ಮಕರ ಸಂಕ್ರಾಂತಿಯಿಂದ ದೇವತೆಗಳ ಕಾಲ. ಅಂದರೆ ಕ್ರೌರ್ಯ, ಅನೀತಿಗಳು ಮರೆಯಾಗಿ ನೈತಿಕತೆ, ಮಾನವೀಯ ಗುಣಗಳ ಅಧಿಷ್ಠಾನದ ಸುಸಮಯ. ಸೂರ್ಯನ ಪ್ರಖರ ಕಾಂತಿ ಎಲ್ಲರ ಕೆಡುಕುಗಳನ್ನು ನಿವಾರಿಸಲಿ ಎಂದು ಹಾರೈಸುತ್ತ ಪ್ರಕೃತಿಯ ಈ ವಿಶಿಷ್ಟ ಪರ್ವದ ಬಗ್ಗೆ ಇಲ್ಲಿದೆ ಅವಲೋಕನ.
*ಡಾ. ಗುರುರಾಜ ಪೋಶೆಟ್ಟಿಹಳ್ಳಿ
ಸಂಕ್ರಾಂತಿ ಸೂರ್ಯ ದಿಕ್ಕು ಬದಲಿಸುವ ಉತ್ತರಾಯಣ ಪರ್ವಕಾಲವಾಗಿದೆ. ಉಳಿದೆಲ್ಲ ಹಬ್ಬಗಳಿಗೆ ನಿಗದಿತ ದಿನವೆಂಬುದಿಲ್ಲ. ಆದರೆ ಸಂಕ್ರಾಂತಿ ಮಾತ್ರ ಹಾಗಲ್ಲ. ಪ್ರತಿವರ್ಷ ಜನವರಿ 14 ಅಥವಾ 15ರಂದು ಆಚರಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ಇದನ್ನು ಸುಗ್ಗಿ ಹಬ್ಬ, ರೈತರ ಹಬ್ಬವೆಂತಲೂ ಕರೆಯುತ್ತಾರೆ.
ನಿಸರ್ಗದಲ್ಲಾಗುವ ಬದಲಾವಣೆಗೆ ಜನಸಮುದಾಯ ತೋರುವ ಸ್ಪಂದನೆ ರೂಪದ ಹಲವು ಆಚರಣೆಗಳಲ್ಲಿ ಸಂಕ್ರಾಂತಿಯೂ ಒಂದು. ಸೂರ್ಯ ಒಂದು ರಾಶಿಯೊಳಗಿನ ಹೆಜ್ಜೆಯನ್ನು ಮತ್ತೊಂದರಲ್ಲಿ ಇಡುವುದರ ಸಾಂಕೇತಿಕ ಸಂಭ್ರಮವದು.
ಪೌರಾಣಿಕ ಹಿನ್ನೆಲೆ
ಮಹಾವಿಷ್ಣು ಅಸುರರನ್ನು ಸಂಹಾರ ಮಾಡಿ ಅವರ ತಲೆಗಳನ್ನು ಮಂದರ ಪರ್ವತದಲ್ಲಿ ಸಂಕ್ರಾಂತಿಯಂದೇ ಬಚ್ಚಿಟ್ಟನಂತೆ. ಸಗರ ರಾಜನ 60ಸಾವಿರ ಮಕ್ಕಳು ಶಾಪಕ್ಕೊಳಗಾಗಿ ಕಪಿಲಮುನಿ ಆಶ್ರಮದಲ್ಲಿ ಸುಟ್ಟು ಭಸ್ಮವಾಗಿದ್ದರಂತೆ ಅವರ ಮುಕ್ತಿಗಾಗಿ ಭಗೀರಥ ತನ್ನ ತಪಸ್ಸಿನಿಂದ ಗಂಗೆಯನ್ನು ಭೂಮಿಗೆ ಕರೆತಂದು ಸಂಕ್ರಾಂತಿಯಂದು ಅವರಿಗೆ ಗಂಗಾಜಲ ತರ್ಪಣಗೈದನೆಂದೂ, ಅಂದಿನ ಕಪಿಲಮುನಿ ಆಶ್ರಮವೇ ಇಂದಿನ ಗಂಗಾಸಾಗರವೆಂದೂ, ಹೇಳಲಾಗುವುದು. ಹೀಗಾಗಿ ಇಂದಿಗೂ ಪಶ್ಚಿಮ ಬಂಗಾಳದಲ್ಲಿ ಗಂಗಾಸಾಗರ ಮೇಳ ನಡೆಯುತ್ತದೆ. ಉತ್ತರಾಯಣ ಪುಣ್ಯಕಾಲ ಬರುವರೆಗೂ ಇಚ್ಛಾಮರಣಿಯಾದ ಭೀಷ್ಮಾಚಾರ್ಯರು ದೇಹ ತ್ಯಾಗಕ್ಕೆ ಕಾದು ಕುಳಿತರು ಎಂದು ವ್ಯಾಸ ಭಾರತದಲ್ಲಿ ಉಲ್ಲೇಖಿಸಲಾಗಿದೆ. ಆದ್ದರಿಂದ ಸಂಕ್ರಾಂತಿಯಂದು ನದಿ, ಸಮುದ್ರಗಳಲ್ಲಿ ಪುಣ್ಯಸ್ನಾನ ಮಾಡಿದಲ್ಲಿ ಪುನೀತರಾಗುವರೆಂಬ ನಂಬಿಕೆಯಿದೆ.
