ಡಾ.ಅಭಿನವಕುಮಾರ ಚನ್ನಬಸವ ಸ್ವಾಮೀಜಿಯವರ ಎರಡು ಪ್ರವಾಸ ಕೃತಿಗಳ ಲೋಕಾರ್ಪಣೆ

ಸವದತ್ತಿ: ಪ್ರವಾಸದ ಅನುಭವಗಳು ಜ್ಞಾನಾರ್ಜನೆಯ ಸೆಲೆಗಳು. ಮನೋವಿಕಾಸದ ಸಾಧನಗಳು. ಪೂಜ್ಯರು ಸಾಂಪ್ರದಾಯಿಕ ಜಾತ್ರೆಗಳನ್ನು ಸಾಹಿತ್ಯಕ ಜಾತ್ರೆಗಳನ್ನಾಗಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪರೂ ವಿದ್ವಾಂಸರು ಆದ ಡಾ.ವೀರಣ್ಣ ರಾಜೂರ ಅಭಿಪ್ರಾಯಪಟ್ಟರು.

ಜನವರಿ 14ರಂದು ಬಿದರಿ ಕುಮಾರಸ್ವಾಮಿಗಳು ತಪೋನುಷ್ಠಾನಗೈದ ಪವಿತ್ರ ಸ್ಥಳ – ವಡಕಹೊಳಿ ಗೊರವನಕೊಳ್ಳ ವಟ್ನಾಳ ಮಠದ ಪವಿತ್ರ ಗದ್ದುಗೆಗೆ ವಚನಾಭಿಷೇಕ ಹಾಗೂ 500 ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದೇ ಸಂದರ್ಭ ಜಮಖಂಡಿ ಓಲೆಮಠದ ಪೂಜ್ಯ ಡಾ.ಅಭಿನವಕುಮಾರ ಚನ್ನಬಸವ ಸ್ವಾಮೀಜಿಯವರ ಎರಡು ಪ್ರವಾಸ ಕೃತಿಗಳಾದ “ಯುರೋಪ ಪ್ರವಾಸ ಕಥನ” ಮತ್ತು ಅಂಗೈ ಅರಮನೆಯಲ್ಲಿ ಸಿಂಗಾಪುರ” ಲೋಕಾರ್ಪಣೆಗೊಳಿಸಲಾಯಿತು.

ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ರಾಜೂರ ಅವರು, “ಪ್ರವಾಸ ಕಥನಗಳು ಲೋಕಾನುಭವ ತಿಳಿಸಿ ಕೊಡುವಂತವುಗಳು. ಒಂದು ದೇಶದ ಸಂಸ್ಕೃತಿ., ಸಾಹಿತ್ಯ, ಸ್ಮಾರಕಗಳು, ಆರ್ಥಿಕ ಸ್ಥಿತಿ, ರಾಜಕೀಯ ನೀತಿ, ಭೌಗೋಳಿಕ ಪರಿಸರ ಹೀಗೆ ಹತ್ತು ಹಲವು ವಿಷಯಗಳನ್ನು ತಿಳಿಸಿ ಕೊಡುತ್ತವೆ. ಸಾಹಿತ್ಯ ಪ್ರಕಾರದಲ್ಲಿ ಈ ಪ್ರವಾಸ ಕಥನವು ಇಂದು ತುಂಬು ಹುಲುಸಾಗಿ ಬೆಳೆದು ಬರುತ್ತಿವೆ. ಅದರಲ್ಲೂ ಈ ಪ್ರಕಾರದ ಕೃಷಿ ಮಾಡಿದ ವಿರಳಾತಿವಿರಳ ಮಠಾಧೀಶರಲ್ಲಿ ಜಮಖಂಡಿ ಓಲೆಮಠದ ಪೂಜ್ಯ ಡಾ.ಅಭಿನವಕುಮಾರ ಚನ್ನಬಸವ ಸ್ವಾಮೀಜಿಗಳು ಒಬ್ಬರಾಗಿ ಅನೇಕ ಪ್ರವಾಸ ಕಥನಗಳನ್ನು ಸಾಹಿತ್ಯ ಲೋಕಕ್ಕೆ ನೀಡಿರುವುದು ತುಂಬ ಸಂತಸ ಎಂದರು.


