ಗುರುವೆಂದರೆ ನರನ್ನಲ್ಲ, ಸಾಕ್ಷಾತ್ ಹರ

   ‘ವಂದೇ ಗುರು ಪರಂಪರಾಮ್’ ಪೂರ್ಣತೆಯ ಪಥದರ್ಶಿ – ಪುಸ್ತಕ ಪರಿಚಯ

– ಹರೀಶ ಕಡಬ, ಬೆಂಗಳೂರು  

ಗುರುವಿಗೆ ಅನೇಕ ರೂಪಗಳು. ನಾವು ಯಾರನ್ನು ಬೇಕಾದರೂ ಗುರುವಾಗಿ ಸ್ವೀಕರಿಸಬಹುದು. ಮಹಾಭಾರತದಲ್ಲಿ ಏಕಲವ್ಯ ದ್ರೋಣಾಚಾರ್ಯರ  ಪ್ರತಿಮೆ ಎದುರು ಸಕಲ ವಿದ್ಯಾಭ್ಯಾಸವನ್ನು ಪಡೆಯುತ್ತಾನೆ. ಗುರುವಿನ ಮಹತ್ವ, ಪರಂಪರೆಯನ್ನು ತಿಳಿಸುವ ಪುಸ್ತಕವೇ ಈ “ವಂದೇ ಗುರು ಪರಂಪರಾಮ್” ಪೂರ್ಣತೆಯ ಪಥದರ್ಶಿ. ಈ ಪುಸ್ತಕದ ಕತೃ ಡಾ.ಗುರುರಾಜ ಪೋಶೇಟ್ಟಿಹಳ್ಳಿ. 

ಗುರು ಒಂದು ದಾರಿಯಲ್ಲ. ಆತ ಮಾರ್ಗದರ್ಶಿಯಷ್ಟೇ. ಗುರುವೆಂದೂ ಮುಂದಿರುವುದಿಲ್ಲ.ಶಿಷ್ಯನಿಗೆ ಗುರಿ ಮುಂದಿರುತ್ತದೆ. ಗುರು ಹಿಂದಿರುತ್ತಾನೆ. ಹೀಗೆ ಅನೇಕ  ವಿಚಾರಗಳ ಕೃತಿಯೇ “ವಂದೇ ಗುರುಪರಂಪರಾಮ್” ಈ ಪುಸ್ತಕದಲ್ಲಿ ಲೇಖಕರು ಗುರುವಿನ  ಮಹತ್ವವನ್ನು  ಉಷನಿಷತ್, ಮಹಾಭಾರತ ಇನ್ನಿತರ  ಕಥೆಗಳ ಮೂಲಕ  ಗುರುವಿನ ಮಹತ್ವ, ಸಂಬಂಧವನ್ನು ಲೇಖಕರು ಬಹಳ  ಸೊಗಸಾಗಿ ದಾಖಲಿಸಿದ್ದಾರೆ. 

