ಹಣ ಸಂಪಾದನೆಯೇ ಜೀವನದ ಗುರಿಯಾಗದಿರಲಿ…

*ಪ್ರಮೀಳಾ

*ಪ್ರಮೀಳಾ

ಜೀವನ ಎಷ್ಟೊಂದು ಬದಲಾಗಿದೆ. ಮನುಷ್ಯ ತನ್ನ ಅನುಕೂಲಕ್ಕೆ ಅನುಗುಣವಾಗಿ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾನೆ. ಮನಸ್ಸು ಮಾಡಿದರೆ ತನ್ನ ಸಾಮರ್ಥ್ಯಕ್ಕೆ ಮೀರಿದ್ದನ್ನೂ ಮಾಡುವ ಶಕ್ತಿ ಮನುಷ್ಯನಿಗೆ ಇದೆ ಎಂಬುದು ಸಾಬೀತಾಗಿದೆ.

ಬಾಲ್ಯದಲ್ಲಿ ಯಾರಾದರೂ ಮುಂದೆ ಏನಾಗಬೇಕೆಂದು ಬಯಸುವೆ? ಎಂದು ಕೇಳಿದಾಕ್ಷಣ ನಾವೆಲ್ಲರೂ ಡಾಕ್ಟರ್, ಎಂಜಿನಿಯರ್, ಸಮಾಜಸೇವಕ, ಪೊಲೀಸ್ ಆಗಬೇಕು ಎಂದು ಹೇಳುತ್ತೇವೆ. ಆದರೆ ಜೀವನದ ಒಂದು ಹಂತ ತಲುಪಿದಾಗ ಪ್ರತಿಯೊಬ್ಬರ ಕನಸು ಒಂದೇ ಕಡೆಗೆ ತಿರುಗಿಬಿಡುತ್ತದೆ. ಅದು ಹಣ ಸಂಪಾದಿಸುವುದು. ಅದು ಸರಿಯಾದ ಮಾರ್ಗವಿರಬಹುದು ಅಥವಾ ತಪ್ಪು ದಾರಿಯಿರಬಹುದು, ಉದ್ದೇಶ ಮಾತ್ರ ಒಂದೇ ಆಗಿರುತ್ತದೆ.

ಹೌದು, ಸಹಜವಾಗಿ ಈಗ ಮನುಷ್ಯನಿಗೆ ಹಣದ ಅವಶ್ಯಕತೆಯೂ ಹೆಚ್ಚಿದೆ. ಹಾಗಂತ ಮಿತಿಮೀರಿ ಗಳಿಸುವ ದುರಾಸೆಗೆ ಬಿದ್ದುಬಿಟ್ಟರೆ ಜೀವನಕ್ಕೆ ಅರ್ಥವಿರುವುದಿಲ್ಲ. ನಮ್ಮಲ್ಲಿ ಹಣವೆಂಬ ಮೋಹದ ಬಲೆಗೆ ಸಿಲುಕದವರೇ ಕಡಿಮೆ. ನಾವಾಗಿಯೇ ಹಣದ ಮೋಹಕ್ಕೆ ಸಿಲುಕದೆ ಇರಲು ಎಷ್ಟೇ ಪ್ರಯತ್ನ ಪಟ್ಟರು ಸಹ ಪರಿಸ್ಥಿತಿ ನಮ್ಮನ್ನು ದಾರಿ ತಪ್ಪಿಸುತ್ತದೆ. ಆದರೂ ನಮ್ಮ ವಿವೇಕ ಜಾಗೃತವಾಗಿರಬೇಕಲ್ಲವೇ?

ಜೀವನದ ಪ್ರತಿಯೊಬ್ಬರ ಕನಸು ಹಣ ಸಂಪಾದನೆ ಮಾಡುವುದಾಗಿದರೆ ಬದುಕಿನ ಉದ್ದೇಶವೇನು? ಜೀವನದ ಅರ್ಥವೇನು? ಹಾಗಾದರೆ ಜೀವನದಲ್ಲಿ ಹಣ ಸಂಪಾದನೆಯೇ ಮುಖ್ಯ ಗುರಿಯೇ? ಬದುಕಲು ಹಣದ ಅವಶ್ಯಕತೆ ಇದೆ ನಿಜ. ಹಾಗಂತ ಇಡೀ ಜೀವನವನ್ನು ಹಣ ಸಂಪಾದನೆಗೋಸ್ಕರ ಮೀಸಲಿಡುವುದು ಎಷ್ಟು ಸರಿ?

ಹೌದು ಸ್ನೇಹಿತರೇ, ನಮ್ಮ ಉದ್ದೇಶ, ಆಲೋಚನೆ ಬದಲಾಗಬೇಕು. ಹಣ ಸಂಪಾದನೆ ಜೀವನದ ಒಂದು ಭಾಗ. ನಾವೆಲ್ಲ ಚಿಕ್ಕವರಿದ್ದಾಗ ಜೋಬಲ್ಲಿ ಒಂದು ರೂಪಾಯಿ ನಾಣ್ಯವಿದ್ದರೆ ಸಾಕು ಎಷ್ಟು ಸಂಭ್ರಮಪಡುತ್ತಿದ್ದೆವು. ಆ ಒಂದು ರೂಪಾಯಿ ನಮಗೆ ಕೋಟಿಗೆ ಸಮವಾಗಿತ್ತು. ಆದರೆ ಈಗ ಒಂದು ಕೋಟಿ ಇದ್ದವರೂ ಕಿಸೆಯಲ್ಲಿ ಒಂದು ರೂಪಾಯಿ ಇಲ್ಲ ಎಂದುಬಿಡುತ್ತಾರೆ. ಯೋಚನೆಯಲ್ಲಿ ಎಷ್ಟೊಂದು ವ್ಯತ್ಯಾಸವಿದೆ ಅಲ್ಲವೇ?

ಜೀವನದಲ್ಲಿ ಒಳ್ಳೆಯ ಉದ್ದೇಶದೊಂದಿಗೆ ಗುರಿ ಇಟ್ಟುಕೊಳ್ಳೋಣ. ಬದುಕಿನ ಪಯಣದಲ್ಲಿ ಹಣ ಸಂಪಾದಿಸಿವುದಕ್ಕಿಂತ ನಾಲ್ಕು ಜನರಿಗಾದರೂ ಒಳ್ಳೆಯದನ್ನು ಬಯಸೋಣ. ಸತ್ತಾಗ ಎಷ್ಟು ಹಣ ಸಂಪಾದನೆಯಾಗಿದೆ ಎಂಬುದು ಗಣನೆಗೆ ಬರುವುದಿಲ್ಲ. ಯಾರಿಗೂ ಕೇಡು ಬಯಸದೆ, ನಮ್ಮ ಕೈಲಾದಷ್ಟು ಇತರರಿಗೆ ಸಹಾಯ ಮಾಡಿದರೆ ಭಗವಂತ ನಮ್ಮನ್ನು ಮೆಚ್ಚದೇ ಇರಲಾರ. ಅಲ್ಲವೇ?

(ಪ್ರಮೀಳಾ, ಅಂತಿಮ ಬಿಎ, ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು)

Related Articles

ಪ್ರತಿಕ್ರಿಯೆ ನೀಡಿ

Latest Articles