ಬೆಂಗಳೂರು: ಪ್ರಸಕ್ತ ವರ್ಷ 83ನೆಯ ಶ್ರೀ ರಾಮನವಮಿ ಅಂತಾರಾಷ್ಟ್ರೀಯ ಸಂಗೀತೋತ್ಸವ ಕಾರ್ಯಕ್ರಮ ಏಪ್ರಿಲ್ 13 ರಿಂದ ಮೇ 13, 2021 ರವರೆಗೆ ಚಾಮರಾಜಪೇಟೆಯ ಹಳೇ ಕೋಟೆ ಶಾಲಾ ಮೈದಾನದಲ್ಲಿ ಆಚರಿಸಲಾಗುತ್ತಿದೆ. ಕೋವಿಡ್ ಕಾರಣದಿಂದ ಈ ಬಾರಿ ಸೀಮಿತ ವೀಕ್ಷರಿಗೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗುವುದು. ಆದರೆ ಸುಮಾರು 3000 ವೀಕ್ಷಕರಿಗೆ zoom ಆಪ್ ಮೂಲಕ ಹಾಗೂ live.ramanavami.org ನಲ್ಲಿ ವಿಶ್ವದಾದ್ಯಂತ ಸುಮಾರು 25 ಲಕ್ಷ ಮಂದಿ ವೀಕ್ಷಕರಿಗೆ ಸಂಗೀತ ಉತ್ಸವವನ್ನು ನೇರವಾಗಿ ಸವಿಯುವ ಅವಕಾಶ ಮಾಡಿಕೊಡಲಾಗಿದೆ ಎಂದು ಶ್ರೀರಾಮ ಸೇವಾಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಶ್ರೀ ರಾಮ ಸೇವಾಮಂಡಳಿ ಬಗ್ಗೆ: 1939ರಲ್ಲಿ ಆರಂಭಗೊ0ಡ ಶ್ರೀ ರಾಮಸೇವಾ ಮಂಡಳಿ ತನ್ನದೇ ಆದ ವಿಶಿಷ್ಟ ರೀತಿಯಿಂದ ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವಲ್ಲಿ ಶ್ರಮ ವಹಿಸಿದೆ. ಈ ಸಂಸ್ಥೆಯ ವಾರ್ಷಿಕೋತ್ಸವದ ಅಂಗವಾಗಿ ರಾಷ್ಟ್ರೀಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ ಅಭಿವೃದ್ಧಿ ಹೊಂದುತ್ತಾ ಬಂದಿದೆ.
ಹೆಸರಾಂತ ಸಂಗೀತ ವಿದ್ವಾಂಸರುಗಳು ಭಾಗವಹಿಸುವ ಏಕೈಕ ವೇದಿಕೆ ಶ್ರೀ ರಾಮ ಸೇವಾ ಮಂಡಳಿಯದ್ದಾಗಿರುತ್ತದೆ. ಭಾರತರತ್ನ ಎಂ.ಎಸ್.ಸುಬ್ಬುಲಕ್ಷಿö್ಮ ಅವರು ರಾಮೋತ್ಸವದಲ್ಲಿ ಭಾಗವಹಿಸಿ ಅತಿ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಪ್ರಸಿದ್ಧ ಕಲಾವಿದರಾದ ಮೈಸೂರು ಟಿ.ಚೌಡಯ್ಯ, ಚೆಂಭೈ ಭಾಗವತರ್, ಅರೈಕುಡಿ, ಶೆಮ್ಮನಗುಡಿ, ಭಾರತರತ್ನ ಭೀಮಸೇನ್ ಜೋಷಿ, ಡಾ.ಎಂ.ಬಾಲಮುರಳಿಕೃಷ್ಣ, ಪದ್ಮವಿಭೂಷಣ ಡಾ.ಕೆ.ಜೆ.ಯೇಸುದಾಸ್, ಉಸ್ತಾದ್ ಬಡೇ ಗುಲಾಂ ಆಲಿಖಾನ್, ಉಸ್ತಾದ್ ಅಮ್ಜದ್ ಆಲಿಖಾನ್, ಉಸ್ತಾದ್ ಬಿಸ್ಮಿಲ್ಲಾಖಾನ್, ಡಾ.ಎಲ್.ಸುಬ್ರಹ್ಮಣ್ಯಂ ಮೊದಲಾದವರು ಹಲವು ಬಾರಿ ಶ್ರೀರಾಮಮಂಡಳಿ ಹಮ್ಮಿಕೊಂಡ ರಾಮನವಮಿ ಸಂಗೀತೋತ್ಸವದಲ್ಲಿ ಭಾಗವಹಿಸಿದ್ದಾರೆ.
ಮಂಡಲಿಯು 82ನೇ ವರ್ಷದ ಉತ್ಸವವನ್ನು ಆಚರಿಸಿ ಈಗ 83ನೇ ವರ್ಷದ ರಾಮನವಮಿ ಸಂಗೀತೋತ್ಸವ ಆಚರಿಸಲು ಮುಂದಾಗುತ್ತಿದ್ದು, ಈ ಬಾರಿಯೂ ಪ್ರಸಿದ್ಧ ಕಲಾವಿದರು ಭಾಗವಹಿಸಿ ಒಂದು ತಿಂಗಳ ಕಾಲ ಸಂಗೀತ ರಸಿಕರ ಮನಸೂರೆಗೊಳಿಸಲಿದ್ದಾರೆ.