ಪುಸ್ತಕವನ್ನು ತೆರೆದಂತೆ ಮೊದಲಿಗೆ ಅರಿವೇ ಗುರು, ಮುಂದೆ ಗುರಿ, ಹಿಂದೆ ಗುರು ಇದ್ದಲ್ಲಿ ಜೀವನಯಾತ್ರೆ  ಸಲೀಸು. ಲೌಕಿಕ, ಅಲೌಕಿಕವೆರಡಕ್ಕೂ  ಗುರುವಿನ ಮಾರ್ಗದರ್ಶನ ಬೇಕು. ಗುರುವನ್ನು ದೇವರ ಸ್ಥಾನದಲ್ಲಿ ನೋಡುವ ಪರಂಪರೆ ನಮ್ಮದು. ಬೋಧನೆಯ ವೃತ್ತಿ ಮಾಡುವ ಎಲ್ಲರನ್ನೂ ಗುರುವೆಂದು  ಕುರುಡಾಗಿ ತಿಳಿಯಲಾಗಿಲ್ಲ. ಅದೆಷ್ಟೋ ಗುರು ವೇಷಧಾರಿ ಕಪಟಿಗಳು ಶಿಷ್ಯರ ಸಂಪತ್ತನ್ನು ದೋಚಿದರೆ, ಕೆಲವೇ ಕೆಲವು ನಿಜಾರ್ಥದ ಗುರುಗಳು ಶಿಷ್ಯರ ವಾಸನೆಗಳನ್ನು ದೋಷ-ತಾಪ-ಸಂತಾಪಗಳನ್ನು ದೋಚುತ್ತಾರೆ ಎಂದು ಕುಲಾರ್ಣವ ತಂತ್ರ ಎಚ್ಚರಿಸುತ್ತದೆ. ಗುರುವೂ ಒಬ್ಬ ಮನುಷ್ಯ-ಅವನಿಗೇನು ಕೊಂಬಿದೆಯೇ? ಎಂದು ಹಾಸ್ಯ ಮಾಡಬೇಡಿ. ಅವನು ಏಕಶೃಂಗನಾದ ಯಜ್ಞವರಾಹ. ಚತುಶೃಂಗವಾದ  ಪ್ರಣವ ಸ್ವರೂಪ. ‘ಗುರು’ ಎಂಬ ಶಬ್ದ ಬರೆದಾಗ ಎರಡು ಕೊಂಬುಗಳಿವೆ. ಆ ಕೊಂಬುಗಳನ್ನು ತೆಗೆದುಹಾಕಿಬಿಟ್ಟರೆ ಅದು ‘ಗರ'(ವಿಷ) ಆಗಿಬಿಡುತ್ತದೆ. ಗುರು ಬಹಳ  ಮುಖ್ಯವಾಗಿ ಜ್ಞಾನಕಾರಕ. ವ್ಯಕ್ತಿಗಳಲ್ಲಿ  ಸುಜ್ಞಾನ, ಸದ್ವಿದ್ಯೆ, ವೇದಾಂತಾದಿಶಾಸ್ತ್ರಗಳು, ಇವುಗಳೆಲ್ಲ  ಗುರುವಿನಿಂದ ಪ್ರಾಪ್ತವಾಗುವುದು. ಗುರುವಿನ ಅನುಗ್ರಹವಿಲ್ಲದೇ ವಿದ್ಯಾಪ್ರಾವೀಣ್ಯ ಜೀವಿಗೆ ದಕ್ಕದು.                    

 ದೇವತೆಗಳ ಗುರು ಬೃಹಸ್ಪತಿ: ದೇವತೆಗಳಿಗೆ  ಮಾರ್ಗದರ್ಶನ ಮಾಡಿದ ಗುರು. ಋಷಿ ಬೃಹಸ್ಪತಿ, ಅಂಗೀರಸನೆಂಬ ಮುನಿಯ ಮಗ. ಅಗ್ನಿರೂಪ ಧರಿಸಿ ಲೋಕಗಳನ್ನು ಕಾಪಡಿದವ.

ಗುರು ಬಲದ ಲಾಭವನ್ನು?: ಗುರು ಗ್ರಹವು ಪುನರ್ವಸು, ವಿಶಾಖ, ಪೂರ್ವಭಾದ್ರ  ನಕ್ಷತ್ರದವರರ  ಅಧಿಪತಿಯಾಗಿದ್ದಾನೆ.                                 