ಈ ಕಾರ್ಯಕ್ರಮದಲ್ಲಿ ಜಮಖಂಡಿ ಸಿದ್ದಾಪುರದ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಚೇರಮನ್‌ರಾದ ಜಗದೀಶ ಗುಡಗುಂಡಿಮಠ ಸಮಾರಂಭದ ಜ್ಯೋತಿ ಬೆಳಗಿಸಿ ಮಾತನಾಡಿ, “ಪುಸ್ತಕಗಳು ಜ್ಞಾನ ನೀಡುವ ಕಣಜಗಳು.ಓದುವ ಹವ್ಯಾಸ ಇಂದು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು” ಎಂದರು. ಯುರೋಪ್ ಪ್ರವಾಸ ಕಥನ ಪರಿಚಯಿಸಿದ ಖ್ಯಾತ ಸಾಹಿತಿಗಳಾದ ಡಾ. ಅಶೋಕ ನರೋಡೆಯವರು “ಪೂಜ್ಯ ಓಲೆಮಠದ ಶ್ರೀಗಳು ಕೇವಲ ಮಠಾಧೀಶರಾಗಿರದೇ. ಆಧುನಿಕ ವಚನಕಾರರು, ಸಂಶೋಧಕರೂ ಆಗಿರುವರು. ಜಗತ್ತನ್ನು ತಿಳಿಯಲುಪ್ರವಾಸ ಕೈಗೊಳ್ಳಬೇಕು”ಎಂದರು. ಇನ್ನೊಂದು ಕೃತಿ “ಅಂಗೈ ಅರಮನೆಯಲ್ಲಿ ಸಿಂಗಪೂರ” ಕೃತಿ ಸಮೀಕ್ಷೆಯನ್ನು ಮಾಡಿದ ಡಾ. ವೈ.ಎಂ.ಯಾಕೊಳ್ಳಿಯವರು “ಸಿಂಗಪೂರ ಒಂದು ಸುಂದರ ಪ್ರವಾಸಿ ತಾಣ. ದೇಶದ ಪ್ರವಾಸದ ವಿವರಣೆಯೊಂದಿಗೆ ಸಹಪ್ರಯಾಣಿಕರ ಮಾತು,ಸೂಕ್ಷö್ಮ ಅವಲೋಕನಗಳನ್ನು ದಾಖಲಿಸಿ ಹಣ ಶ್ರಮವಿಲ್ಲದೇ ಓದುಗರನ್ನು ಪ್ರವಾಸ ಮಾಡಿಸುವಂತಹ ಕೃತಿಯನ್ನು ಪೂಜ್ಯರು ನೀಡಿದ್ದಾರೆ” ಎಂದರು.
ಧಾರವಾಡ ಮುರುಘಾಮಠದ ಪೂಜ್ಯ ಮಲ್ಲಿಕಾರ್ಜುನ ಮಹಾಸ್ವಾಮೀಜಿಯವರು ಓಲೆಮಠದ ಪೂಜ್ಯರ “ಸಾಧನಾಪಥ” ಪರಿಚಯ ಪತ್ರ ಬಿಡುಗಡೆಗೊಳಿಸಿ, “ಇಲ್ಲಿ ಸಾಹಿತ್ಯ ಸಾಂಸ್ಕೃತಿಕ ಜಾತ್ರೆ ನಡೆಯುತ್ತಿದೆ.”ಎಂದರು.ಗುಣದಾಳದ ಶ್ರೀ ವಿವೇಕಾನಂದ ದೇವರು ಪುಸ್ತಕದ ಮಹತ್ವ ಕುರಿತು ಮಾತನಾಡಿದರು.
ಓಲೆಮಠ ಜಮಖಂಡಿ ವಡಕಹೊಳಿ ಗೊರವನಕೊಳ್ಳಮಠದ ಪೂಜ್ಯ ಡಾ.ಅಭಿನವಕುಮಾರ ಚನ್ನಬಸವ ಸ್ವಾಮೀಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ “ಪ್ರವಾಸದಿಂದ ಲೋಕಾನುಭವ ದೊರೆಯುತ್ತದೆ.ಅದನ್ನು ಒಂದೆಡೆ ದಾಖಲಿಸಿಡುವುದರಿಂದ ಎಲ್ಲರೂ ಓದಿ ತಿಳಿಯುವಂತಾಗುವುದು. ಬರೆಯುವ ಹವ್ಯಾಸಕ್ಕೆ ಇದೂ ಕೂಡ ಮಾಹಿತಿ ಕೊಡುವ ಮಹತ್ವ ಕಾರ್ಯವೆನಿಸಿ ಕೃತಿ ಹೊರತರುತ್ತಿರುವುದಾಗಿ” ನುಡಿದರು.

ವಿಜಯಪುರದ ಸಹೋದರಿಯರಾದ ದಿವ್ಯಾ ಹಾಗೂ ದೀಕ್ಷಾ ಸಂಗಡಿಗರಿಂದ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮ ನಡೆದವು. ಕೊರೋನಾ ನಿವಾರಣೆಗೆ ಪ್ರಾರ್ಥಿಸಿ ಮುಕ್ತಾಯಕ್ಕನ ಬಳಗದಿಂದ ಉಡಿ ತುಂಬುವ ಕಾರ್ಯ ನಡೆಯಿತು.

ಸಮಾರಂಭದಲ್ಲಿ ಸೊಲ್ಲಾಪುರದ ಕಿರೀಟೇಶ್ವರ ಮಠದ ಸ್ವಾಮಿನಾಥ ಸ್ವಾಮೀಜಿ, ರೋಣದ ಶ್ರೀ ಗುರುಪಾದ ಸ್ವಾಮೀಜಿ, ಯುವ ಮುಖಂಡ ದೀಪಕ ಇನಾಮದಾರ, ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ನಿರ್ದೇಶಕ ನಾಗಪ್ಪಣ್ಣಾ ಸನದಿ ಉಪಸ್ಥಿತರಿದ್ದರು.

ಸವದತ್ತಿ ಮುಕ್ತಾಯಕ್ಕನ ಬಳಗದಿಂದ ಪ್ರಾರ್ಥನೆ ಜರುಗಿತು. ಅಥಣಿಯ ಲೇಖಕಿ ರೋಹಿಣಿ ಯಾದವಾಡ ಕಾರ್ಯಕ್ರಮ ನಿರೂಪಿಸಿದರು.ಜಗದೀಶ ಹಳಮನಿ ಸ್ವಾಗತಿಸಿ ವಂದಿಸಿದರು.

ವರದಿ: ವೈ.ಬಿ.ಕಡಕೋಳ

Related Articles

ಪ್ರತಿಕ್ರಿಯೆ ನೀಡಿ

Latest Articles