ಸಂಕ್ರಾಂತಿಯ ಸಡಗರ

*ಅನಿತಾ ಲಕ್ಷ್ಮಿ, ಮಂಗಳೂರು.

ಹಿಗ್ಗಿ ಹಿಗ್ಗಿ ನಲಿವ ಸುಗ್ಗಿ
ಬಂದಿತೀಗ ಭರದಿ
ತೆನೆಗಳೀಗ ಭುವಿಗೆ ಬಾಗಿ
ರವಿಯ ಭ್ರಮಣೆ ನಭದಿ...||೧||

ದಕ್ಷಿಣದಿಂ ಉತ್ತರಕೆ
ವಲಸೆಗೈದ ದಿನಕರ
‌ಹೇಮಂತನ ಮಾಗಿಚಳಿಗೆ
ಧನು ಕಳೆದು ಮಕರ...||೨||

ಎಳ್ಳು ಬೆಲ್ಲ ಎಲಚಿಯೆಲ್ಲ
ಹಂಚಿ ಸಿಹಿಯ ಸವಿದು
ಒಳ್ಳೆ ನುಡಿ ಸಮರಸತೆಯ
ಸದ್ಭಾವವು ಮೈತಳೆದು....||೩||

ದವಸಧಾನ್ಯ ರಾಶಿಕಂಡು
ರೈತನಮೊಗದಿ ಕಾಂತಿ
ಮನೆಮನದಿ ಸಂಪ್ರೀತಿಯ
ಸಡಗರವೇ ಸಂಕ್ರಾಂತಿ...||೪||

ಹೊಸಬಟ್ಟೆ ಧರಿಸಿ ಸವಿಯುವ
ಹೊಸ ಅಕ್ಕಿಯ ಹುಗ್ಗಿ
ಹರೆಯ ವೃದ್ಧ ಭೇದವಿರದೆ
ಸಂಕ್ರಾಂತಿಯೆಂದು ಹಿಗ್ಗಿ...||೫||


Related Articles

ಪ್ರತಿಕ್ರಿಯೆ ನೀಡಿ

Latest Articles