  ಗುರುವೆಂದರೆ ನರನ್ನಲ್ಲ, ಸಾಕ್ಷತ್ ಹರ: ಗುರು ಶಿಷ್ಯ ಪರಂಪರೆಗೆ ಗೌರವ ಮನ್ನಣೆಗಳು ಈಗಲೂ ಇವೆಯೇ ಎಂದರೆ ಸಂಪೂರ್ಣ ಇಲ್ಲವೆನ್ನಲಾಗದು. ಅಪರೂಪಕ್ಕೆಂಬಂತೆ ಅಂತಹ ಗುರುಗಳೂ ಇದ್ದಾರೆ, ಅಂತಹ ಶಿಷ್ಯರೂ ಇದ್ದಾರೆ. ‘ಇತಿಹಾಸದಲ್ಲಿ ಆಡಳಿತಗಾರರು ‘ಎಂದರೆ ರಾಜ ಮಹಾರಾಜರು ಎಂದೇ ಅರ್ಥ. ಅವರಿಗೆ ಸಲಹೆ ನೀಡಲು ರಾಜಗುರುಗಳು ಇರುತ್ತಿದ್ದರು. ತತ್ವದ  ಮೂರ್ತರೂಪವಾದ  ಗುರುವು ನಮ್ಮ ಬದುಕಿನ ಪಯಣದಲ್ಲಿ ಚುಕ್ಕಾಣಿಗನಾಗಿ ನಮ್ಮೊಂದಿಗೆ  ಸಂಚರಿಸುತ್ತಾನೆ. ಧರ್ಮದ ಪ್ರತಿನಿಧಿ ಎಂದೆನಿಸಿದ ಆತನ ಕೃಪೆ ಅಸಾಧಾರಣವಾದದ್ದು  ಮತ್ತು ಯುಗಪ್ರವರ್ತಕರಾದ ಅವತಾರಪುರುಷರೂ  ಈ ಗುರುಶಕ್ತಿಗೆ ಮಣಿದಿದ್ದಾರೆ. ಪಾಶ್ಚಾತ್ಯ ದೇಶಗಳಲ್ಲಿ  ಗುರುಗಳ ಬಗ್ಗೆ ಅಂಥ ಭಾವನಾತ್ಮಕ ಸಂಬಂಧಗಳು ಇಲ್ಲ. ಹಾಗಾಗಿ ಮೌಲ್ಯಗಳು ಅಲ್ಲಿ ಕುಸಿಯುತ್ತಿವೆ. ಆದರೆ, ನಮ್ಮ ಗುರುಪರಂಪರೆ ಗುರುಭಕ್ತಿ ನಮ್ಮನ್ನು ತುಂಬ ಮೇಲ್ಮಟ್ಟದಲ್ಲಿ ಇರಿಸಿದೆ.

ಗುರು ಮಹಿಮೆ ಎಂದರೇನು? ಪವಾಡವೇ ಅಥವಾ ಗುರುವಿನ ಶಕ್ತಿ ಪ್ರದರ್ಶನವೇ?ಈ ಬಗ್ಗೆ ಶ್ರೀ ಶಂಕರಾಚಾರ್ಯರು ಎರಡು ಶ್ಲೋಕಗಳಲ್ಲಿ ಬಹಳ ಚೆನ್ನಾಗಿ ವಿವರಿಸಿದ್ದಾರೆ. ಅವರು ದಕ್ಷಿಣಾಮೂರ್ತಿ ಸ್ತೋತ್ರದಲ್ಲಿ  ವಿವರಿಸಿದ್ದಾರೆ .ಗುರುಗಳಲ್ಲಿ ಧಾರ್ಮಿಕ ಹಾಗೂ ಶೈಕ್ಷಣಿಕ  ಗುರುಗಳೆಂದು ವಿಂಗಡಿಸಬಹುದು.ನಮ್ಮ ಸನಾತನ ಪರಂಪರೆಯಲ್ಲಿ ಜನ್ಮ ನೀಡಿದ ಜನನಿ ಮೊದಲ ಗುರುವೆನಿಸಿದರೆ, ಅಜ್ಞಾನವನ್ನು ನೀಗಿಸಿ ಸುಜ್ಞಾನವನ್ನು ಕರುಣಿಸುವ ಸದ್ಗುರುವು ಆಚಾರ್ಯಪದವನ್ನು ಅಲಂಕರಿಸಿದ ತತ್ತ್ವವೇತ್ತನಾಗಿರುವನು. 