ಶುಭದೆಡೆಗೆ ನಡೆಸುವ ಮಕರಸಂಕ್ರಾಂತಿ
ಭೂಮಿಯಾದಿಯಾಗಿ ಸಕಲ ಗ್ರಹ ನಕ್ಷತ್ರಗಳ ಒಕ್ಕೂಟವೇ ಸೌರವ್ಯೂಹ, ಎಲ್ಲದಕ್ಕೂ ಸೂರ್ಯನೇ ಸಾರ್ವಭೌಮ ಎನಿಸಿದ್ದಾನೆ. ಸರ್ಯನು ಒಂದು ರಾಶಿಯಿಂದ ಪ್ರತಿ ತಿಂಗಳು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸುವ ಸಂಧಿ ಕಾಲವನ್ನೇ `ಸಂಕ್ರಾಂತಿ’ ಎಂದು ಕರೆದರು. ಇದು ಸೌರಮಾನ ಇದರಲ್ಲಿ ಮಕರ ರಾಶಿಗೆ ಸೂರ್ಯನ ಪ್ರವೇಶಕ್ಕೆ ಹೆಚ್ಚಿನ ಮಹತ್ವ. ಸೂರ್ಯನು ಭೂಮಧ್ಯರೇಖೆಗೆ ಉತ್ತರಾಭಿಮುಖಿಯಾಗಿ ಸಂಚರಿಸುವ ಈ ಸಮಯ ಉತ್ತರಾಯಣದ ಪುಣ್ಯಕಾಲವೆನಿಸಿದೆ. ಸಕಲ ಜೀವರಾಶಿಗಳಿಗೂ ಸ್ವಾಸ್ಥö್ಯ ಸತ್ವ ಸಾವಯುವ ಸಿಗುವ ಸಂಕ್ರಮಣವಾಗಿದೆ.
ಸೂರ್ಯೋಪಾಸನೆಯ ಪರ್ವಕಾಲವಾಗಿ ಪ್ರಾಧುರ್ಭಾವವಾಗಿದೆ. ಅಣೋರಣೀಯಾನ್ ಮಹತೋಮಹೀಮಾನ್ ಆಗಿರುವ ಸೂರ್ಯನಿಗೆ ಸ್ವಾಗತ ಕೋರುವ ಸಮಯವಾಗದೆ, ಸಕಲ ಜೀವರಾಶಿಗಳಿಗೂ ಪ್ರಾಣಚೈತನ್ಯ ನೀಡುವ ಸಾವಯುವ ಶಕ್ತಿ ಸೂರ್ಯನೇ ಆಗಿದ್ದಾನೆ. ಸೂರ್ಯನಲ್ಲಿರುವ ನೀಲ ತೇಜಾಣು ಸಂಚಲನೆಯ ಕಾಲಮಾನವು ಮತ್ತು ಮಾನವನ ಶ್ವಾಸೋಚ್ಚಾಸ ಕ್ರಿಯೆಯ ಕಾಲಾನವು ಒಂದೇ ಮಾನವನಿಗೆ ಸೂರ್ಯನಿಲ್ಲದೇ ಬೆಳಕೂ ಇಲ್ಲ ಬಾಳು ಇಲ್ಲ, ನಮ್ಮ ಪೂರ್ವಿಕರು ಬಲು ಜಾಣರು. ಪ್ರತಿ ಹಬ್ಬದ ಆಚರಣೆಯ ಹಿಂದೆಯೂ ಆಯಾಯ ಕಾಲಕ್ಕೆ ತಕ್ಕಂತೆ ಆರೋಗ್ಯ ರಕ್ಷಣೆಯ ಸೂತ್ರಕ್ಕನುಗುಣವಾಗಿ ಆಹಾರ ಬೆಳೆಯುವುದು. ಹಾಗೂ ಸೇವನೆಯ ಬಗ್ಗೆಯೂ ರೂಢಿಯಲ್ಲಿ ತಂದಿದ್ದಾರೆ.
