊರೊನಾ ನಿಯಂತ್ರಣ ಮಾರ್ಗಸೂಚಿಯಂತೆ ಜಾತ್ರೋತ್ಸವ ನಡೆಯಲಿದೆ. ಜಿಲ್ಲಾಡಳಿತದ ಸೂಚಿಸಿದ ನಿಯಮದಂತೆ ಶ್ರೀ ದೇವರ ಉತ್ಸವಾದಿಗಳನ್ನು ನೆರವೇರಿಸುವುದೆಂದು ನಿರ್ಣಯಿಸಲಾಗಿದೆ. ಜ.2ರಂದು ಶನಿವಾರ ರಾತ್ರಿ ಧ್ವಜಾರೋಹಣದೊಂದಿಗೆ ಮೊದಲ್ಗೊಂಡು ಜ.12 ಮಂಗಳವಾರ ಮಧ್ಯಾಹ್ನ ನಡೆಯುವ ಸಂಪ್ರೋಕ್ಷಣೆ ಮತ್ತು ಮಂತ್ರಾಕ್ಷತೆಯೊಂದಿಗೆ ಜಾತ್ರೆ ಸಮಾಪನಗೊಳ್ಳಲಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲ: ಉತ್ಸವದ ಸಮಯದಲ್ಲಿ ನಡೆಯುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಪೂರ್ವಶಿಷ್ಟ ಸಂಪ್ರದಾಯದಂತೆ ನಡೆಯುತ್ತದೆ. ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು, ವಾರ್ಷಿಕ ಜಾತ್ರೋತ್ಸವದ ಸಂತೆ ಏಲಂ, ಸಾರ್ವಜನಿಕ ಅನ್ನಸಂತರ್ಪಣೆ ಇರುವುದಿಲ್ಲ. ಹೊರ ಜಿಲ್ಲೆ ಹೊರ ರಾಜ್ಯಗಳಿಂದ ಜಾತ್ರಾ ಸಮಯದಲ್ಲಿ ಬೇರೆ ಬೇರೆ ಉದ್ದೇಶಕ್ಕಾಗಿ ದೇವಾಲಯಕ್ಕೆ ಬರುವ ವ್ಯಕ್ತಿಗಳಿಗೆ ಅವಕಾಶ ಇರುವುದಿಲ್ಲ.

ಭಕ್ತಾಭಿಮಾನಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿ ಸ್ಯಾನಿಟೈಜರ್ ಬಳಸಿಕೊಂಡು ಮತ್ತು ಸಾಮಾಜಿಕ ಅಂತರವನ್ನು ಪಾಲಿಸತಕ್ಕದ್ದು, ಜಾತ್ರೋತ್ಸವದ ಸಮಯದಲ್ಲಿ ಭಕ್ತಾಭಿಮಾನಿಗಳಿಗೆ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮುಕ್ತ ಅವಕಾಶ ಇರುತ್ತದೆ.

ಸ್ಥಳ ಪುರಾಣ

ಶ್ರೀ ಚೆನ್ನಕೇಶವ ದೇವಸ್ಥಾನವು ಸುಳ್ಯ ಪಟ್ಟಣದ ಮಧ್ಯಭಾಗದಲ್ಲಿದ್ದು, ಮಡಿಕೇರಿ, ಮಂಗಳೂರು ರಾಜ್ಯ ಹೆದ್ದಾರಿಯ ಸುಳ್ಯ ಬಸ್ ನಿಲ್ದಾಣದಿಂದ ½ ಕಿ.ಮೀ. ದೂರದಲ್ಲಿದೆ, ಸುಮಾರು 850 ವರ್ಷಗಳ ಹಿಂದಿನ ಇತಿಹಾಸವಿರುವ ಈ ಪ್ರಸಿದ್ಧ ಕ್ಷೇತ್ರವು ರಾಜ್ಯ ಹಾಗೂ ದೇಶದ ನಾನಾ ಭಾಗಗಳಿಂದ ಭಕ್ತರನ್ನು ಆಕರ್ಷಿಸುವ ಕ್ಷೇತ್ರವಾಗಿದೆ.

ತುಳುನಾಡಿನ ಇತಿಹಾಸದಲ್ಲಿ ಜೈನ ಪರಂಪರೆಯ ರಾಜರನ್ನು ಬಲ್ಲಾಳರು ಎಂದು ಕರೆಯುತ್ತಿದ್ದು ಶ್ರೀ ಚೆನ್ನಕೇಶವ ದೇವಸ್ಥಾನದ ಸಮೀಪವೇ ಇರುವ “ಪನ್ನೆಬೀಡು” ಎಂಬಲ್ಲಿಯ ಬಲ್ಲಾಳ ರಾಜನು ಈ ದೇವಸ್ಥಾನವನ್ನು ಕಟ್ಟಿಸಿದನೆಂದು ಪ್ರತೀತಿ. ಈ ಪನ್ನೆಬೀಡು ದೇವಸ್ಥಾನದಿಂದ ½ ಕಿ.ಮೀ. ದೂರವಿದ್ದು, ಅಲ್ಲಿ ಶ್ರೀ ಭಗವತಿ ಮತ್ತು ನಾಲ್ಕು ಸ್ಥಾನ ಚಾವಡಿ ಎಂಬ ವಿಶೇಷ ಸನ್ನಿಧಿ ಇದೆ.

ದೇಗುಲ ವಿಶೇಷ

ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಶ್ರೀ ಚೆನ್ನಕೇಶವ ದೇವರ ಮೂಲ ಬಿಂಬವು ಪಂಚಲೋಹದ್ದಾಗಿದ್ದು, ದಿನಂಪ್ರತಿ ಮೂರು ಹೊತ್ತು ಪೂಜೆ, ವಾರ್ಷಿಕ ಜಾತ್ರೆ, ಪಂಚಪರ್ವಾದಿಗಳು ನಡೆಯುತ್ತಿದ್ದು ಒಳಗೋಪುರದಲ್ಲಿ ಶ್ರೀ ದುರ್ಗಾ ಅಮ್ಮನವರು ಹಾಗೂ ಚನ್ನಿಗರಾಯನ ಮೂರ್ತಿ, ಉಪದೇವರುಗಳಾಗಿ ಪೂಜಿಸಲ್ಪಡುತ್ತಾರೆ. ಹೊರ ಅಂಗಣದಲ್ಲಿ ಆಂಜನೇಯ ಗುಡಿ ಇದ್ದು ಆಂಜನೇಯ ದೇವರಿಗೂ ವಿಶೇಷ ಪೂಜಾದಿಗಳು ನೆರವೇರುತ್ತವೆ. 

Related Articles

ಪ್ರತಿಕ್ರಿಯೆ ನೀಡಿ

Latest Articles