    ಗುರುಕಾರುಣ್ಯಕ್ಕಿಂತ ಇನ್ನು ಮಿಗಿಲುಂಟೆ: ಈಗಿನ  ಕಾಲವು  ಕಂಪ್ಯೂಟರ್ ಕಾಲ, ಪ್ರತಿಯೊಂದಕ್ಕೂ ಕಂಪ್ಯೂಟರ್ ಇದೆ. ಅಂತರ್ಜಾಲ ಗಣಕಯಂತ್ರದಲ್ಲಿ ಇಡೀ ಬ್ರಹ್ಮಾಂಡವೇ ತುಂಬಿಹೋಗಿರುತ್ತದೆ. ಹೀಗಾಗಿ Internet ನಲ್ಲಿ ಎಲ್ಲಾ ವಿದ್ಯೆಗಳೂ ಸಿಗುತ್ತವೆ. ವೇದಗಳು, ವೇದಾಂತಗಳು, ವೇದಾಂಗಗಳು, ಭಾಷ್ಯಗಳು, ವ್ಯಾಖ್ಯಾನಗಳು- ಎಲ್ಲವೂ ಅಂತರ್ಜಾಲದಲ್ಲಿ ಲಭ್ಯ’  ಇವುಗಳಿಂದ ಎಲ್ಲವನ್ನು ತಿಳಿಯುವುದು ಸಾಧ್ಯವೇ? ಆದರೆ  ನೆನಪಿರಲಿ, ಬ್ರಹ್ಮವಿದ್ಯೆಯು  ಕೇವಲ  ಬೌದ್ಧಿಕವಿದ್ಯೆಯಲ್ಲ, ಇದು ಬುದ್ಧಿಯ  ಕಸರತ್ತಿನಿಂದ, ಶಾಸ್ತ್ರಪಾಂಡಿತ್ಯದಿಂದ, ಮೇಧಾಚಾತುರ್ಯದಿಂದ ದಕ್ಕುವ ವಿದ್ಯೆಯಲ್ಲ; ಅಧ್ಯಾತ್ಮವಿದ್ಯೆಯು ಎಂದರೆ ಬ್ರಹ್ಮಾತ್ಮವಿದ್ಯೆಯು ಅನುಭವ  ಪ್ರಧಾನವಾದ ವಿದ್ಯೆಯೇ  ಹೊರತು  ಬರೀ ವಾದವಿವಾದದ ವಿದ್ಯೆಯಲ್ಲ. ಸದ್ಗುರುಕೃಪಾನುಗ್ರಹವಿಲ್ಲದೆ  ಹೋದರೆ ಬ್ರಹ್ಮಾತ್ಮವಿದ್ಯೆಯು ನಮ್ಮದಾಗುವುದಿಲ್ಲ.

ನಮ್ಮ ಬದುಕಿನ ಉನ್ನತಿಗಾಗಿ ಗುರುವಿನ  ಮಾರ್ಗದರ್ಶನ ಅಗತ್ಯ. ಈ ಪುಸ್ತಕ ಗುರುವಿನ ಮಹತ್ವವಲ್ಲದೆ ನಮ್ಮಶಿಕ್ಷಣ ವ್ಯವಸ್ಥೆಯ ಬಗ್ಗೆಯೂ ಬೆಳಕು ಚೆಲ್ಲುವ ಕೃತಿಯೂ ಆಗಿದೆ. ಅವರಿಗೆ ಅಭಿನ೦ದನೆಗಳು. ಅವರಿಂದ ಇನ್ನಷ್ಟು ನಮ್ಮಪರಂಪರೆಯ, ಸಂಸ್ಕೃತಿಯ ವಿಚಾರಗಳ ಸಾಹಿತ್ಯ ರಚನೆಯಾಗಲಿ ಎಂದು ಆಶಿಸುತ್ತೇನೆ.

ಪುಸ್ತಕ : ವಂದೇ ಗುರು ಪರಂಪರಾಮ್  ಪೂರ್ಣತೆಯ ಪಥದರ್ಶಿ                    

 ಲೇಖಕರು: ಡಾ.ಗುರುರಾಜ ಪೋಶೆಟ್ಟಿಹಳ್ಳಿ

 ಪುಟಗಳು:‍IV+184    

ಬೆಲೆ:ರೂ.180/-                    

ಪ್ರಕಾಶಕರು: ಪ್ರಣವ ಮೀಡಿಯಾ ಹೌಸ್ ಪ್ರಕಾಶನ   

ಮೊ:97393 69621   

Related Articles

ಪ್ರತಿಕ್ರಿಯೆ ನೀಡಿ

Latest Articles