ಸ್ವಸ್ಥ ಸಮಾಜ ನಿರ್ಮಾಣಕ್ಕೆ ಮಠಗಳ ಕೊಡುಗೆ ಅಪಾರ : ಶ್ರೀ ರಂಭಾಪುರಿ ಜಗದ್ಗುರುಗಳು

ಸೇಡಂ: ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳು ಕುಸಿಯುತ್ತಿರುವ ಸಂದರ್ಭದಲ್ಲಿ ಮಠಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಸ್ವಸ್ಥ ಸಮಾಜ ನಿರ್ಮಾಣಕ್ಕೆ ಮಠಗಳ ಕೊಡುಗೆ ಅಪಾರವಾದುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಜನವರಿ 9ರಂದು ತಾಲೂಕಿನ ಮಳಖೇಡ ಮೂಲಾಧಾರ ಕಟ್ಟಿಮನಿ ಸಂಸ್ಥಾನ ಮಠದ ಉದ್ಘಾಟನಾ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಎಲ್ಲ ರಂಗಗಳು ಕಲುಷಿತಗೊಂಡಿದ್ದರೂ ಧಾರ್ಮಿಕ ರಂಗದಲ್ಲಿ ಜನರ ನಂಬಿಗೆ ವಿಶ್ವಾಸಗಳು ಕಡಿಮೆಯಾಗಿಲ್ಲ. ಮಠಗಳು ಧಾರ್ಮಿಕ ಜಾಗೃತಿಯ ಜೊತೆಗೆ ಸಾಮಾಜಿಕ ಕ್ಷೇತ್ರದಲ್ಲೂ ಸಹ ಅಮೂಲ್ಯ ಕಾರ್ಯಗಳನ್ನು ಮಾಡುತ್ತಿವೆ. ವೀರಶೈವ ಧರ್ಮದ ಪೀಠ ಮಠಗಳು ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿವೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಅಧ್ಯಾತ್ಮದ ತತ್ವ ಸಿದ್ಧಾಂತಗಳನ್ನು ಆರ್ಥೈಸಿಕೊಂಡು ಪರಿಪಾಲನೆಯಲ್ಲಿ ತರಬೇಕಾಗಿದೆ. ಮಳಖೇಡ ಮೂಲಾಧಾರ ಕಟ್ಟಿಮನಿ ಮಠ ರಂಭಾಪುರಿ ಪೀಠದ ಶಾಖಾ ಮಠವಾಗಿ ಕಾರ್ಯ ಮಾಡುತ್ತಾ ಬಂದಿದೆ. ಈ ಮಠದ ಹಿಂದಿನ ಲಿಂ. ಕಾರ್ತಿಕೇಶ್ವರ ಶಿವಾಚಾರ್ಯರು ತಪಸ್ವಿಗಳಾಗಿ ಭಕ್ತರ ದು:ಖ ದುಮ್ಮಾನ ದೂರ ಮಾಡಿ ಧರ್ಮ ಸಂಸ್ಕೃತಿ ಬೆಳೆಸಿದ್ದನ್ನು ಮರೆಯಲಾಗದು. ನೂತನ ಮಠದ ಉದ್ಘಾಟನೆ ಶ್ರೀ ಜಗದ್ಗುರು ರೇಣುಕಾಚಾರ್ಯ ಮತ್ತು ಶ್ರೀ ಗುರು ಕಾರ್ತಿಕೇಶ್ವರ ಮೂರ್ತಿ ಪ್ರತಿಷ್ಠಾಪನೆ ಮಾಡಲಿರುವುದು ತಮಗೆ ಅತ್ಯಂತ ಸಂತೋಷ ತಂದಿದೆ ಎಂದ ಜಗದ್ಗುರುಗಳು ಇಂದಿನ ವೀರಗಂಗಾಧರ ಶಿವಾಚಾರ್ಯರು ಅದೇ ಪವಿತ್ರ ಪರಂಪರೆ ಮುಂದುವರಿಸಿಕೊ0ಡು ಹೋಗುತ್ತಿರುವುದು ತಮಗೆ ಸಮಾಧಾನ ತಂದಿದೆ ಎಂದರು.

ಮಳಖೇಡ ಗ್ರಾಮದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳವರನ್ನು ಅಲಂಕೃತ ಸಾರೋಟದಲ್ಲಿ ಭವ್ಯ ಮೆರವಣಿಗೆಯೊಂದಿಗೆ ಮಠಕ್ಕೆ ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಹಲವಾರು ಮಠಾಧೀಶರು, ರಾಜಕೀಯ ಧುರೀಣರು ಹಾಗೂ ಗಣ್ಯರು ಪಾಲ್ಗೊಂಡು ಜಗದ್ಗುರುಗಳ ದರ್ಶನಾಶೀರ್ವಾದ ಪಡೆದರು.


ವರದಿ: ಸಿ.ಎಚ್. ಬಾಳನಗೌಡ್ರ

Related Articles

ಪ್ರತಿಕ್ರಿಯೆ ನೀಡಿ

Latest Articles