ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀಭಾಗವತಾಶ್ರಮದಲ್ಲಿ ಉಡುಪಿ ಶ್ರೀ ಭಂಡಾರಕೇರಿ ಮಠಾಧೀಶರಾದ ಶ್ರೀ ಶ್ರೀವಿದ್ಯೇಶತೀರ್ಥ ಶ್ರೀಪಾದರ ನೇತೃತ್ವದಲ್ಲಿ ಸೌರ ಮಧ್ವನವಮಿಯ ಆಚರಣೆ ಸಂಪನ್ನವಾಯಿತು. ಬೆಳಗ್ಗೆ ಶ್ರೀಕೋದಂಡರಾಮ ದೇವರು, ಆಂಜನೇಯ ಹಾಗೂ ಶ್ರೀಮನ್ಮಧ್ವಾಚಾರ್ಯರಿಗೆ ಮಧು ಅಭಿಷೇಕವನ್ನು ಮಾಡಿ ಶ್ರೀಪಾದರು ವಿಶೇಷ ಪೂಜೆ ಸಲ್ಲಿಸಿದರು.
ಪೂಜಾಕಾಲದಲ್ಲಿ ಶ್ರೀಪಾದರು ರಚಿಸಿದ “ಶ್ರೀಗುರು ವಿಜಯಗೀತೆ” ಹಾಗೂ ಹಲವು ಕೃತಿಗಳ ಸಾಮೂಹಿಕ ಗಾಯನವು ಶುಭಾ ಸಂತೋಷ್ರವರ ನೇತೃತ್ವದಲ್ಲಿ ಅಮೃತಕೀರ್ತಿ ಭಜನಾ ಮಂಡಳಿಯಿಂದ ನೆರವೇರಿತು.
ಭಕ್ತಜನರಿಗೆ ತೀರ್ಥಪ್ರಸಾದಗಳ ವಿತರಣೆಯಾದ ಬಳಿಕ ಶ್ರೀಮಧ್ವಸಿದ್ಧಾಂತದ ಬಗೆಗೆ ವಿ ಎನ್. ವೆಂಕಟೇಶಾಚಾರ್ಯರಿಂದ ಹಾಗೂ ವಿ. ಅಬ್ಬೂರು ಬದರೀನಾಥಾಚಾರ್ಯರಿಂದ ಉಪನ್ಯಾಸ ನಡೆಯಿತು. ಶುಭಾಸಂತೋಷ್ ರವರು ಶ್ರೀಪಾದರು ರಚಿಸಿದ ಶ್ರೀಮಧ್ವರ ಬಗೆಗಿನ ಎರಡು ಕೃತಿಗಳನ್ನು ಮತ್ತು ಶ್ರೀದೇವರ ಬಗೆಗಿನ ಒಂದು ನೂತನ ಕೃತಿಯ ಗಾಯನವನ್ನು ಸಮರ್ಪಿಸಿದರು.
ನಂತರ ಶ್ರೀಪಾದರು ಆಶೀರ್ವದಿಸುತ್ತಾ, ಶ್ರೀಮಧ್ವಾಚಾರ್ಯರು ವೇದಪುಷ್ಪದ ಮಕರಂದವೆನಿಸಿದ ಭಗವಂತನ ಗುಣ ಮಧುರರಸವನ್ನುಣಿಸಿರುವುದರಿಂದ “ಮಧ್ವ” ಎಂಬ ಅನ್ವರ್ಥ ಹೆಸರನ್ನು ಪಡೆದಿದ್ದಾರೆ. ಜೀವ-ಪರಮಾತ್ಮರ ಐಕ್ಯ-ಸಾಮ್ಯಗಳು ಸ್ಥೂಲದೃಷ್ಟಿಗೆ ನಿಲುಕುತ್ತವೆ. ಆದರೆ ಜೀವ-ಪರಮಾತ್ಮರ ಭೇದ-ತಾರತಮ್ಯಗಳು ಸೂಕ್ಷ್ಮದೃಷ್ಟಿಗೆ ಮಾತ್ರ ನಿಲುಕುತ್ತವೆ. ಇದನ್ನು ದೂರದಲ್ಲಿರುವ ಎರಡು ಮರಗಳನ್ನು ನಿದರ್ಶನ ರೂಪದಲ್ಲಿ ನಿರೂಪಿಸಿ ಸಮರ್ಥಿಸಿದರು. ಹೀಗಾಗಿ ಸ್ಥೂಲದೃಷ್ಟಿಗೆ ನಿಲುಕಿದ ಸತ್ಯವಲ್ಲದ ಐಕ್ಯ-ಸಾಮ್ಯಗಳನ್ನು ನಿರಾಕರಿಸಿ ಸೂಕ್ಷ್ಮದೃಷ್ಟಿಗೆ ನಿಲುಕಿದ ಜೀವ-ಪರಮಾತ್ಮರ ಭೇದ-ತಾರತಮ್ಯರೂಪ ಸತ್ಯವನ್ನು ತೋರಿಸಲೆಂದು ಶ್ರೀಮಧ್ವರ ಅವತಾರವಾಯಿತೆಂದು ಪ್ರತಿಪಾದಿಸಿದರು. ನಂತರ ಶ್ರೀಪಾದರು ಎಲ್ಲಾ ಭಕ್ತರಿಗೆ ಫಲಮಂತ್ರಾಕ್ಷತೆಯನ್ನು ಅನುಗ್ರಹಿಸಿದರು.