ಎಳ್ಳು-ಬೆಲ್ಲ ಸೇವನೆಗೆ ಹೆಚ್ಚು ಮಹತ್ವ
ಸಂಕ್ರಾಂತಿ ಹಬ್ಬದಲ್ಲಿ ಎಳ್ಳು-ಬೆಲ್ಲದ ಸೇವನೆಗೆ ಹೆಚ್ಚು ಮಹತ್ವ ನೀಡಿದ್ದಾರೆ. ಚಳಿಗಾಲದಲ್ಲಿ ಸುತ್ತಲಿನ ವಾತಾವರಣದಲ್ಲಿ ಆರ್ದ್ರತೆ ಕಡಿಮೆ ಇರುತ್ತದೆಯಾದ್ದರಿಂದ ಚರ್ಮ ಒಣಮೂಳೆ, ನರ, ಚರ್ಮಕ್ಕೆ ಸಂಬಂಧಿಸಿದ ಖಾಯಿಲೆ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಬೆಲ್ಲದಲ್ಲಿ ನರಗಳಿಗೆ ಶಕ್ತಿಕೊಡುವ ಮೆಗ್ನಾ಼ಷಿಯಮ್, ಕಬ್ಬಿಣದ ಅಂಶ, ಪೊಟಾಷಿಯಮ್, ನೀರಿನಂಶವೂ ಇದೆ. ಎಳ್ಳಿನಲ್ಲಿ ಚರ್ಮಕ್ಕೆ ಮೃದುತ್ವಕೊಡುವ ಎಣ್ಣೆ ಅಂಶ ಇರುವುದರಿಂದ ಸಂಕ್ರಾಂತಿ ಹಬ್ಬದ ಊಟದಲ್ಲಿ ಇವೆಲಕ್ಕೂ ಪ್ರಾಶಸ್ತ್ಯಹೆಚ್ಚು. ಹೀಗಾಗಿ ಅಂದು ಎಳ್ಳಿನ ಪುಡಿಯನ್ನು ಸೀಗೆಕಾಯಿ ಪುಡಿಯಂತೆ ಮೈಗೆಲ್ಲ ಲೇಪಿಸಿಕೊಂಡು ಅಭ್ಯಂಜನ (ಸ್ನಾನ) ಮಾಡುವರು. ಹೀಗೆ ಮಾಡುವುದರಿಂದ ಚರ್ಮವ್ಯಾಧಿ ಬರಲಾರದು.
ಹೇಮಂತ ಋತು-ಶೀತಕಾಲ. ಮೈಕೊರೆಯುವ ಚಳಿಗೆ ದೇಹದ ಉಷ್ಣತೆ ಹೊರಬಾರದೆ ಒಡಲಿನಲ್ಲಿ ಶೇಖರವಾಗುವುದರಿಂದ ಜಠರಾಗ್ನಿ ಪ್ರಬಲವಾಗಿ ಹಸಿವು ಹೆಚ್ಚಾಗುವುದು ಆದಕಾರಣ ಸ್ನಿಗ್ಧ, ಪುಷ್ಟಿದಾಯಕ ಸತ್ವಭರಿತ – ಅಂದರೆ ಎಳ್ಳು, ಶೇಂಗಾ, ಹಾಲು, ಗೋಧಿ, ಹೆಸರು, ಉದ್ದು, ಕಬ್ಬಿನರಸಗಳಂತಹ ಪದಾರ್ಥಗಳಿಂದ ತಯಾರಿಸಿದ ಖಾದ್ಯಗಳು ಈ ಸಮಯಕ್ಕೆ ಉತ್ತಮ.
ವೇದಕಾಲದಿಂದಲೂ ಧಾರ್ಮಿಕ ವಿಧಿವಿಧಾನಗಳಲ್ಲಿ ಎಳ್ಳಿಗೆ ಪ್ರಾಮುಖ್ಯತೆಯಿದ್ದು ಹೋಮಧಾನ್ಯವೆಂದೇ ಮಹತ್ವವಿತ್ತಿದ್ದಾರೆ. ಎಣ್ಣೆ ಎಂಬ ಶಬ್ಧಕ್ಕೆ ಮೂಲತಃ ಎಳ್ಳಿನಿಂದ ತೆಗೆದ ಜಿಡ್ಡು (ಎಳ್-ನೇಯ್) ಎಂಬ ಅರ್ಥವಿತ್ತು. ಔಷಧಿಯ ಆಗರವಾದ ಎಳ್ಳು ಈ ಸಮಯಕ್ಕೆ ಅತಿ ಸೂಕ್ತ, ಬೆಲ್ಲದಲ್ಲಿ ಕಬ್ಬಿಣಾಂಶ ಹೇರಳವಾಗಿದ್ದು ಹಿಮೋಗ್ಲೊಬಿನ್ ಹೆಚ್ಚಳಕ್ಕೆ ಸಹಕಾರಿ.
ಸಿಹಿ ಸಂತೋಷದ ಪ್ರತೀಕ. ಇವೆರಡರ ಮಿಶ್ರಣ ಮಾನವನಿಗೆ ಆರೋಗ್ಯದೊಂದಿಗೆ ಪ್ರೀತಿ-ವಿಶ್ವಾಸ ಬೆಸೆಯುವ ಸಾಧನ. ಸಾಸಿವೆಯಷ್ಟು ಪುಟ್ಟದಾಗಿರುವ ಎಳ್ಳಿನಲ್ಲಿ ಬ್ರಹ್ಮಾಂಡದಷ್ಟು ಔಷಧಿಯ ಭಂಡಾರವೇ ಅಡಗಿದೆ. ಇಂತಿರುವ ಎಳ್ಳಷ್ಟು ಸಂಪ್ರದಾಯ, ಪೂಜೆಯ ಹೆಸರಿನಲ್ಲಿ ದೇಹ-ತ್ವಚೆಯ ರಕ್ಷಣೆಗೆ ಅತ್ಯಂತ ಅವಶ್ಯವಿರುವ ಸಮಯದಲ್ಲಿ ಬಳಸುವ ಪದ್ಧತಿ ಅದ್ಭುತ.
ನದಿಗಳಿಗೆ ದೈವಿ ಶಕ್ತಿ
ಮಕರ ಸಂಕ್ರಾಂತಿಯ ಮತ್ತೊಂದು ಮುಖ್ಯವಾದ ಆಚರಣೆ ಎಂದರೆ ನದಿಸ್ನಾನ. ಪುರಾಣಗಳ ಪ್ರಕಾರ ತುಂದಿಲನೆಂಬ ಋಷಿ ಶಿವನನ್ನು ಪೂಜಿಸಿ ಮಹಾದೇವನ ಒಂದಂಶವಾದ ಜಲವೇ ಆದನಂತೆ. ಬ್ರಹ್ಮನು ಜಗತ್ತನ್ನು ಸೃಷ್ಟಿಸುವಾಗ ಪುಷ್ಕರನ ಮತ್ತು ದೇವಗುರುವಾದ ಬೃಹಸ್ಪತಿಯ ನೆರವು ಪಡೆದನಂತೆ. ಮಕರ ಸಂಕ್ರಮಣದಂದು ಪುಷ್ಕರನು ನದಿಗಳಿಗೆ ವಿಶೇಷವಾದ ದೈವಿಶಕ್ತಿಯನ್ನು ನೀಡಿರುವದರಿಂದ ನದಿಸ್ನಾನ ಶುಭಕರವಾಗಿದೆ. ವಿಶೇಷವಾಗಿ ಸೂರ್ಯ ಸಂಕ್ರಮಣದಂದು ಸೂರ್ಯನನ್ನು ಭೇಟಿಯಾಗಲು ‘ಸಂಕ್ರಾಂತಿ’ ಎಂಬ ದೇವಿಯು ಬರುತ್ತಾಳೆ. ಆದ್ದರಿಂದ ಅವಳ ಹಾಗೂ ಸೂರ್ಯ ದೇವನ ಪ್ರೀತಿಗೋಸ್ಕರ ಸ್ನಾನ ದಾನಾದಿಗಳನ್ನು ಮಾಡಿದರೆ ಅದು ಅಕ್ಷಯವಾಗುತ್ತದೆ ಎನ್ನುವ ನಂಬಿಕೆ ಇದೆ.